ಯುವ ಹಾಗೂ ಉನ್ನತ ಶಿಕ್ಷಣ ಪಡೆದಿರುವ ಅದ್ವೈತಾ ನಾಯರ್ ಅವರು 2012ರಲ್ಲಿ ಅಮೆರಿಕದ ಬೈನ್ ಅಂಡ್ ಕಂಪೆನಿಯಲ್ಲಿ ಕನ್ಸಲ್‌ಟೆಂಟ್ ಆಗಿ ಕೇವಲ ಆರು ತಿಂಗಳನ್ನು ಪೂರ್ಣಗೊಳಿಸಿರಬೇಕಾದರೆ ತಮ್ಮ 50 ವರ್ಷದ ತಾಯಿ ಫಲ್ಗುಣಿ ನಾಯರ್ ಅವರು ತಮ್ಮ ಸ್ವಂತ ಉದ್ಯಮದ ಜರ್ನಿ ಪ್ರಾರಂಭಿಸಲು ನಿರ್ಧರಿಸಿದರು. ಸೌಂದರ್ಯ ಉತ್ಪನ್ನಗಳ ಆನ್‌ಲೈನ್ ಮಾರುಕಟ್ಟೆಯಾದ ನೈಕಾ ಅನ್ನು ಪ್ರಾರಂಭಿಸುವ ಉದ್ದೇಶದಿಂದ ಆ ಮಹಿಳೆಯು ಕೋಟಕ್‌ನಲ್ಲಿ ತಮ್ಮ ಉನ್ನತ ಸ್ಥಾನವನ್ನು ತೊರೆದಿದ್ದಳು. ನಾಯರ್ ಅವರು ನ್ಯೂಯಾರ್ಕ್‌ನಲ್ಲಿ ತಮ್ಮ ಹೆಚ್ಚಿನ ಸಂಬಳದ ಉದ್ಯೋಗವನ್ನೇ ತೊರೆದು ನೈಕಾದಲ್ಲಿ ಸಹ- ಸಂಸ್ಥಾಪಕರಾಗಿ ತಾಯಿಯ ವ್ಯಾಪಾರದ ಜತೆ ಸೇರಿಕೊಂಡರು.
ಈ ಇಬ್ಬರು ಮಹಿಳೆಯರು ಸೇರಿಕೊಂಡು ಅಂದಿನಿಂದ ಉದ್ಯಮದ ಕ್ಷೇತ್ರದಲ್ಲಿ ಯಾರು ಕೂಡ ಊಹಿಸಲಾಗದಷ್ಟು ಯಶಸ್ಸಿನ ಹಾದಿಯಲ್ಲಿ ಮುನ್ನಡೆದಿದ್ದಾರೆ. ಅವರ ತಾಯಿ ಫಲ್ಗುಣಿ ನಾಯರ್ ಅವರು ಸ್ವಯಂ ನಿರ್ಮಿತ ಭಾರತದ ಅತ್ಯಂತ ಶ್ರೀಮಂತ ಮಹಿಳೆಯಾಗಿದ್ದಾರೆ. ಅವರು ನೈಕಾ ಕಂಪೆನಿಯ ಸಿಇಒ ಆಗಿದ್ದು, 2021ರಲ್ಲಿ ಯಶಸ್ವಿ ಐಪಿಒ ಪ್ರವೇಶದ ನಂತರ ಅದು 36,000 ಕೋಟಿ ರೂ. ಬಂಡವಾಳವನ್ನು ಹೊಂದಿದೆ. ಕಂಪೆನಿಯು ಫ್ಯಾಶನ್ ಎಂಬ ಫ್ಯಾಶನ್ ವಿಭಾಗವನ್ನು ಹೊಂದಿದ್ದು, ಅದ್ವೈತಾ ನಾಯರ್ ಅವರು ಅದನ್ನು ಮುನ್ನಡೆಸುತ್ತಿದ್ದಾರೆ.

IIM ಪದವೀಧರಾಗಿರುವ ತಮ್ಮ ತಾಯಿಯಂತೆ ಅದ್ವೈತಾ ಅವರು ಕೂಡ ತುಂಬಾ ವಿದ್ಯಾವಂತ ವೃತ್ತಿಪರರಾಗಿದ್ದಾರೆ. ಮುಂಬೈಯ ಧೀರುಬಾಯಿ ಅಂಬಾನಿ ಸ್ಕೂಲ್‌ನಲ್ಲಿ ಓದು ಮುಗಿಸಿದ ನಂತರ ಅವರು ಯೇಲ್ ವಿಶ್ವವಿದ್ಯಾಲಯದಿಂದ ಅಪ್ಲೈಡ್ ಗಣಿತದಲ್ಲಿ ಬಿಎ ಪದವಿಯನ್ನು ಪಡೆದುಕೊಂಡಿದ್ದಾರೆ.ಬಳಿಕ ಅವರು ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಲ್ಲಿ ಸೇರಿಕೊಂಡು ಎಂಬಿಎ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ತಾನು ಗಣಿತವನ್ನು ಅಪ್ಲೈ ಮಾಡುತ್ತಿರುವುದಾಗಿ ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ಹೇಳಿದ್ದರು.
ಅಧ್ವೈತಾ ಅವರು ನೈಕಾ ಕಂಪೆನಿಯನ್ನು ಎತ್ತರಕ್ಕೆ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರು ಈ ಕಂಪೆನಿಯನ್ನು ಶೂನ್ಯದಿಂದ ಬಹಳ ದೊಡ್ಡ ಮಟ್ಟಕ್ಕೆ ಬೆಳೆಸಿದ್ದಾರೆ. ಅವರು ತಮ್ಮ ಕಂಪೆನಿಯನ್ನು ಕೇವಲ 10 ಮಂದಿ ಉದ್ಯೋಗಿಗಳಿಂದ 3000 ಮಂದಿ ಉದ್ಯೋಗಿಗಳ ಸಂಸ್ಥೆಯಾಗಿ ಬೆಳೆಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. 2018ರಲ್ಲಿ ಅವರು ನೈಕಾ ಫ್ಯಾಶನ್ ಅನ್ನು ಪ್ರಾರಂಭಿಸಿದ್ದರು. ಅವರು ಕಡಿಮೆ ಬೆಲೆಯ ಸಮಯಾಧಾರಿತ ವ್ಯವಹಾರವನ್ನು ಮಾಡಲಿಲ್ಲ. ಬದಲಿಗೆ ಟ್ರೆಂಡಿಂಗ್ ಫ್ಯಾಶನ್ ಮೂಲಕ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾದರು.
ನಂತರದಲ್ಲಿ ಅವರು ತಮ್ಮದೇ ಆದ 20 ಡ್ರೆಸೆಸ್, ಆರ್‌ಎಸ್‌ವಿಪಿ, Mixt, Likha, Pipa Bella ಮುಂತಾದ ಬ್ರ್ಯಾಂಡ್‌ಗಳನ್ನು ಪರಿಚಯಿಸಿದರು. ತಾವು ಕಂಪೆನಿಯಲ್ಲಿ ಬಹಳ ಕಠಿಣ ಕೆಲಸದ ಸಂಸ್ಕೃತಿಯನ್ನು ಅಳವಡಿಸಿರುವುದಾಗಿ ಯುವರ್ ಸ್ಟೋರಿಗೆ ತಿಳಿಸಿದ್ದಾರೆ. ಈ ರೀತಿಯ ಕಲ್ಚರ್ ಕಂಪೆನಿಯನ್ನು ಎಲ್ಲ ರೀತಿಯಿಂದಲೂ ಎತ್ತರಕ್ಕೆ ಬೆಳೆಸಿದೆ. 2022ರ ಹಣಕಾಸು ವರ್ಷದ 3ನೇ ತ್ರೈಮಾಸಿಕದಲ್ಲಿ ನೈಕಾ ಫ್ಯಾಶನ್‌ನ ಜಿಎಂವಿ 724.4 ಕೋಟಿ ರೂ. ಆಗುವ ಮೂಲಕ ಶೇ.50ರಷ್ಟು ಬೆಳವಣಿಗೆ ಸಾಧಿಸಿದೆ. ಈ ರೀತಿಯ ಬೆಳವಣಿಗೆಯನ್ನು ಸಾಧಿಸಿದ ಬಳಿಕ ಅವರು ಹೆಚ್ಚಿನ ಲಾಭ ಗಳಿಕೆಯತ್ತ ಗಮನಹರಿಸಿದ್ದಾರೆ.
ಬಹಳ ಯಶಸ್ವಿ ಸ್ಟಾರ್ಟಪ್ ಮಾಲೀಕರಾಗಿ ತಮ್ಮ ತಾಯಿ ಆರಂಭಿಸಿದ ನೈಕಾ ಕಂಪೆನಿಯಲ್ಲಿ ತೊಡಗಿಸಿಕೊಂಡಿರುವುದಕ್ಕೆ ಬಹಳ ಖುಷಿಯಾಗಿದೆ. ತಾವು ತಮ್ಮ ಕಂಪೆನಿ ವ್ಯವಹಾರಗಳ ಆಪರೇಷನ್, ಟೆಕ್ನಾಲಜಿ, ಇ-ಕಾಮರ್ಸ್ ಮಾರ್ಕೆಟಿಂಗ್‌ನ ಜವಾಬ್ದಾರಿಗಳನ್ನು ನೋಡಿಕೊಳ್ಳುತ್ತಿರುವುದಾಗಿ ಅದ್ವೈತಾ ನಾಯರ್ ಲಿಂಕ್ಡ್ ಇನ್‌ನಲ್ಲಿ ಬರೆದುಕೊಂಡಿದ್ದಾರೆ.
2022ರಲ್ಲಿ ಫಲ್ಗುಣಿ ನಾಯರ್ ಅವರು ಭಾರತದ ಶ್ರೀಮಂತ ಮಹಿಳೆಯಾಗಿದ್ದು, ಅವರ ಆಸ್ತಿ ಮೌಲ್ಯವು 20,000 ಕೋಟಿ ರೂ. ಆಗಿದೆ.


Click it and Unblock the Notifications