ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದ ಅವರು ಶಾರುಖ್ ಖಾನ್ ಅವರ ಪುತ್ರಿ ಸುಹಾನಾ ಖಾನ್ ಹಾಗೂ ಶ್ರೀದೇವಿ ಅವರ ಪುತ್ರಿ ಖುಷಿ ಕಪೂರ್ ಅವರೊಂದಿಗೆ ದಿ ಆರ್ಚೀಸ್ ಎಂಬ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿರುವುದು ಬಾಲಿವುಡ್‌ನಲ್ಲಿ ಬಹಳಷ್ಟು ಚರ್ಚೆ-ನಿರೀಕ್ಷೆಗಳಿಗೆ ಕಾರಣವಾಗಿದೆ.
ಈ ಚಿತ್ರದ ಪ್ರೀಮಿಯರ್ ಶೋದಲ್ಲಿ ಇಡೀ ಬಾಲಿವುಡ್‌ನ ಗಣ್ಯಾತಿಗಣ್ಯರೆಲ್ಲ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ತಮ್ಮ ಒಗ್ಗಟ್ಟನ್ನು ಪ್ರದರ್ಶಿಸಿದ್ದಾರೆ. ಆ ಪೈಕಿ ಶ್ವೇತಾ ಬಚ್ಚನ್ ಪತಿಯಾಗಿರುವ ಪ್ರಮುಖ ಬಿಸಿನೆಸ್ ಐಕಾನ್ ನಿಖಿಲ್ ನಂದ ಅವರು ಕೂಡ ಸೇರಿದ್ದಾರೆ.

ನಿಖಿಲ್ ನಂದ ಅವರು ಖ್ಯಾತ ಉದ್ಯಮಿ ರಾಜನ್ ನಂದ ಹಾಗೂ ರಿತು ನಂದ ಅವರ ಮಗ. ತಂದೆಯ ಸಾವಿನ ಬಳಿಕ ಭಾರತದ ಪ್ರಮುಖ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ದೊಡ್ಡ ಗ್ರೂಪ್ ಆಗಿರುವ ಎಸ್ಕಾರ್ಟ್ ಕುಬೋಟಾ ಲಿಮಿಟೆಡ್‌ನ ಎಂಡಿ ಹಾಗೂ ಅಧ್ಯಕ್ಷರಾಗಿ ನಿಖಿಲ್ ಅವರು ಅದನ್ನು ಮುಂದುವರಿಸುತ್ತಿದ್ದಾರೆ.
ಅವರ ಲಿಂಕ್ಡ್-ಇನ್ ಖಾತೆ ಪ್ರಕಾರ, ಕಂಪನಿಯು ಕೃಷಿ ಯಂತ್ರೋಪಕರಣಗಳು, ನಿರ್ಮಾಣ ಕ್ಷೇತ್ರ, ಮೆಟಿರಿಯಲ್ ಹ್ಯಾಂಡಲಿಂಗ್ ಉಪಕರಣಗಳು, ರೈಲ್ವೆಗೆ ಸಂಬಂಧಿಸಿದ ಉಪಕರಣಗಳು ಹಾಗೂ ಆಟೋ ಬಿಡಿಭಾಗಗಳನ್ನು ತಯಾರಿಸುತ್ತಿವೆ.
ನಂದನ್ ಅವರು ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದ ವಾರ್ಟನ್ ಬ್ಯುಸಿನೆಸ್ ಸ್ಕೂಲ್‌ನಿಂದ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಬ್ಯಾಚುಲರ್ ಪದವಿಯನ್ನು ಪಡೆದುಕೊಂಡಿದ್ದಾರೆ. ದಿ ಎಕಾನಿಮಿಕ್ ಟೈಮ್ಸ್ ಹಾಗೂ ಡಿಎನ್‌ಎ ಇಂಡಿಯಾದ ಪ್ರಕಾರಮ ಎಸ್ಕಾರ್ಟ್ ಕುಬೋಟಾ ಲಿಮಿಟೆಡ್ ಕಂಪನಿಯು 7014 ಕೋಟಿ ರೂಪಾಯಿ ಆದಾಯವನ್ನು ಹೊಂದಿದೆ. (2021ರ ಮಾಹಿತಿಯಂತೆ).
ಅಷ್ಟೇಅಲ್ಲ ಈ ಕಂಪನಿಯು ಸುಮಾರು 10,000 ಮಂದಿ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಲೈಫ್ ಸ್ಟೈಲ್ ಏಷ್ಯಾದ ಪ್ರಕಾರ, ನಿಖಿಲ್ ನಂದ ಅವರ ನಿವ್ವಳ ಆಸ್ತಿ ಮೌಲ್ಯವು 60 ಕೋಟಿ ರೂಪಾಯಿ ಇದ್ದರೆ, ಕಂಪನಿಯ ಅಧ್ಯಕ್ಷರು ಹಾಗೂ ಎಂಡಿಯಾಗಿ ಅವರು 13.1 ಕೋಟಿ ರೂಪಾಯಿ ಸಂಬಳ ಪಡೆಯುತ್ತಿರುವುದಾಗಿ ಅಂದಾಜಿಸಲಾಗಿದೆ. 49 ವರ್ಷ ವಯಸ್ಸಿನ ಯಶಸ್ವಿ ಉದ್ಯಮಿಯಾಗಿರುವ ನಂದನ್ ಅವರು ಈ ಗ್ರೂಪ್‌ನಲ್ಲಿ ಶೇಕಡ 36.59 ಷೇರು ಅನ್ನು ಹೊಂದಿದ್ದಾರೆ.
ನಂದ ಅವರ ಕೌಟುಂಬಿಕ ಬದುಕು
ಶ್ವೇತಾ ಬಚ್ಚನ್ ಅವರನ್ನು ವಿವಾಹವಾಗುವ ಮೂಲಕ ನಿಖಿಲ್ ನಂದ ಅವರು ಬಚ್ಚನ್ ಕುಟುಂಬದ ಸಂಬಂಧವನ್ನು ಪಡೆದುಕೊಂಡಿದ್ದಾರೆ. ಇವರಿಬ್ಬರ ವಿವಾಹ 1997ರಲ್ಲಿ ನಡೆದಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಅವರಲ್ಲಿ ನವ್ಯಾ ನವೇಲಿ ನಂದ ಅವರು ಉದ್ಯಮಿಯಾಗಿ ಗುರುತಿಸಿಕೊಂಡಿದ್ದು, ಜತೆಗೆ ಸಮಾಜ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ.
ಇನ್ನೊಬ್ಬರು ಅಗಸ್ತ್ಯ ನಂದ ನಟರಾಗಿ ಗುರುತಿಸಿಕೊಂಡಿದ್ದಾರೆ. ನಿಖಿಲ್ ಅವರು ರಣಬೀರ್ ಕಪೂರ್, ಕರೀನಾ ಕಪೂರ್ ಖಾನ್ ಹಾಗೂ ಕರಿಷ್ಮಾ ಕಪೂರ್ ಅವರ ತಾಯಿಯ ಮೊದಲ ಸೋದರ ಸಂಬಂಧಿ ಕೂಡ ಆಗಿರುವ ಕಾರಣ ಋತು ನಂದ-ದಿವಂಗತ ಲೆಜಂಡರಿ ನಟ ರಾಜ್ ಕಪೂರ್ ಅವರ ಮಗಳು) ಕಪೂರ್ ಕುಟುಂಬದೊಂದಿಗೂ ಹತ್ತಿರದ ಸಂಬಂಧವನ್ನು ಹೊಂದಿದ್ದಾರೆ.


Click it and Unblock the Notifications