ಮೆಕ್‌ಡೊನಾಲ್ಡ್ಸ್ ಮಾಲೀಕತ್ವದ ವೆಸ್ಟ್‌ಲೈಫ್ ಫುಡ್‌ವರ್ಲ್ಡ್ ಸೋಮವಾರದಿಂದ ಜಾರಿಗೆ ಬರುವಂತೆ ಅಮಿತ್ ಜಟಿಯಾ ಅವರನ್ನು ಕಂಪೆನಿಯ ಅಧ್ಯಕ್ಷರನ್ನಾಗಿ ನೇಮಿಸಿದೆ. ಇದರೊಂದಿಗೆ ಸ್ಮಿತಾ ಜಟಿಯಾ ಅವರು ಕೂಡ ಈ ಕಂಪೆನಿಯ ಉಪಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಈ ಹಿಂದೆ ಅಮಿತ್ ಜಟಿಯಾ ಅವರು ವೆಸ್ಟ್‌ಲೈಫ್ ಫುಡ್‌ವರ್ಲ್ಡ್‌ನ ಉಪಾಧ್ಯಕ್ಷರಾಗಿದ್ದರು.
"ಹಲವು ವರ್ಷಗಳಿಂದ ಪ್ರತಿಭಾನ್ವಿತ ಹಾಗೂ ಬದ್ಧತೆಯ ವೃತ್ತಿಪರರ ತಂಡವು ಕಟ್ಟಿ ಬೆಳೆಸಿರುವ ಬಲಿಷ್ಠವಾದ ಸಂಸ್ಥೆಯನ್ನು ಮುನ್ನಡೆಸುವ ಅವಕಾಶ ಲಭಿಸಿರುವುದು ನನ್ನ ಪಾಲಿನ ಸುಯೋಗವಾಗಿದೆ. ಕಂಪೆನಿಯ ಆಡಳಿತ ಮಂಡಳಿಯು ನನ್ನ ಮೇಲೆ ಇಟ್ಟಿರುವ ನಂಬಿಕೆಗೆ ನಾನು ಅಭಾರಿಯಾಗಿದ್ದೇನೆ. ಆ ಮೂಲಕ ನಾನು ನಮ್ಮ ಷೇರುದಾರರು, ಉದ್ಯೋಗಿಗಳು, ಗ್ರಾಹಕರು ಹಾಗೂ ಸಮುದಾಯಗಳ ಹಿತಾಸಕ್ತಿಗೆ ಬದ್ಧನಾಗಿ ಕೆಲಸ ಮಾಡುತ್ತೇನೆ," ಎಂದು ಅಮಿತ್ ಜಟಿಯಾ ಈ ಸಂದರ್ಭದಲ್ಲಿ ಹೇಳಿದ್ದಾರೆ.

ಅಮಿತ್ ಅವರು 1996ರಲ್ಲಿ ಭಾರತದಲ್ಲಿ ಮೆಕ್‌ಡೊನಾಲ್ಡ್ಸ್ ಸ್ಥಾಪನೆಯ ವೇಳೆ ಬಹುಮುಖ್ಯ ಪಾತ್ರವನ್ನು ವಹಿಸಿದ್ದರು. ಅವರನ್ನು ಭಾರತದ ಕ್ಯೂಎಸ್‌ಆರ್ ಕ್ಷೇತ್ರದ ಪ್ರವರ್ತಕರಾಗಿ ಪರಿಗಣಿಸಲಾಗಿದೆ. ಅಮಿತ್ ಅವರು ಕ್ಯೂಎಸ್‌ಆರ್ ಉದ್ಯಮದಲ್ಲಿ ಸುಮಾರು 26 ವರ್ಷಗಳ ಸುಧೀರ್ಘ ಸೇವಾನುಭವನ್ನು ಹೊಂದಿದ್ದಾರೆ.ಅವರ ನಿರ್ದೇಶನದಡಿ ಮೆಕ್‌ಡೊನಾಲ್ಡ್ಸ್ ಇಂಡಿಯಾ(ಪಶ್ಚಿಮ ಮತ್ತು ದಕ್ಷಿಣ) ತನ್ನ ರೆಸ್ಟೋರೆಂಟ್ ಸಂಖ್ಯೆಯನ್ನು 357ಕ್ಕೆ ಹೆಚ್ಚಿಸಿತ್ತು.
ಮ್ಯಾಕ್‌ಕೆಫೆ ಎಂಬ ವಿಶೇಷ ಕಾಫಿ ಚೈನ್ ಅನ್ನು ಪ್ರಾರಂಭಿಸಿದ್ದು, ಅದು ಆಹಾರ ತಂತ್ರಜ್ಞಾನ ಸಂಸ್ಥೆಯಾಗಿ ಬೆಳೆಯಿತು. ವೆಸ್ಟ್‌ಲೈಫ್ ಫುಡ್‌ವರ್ಲ್ಡ್‌ನಲ್ಲಿ ನಾವೀನ್ಯತೆಯ ಕಲ್ಚರ್ ಅನ್ನು ಕಾಪಾಡುವುದು ಹಾಗೂ ಕಂಪೆನಿಯ ಕಾರ್ಯಾಚರಣೆಯಲ್ಲಿ ಎಲ್ಲ ವಿಭಾಗ-ಹಂತಗಳಲ್ಲಿಯೂ ಸಮರ್ಥವಾಗಿ ಮುನ್ನಡೆಸುವ ಮೂಲಕ ಜಾಗತಿಕವಾಗಿ ಬೆಳವಣಿಗೆ ಸಾಧಿಸುವುದು ಅವರ ಜವಾಬ್ದಾರಿಯಾಗಿದೆ.
ವೆಸ್ಟ್‌ಲೈಫ್ ಫುಡ್‌ವರ್ಲ್ಡ್‌ನಲ್ಲಿ ಅವರ ಕುಟುಂಬವು ಬಹುಪಾಲು ಮಾಲೀಕತ್ವ ಹೊಂದಿರುವ ಕಾರಣ ಪಶ್ಚಿಮ ಹಾಗೂ ದಕ್ಷಿಣ ಭಾರತದಲ್ಲಿ ಮೆಕ್‌ಡೊನಾಲ್ಡ್ಸ್ ಮಾರುಕಟ್ಟೆಯನ್ನು ಬಹಳ ವೇಗವಾಗಿ ವಿಸ್ತರಿಸುತ್ತಿದೆ. ಹೀಗಾಗಿ, ಅಮಿತ್ ಜಟಿಯಾ ಅವರು ಶ್ರೀಮಂತರ ಪಟ್ಟಿಗೆ ಪ್ರವೇಶ ಪಡೆದಿದ್ದಾರೆ. ಇದರ ಜತೆಗೆ ಬಿಎಲ್ ಜಟಿಯಾ ಗ್ರೂಪ್ ಲೂಬ್ರಿಕೆಂಟ್ಸ್, ರಿಯಲ್ ಎಸ್ಟೇಟ್ ಹಾಗೂ ಕೆಮಿಕಲ್ ಕ್ಷೇತ್ರದಲ್ಲಿಯೂ ಷೇರು ಪಾಲನ್ನು ಹೊಂದಿದೆ. ಅಮಿತ್ ಅವರು ಹ್ಯಾಂಬರ್ಗರಾಲಜಿಯಲ್ಲಿ ಇಲಿನಾಯ್ಸ್‌ನ ಓಕ್‌ವುಡ್‌ನಲ್ಲಿರುವ ಹ್ಯಾಂಬರ್ಗರ್ ವಿಶ್ವವಿದ್ಯಾಲಯದಿಂದ ಪದವಿ ಪಡೆದುಕೊಂಡಿದ್ದಾರೆ.
ಸ್ಮಿತಾ ಜಟಿಯಾ ವೆಸ್ಟ್‌ಲೈಫ್‌ನ ಉಪಾಧ್ಯಕ್ಷೆ
ಇಂದಿನಿಂದ ಅನ್ವಯವಾಗುವಂತೆ ಸ್ಮಿತಾ ಜಟಿಯಾ ಅವರು ಕಂಪೆನಿಯ ಉಪಾಧ್ಯಕ್ಷರಾಗಿ ಬಡ್ತಿ ಪಡೆದುಕೊಂಡಿದ್ದಾರೆ. ಸ್ಮಿತಾ ಅವರು ಸರ್ವೀಸ್ ರೆಸ್ಟೊರೆಂಟ್ ಕ್ಷೇತ್ರದಲ್ಲಿ 20ಕ್ಕೂ ಹೆಚ್ಚು ವರ್ಷಗಳ ಅನುಭವನ್ನು ಹೊಂದಿದ್ದಾರೆ. ಅಲ್ಲದೆ, ಕಂಪೆನಿಯ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಕೋವಿಡ್ ಬಳಿಕವೂ ಬ್ರಾಂಡ್ ಅನ್ನು ಪುನರ್ ಸ್ಥಾಪಿಸುವಲ್ಲಿ ಹೆಚ್ಚಿನ ಶ್ರಮ ವಹಿಸಿದ್ದಾರೆ.
ದೇಶದಲ್ಲಿ ಮೆಕ್‌ಡೊನಾಲ್ಡ್ಸ್ ಬ್ರಾಂಡ್‌ನ್ನು ಜನಪ್ರಿಯಗೊಳಿಸುವಲ್ಲಿ ಹಾಗೂ ಆಕ್ರಮಣಕಾರಿ ರೀತಿ ಮಾರುಕಟ್ಟೆಯನ್ನು ವಿಸ್ತರಿಸುವಲ್ಲಿ ಸ್ಮಿತಾ ಅವರು ಬಹಳ ಮಹತ್ವದ ಪಾತ್ರವನ್ನು ನಿರ್ವಹಿಸಿದ್ದಾರೆ.
"ವೆಸ್ಟ್‌ಲ್ಯಾಂಡ್ ಫುಡ್‌ವರ್ಲ್ಡ್‌ನ ಉಪಾಧ್ಯಕ್ಷ ಸ್ಥಾನವನ್ನು ಸ್ವೀಕರಿಸಲು ನಾನು ಬಹಳ ಉತ್ಸುಕಳಾಗಿದ್ದೇನೆ," ಎಂದು ಸ್ಮಿತಾ ಅವರು ಹೇಳಿಕೊಂಡಿದ್ದಾರೆ.
ಮೆಕ್‌ಡೊನಾಲ್ಡ್ಸ್ ಕಚೇರಿ ಬಂದ್
ವಿಶ್ವ ಅತೀ ದೊಡ್ಡ ಫಾಸ್ಟ್ ಫುಡ್ ತಯಾಕರ ಸಂಸ್ಥೆಯಾದ ಮೆಕ್‌ಡೊನಾಲ್ಡ್ಸ್‌ಗೂ ಕೂಡಾ ಹಣದುಬ್ಬರದ ಬಿಸಿ ತಟ್ಟಿದೆ. ಈಗಾಗಲೇ ಹಲವಾರು ಸಂಸ್ಥೆಗಳು ಉದ್ಯೋಗ ಕಡಿತವನ್ನು ಮಾಡಿದ್ದು, ಅದಕ್ಕೆ ಕಾರಣವನ್ನು ಸಂಶ್ಥೆಯಲ್ಲಿ ವೆಚ್ಚ ಕಡಿತ ಮಾಡುವ ಗುರಿ ಎಂದು ಹೇಳಿಕೊಂಡಿದೆ. ಈ ನಡುವೆ ಮೆಕ್‌ಡೊನಾಲ್ಡ್ಸ್ ಯುಎಸ್‌ನಲ್ಲಿರುವ ತನ್ನ ಎಲ್ಲ ಕಚೇರಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಿದೆ ಎಂದು ವರದಿಯಾಗಿದೆ. ಹಾಗೆಯೇ ಸಂಸ್ಥೆಯಲ್ಲಿ ಉದ್ಯೋಗ ಕಡಿತ ನಡೆಸಲು ಕೂಡಾ ಸಜ್ಜಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.


Click it and Unblock the Notifications