ಉದ್ಯಮಿಗಳಾದ ಮುಕೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಭಾರತದ ಇಬ್ಬರು ಶ್ರೀಮಂತ ವ್ಯಕ್ತಿಗಳಾಗಿದ್ದಾರೆ. ನಮ್ಮ ದೇಶದಲ್ಲಷ್ಟೇ ಅಲ್ಲ, ಏಷ್ಯಾದ ಶ್ರೀಮಂತರ ಪಟ್ಟಿಯಲ್ಲೂ ಇವರಿಗೆ ಅಗ್ರ ಸ್ಥಾನವಿದೆ. ಭಾರತೀಯ ಅನೇಕ ಬಿಲಿಯನೇರ್‌ಗಳು ಪ್ರಸ್ತುತ ಜಾಗತಿಕ ಆರ್ಥಿಕತೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದ್ದಾರೆ.
ಹೀಗಿರುವಾಗ ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನದ ಸಿರಿವಂತ ವ್ಯಕ್ತಿಯಲ್ಲಿ ಪ್ರಮುಖವಾಗಿ ಕಂಡುಬರುವುದು ಉದ್ಯಮಿ ನಿಶಾತ್ ಗ್ರೂಪ್‌ನ ಅಧ್ಯಕ್ಷ ಮಿಯಾನ್ ಮೊಹಮ್ಮದ್ ಮನ್ಶಾ. ಇವರನ್ನು ಸಾಮಾನ್ಯವಾಗಿ 'ಪಾಕಿಸ್ತಾನದ ಮುಕೇಶ್ ಅಂಬಾನಿ' ಎಂದೇ ಕರೆಯಲಾಗುತ್ತದೆ.

ಪಾಕಿಸ್ತಾನದಲ್ಲಿರುವ ರಾಜಕೀಯ ಪ್ರಕ್ಷುಬ್ಧತೆ ಮತ್ತು ಆರ್ಥಿಕ ಬಿಕ್ಕಟ್ಟಿನ ನಡುವೆಯೂ, ಕೆಲವು ಕಠಿಣ ಪರಿಶ್ರಮಿ ಪ್ರತಿಭೆಗಳು ಪಾಕಿಸ್ತಾನದ ಸಾಮಾಜಿಕ-ರಾಜಕೀಯ ಸನ್ನಿವೇಶದಲ್ಲಿ ಸಾಕಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಈ ಪೈಕಿ ಮಿಯಾನ್ ಮೊಹಮ್ಮದ್ ಮನ್ಶಾ ಕೂಡಾ ಒಬ್ಬರಾಗಿದ್ದಾರೆ. ಜೊತೆಗೆ ಪಾಕ್ ಉದ್ಯಮಿಗಳ ಪಾಲಿಗೆ ಆರಾಧ್ಯ ದೈವವಾಗಿದ್ದಾರೆ. ಇನ್ನೊಂದು ವಿಶೇಷವೆಂದರೆ ಮಿಯಾನ್ ಮೊಹಮ್ಮದ್ ಮನ್ಶಾ ಅವರು ಪಾಕಿಸ್ತಾನದ ಮೊದಲ ಬಿಲಿಯನೇರ್ ಆದವರು.
ಮಿಯಾನ್ ಮೊಹಮ್ಮದ್ ಮನ್ಶಾ ಬಗ್ಗೆ ತಿಳಿಯಿರಿ
ಮನ್ಶಾ ಅವರು 1941 ರಲ್ಲಿ ಭಾರತದಲ್ಲಿ ಜನಿಸಿದ್ದು, 1947 ರ ಭಾರತ ಮತ್ತು ಪಾಕಿಸ್ತಾನ ವಿಭಜನೆಯಗೊಂಡ ಸಮಯದಲ್ಲಿ ಅವರ ಕುಟುಂಬವು ಪಾಕಿಸ್ತಾನಕ್ಕೆ ತೆರಳಿತು. ಅಲ್ಲಿಯವರೆಗೆ ಅವರು ಭಾರತೀಯರಾಗಿಯೇ ಇದ್ದರು. ಮನ್ಶಾ ಅವರು ಕೂಡಾ ಲೋಕೋಪಕಾರ, ಅನೇಕ ವ್ಯವಹಾರಗಳು ಮತ್ತು ಕಠಿಣ ಪರಿಶ್ರಮದ ಮನೋಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಪ್ರಸ್ತುತ, ಬಿಲಿಯನೇರ್ ಶಾಹಿದ್ ಖಾನ್ ನಂತರ ಅವರು ಎರಡನೇ ಶ್ರೀಮಂತ ಪಾಕಿಸ್ತಾನಿಯಾಗಿದ್ದಾರೆ.
ಮಿಯಾನ್ ಮೊಹಮ್ಮದ್ ಮನ್ಶಾ ಪಾಕಿಸ್ತಾನದಲ್ಲಿ ಗೌರವಾನ್ವಿತ ವ್ಯಕ್ತಿಯಾಗಿದ್ದು, ಅವರು ತಮ್ಮ ಪರೋಪಕಾರಿ ಚಟುವಟಿಕೆಗಳಿಂದ ಖ್ಯಾತಿ ಪಡೆದಿದ್ದಾರೆ. ಅವರು ಇತ್ತೀಚೆಗೆ ಪ್ರಧಾನ ಮಂತ್ರಿಗಳ ಪ್ರವಾಹ ಪರಿಹಾರ ನಿಧಿಗೆ ಸುಮಾರು 69,00,000 ರೂಪಾಯಿ ದೇಣಿಗೆ ನೀಡಿದ್ದು, ಪಾಕಿಸ್ತಾನ ವಿವಿಧ ಪ್ರಮುಖ ಸಂಸ್ಥೆಗಳ ಮಂಡಳಿಯಲ್ಲಿದ್ದಾರೆ. 2004 ರ ಮಾರ್ಚ್ 23ರಂದು ಪಾಕಿಸ್ತಾನದ ಅಧ್ಯಕ್ಷ ಪರ್ವೇಜ್ ಮುಷರಫ್ ಅವರು, "ಸಿತಾರಾ-ಎ-ಇಮ್ತಿಯಾಜ್ ನಾಗರಿಕ ಪ್ರಶಸ್ತಿ"ನ್ನು ಮನ್ಶಾ ಅವರಿಗೆ ನೀಡಿ ಗೌರವಿಸಿದ್ದರು.
ಮನ್ಶಾ ಅವರು ಹುಟ್ಟು ಶ್ರೀಮಂತರಾಗಿದ್ದು, ಬಾಯಲ್ಲಿ ಬೆಳ್ಳಿ ಚಮಚ ಇಟ್ಟುಕೊಂಡು ಜನಿಸಿದವರು. ಅವರ ತಂದೆ ಕೈಗಾರಿಕೋದ್ಯಮಿಯಾಗಿದ್ದು, ಕೋಲ್ಕತ್ತಾದಲ್ಲಿದ್ದಾಗ ಅವರ ತಂದೆ 'ಹತ್ತಿ' ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಅವರ ಕುಟುಂಬ ಪಾಕಿಸ್ತಾನಕ್ಕೆ ವಲಸೆ ಹೋದಾಗ, ಅವರು ಅಲ್ಲಿ ನಿಶಾತ್ ಟೆಕ್ಸ್ ಟೈಲ್ಸ್ ಮಿಲ್ಸ್ ಅನ್ನು ಪ್ರಾರಂಭಿಸಿದರು.
ಅವರ ತಂದೆಯ ನಿಧನದ ಬಳಿಕ ಮನ್ಶಾ ಅವರು ಇದರ ಉತ್ತರಾಧಿಕಾರಿಯಾದರು. ಪ್ರಸ್ತುತ, ನಿಶಾತ್ ಗ್ರೂಪ್ ಪಾಕಿಸ್ತಾನದ ಹತ್ತಿ ಬಟ್ಟೆಗಳ ಅತಿದೊಡ್ಡ ರಫ್ತುದಾರ ಮತ್ತು ಪಾಕಿಸ್ತಾನದ ಅತಿದೊಡ್ಡ ಖಾಸಗಿ ಉದ್ಯೋಗದಾತ ಸಂಸ್ಥೆಯಾಗಿದೆ. ಹತ್ತಿ ವ್ಯಾಪಾರದ ಹೊರತಾಗಿ ನಿಶಾತ್ ಗ್ರೂಪ್ ಇಂದು ಜವಳಿ, ಬ್ಯಾಂಕಿಂಗ್, ವಿದ್ಯುತ್ ಉತ್ಪಾದನೆ, ಸಿಮೆಂಟ್ ಉತ್ಪಾದನೆ, ರಿಯಲ್ ಎಸ್ಟೇಟ್ ಮತ್ತು ಇತರ ಕ್ಷೇತ್ರಗಳಲ್ಲಿ ವ್ಯವಹಾರದಲ್ಲಿ ತೊಡಗಿಸಿಕೊಂಡಿದೆ.
ವರದಿಗಳ ಪ್ರಕಾರ ಮನ್ಶಾ ಅವರ ಪ್ರಸ್ತುತ ನಿವ್ವಳ ಮೌಲ್ಯವು ಸುಮಾರು $5 ಬಿಲಿಯನ್ ಆಗಿದೆ. ಪಾಕ್‌ನ ಆರ್ಥಿಕತೆಗೆ ಪ್ರಮುಖ ವ್ಯಕ್ತಿಯಾಗಿ ಮನ್ಶಾ, ಭಾರತದ ಬಿಲಿಯನೇರ್‌ಗಳಾದ ಮುಕೇಶ್ ಅಂಬಾನಿ, ಗೌತಮ್ ಅದಾನಿ, ರತನ್ ಟಾಟಾ ಮತ್ತು ಇತರರ ಸಿರಿವಂತ ಉದ್ಯಮಿಗಳ ನಿವ್ವಳ ಮೌಲ್ಯಕ್ಕೆ ಸಮೀಪದಲ್ಲಿಲ್ಲ ಎಂಬುವುದು ಉಲ್ಲೇಖನೀಯ.
ಮುಕೇಶ್ ಅಂಬಾನಿ ಹಾಗೂ ಮನ್ಶಾ ನಡುವೆ ಮತ್ತೊಂದು ಸಾಮಾನ್ಯ ಹೋಲಿಕೆ ಎಂದರೆ ಅದು ವಿದೇಶಿ ಕಾರುಗಳ ಮೇಲಿನ ಪ್ರೀತಿ. ಅಂಬಾನಿ ಅವರಂತೆಯೇ ಮನ್ಶಾ ಅವರು ಮರ್ಸಿಡಿಸ್ ಇ-ಕ್ಲಾಸ್, ಜಾಗ್ವಾರ್ ಕನ್ವರ್ಟಿಬಲ್, ಪೋರ್ಷೆ, ಬಿಎಂಡಬ್ಲ್ಯು 750, ರೇಂಜ್ ರೋವರ್ ಮತ್ತು ಫೋಕ್ಸ್‌ವ್ಯಾಗನ್ ಸೇರಿದಂತೆ ಹಲವಾರು ಕಾರುಗಳನ್ನು ಸಂಗ್ರಹವನ್ನು ಹೊಂದಿದ್ದಾರೆ.


Click it and Unblock the Notifications