ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1, 2023ರಂದು ಹಣಕಾಸು ವರ್ಷ 2023-24ರ ಕೇಂದ್ರ ಬಜೆಟ್ ಅನ್ನು ಮಂಡನೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ. ಈ ಯೋಜನೆಗಳಲ್ಲಿ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ ಕೂಡಾ ಒಂದಾಗಿದೆ. ಈ ಯೋಜನೆಯನ್ನು ಕೇಂದ್ರ ಸರ್ಕಾರವು ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕ್‌ಗಳಿಗೆ ವಿಸ್ತರಣೆ ಮಾಡಿದೆ.
ಹೊಸ ಸಣ್ಣ ಉಳಿತಾಯ ಯೋಜನೆಯಾದ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ (MSSC) 2023 ಖಾತೆಗಳನ್ನು ಈಗ 12 ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ನಾಲ್ಕು ಖಾಸಗಿ ವಲಯದ ಬ್ಯಾಂಕ್‌ಗಳಲ್ಲಿ ತೆರೆಯಬಹುದಾಗಿದೆ. ಸಣ್ಣ ಉಳಿತಾಯ ಯೋಜನೆಗಳ ವ್ಯಾಪ್ತಿಯನ್ನು ವಿಸ್ತರಿಸಬಹುದು ಎಂದು ಸರ್ಕಾರ ಘೋಷಿಸಿದೆ. ಯಾವೆಲ್ಲ ಬ್ಯಾಂಕುಗಳಲ್ಲಿ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ ಖಾತೆಯನ್ನು ತೆರೆಯಬಹುದು ಎಂಬ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ.....

ಯಾವೆಲ್ಲ ಖಾಸಗಿ ಬ್ಯಾಂಕುಗಳಲ್ಲಿ ಯೋಜನೆ ಲಭ್ಯ?
ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ ಹೂಡಿಕೆ ಆಯ್ಕೆಯನ್ನು ಈಗ ಖಾಸಗಿ ಬ್ಯಾಂಕ್‌ಗಳಿಗೂ ವಿಸ್ತರಣೆ ಮಾಡಲಾಗಿದೆ. ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಡಿಬಿಐ ಬ್ಯಾಂಕ್‌ಗಳಲ್ಲಿಯೂ ನೀವು ಈಗ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ ಖಾತೆ ತೆರೆಯಬಹುದಾಗಿದೆ ಎಂದು ಹಣಕಾಸು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಈ ಬ್ಯಾಂಕುಗಳು ಅಧಿಕೃತವಾಗಿ ತಮ್ಮ ಬ್ಯಾಂಕ್‌ನಲ್ಲಿ ಈ ಎಂಎಸ್‌ಎಸ್‌ಸಿ ಯೋಜನೆಯ ಖಾತೆಯನ್ನು ತೆರೆಯುವುದಕ್ಕೂ ಮುನ್ನ ಕೆಲವೊಂದು ಅವಶ್ಯಕತೆಗಳನ್ನು ಪೂರೈಕೆ ಮಾಡಬೇಕಾಗುತ್ತದೆ ಎಂದು ಅಧಿಸೂಚನೆಯನ್ನು ತಿಳಿಸಲಾಗಿದೆ. ಉದಾಹರಣೆಗೆ, ಬ್ಯಾಂಕುಗಳು ರಾಷ್ಟ್ರೀಯ ಉಳಿತಾಯ ಯೋಜನೆಗಳ ನಿರ್ವಹಣೆ ಮತ್ತು ಲೆಕ್ಕಪತ್ರ ನಿರ್ವಹಣೆಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಸಾಫ್ಟ್‌ವೇರ್ ಅನ್ನು ಹೊಂದಿರಬೇಕಾಗುತ್ತದೆ. ಪ್ರತಿ ಯೋಜನೆಗೆ ಅನುಗುಣವಾದ ಮಾಹಿತಿ ಹೊಂದಿರಬೇಕಾಗುತ್ತದೆ.
ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ ಏನು?
ಬಜೆಟ್ 2023ರಲ್ಲಿ ಜಾರಿ ಮಾಡಲಾದ ಭಾರತ ಸರ್ಕಾರದ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆಯು ಹೊಸ ಸಣ್ಣ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯನ್ನು ಮಹಿಳೆಯರಿಗೆ ಹಣ ಉಳಿತಾಯ ಮಾಡಲು ಪ್ರೋತ್ಸಾಹ ನೀಡಲು, ಮಹಿಳಾ ಸಬಲೀಕರಣ ಮಾಡುವ ನಿಟ್ಟಿನಲ್ಲಿ ಆರಂಭ ಮಾಡಲಾಗಿದೆ. ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆಯು ಮಾರ್ಚ್ 2025ರವರೆಗಿನ ಅಂದರೆ 2 ವರ್ಷದ ಅವಧಿಯ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಮಹಿಳೆ ಅಥವಾ ಹುಡುಗಿಯ ಹೆಸರಿನಲ್ಲಿ ಸುಮಾರು 2 ಲಕ್ಷ ರೂಪಾಯಿ ಮೊತ್ತವನ್ನು 2 ವರ್ಷದವರೆಗೆ ಡೆಪಾಸಿಟ್ ಮಾಡಬಹುದಾಗಿದೆ.
ಅರ್ಹತೆ, ಗರಿಷ್ಠ ಹಾಗೂ ಕನಿಷ್ಠ ಹೂಡಿಕೆ ಮೊತ್ತ
ಅರ್ಹತೆ: ಮಹಿಳೆಯರು ಅಥವಾ ಹುಡುಗಿಯರ ಹೆಸರಿನಲ್ಲಿ ಮಾತ್ರ ಮಹಿಳಾ ಸಮ್ಮಾನ ಉಳಿತಾಯ ಪ್ರಮಾಣಪತ್ರ ಯೋಜನೆ ಖಾತೆಯನ್ನು ತೆರೆಯುವ ಅವಕಾಶವಿದೆ. ಇಲ್ಲಿ ಯಾವುದೇ ವಯೋಮಿತಿಗಳು ಇಲ್ಲ. ಹೆಣ್ಣಾಗಿದ್ದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಉತ್ತಮ ರಿಟರ್ನ್ ಅನ್ನು ಪಡೆಯುವ ಅವಕಾಶವಿದೆ. ಈ ಯೋಜನೆಯಲ್ಲಿ ನಿಗದಿತವಾಗಿ ಶೇಕಡ 7.5ರಷ್ಟು ಬಡ್ಡಿದರವನ್ನು ನೀಡಲಾಗುತ್ತದೆ. ಬಡ್ಡಿದರವನ್ನು ತ್ರೈಮಾಸಿಕವಾಗಿ ಜಮೆ ಮಾಡಲಾಗುತ್ತದೆ. ಖಾತೆ ಮುಚ್ಚುವಾಗ ನೀಡಲಾಗುತ್ತದೆ.
ನೀವು ಕನಿಷ್ಠವಾಗಿ 100 ರೂಪಾಯಿಯಂತೆ 1000 ರೂಪಾಯಿಯನ್ನು ಕನಿಷ್ಠವಾಗಿ ಹೂಡಿಕೆ ಮಾಡಬಹುದಾಗಿದೆ. ಇನ್ನು ಓರ್ವ ವ್ಯಕ್ತಿಯ ಖಾತೆಗೆ ಗರಿಷ್ಠ ಮೊತ್ತದ ಮಿತಿಯು 2 ಲಕ್ಷ ರೂಪಾಯಿ ಆಗಿದೆ. ಒಂದು ಖಾತೆಯನ್ನು ತೆರೆದ ಬಳಿಕ ನೀವು ಇನ್ನೊಂದು ಖಾತೆಯನ್ನು ತೆರೆಯಲು ಬಯಸಿದರೆ, ಎರಡು ಖಾತೆ ಆರಂಭದ ದಿನದಲ್ಲಿ ಮೂರು ತಿಂಗಳುಗಳ ಕಾಲಾವಧಿ ಇರಬೇಕು.


Click it and Unblock the Notifications