ಭಾರತವು ಅನೇಕ ಸ್ಟಾರ್ಟ್‌ಅಪ್‌ಗಳನ್ನು ಹೊಂದಿದ್ದು,ಅವುಗಳಲ್ಲಿ ಕೆಲವು ಯುನಿಕಾರ್ನ್‌ಗಳಾಗಿವೆ. ಇಂತಹ ಸ್ಟಾರ್ಟ್‌ಅಪ್ ದೊಡ್ದ ಉದ್ಯಮಿಗಳ ಬೆಂಬಲವನ್ನು ಬಯಸುತ್ತವೆ. ಆದರೆ ಎಲ್ಲವೂ ಸಕ್ಸೆಸ್ ಹೊಂದುವುದಿಲ್ಲ. ಉದ್ಯಮಿ ರತನ್ ಟಾಟಾ ಬೆಂಬಲಿತ ಸ್ಟಾರ್ಟ್‌ಅಪ್ (NestAway) ನೆಸ್ಟ್ಅವೇ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಅನ್ನು ಈಗ ಔರಂ ವೆಂಚರ್ಸ್ ಅನ್ನು ಸ್ಥಾಪಿಸಿದ ಆಶಿಶ್ ದಿಯೋರಾ ಸ್ವಾಧೀನಪಡಿಸಿಕೊಂಡಿದ್ದಾರೆ.
ಆಶಿಶ್ ದಿಯೋರಾ ಯಾರು?: ಆಶಿಶ್ ದಿಯೋರಾ ಓರ್ವ ವಾಣಿಜ್ಯೋದ್ಯಮಿಯಾಗಿದ್ದು, ಪ್ರಸ್ತುತ ಔರಂ ವೆಂಚರ್ಸ್ನ ಸಿಇಓ ಆಗಿ ಮುನ್ನಡೆಸುತ್ತಿದ್ದಾರೆ. ಅವರಿಗೆ ಗಣಿಗಾರಿಕೆಯಿಂದ ಹಿಡಿದು ಟೆಲಿಕಾಂ ಉದ್ಯಮದವರೆಗೆ ದಶಕಗಳ ಅನುಭವವಿದೆ. ಆಶಿಶ್ ದಿಯೋರಾ ಅವರು 1996ರಲ್ಲಿ ಅಂದರೆ ತಮ್ಮ 21 ನೇ ವಯಸ್ಸಿನಲ್ಲಿ ಔರಂ ವೆಂಚರ್ಸ್ ಸ್ಥಾಪಿಸಿದರು.

ಇವರ ಸಂಸ್ಥೆಯೂ, 2019 ರಲ್ಲಿ ಸುಮಾರು 1,800 ಕೋಟಿ ರೂ ಮೌಲ್ಯವಿದ್ದ ನೆಸ್ಟ್‌ಅವೇಯನ್ನು ಶೇಕಡ 95ರಷ್ಟು ಕಡಿತದೊಂದಿಗೆ ಅಂದರೆ ಕೇವಲ 90 ಕೋಟಿ ರೂಪಾಯಿಗೆ ಸ್ವಾಧೀನಪಡಿಸಿಕೊಂಡಿದೆ. ನೆಸ್ಟ್‌ಅವೇಯನ್ನು ಮತ್ತೆ ಸ್ಥಿರತೆಗೆ ತರಲು ದಿಯೋರಾ ಅವರು 30 ಕೋಟಿ ರೂಪಾಯಿ ಹೂಡಿಕೆ ಮಾಡಲಿದ್ದಾರೆ
ಸ್ಟಾರ್ಟ್ಅಪ್ ನೆಸ್ಟ್‌ಅವೇ ಬಗ್ಗೆ: ಇದು ಬೆಂಗಳೂರು ಮೂಲದ ಆನ್‌ಲೈನ್ ನಲ್ಲಿ ಮನೆ ಬಾಡಿಗೆ ಹುಡುಕುವ ಸ್ಟಾರ್ಟಪ್ ಆಗಿದ್ದು, ಅಮರೇಂದ್ರ ಸಾಹು, ದೀಪಕ್ ಧರ್ ಮತ್ತು ಸ್ಮೃತಿ ಪರಿದಾ ಅವರು 2015 ರಲ್ಲಿ ಸ್ಥಾಪಿಸಿದರು.
ಉದ್ಯಮಿ ರತನ್ ಟಾಟಾ ಬೆಂಬಲಿತ ನೆಸ್ಟ್‌ಅವೇ ಸ್ಟಾರ್ಟ್‌ಅಪ್ 2019 ರಲ್ಲಿ 1,800 ಕೋಟಿ ರೂಪಾಯಿ ಮೌಲ್ಯ ಹೊಂದಿತ್ತು. ಕೋವಿಡ್ ಸಾಂಕ್ರಾಮಿಕದ ಮೊದಲು, ಕಂಪನಿಯು ವಾರ್ಷಿಕ 100 ಕೋಟಿ ಆದಾಯ ಗಳಿಸಿತ್ತು. ಆ ಸಂದರ್ಭದಲ್ಲಿ ಕಂಪನಿಯು ತನ್ನ ವೇದಿಕೆಯಲ್ಲಿ 50,000 ಆಸ್ತಿಗಳ ವಿವರಗಳನ್ನು ಹೊಂದಿತ್ತು.
ಪ್ರಸ್ತುತ, ಈ ಸಂಖ್ಯೆಯು ಕೇವಲ 18,000 ಆಸ್ತಿಗಳಿಗೆ ಕುಸಿದಿದೆ. ಸಾಂಕ್ರಾಮಿಕ ಸಮಯದಲ್ಲಿ ಅದರ ವ್ಯವಹಾರ ಏಕಾಏಕಿ ಕುಸಿಯಲಾರಂಭಿಸಿತು. ಲಾಕ್‌ಡೌನ್, ಸಾಂಕ್ರಾಮಿಕದ ಭೀತಿಯಿಂದ ನಗರಗಳನ್ನು ತೊರೆದು ಜನ ಹಿಮ್ಮುಖ ವಲಸೆ ಮಾಡಲಾರಂಭಿಸಿದರು.
ತಮ್ಮ ಬಾಡಿಗೆ ಮನೆಗಳನ್ನು ತೊರೆದು ತಮ್ಮ ಊರುಗಳಿಗೆ ಹಿಂತಿರುಗಿದ್ದರಿಂದ ನೆಸ್ಟ್ಅವೇ ಗೆ ದೊಡ್ಡ ಹೊಡೆತ ಬಿತ್ತು. ಈಗ ಕಂಪನಿಯ ವಾರ್ಷಿಕ ಆದಾಯ 30 ಕೋಟಿ ರೂಪಾಯಿಗೆ ಕುಸಿದಿದೆ. ಔರಂ ವೆಂಚರ್ಸ್ ಈ ಹಿಂದೆ HelloWorld ಅನ್ನು ಸ್ವಾಧೀನಪಡಿಸಿ ಒಂದು ವರ್ಷದೊಳಗೆ "ಹಲೋವರ್ಲ್ಡ್" ಕಾರ್ಯಾಚರಣೆಗಳನ್ನು ಮತ್ತೆ ಯಶಸ್ವಿಗೊಳಿಸಿದ ನಂತರ, ಇದೀಗ ನೆಸ್ಟ್‌ಅವೇ ಅನ್ನು ಸ್ವಾಧೀನಪಡಿಸಿಕೊಂಡಿದೆ.
ಇನ್ನು ಆಶಿಶ್ ದಿಯೋರಾ ಅವರು ಟೆಲಿಕಾಂ, ಏವಿಯೇಷನ್, ಗಣಿಗಾರಿಕೆ, ರಿಯಲ್ ಎಸ್ಟೇಟ್ ಮತ್ತು ಪ್ರಾಪ್‌ಟೆಕ್ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವ್ಯವಹಾರ ವಿಸ್ತರಿಸಿಕೊಂಡಿದ್ದಾರೆ. ಆಶಿಶ್ ದಿಯೋರಾ ಅವರು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನ ಹಳೆಯ ವಿದ್ಯಾರ್ಥಿಯಾಗಿದ್ದು, 2010-2011ರಲ್ಲಿ "ಕಾರ್ಪೊರೇಟ್ ರಿಸ್ಟ್ರಾಚ್ಚರಿಂಗ್, ಮರ್ಜಸ್ ಆಂಡ್ ಅಕ್ವಾಜೀಸನ್" ಬಗ್ಗೆ ಅಧ್ಯಯನ ಮಾಡಿದರು.
ಇದಲ್ಲದೇ ಪ್ರತಿಷ್ಠಿತ ಕಾಲೇಜಿನಿಂದ (ಜೂನ್ 2017- ಜೂನ್ 2022) ಓನರ್ ಪ್ರೆಸಿಡೆಂಟ್ ಮ್ಯಾನೇಜ್‌ಮೆಂಟ್ ಪ್ರೋಗ್ರಾಂನ (OPM) ಅನ್ನು ಪೂರ್ಣಗೊಳಿಸಿದರು. ಕೋಲ್ಕತ್ತಾದ ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ವಾಣಿಜ್ಯ (ಬಿಕಾಂ) ವಿಷಯದಲ್ಲಿ ಪದವಿ ಪಡೆದಿದ್ದು, ಗ್ವಾಲಿಯರ್‌ನ ಸಿಂಧಿಯಾ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದುಕೊಂಡಿದ್ದಾರೆ.
ಉದ್ಯಮವನ್ನು ಹೊರತುಪಡಿಸಿದ ದಿಯೋರಾ ಅವರೊಬ್ಬ ಅತ್ಯಾಸಕ್ತಓದುಗರಾಗಿದ್ದಾರೆ. "ಪ್ರಿನ್ಸಿಪಲ್ಸ್ ಬೈ ರೇ ಡಾಲಿಯೊ" ಸದ್ಯ ಆಶಿಶ್ ದಿಯೋರಾ ಅವರ ನೆಚ್ಚಿನ ಪುಸ್ತಕವಾಗಿದೆ. ಮುಂದಿನ ದಶಕ ಭಾರತದ ಉದ್ಯಮಿಗಳಿಗೆ ಸೇರಿದ್ದು ಎಂದು ಆಶಿಶ್ ದಿಯೋರಾ ದೃಢವಾಗಿ ನಂಬಿದ್ದಾರೆ.


Click it and Unblock the Notifications