ಯಾವುದೇ ಒಬ್ಬ ಉದ್ಯಮಿಯು ಹೂಡಿಕೆಯನ್ನು ಮಾಡಿ ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಬೇಕಾದರೆ ಸರಿಯಾದ ದಿಕ್ಕು ಅಥವಾ ಆಸ್ತಿ ಮೇಲೆ ಹೂಡಿಕೆಯನ್ನು ಮಾಡಬೇಕಾಗುತ್ತದೆ. ಆದರೆ, ಎಷ್ಟೋ ಮಂದಿ ಈ ವಿಚಾರದಲ್ಲಿ ಪರದಾಡುತ್ತಿರುವಾಗ ಈ ವ್ಯಕ್ತಿಯು ತಮ್ಮ ಸಹೋದರನ ಜತೆಗೆ ಸೇರಿಕೊಂಡು ಹೂಳಿಯ ಕಣ್ಣಿಗೆ ಹೊಡೆದಿದ್ದಾರೆ.
ಈ ಇಬ್ಬರು ಸಹೋದರರು ಆಸ್ತಿ ಮೇಲೆ ಹೂಡಿಕೆ ಮಾಡಿ ದೊಡ್ಡ ಮಟ್ಟಿನ ಯಶಸ್ಸನ್ನು ಗಳಿಸಿದ್ದಾರೆ. ಹಾಗಾದರೆ, ಇಲ್ಲಿ ಪರಿಚಯ ಮಾಡುತ್ತಿರುವ ಇಬ್ಬರು ಆ ಯಶಸ್ವಿ ಉದ್ಯಮಿಗಳೇ ಕುಲ್ದೀಪ್ ಸಿಂಗ್ ಧಿಂಗ್ರಾ ಹಾಗೂ ಗುರ್ಬಚನ್ ಸಿಂಗ್ ಧಿಂಗ್ರಾ. ಇಬ್ಬರಿಬ್ಬರು ತಮ್ಮ ಕಠಿಣ ಪರಿಶ್ರಮ ಹಾಗೂ ಸಮರ್ಪಣಾ ಮನೋಭಾವದಿಂದ ತಮ್ಮ ಬದುಕಿನ ಅದೃಷ್ಟವನ್ನೇ ಬದಲಿಸಿಕೊಂಡಿದ್ದಾರೆ.

ಪಂಜಾಬ್‌ನ ಅಮೃತಸರದ ವ್ಯಾಪಾರ ಕುಟುಂಬದಲ್ಲಿ ಜನಿಸಿದ ಧಿಂಗ್ರಾ ಸಹೋದರರು ಸಾಮಾನ್ಯ ವ್ಯಾಪಾರ ಮಾಡುವ ಜನರೊಂದಿಗೆ ಬೆಳೆದವರು. ಈ ಇಬ್ಬರು ಸಹೋದರರು ಕೂಡ ದೆಹಲಿ ವಿಶ್ವವಿದ್ಯಾನಿಲಯದಿಂದ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದು, ಅಮೃತಸರದಲ್ಲಿ ಅಂಗಡಿಯನ್ನು ತೆರೆಯುವ ಮೂಲಕ ವ್ಯಾಪಾರ ಜಗತ್ತಿಗೆ ಕಾಲಿಟ್ಟಿದ್ದರು.
1970ರ ಹೊತ್ತಿಗೆ ಅಂಗಡಿಯಿಂದ ಅವರ ವಾರ್ಷಿಕ ವಹಿವಾಟು 10 ಲಕ್ಷ ರೂಪಾಯಿ ಆಗಿದ್ದು, ಕ್ರಮೇಣ ಅವರ ವ್ಯಾಪಾರ ಕೂಡ ಬೆಳೆಯಲಾರಂಭಿಸಿತ್ತು. ಇದರ ಪರಿಣಾಮವಾಗಿ ಧಿಂಗ್ರಾ ಸಹೋದರರು 1980ರ ದಶಕದಲ್ಲಿ ಸೋವಿಯತ್ ಒಕ್ಕೂಟದ ಅತಿದೊಡ್ಡ ಬಣ್ಣ ರಫ್ತುದಾರರಾಗಿ ಬೆಳೆದರು.
ಆದರೆ ಕುಲದೀಪ್ ಇಷ್ಟಕ್ಕೇ ಸುಮ್ಮನಾಗಲಿಲ್ಲ. ಬದಲಿಗೆ ತಮ್ಮ ವ್ಯಾಪಾರ ಸಾಮ್ರಾಜ್ಯವನ್ನು ಮತ್ತಷ್ಟು ಎತ್ತರಕ್ಕೆ ವಿಸ್ತರಿಸಲು ಬಯಸಿದ್ದರು. ಆ ವೇಳೆ, ವಿಜಯ್ ಮಲ್ಯ ಅವರ ಯುಬಿ ಗ್ರೂಪ್‌ಗೆ ಸೇರಿದ ಬರ್ಗರ್ ಪೇಂಟ್ಸ್ ಕಂಪನಿಯನ್ನು ಸ್ವಾಧೀನಪಡಿಸಿಕೊಳ್ಳುವುದು ಅವರ ಗುರಿಯಾಗಿತ್ತು.
ಹಲವು ಹಂತದ ಪ್ರಯತ್ನದ ಬಳಿಕ ಮಲ್ಯ ಅವರೊಂದಿಗೆ ಸಭೆಯನ್ನು ನಡೆಸಿ ಅವರ ಸಹಮತ ಪಡೆಯುವಲ್ಲಿ ಯಶಸ್ವಿಯಾದರು. ಆ ಮೂಲಕ ಧಿಂಗ್ರಾ ಸಹೋದರರು ಬರ್ಗರ್ ಪೇಂಟ್ಸ್ ಕಂಪನಿಯನ್ನು ಖರೀದಿಸಿದರು. ಅವರು ಖರೀದಿಸುವ ಸಮಯದಲ್ಲಿ ಬರ್ಗರ್ ಒಂದು ಸಣ್ಣ ಮಟ್ಟದ ಪೇಂಟ್ಸ್ ತಯಾರಿಕಾ ಕಂಪನಿಯಾಗಿತ್ತು. ಆದರೆ ಧಿಂಗ್ರಾ ಸಹೋದರರು ಅದನ್ನು 56,000 ಕೋಟಿ ರೂಪಾಯಿ ಕಂಪನಿಯಾಗಿ ಬೆಳೆಸಿದ್ದಾರೆ.
ಈ ರೀತಿ ಪೇಂಟ್ಸ್ ಕ್ಷೇತ್ರದಲ್ಲಿ ಇಬ್ಬರು ಸಹೋದರರು ಯಾರಿಗೂ ಸಾಟಿಯಿಲ್ಲದ ರೀತಿಯಲ್ಲಿ ಬಹು ಮಿಲಿಯನ್ ಡಾಲರ್ ವ್ಯವಹಾರದೊಂದಿಗೆ ಗುರುತಿಸಿಕೊಂಡಿದ್ದಾರೆ. 2023ರ ವರದಿಗಳ ಪ್ರಕಾರ ಇವರಿಬ್ಬರು ತಲಾ 25,000 ಕೋಟಿ ರೂಪಾಯಿ ನಿವ್ವಳ ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ. ಕುಲದೀಪ್ ಸಿಂಗ್ ಅವರು ಬರ್ಗರ್ ಪೇಂಟ್ಸ್‌ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರೆ, ಗುರ್ಬಚನ್ ಅವರು ಉಪಾಧ್ಯಕ್ಷರಾಗಿದ್ದಾರೆ.


Click it and Unblock the Notifications