ಸಾಮಾನ್ಯವಾಗಿಯೆ ಯಾವುದೇ ಹಬ್ಬ, ಹರಿದಿನಗಳು ಬಂದಾಗ ಜನರು ಅಧಿಕವಾಗಿ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯುತ್ತಾರೆ. ಈ ಸಂದರ್ಭದಲ್ಲಿಯೇ ದೇವಾಲಯಗಳು ಭರ್ಜರಿ ಆದಾಯವನ್ನು ಪಡೆಯುತ್ತದೆ. ಈ ದೀಪಾವಳಿಯಲ್ಲಿಯೂ ಹಲವಾರು ದೇವಾಲಯಗಳು ಭರ್ಜರಿ ಆದಾಯವನ್ನು ಪಡೆದಿದೆ.
ತಿರುಮಲ ತಿರುಪತಿ ವೆಂಕಟೇಶ್ವರ ದೇವಸ್ಥಾನ, ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನ, ಸಿದ್ಧಿವಿನಾಯಕ ದೇವಸ್ಥಾನ ಮೊದಲಾದವುಗಳು ಭಾರತದಲ್ಲಿ ಈ ವರ್ಷದಲ್ಲಿ ಅಧಿಕ ಆದಾಯವನ್ನು ಪಡೆದ ದೇವಾಲಯಗಳಾದರೆ, ಇನ್ನು ಕೆಲವು ದೇವಾಲಯಗಳು ಕೂಡಾ ಹೆಚ್ಚು ಆದಾಯ ಗಳಿಸುತ್ತದೆ. ಈ ದೀಪಾವಳಿಯಲ್ಲಿ ಮಲೆಮಾದಪ್ಪ ಪಡೆದ ಆದಾಯ ಕೇಳಿದ್ರೆ ಬೆರಗಾಗ್ತೀರಿ!

ಐದು ದಿನದಲ್ಲಿ ಮಲೆಮಾದಪ್ಪನ ಆದಾಯ
ಕರ್ನಾಟಕ ರಾಜ್ಯದ ಪ್ರಮುಖ ದೇವಾಲಯಗಳಲ್ಲಿ ಒಂದಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ನವೆಂಬರ್ 10 ರಿಂದ 14 ರವರೆಗೆ ದೀಪಾವಳಿ ಸಂದರ್ಭದಲ್ಲಿ ಅದ್ಧೂರಿಯಾಗಿ ಜಾತ್ರೆಯು ನಡೆದಿದೆ. ಕೇವಲ ಈ 5 ದಿನಗಳ ಅವಧಿಯಲ್ಲಿ ಕ್ಷೇತ್ರಕ್ಕೆ 2.8 ಕೋಟಿ ರೂಪಾಯಿ ಆದಾಯವು ಬಂದಿದೆ.
ಈ ಬಗ್ಗೆ ಶ್ರೀಕ್ಷೇತ್ರ ಮಲೆಮಹದೇಶ್ವರ ಬೆಟ್ಟ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಮಾಹಿತಿ ನೀಡಿದ್ದಾರೆ. 5 ದಿನಗಳ ಅವಧಿಯ ಈ ಜಾತ್ರೆ ಸಮಯದಲ್ಲಿ ಮಲೆಮಾದಪ್ಪ 2.8 ಕೋಟಿ ರೂಪಾಯಿ ಆದಾಯವನ್ನು ಪಡೆದುಕೊಂಡಿದ್ದಾನೆ. ಈ ಹಿಂದೆ 32 ದಿನಗಳಲ್ಲಿ ಈ ದೇವಾಲಯ 2.53 ಕೋಟಿ ರೂಪಾಯಿ ಆದಾಯ ಗಳಿಸಿದೆ.
ಇನ್ನು ಐದು ದಿನಗಳಲ್ಲಿ ಹುಂಡಿ ಹಣವನ್ನು ಹೊರತುಪಡಿಸಿ ರುದ್ರಾಕ್ಷಿ ವಾಹನ, ಲಾಡು ಮಾರಾಟ, ಪಾರ್ಕಿಂಗ್, ವಿಶೇಷ ದರ್ಶನದ ಟಿಕೆಟ್, ಚಿನ್ನದ ರಥ ಸೇವೆ, ಮಿಶ್ರ ಪ್ರಸಾದ ಮಾರಾಟ, ಬೆಳ್ಳಿ ರಥ ಮೊದಲಾದವುಗಳ ಸೇವೆ ಮೂಲಕ 2,08,82,110 ರೂಪಾಯಿ ಆದಾಯವನ್ನು ಪಡೆದಿದೆ.
ಮಲೆಮಾದಪ್ಪನಿಗೆ ಯಾವ ಸೇವೆಯಿಂದ ಎಷ್ಟು ಹಣ ಲಭ್ಯ?
ದೀಪಾವಳಿಯ 5 ದಿನಗಳ ಅವಧಿಯಲ್ಲಿ ಮಲೆಮಹದೇಶ್ವರ ಬೆಟ್ಟದ ದೇವಾಲಯಕ್ಕೆ ಭಕ್ತಾದಿಗಳು 410 ರುದ್ರಾಕ್ಷಿ ವಾಹನ, 9135 ಹುಲಿ ವಾಹನ,1786 ಚಿನ್ನದ ರಥೋತ್ಸವ, 1,114 ಬಸವ ವಾಹನ, 50 ಬೆಳ್ಳಿ ರಥೋತ್ಸವದ ಹರಕೆಯನ್ನು ಸಲ್ಲಿಸಿದ್ದಾರೆ.
ಇನ್ನು ಲೆಕ್ಕಾಚಾರವನ್ನು ನಾವು ನೋಡಿದಾಗ ಮಿಶ್ರ ಪ್ರಸಾದದಿಂದ 8 ಲಕ್ಷ ರೂಪಾಯಿ, ಪ್ರಸಾದದ ಕ್ಯಾರಿ ಬ್ಯಾಗ್‌ನಿಂದಲೇ 72 ಸಾವಿರ ರೂಪಾಯಿ, ಪುದುವಟ್ಟು ಸೇವೆಯಿಂದ 2 ಲಕ್ಷ ರೂಪಾಯಿ, ಲಾಡು ಮಾರಾಟದಿಂದ 54 ಲಕ್ಷ ರೂಪಾಯಿ, ಸೇವೆಗಳಿಂದ 5 ಲಕ್ಷ ರೂಪಾಯಿ ಲಭ್ಯವಾಗಿದೆ.
ಒಟ್ಟಾಗಿ 2,08,82,110 ರೂಪಾಯಿ ಆದಾಯ ಬಂದಿದೆ. ಮಲೆ ಮಹದೇಶ್ವರ ಹುಲಿವಾಹನ ಉತ್ಸವಕ್ಕೆ ಭಕ್ತಾದಿಗಳು ಅಧಿಕವಾಗಿ ಆಗಮಿಸಿದ್ದಾರೆ. ಪ್ರಾಧಿಕಾರವು ಈ ಉತ್ಸವಗಳಿಂದಲೇ 86 ಲಕ್ಷ ರೂಪಾಯಿ ಹಣ ಪಡೆದಿದೆ ಎಂದು ವರದಿಯಾಗಿದೆ.
ಶಿವರಾತ್ರಿಯ ಆದಾಯ ಎಷ್ಟಿದೆ?
ಮಾದೇಶ್ವರನ ದರ್ಶನ ಪಡೆಯಲು ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಅಧಿಕವಾಗುತ್ತಿದೆ. ಹೀಗಾಗಿ ಕೇವಲ ಶಿವರಾತ್ರಿ ಜಾತ್ರೆಯ ಅವಧಿಯಲ್ಲೇ ಪ್ರಾಧಿಕಾರಕ್ಕೆ ಆದಾಯವು ಹರಿದು ಬಂದಿದೆ. ಫೆಬ್ರವರಿ 17 ರಿಂದ ಫೆಬ್ರವರಿ 21 ವರೆಗೆ ನಡೆದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಲಾಡು ಸಹಿತ ಪ್ರಸಾದ ಖರೀದಿ ಹಾಗೂ ಇತರೆ ಸೇವೆಗಳ ಮೂಲಕ ಒಟ್ಟು 2.70 ಕೋಟಿ ರೂಪಾಯಿಗೂ ಅಧಿಕ ಆದಾಯ ಬಂದಿದೆ. 10 ದಿನಗಳಿಂದ ಮಾದಪ್ಪನ ಸನ್ನಿಧಿಗೆ ಸುಮಾರು 10 ಲಕ್ಷ ಮಂದಿ ಭಕ್ತಾದಿಗಳು ಭೇಟಿ ನೀಡಿರುವ ಅಂದಾಜಿದೆ.


Click it and Unblock the Notifications