ನಮ್ಮ ಬದುಕಿನಲ್ಲಿ ಹಲವು ಸಂದರ್ಭಗಳಲ್ಲಿ ಸೋಲು ಗೆಲುವಿಗೆ ದಾರಿ ಅಥವಾ ಸ್ಫೂರ್ತಿಯಾದ ಹಲವಾರು ಯಶೋಗಾಥೆಗಳನ್ನು ಕಾಣಬಹುದು. ಯಾವುದೇ ಕ್ಷೇತ್ರದಲ್ಲಿ ವೈಫಲ್ಯವನ್ನು ಕಂಡಾಗ ಅದರಿಂದ ಅಮೂಲ್ಯವಾದ ಪಾಠವನ್ನು ಕಲಿತುಕೊಂಡು ಯಶಸ್ವಿನ ಕಡೆಗೆ ಹೆಜ್ಜೆ ಹಾಕುವ ಛಲವಾದಿಗಳು ಬದುಕಿನ ಉನ್ನತ ಸ್ಥಾನಕ್ಕೆ ಏರುತ್ತಾರೆ. ಅಂಥವರ ಸಾಲಿನಲ್ಲಿ ಮನು ಅಗರ್‌ವಾಲ್ ಸೇರಿದ್ದು, ಅವರ ಜೀವನ ಕಥೆಯು ಅದೇ ಹಾದಿಯಲ್ಲಿ ಸಾಗುತ್ತದೆ.
ಜೀವನದಲ್ಲಿ ಕಠಿಣ ಪರಿಶ್ರಮ ಪಟ್ಟರೆ ಅದಕ್ಕೆ ಯಾವ ರೀತಿ ಪ್ರತಿಫಲ ದೊರೆಯುತ್ತದೆ ಎನ್ನುವುದಕ್ಕೆ ಅಗರ್‌ವಾಲ್ ಅವರೇ ಸಾಕ್ಷಿ. ಅವರು ಕೇವಲ 10,000 ರೂ. ಸಂಪಾದನೆಯೊಂದಿಗೆ ವೃತ್ತಿ ಜೀವನ ಪ್ರಾರಂಭಿಸಿ ಮುಂದೆ 1.9 ಕೋಟಿ ರೂ. ವೇತನ ಪಡೆಯುವವರೆಗೆ ಬೆಳೆದಿದ್ದು, ಆ ಮೂಲಕ ಐಟಿ ಕ್ಷೇತ್ರದಲ್ಲಿ ಗಮನಸೆಳೆದಿದ್ದಾರೆ.

ಅಗರ್‌ವಾಲ್ ಅವರು ಈಗ ಟ್ಯುಟೋರ್ಟ್ ಅಕಾಡೆಮಿಯ ಸೃಷ್ಟಿಕರ್ತರಾಗಿದ್ದಾರೆ. ಇದು ಪ್ರೋಗ್ರಾಮಿಂಗ್ ಹಾಗೂ ಸಾಪ್ಟ್‌ವೇರ್ ಎಂಜಿನಿಯರಿಂಗ್‌ನಲ್ಲಿ ಮಾಸ್ಟರ್ ಕೋರ್ಸ್‌ಗಳಿಗೆ ಹೆಸರುವಾಸಿಯಾಗಿದೆ. ಈ ಕೋರ್ಸ್‌ಗಳು ಡೇಟಾ ಸೈನ್ಸ್, ಆರ್ಟಿಫಿಶಿಯಲ್ ಇಂಟಲಿಜೆನ್ಸಿ, ಡೇಟಾ ಸ್ಟ್ರಕ್ಚರ್ ಹಾಗೂ ಹೆಚ್ಚಿನ ವಿಷಯಗಳನ್ನು ಒಳಗೊಂಡಿರುತ್ತದೆ.
ಮನು ಅಗರ್‌ವಾಲ್ ಯಾರು?
ಉತ್ತರ ಪ್ರದೇಶದ ಝಾನ್ಸಿಯಿಂದ ಬಂದಿರುವ ಮನು ಅಗರ್‌ವಾಲ್ ಅವರು ಹಿಂದಿ ಮಾಧ್ಯಮದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನು ಪಡೆದುಕೊಂಡವರು. ಆದರೆ ತರಗತಿಯಲ್ಲಿ ಹೆಚ್ಚು ಪರಿಶ್ರಮ ಪಡುವ ವಿದ್ಯಾರ್ಥಿಯಾಗಿರಲಿಲ್ಲ. ಜತೆಗೆ ಗಣಿತದಲ್ಲಿಯೂ ಬಹಳ ವೀಕ್ ಆಗಿದ್ದರು. ಮುಂದೆ ಅಗರ್‌ವಾಲ್ ಅವರು ಕಲಿಕೆಗೆ ಸಂಬಂಧಿಸಿದಂತೆ ತಮ್ಮ ಎಲ್ಲ ನ್ಯೂನತೆಗಳನ್ನು ಬಹಳ ಧೈರ್ಯ ಹಾಗೂ ದೃಢತೆಯಿಂದ ಎದುರಿಸುವುದಕ್ಕೆ ನಿರ್ಧರಿಸಿದರು.
ಅವರು AIEEEಯಲ್ಲಿ ಹೆಚ್ಚಿನ ಅಂಕ ಪಡೆದ ಬಳಿಕ ಬುಂದೇಲ್‌ಖಂಡ್ ವಿಶ್ವವಿದ್ಯಾಲಯದಿಂದ ಬಿಸಿಎ ಪದವಿಯನ್ನು ಪಡೆದುಕೊಂಡರು. ಮುಂದೆ ತಿರುಚಿನಾಪಳ್ಳಿಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡರು. 2016ರಲ್ಲಿ ಅಗರ್‌ವಾಲ್ ಇಂಟರ್‌ಶಿಪ್ ಮಾಡುತ್ತಿದ್ದ ವೇಳೆ 10,000 ರೂ. ವೇತನ ಪಡೆಯುತ್ತಿದ್ದರು.
ಹಲವಾರು ಕಂಪನಿಗಳಿಗೆ ಉದ್ಯೋಗಕ್ಕಾಗಿ ಅರ್ಜಿ
ಬಿಸಿಎ ಮುಗಿಸಿಕೊಂಡು ಎಂಸಿಎ ಪದವಿ ಪಡೆಯುತ್ತಿರಬೇಕಾದರೆ ಹಲವಾರು ಕಂಪನಿಗಳಿಗೆ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಗಮನಾರ್ಹವೆಂದರೆ ಮನು ಅವರು ಉದ್ಯೋಗಕ್ಕೆ ಸಂಬಂಧಿಸಿದಂತೆ ಸುಮಾರು 35 ಕಂಪನಿಗಳಿಂದ ತಿರಸ್ಕಾರಗೊಂಡಿದ್ದರು. ಈ ನಡುವೆ ಮನು ಅವರು ಬಹಳ ಆಳವಾದ ಕೋಡಿಂಗ್ ಸಾಮರ್ಥ್ಯವನ್ನು ಹೊಂದಿದ್ದರು.
ಮೈಕ್ರೋಸಾಫ್ಟ್‌ನಂಥ ದೈತ್ಯ ಕಂಪನಿಯಲ್ಲಿ ಇಂಟರ್‌ಶಿಪ್
ಮೈಕ್ರೋಸಾಫ್ಟ್‌ನಂಥ ದೈತ್ಯ ಕಂಪನಿಯಲ್ಲಿ ಇಂಟರ್‌ಶಿಪ್ ಅವಕಾಶವನ್ನುಪಡೆದುಕೊಂಡರು. ಬಳಿಕ ಅಲ್ಲಿಯೇ ಉದ್ಯೋಗದ ಆಫರ್ ಬಂತು. ವಾಷಿಂಗ್‌ಟನ್‌ನ ಸಿಯಾಟಲ್‌ನಲ್ಲಿ ಮೈಕ್ರೋಸಾಫ್ಟ್ ಕಂಪನಿಯು ಅವರಿಗೆ 1.9 ಕೋಟಿ ರೂ. ಸಂಬಳದ ಪ್ಯಾಕೇಜ್ ಅನ್ನು ನೀಡಿರುವುದಾಗಿ ನವಭಾರತ್ ಟೈಮ್ಸ್ ವರದಿ ಮಾಡಿದೆ.
ಮನು ಅವರು ಕೈತುಂಬ ಸಂಬಳ ಪಡೆಯುವುದರೊಂದಿಗೆ ವೃತ್ತಿ ಬದುಕಿನಲ್ಲಿ ಸಾಧನೆಯ ಉತ್ತುಂಗದಲ್ಲಿ ಇದ್ದರು ಕೂಡ ಕೊರೊನಾ ಸಂದರ್ಭದಲ್ಲಿ ಹೆತ್ತವರ ಕೋರಿಕೆ ಮೇರೆಗೆ ಅವರು ಭಾರತಕ್ಕೆ ವಾಪಾಸ್ ಬರುವುದು ಅನಿವಾರ್ಯವಾಗಿತ್ತು.
ಭಾರತಕ್ಕೆ ವಾಪಾಸ್ ಬಂದ ಬಳಿಕ ಗೂಗಲ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮುಂದುವರಿಸಿದರು. ಅದಾದ ಬಳಿಕ ಮನು ಅಗರ್‌ವಾಲ್ ಅವರು ತಮ್ಮ ಗೆಳೆಯ ಅಭಿಷೇಕ್ ಗುಪ್ತಾ ಅವರೊಂದಿಗೆ ಸೇರಿಕೊಂಡು ಟ್ಯುಟೋರ್ಟ್ ಅಕಾಡೆಮಿಯನ್ನು ಸ್ಥಾಪಿಸಿದರು.


Click it and Unblock the Notifications