ಜೈಪುರದ ವಿದ್ಯಾರ್ಥಿನಿಯೋರ್ವಳು ಪ್ಲೇಸ್ಮೆಂಟ್ ವೇಳೆ ಅತ್ಯಧಿಕ ವೇತನದ ಪ್ಯಾಕೇಜ್ ಪಡೆದು ಹೊಸ ದಾಖಲೆ ಬರೆದಿದ್ದಾರೆ. ಹೌದು ಸಂಬಲ್ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (IIM) ನ ವಿದ್ಯಾರ್ಥಿಯಾಗಿರುವ ಅವ್ನಿ ಮಲ್ಹೋತ್ರಾ ಅವರನ್ನು ದೈತ್ಯ ಸಾಫ್ಟ್‌ವೇರ್ ಕಂಪನಿಯಾಗಿರುವ ಮೈಕ್ರೋಸಾಫ್ಟ್ 64.61 ಲಕ್ಷ ರೂಪಾಯಿಗಳ ಪ್ಯಾಕೇಜ್‌ನೊಂದಿಗೆ ನೇಮಿಸಿಕೊಂಡಿದೆ.
ಐಐಎಂ ಸಂಬಲ್‌ಪುರ್ ಈ ಮಾಹಿತಿಯನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, "ಪ್ರತಿಷ್ಠಿತ ಟೆಕ್ ಕಂಪನಿ ಮೈಕ್ರೋಸಾಫ್ಟ್ ಅವ್ನಿಯನ್ನು ವರ್ಷಕ್ಕೆ 64.61 ಲಕ್ಷ ರೂಪಾಯಿ ಪ್ಯಾಕೇಜ್ ನೀಡಿ ಕೆಲಸಕ್ಕೆ ನೇಮಿಸಿಕೊಂಡಿದೆ ಇದು ಅತ್ಯಧಿಕ ಸಿಟಿಸಿ ಪ್ಯಾಕೇಜ್ ಆಗಿದೆ" ಎಂದು ಹೇಳಿದೆ. ಇನ್ನು ಮೈಕ್ರೋಸಾಫ್ಟ್ ಸಂಸ್ಥೆಯ ಪ್ರಕಾರ, "ಈ ಪ್ಲೇಸ್‌ಮೆಂಟ್ ಕೊಡುಗೆಯು ಕಳೆದ ವರ್ಷಕ್ಕಿಂತ ಹೆಚ್ಚಿನ ಸಂಬಳವಾಗಿದ್ದು, ವೇತನದಲ್ಲಿ 146.7 ಶೇಕಡಾ ಹೆಚ್ಚಳವಾಗಿದೆ" ಎಂದು ಹೇಳಿದೆ.

ಟೈಮ್ಸ್ ನೌ ವರದಿಯ ಪ್ರಕಾರ, ಜೈಪುರದ ಮೂಲದವರಾಗಿರುವ ಮಲ್ಹೋತ್ರಾ ಅವರು ಮೈಕ್ರೋಸಾಫ್ಟ್ ಕಂಪನಿಯೊಂದಿಗೆ ಸುಮಾರು ಆರು ಸುತ್ತಿನ ಸಂದರ್ಶನಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವರದಿಗಳ ಪ್ರಕಾರ, ಇನ್ಫೋಸಿಸ್ ನೊಂದಿಗಿನ ಅವರಿಗೆ ಇದ್ದ ಮೂರು ವರ್ಷಗಳ ಹಿಂದಿನ ಅನುಭವ ಮತ್ತು ಅವರ ಸಾಂಸ್ಥಿಕ ಸಾಮರ್ಥ್ಯದಿಂದಾಗಿ ಅವರು ಮೈಕ್ರೋಸಾಫ್ಟ್ ನೇಮಕಾತಿದಾರರಿಗೆ ಎಲ್ಲರಿಗಿಂತಲೂ ಸ್ವಲ್ಪ ಭಿನ್ನವಾಗಿ ಕಂಡು ಈ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಅವ್ನಿ ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಬಿ ಟೆಕ್ ಪದವಿಯನ್ನು ಪಡೆದಿದ್ದಾರೆ. ದಾಖಲೆಯೊಂದಿಗೆ, ಈ ವರ್ಷ ಪಡೆದುಕೊಂಡಿರುವ ಅತ್ಯಧಿಕ ವೇತನವು ಆಕರ್ಷಕ ರೂ.64.61 LPA, ಕಳೆದ ವರ್ಷಕ್ಕಿಂತ ಶೇಕಡ 146.7ರಷ್ಟು ಹೆಚ್ಚಳವಾಗಿದೆ. ವೇತನದಲ್ಲಿ ಶೇಕಡ 26 ಸರಾಸರಿ ಮತ್ತು ಸರಾಸರಿ ಸಂಬಳದಲ್ಲಿ ಶೇಕಡ 29ರಷ್ಟು ಭರವಸೆಯ ಏರಿಕೆಯಿದೆ ಎಂದು ಸಂಸ್ಥೆ ಟ್ವಿಟರ್‌ನಲ್ಲಿ ಬರೆದುಕೊಂಡಿದೆ.
ಅವ್ನಿಯ ಬ್ಯಾಚ್‌ನ ಎಂಬಿಎ ವಿದ್ಯಾರ್ಥಿಗಳಿಗೆ ನೀಡಲಾಗುವ ಸರಾಸರಿ ವೇತನವು 16 ಲಕ್ಷ ರೂಪಾಯಿಗಳಾಗಿದ್ದರೆ, ವಿದ್ಯಾರ್ಥಿನಿಯರ ಸರಾಸರಿ ವೇತನವು 18.25 ಲಕ್ಷಕ್ಕೆ ಏರಿಕೆಯಾಗಿದೆ. ಐಐಎಂ ಸಂಬಲ್‌ಪುರದಲ್ಲಿ ಈ ವರ್ಷ ಕ್ಯಾಂಪಸ್ ನೇಮಕಾತಿಗಾಗಿ ಬಂದ ಡೆಲೊಯಿಟ್, ಅಮೆಜಾನ್, EY, ಅಕ್ಸೆಂಚರ್, ಅಮುಲ್, ಮೈಕ್ರೋಸಾಫ್ಟ್ ಮತ್ತು ವೇದಾಂತ ಪ್ರಮುಖ ಸಂಸ್ಥೆಗಳು ಆಗಿವೆ.
ಐಐಎಂ ಸಂಬಲ್‌ಪುರ್ 2021-23ರ ಬ್ಯಾಚ್ ನಲ್ಲಿ ಓದುತ್ತಿರುವಂತಹ ಎಲ್ಲಾ ವಿದ್ಯಾರ್ಥಿಗಳಿಗೆ 100 ಪ್ರತಿಶತ ಉದ್ಯೋಗಾವಕಾಶವನ್ನು ದಾಖಲಿಸಿದೆ ಎಂದು ಸಂಸ್ಥೆ ಟ್ವೀಟ್ ಮಾಡಿದೆ. "ಈ ವರ್ಷದ ಪ್ಲೇಸ್‌ಮೆಂಟ್ ಸೀಸನ್ 130+ ಕಂಪನಿಗಳಿಂದ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ, ಮೊದಲ ಬಾರಿಗೆ ನೇಮಕಾತಿ ಮಾಡುವವರಲ್ಲಿ ಶೇಕಡಾ 56 ರಷ್ಟು ಹೆಚ್ಚಳವಾಗಿದೆ" ಎಂದು ಇನ್‌ಸ್ಟಿಟ್ಯೂಟ್ ಟ್ವೀಟ್ ಮಾಡಿದೆ.
ಇಂತಹ ಒಂದು ದೊಡ್ಡ ಕಂಪನಿಯಲ್ಲಿ ಕೆಲಸ ಸಿಕ್ಕಿದ್ದು ಮತ್ತು ಇಂತಹ ಭಾರಿ ಮೊತ್ತದ ಸಂಬಳದ ಪ್ಯಾಕೇಜ್ ಸಿಕ್ಕಿದ್ದಕ್ಕೆ, ಅವ್ನಿ ಐಐಎಂ ಸಂಬಲ್ಪುರ ಮತ್ತು ಪ್ರಾಧ್ಯಾಪಕರು ಹಾಗೂ ತನ್ನ ಹೆತ್ತವರಿಗೆ ಅಪಾರ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಈ ಹಿಂದೆ ವಿಶ್ವದ ಸಾಫ್ಟ್‌ವೇರ್ ಕಂಪನಿ ಮೈಕ್ರೋಸಾಫ್ಟ್ ತನ್ನ ಸಿಬ್ಬಂದಿ ಸಾಮೂಹಿಕವಾಗಿ ವಜಾಗೊಳಿಸಿ ಸುದ್ದಿಯಾಗಿತ್ತು.


Click it and Unblock the Notifications