ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ, ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ನ ಆಫ್ ಇಂಡಿಯಾದ ಸಂಸ್ಥಾಪಕ ಸೈರಸ್ ಪೂನಾವಾಲಾ ಅವರು, 2015 ರಲ್ಲಿ 750 ಕೋಟಿ ರೂ.ನೀಡಿ ಖರೀದಿಸಿದ ಮುಂಬೈನ ಭುಲಾಭಾಯ್ ರಸ್ತೆಯಲ್ಲಿರುವ ಆಸ್ತಿ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗದಿರುವ ಬಗ್ಗೆ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಸೀರಂ ಸಂಸ್ಥಾಪಕ ಸೈರಸ್ ಅವರು ಯಾವುದೇ ಹೆಸರುಗಳನ್ನು ಉಲ್ಲೇಖಿಸದೆ, ಆಸ್ತಿ ಸ್ವಾಧೀನಪಡಿಕೊಳ್ಳಲು ಆಗುತ್ತಿರುವ ವಿಳಂಬದ ಕುರಿತು "ರಾಜಕೀಯ ಮತ್ತು ಸಮಾಜವಾದಿ ಪ್ರೇರಿತ ನಿರ್ಧಾರವಿದೆ," ಎಂದು ದೂರಿದ್ದಾರೆ. ಆಸ್ತಿಯ ಮಾಲೀಕತ್ವದ ಬಗ್ಗೆ ವಿವಾದವಿದ್ದು, ಇದು ಮಾರಾಟವಾದರೂ ಸೈರಸ್ ಅವರ ಒಡೆತನಕ್ಕೆ ನೀಡಲಾಗಿಲ್ಲ. ಮಹಾರಾಷ್ಟ್ರ ಸರ್ಕಾರ ಮತ್ತು ರಕ್ಷಣಾ ಸಚಿವಾಲಯ ಇವೆರಡೂ ಈ ಭೂಮಿಯ ಮೇಲಿನ ಮಾಲೀಕತ್ವದ ಹಕ್ಕು ತನ್ನದು ಎಂದು ಹೇಳಿಕೊಳ್ಳುತ್ತಿದೆ.

ಮಾಜಿ ಮಹಾರಾಜರ ನಿವಾಸವಾಗಿರುವ ಈ ವೈಭವೋಪೇತ ಅರಮನೆ 'ಲಿಂಕನ್ ಹೌಸ್' ಅನ್ನು ಸೈರಸ್ ಅವರು ಎಂಟು ವರ್ಷಗಳ ಹಿಂದೆ ಯುಎಸ್ ಸರ್ಕಾರದಿಂದ ಖರೀದಿಸಿದ್ದರು. ಈ ಆಸ್ತಿಯು 2011 ರವರೆಗೆ ಮುಂಬೈನಲ್ಲಿರುವ ಅಮೇರಿಕಾ ಸರ್ಕಾರದ ಕಾನ್ಸುಲೇಟ್‌ನ ಸ್ಥಳವಾಗಿತ್ತು. ಸೀರಂ ಇನ್‌ಸ್ಟಿಟ್ಯೂಟ್‌ನ ಆಫ್ ಇಂಡಿಯಾ ಚೇರ್ಮನ್ ಮತ್ತು ಎಂಡಿ ಆಗಿರುವ ಪೂನಾವಾಲಾ ತಮ್ಮ ಕುಟುಂದ ಹೊಸ ಮನೆಗಾಗಿ ಐಷಾರಾಮಿಯಾಗಿದ್ದ ಪಾಳು ಬಿದ್ದಿದ್ದ ಬಂಗಲೆ ಖರೀದಿಸಿ ನವೀಕರಿಸಲು ಬಯಸಿದ್ದರು. ಈ ಮಾರಾಟವನ್ನು ಮುಂಬೈನ ರಿಯಲ್ ಎಸ್ಟೇಟ್‌ನಲ್ಲಿ ಬೃಹತ್ ಡೀಲ್ ಎಂದೇ ಪರಿಗಣಿಸಲಾಗಿತ್ತು.
ಇಂದು ಲಿಂಕನ್ ಹೌಸ್ ಎಂದು ಕರೆಯಲ್ಪಡುವ ಇದನ್ನು ಮೂಲತಃ 'ವಂಕನರ್ ಹೌಸ್' ಎಂದು ಕರೆಯಲಾಗುತ್ತಿತ್ತು. ಇಂದಿನ ಗುಜರಾತ್‌ನ ಭಾಗವಾಗಿದ್ದ ಹಿಂದಿನ ಪ್ರಾಂತ್ಯದ ವಾಂಕನೇರ್‌ನ ಕೊನೆಯ ಮಹಾರಾಜ ಅಮರಸಿಂಹ ಬನೇಸಿನ್ಹಜಿ ಝಾಲಾ ಮತ್ತು ಅವರ ಮಗ ಪ್ರತಾಪ್‌ಸಿಂಹಜಿ ಝಾಲಾ ಅವರು ಬಾಂಬೆಯಲ್ಲಿ ತಮ್ಮ ರಾಜಮನೆತನಕ್ಕಾಗಿ ಈ ಅರಮನೆಯನ್ನು 1933ರಲ್ಲಿ ನಿರ್ಮಿಸಿದ್ದರು. ಈ ಬಂಗಲೆಯ ವಾಸ್ತುಶಿಲ್ಪಿ ಬ್ರಿಟಿಷ್ ಕ್ಲೌಡ್ ಬ್ಯಾಟ್ಲಿ ಆಗಿದ್ದರು.
ಆದರೆ ವಂಕನರ್ ಆಡಳಿತವು 1957ರಲ್ಲಿ "ವಂಕನರ್ ಹೌಸ್"ನ್ನು ಅಮೇರಿಕಾ ಸರ್ಕಾರಕ್ಕೆ ಗುತ್ತಿಗೆ ನೀಡಿತು. ಸ್ವಾತಂತ್ರ್ಯದ ನಂತರ ರಾಜಪ್ರಭುತ್ವದ ರಾಜ್ಯಗಳನ್ನು ಭಾರತ ದೇಶದಡಿಯಲ್ಲಿ ತಂದಾಗ ಮಹಾರಾಜರು ಕೂಡಾ ತೆರಿಗೆಗಳನ್ನು ಪಾವತಿಸಬೇಕಾಗಿ ಬಂದಾಗ ಈ ನಿರ್ಧಾರ ಕೈಗೊಂಡರು ಎಂದು "ಇಂಡಿಯನ್ ಎಕ್ಸ್‌ಪ್ರೆಸ್" ವರದಿ ಮಾಡಿದೆ. ಅಮೆರಿಕಾ ಸರ್ಕಾರ ಈ ಕಟ್ಟಡವನ್ನು ವೀಸಾ ನೀಡಲು ಬಳಸುತ್ತಿತ್ತು. 2014ರಲ್ಲಿ ಅದು ಬೇರೆ ಕಟ್ಟಡಕ್ಕೆ ಸ್ಥಳಾಂತರವಾಯಿತು.
2 ಎಕರೆ ಪ್ರದೇಶದಲ್ಲಿ ನಿರ್ಮಿಸಲಾದ ಈ ಮಹಲು ಸುಮಾರು 50,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ. ಇದು ದಕ್ಷಿಣ ಮುಂಬೈನ ಐಷಾರಾಮಿ ಬ್ರೀಚ್ ಕ್ಯಾಂಡಿ ಪ್ರದೇಶದದ ಭೂಲಾಭಾಯ್ ದೇಸಾಯಿ ರಸ್ತೆಯಲ್ಲಿದೆ. ಲಿಂಕನ್ ಹೌಸ್ ಈ ಪ್ರದೇಶದಲ್ಲಿನ ಪ್ರಸಿದ್ಧ ಲ್ಯಾಂಡ್ ಮಾರ್ಕ್ ಆಗಿದ್ದು ಇದರ ಸುತ್ತಮುತ್ತ ಟಾಟಾ ಗಾರ್ಡನ್, ಅಮರ್ಸನ್ಸ್ ಗಾರ್ಡನ್, ಬ್ರೀಚ್ ಕ್ಯಾಂಡಿ ಆಸ್ಪತ್ರೆ, ಬ್ರೀಚ್ ಕ್ಯಾಂಡಿ ಕ್ಲಬ್ ಭಾರತ ದೇಶದ-ಆಕಾರದ ಅತಿದೊಡ್ಡ ಸ್ವಿಮ್ಮಿಂಗ್ ಫೂಲ್ ಇದೆ
ಸೈರಸ್ ಪೂನಾವಾಲಾ ಯಾರು?
1941ರಲ್ಲಿ ಜನಿಸಿರುವ ಸೈರಸ್ ಎಸ್ ಪೂನಾವಾಲಾ ಭಾರತದ ಬಿಲಿಯನೇರ್ ಉದ್ಯಮಿಗಳಲ್ಲಿ ಒಬ್ಬರಾಗಿದ್ದಾರೆ. ಪೂನಾವಾಲಾ ಪುಣೆಯ ಸೀರಂ ಇನ್‌ಸ್ಟಿಟ್ಯೂಟ್‌ನ ಆಫ್ ಇಂಡಿಯಾದ ಸಂಸ್ಥಾಪಕ ಮತ್ತು ಪೂನಾವಾಲ ಗ್ರೂಪ್‌ನ ಚೇರ್‌ಮನ್, ಮ್ಯಾನೆಜಿಂಗ್ ಡೈರೆಕ್ಟರ್ ಕೂಡಾ ಹೌದು. ಸೀರಂ ಇನ್‌ಸ್ಟಿಟ್ಯೂಟ್‌ನ ಆಫ್ ಇಂಡಿಯಾ ವಿಶ್ವದಲ್ಲಿ ಅತೀ ದೊಡ್ಡ ಲಸಿಕಾ ಉತ್ಪಾದನಾ ಸಂಸ್ಥೆಯಾಗಿದೆ.


Click it and Unblock the Notifications