ಭಾರತದ ಆರ್ಥಿಕ ಅಭಿವೃದ್ದಿಗೆ ಉದ್ಯಮಿಗಳ- ಉದ್ಯಮಗಳ ಕೊಡುಗೆ ಸಾಕಷ್ಟಿದೆ. ಮಾತ್ರವಲ್ಲದೇ ಐಟಿ, ರಿಯಲ್ ಎಸ್ಟೇಟ್, ಕೃಷಿ, ಉತ್ಪಾದನೆ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಹಲವಾರು ಯಶಸ್ವಿ ಉದ್ಯಮಿಗಳ ದೇಶ ಭಾರತವಾಗಿದೆ. ಈ ಪೈಕಿ ಕೆಲವರು ತಮ್ಮ ವಂಶಪಾರಂಪರ್ಯವಾಗಿ ಬಂದ ವ್ಯವಹಾರವನ್ನು ಮುನ್ನಡೆಸಿದರೆ, ಇನ್ನು ಕೆಲವರು ಸ್ವಾವಲಂಭಿಗಳಾಗಿ ತಮ್ಮದೇ ವ್ಯಾಪಾರ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದರು.
ಇದರೊಂದಿಗೆ ಕುಟುಂಬದ ವ್ಯವಹಾರಗಳು ವಿಭಜನೆಯಾದ ನಂತರ ತಮ್ಮದೇ ಆದ ಸ್ವಂತ ಕಂಪನಿಗಳನ್ನು ಮುನ್ನಡೆಸುವ ಕೆಲವು ಜನರಿದ್ದಾರೆ. ಇಂತಹ ವ್ಯಕ್ತಿಗಳಲ್ಲಿ ಭಾರತದ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಚಂದ್ರು ರಹೇಜಾ ಕೂಡಾ ಒಬ್ಬರು. ಹಾಗಿದ್ರೆ ಚಂದ್ರು ರಹೇಜಾ ಯಾರು, ಆದಾಯವೆಷ್ಟು, ವೃತ್ತಿ ಜೀವನ ಸೇರಿದಂತೆ ಇತರೆ ಮಾಹಿತಿ ಇಲ್ಲಿದೆ ಮುಂದೆ ಓದಿ..

ಚಂದ್ರು ರಹೇಜಾ ಯಾರು?
ಭಾರತೀಯ ಬಿಲಿಯನೇರ್ ಉದ್ಯಮಿಯಾಗಿರುವ ಚಂದ್ರು ರಹೇಜಾ 1941 ರಲ್ಲಿ ಜನಿಸಿದ್ದಾರೆ. ಅವರ ಪೂರ್ಣ ಹೆಸರು ಚಂದ್ರು ಲಚ್ಮಂದಾಸ್ ರಹೇಜಾ. ಇವರು ಭಾರತದ ಪ್ರಾಪರ್ಟಿ ಡೆವಲಪರ್ ಸಂಸ್ಥೆ "ಕೆ ರಹೇಜಾ ಕಾರ್ಪ್"ನ ಚೇರ್ಮೆನ್ ಆಗಿದ್ದಾರೆ.
ಚಂದ್ರು ರಹೇಜಾ ಕಂಪನಿಯು ಪ್ರಾಪರ್ಟಿ ಡೆವಲಪ್ ಮಾತ್ರವಲ್ಲದೇ, ಐಟಿ ಪಾರ್ಕ್‌ಗಳು, ಹೋಟೆಲ್‌ಗಳು, ಮಾಲ್‌ಗಳು ಮತ್ತು ಶಾಪರ್ಸ್ ಸ್ಟಾಪ್ ಸೇರಿದಂತೆ ಡಿಪಾರ್ಟ್‌ಮೆಂಟ್ ಸ್ಟೋರ್ ಹೀಗೆ ಈ ಚೈನ್‌ಗಳನ್ನು ಅಭಿವೃದ್ಧಿಪಡಿಸುವಲ್ಲಿ ತೊಡಗಿಸಿಕೊಂಡಿದೆ. 1996 ರಲ್ಲಿ ಚಂದ್ರು ರಹೇಜಾ ಕುಟುಂಬದ ವ್ಯವಹಾರದಲ್ಲಿ ಪಾಲು ಆದಾಗ ರಹೇಜಾ ಅವರು ಕಂಪನಿಯನ್ನು ಮತ್ತಷ್ಟು ಬೆಳೆಸಲು, ವಿವಿಧ ಉದ್ಯಮಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
ಇದೀಗ "ರಹೇಜಾ'ಸ್ ಚಾಲೆಟ್ ಹೋಟೆಲ್" ಗಳು ಮುಂಬೈನ ಜೆಡಬ್ಲ್ಯೂ ಮ್ಯಾರಿಯಟ್ ಮತ್ತು ಹೈದರಾಬಾದ್‌ನ ವೆಸ್ಟಿನ್‌ನಂತಹ ಹೋಟೆಲ್‌ಗಳನ್ನೂ ಹೊಂದಿದೆ. ಫೋರ್ಬ್ಸ್ ಪ್ರಕಾರ, ಅವರು 2023 ರ ಏಪ್ರಿಲ್ 24ರ ವೇಳೆಗೆ 3.8 ಶತಕೋಟಿ ಯುಎಸ್ ಡಾಲರ್ ( 311,761,906,600 ರೂಪಾಯಿ) ನಿವ್ವಳ ಆಸ್ತಿ ಮೌಲ್ಯವನ್ನು ಹೊಂದಿದ್ದಾರೆ. ಇತ್ತೀಚಿನ ಫೋರ್ಬ್ಸ್ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಅವರು 748 ನೇ ಸ್ಥಾನದಲ್ಲಿದ್ದಾರೆ. 2022 ರಲ್ಲಿ ರಹೇಜಾ ಭಾರತದ ಶ್ರೀಮಂತರಲ್ಲಿ 46 ನೇ ಸ್ಥಾನ ಪಡೆದುಕೊಂಡಿದ್ದರು.
ಚಂದ್ರು ರಹೇಜಾ ಮುಂಬೈ ವಿಶ್ವವಿದ್ಯಾಲಯದಲ್ಲಿ ಕಾನೂನು ವಿಷಯದಲ್ಲಿ ಪದವೀಧರರಾಗಿದ್ದಾರೆ. ಇವರು ಜ್ಯೋತಿ ಸಿ ರಹೇಜಾ ಅವರನ್ನು ವಿವಾಹವಾಗಿದ್ದು ಮುಂಬೈನಲ್ಲಿ ನೆಲೆಸಿದ್ದಾರೆ. ಅವರ ಪುತ್ರರಾದ ರವಿ ರಹೇಜಾ ಮತ್ತು ನೀಲ್ ರಹೇಜಾ ಅವರು "ಕೆ ರಹೇಜಾ" ಸಂಸ್ಥೆಯನ್ನು ನಿರ್ವಹಿತ್ತಿದ್ದಾರೆ.
ಕಂಪನಿಯು ಮೈಂಡ್‌ಸ್ಪೇಸ್, ಕಾಮರ್‌ಜೋನ್, ಕ್ರಾಸ್‌ವರ್ಡ್ ಬುಕ್‌ಸ್ಟೋರ್ಸ್ ಮತ್ತು ಶಾಪರ್ಸ್ ಸ್ಟಾಪ್‌ನಂತಹ ಬ್ರ್ಯಾಂಡ್‌ಗಳನ್ನುಒಳಗೊಂಡಿದೆ ಇದು ಭಾರತದಲ್ಲಿ ಎರಡನೇ ಅತಿದೊಡ್ಡ ಕಮರ್ಷಿಯಲ್ ಡೆವಲಪರ್ ಎಂದು ವರದಿಯಾಗಿದೆ.
ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್ ಬಗ್ಗೆ ತಿಳಿದಿದೆಯೇ?
ಚಂದ್ರು ರಹೇಜಾರಂತೆಯೇ ಭಾರತದ ರಿಯಲ್ ಎಸ್ಟೇಟ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು ಇದ್ದಾರೆ. ಭಾರತದಲ್ಲಿನ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ, ಡಿಮಾರ್ಟ್ ಸಂಸ್ಥಾಪಕ ರಾಧಾಕೃಷ್ಣ ಧಾಮಿನಿ ದೇಶದ ಅತೀ ದೊಡ್ಡ ರಿಯಲ್ ಎಸ್ಟೇಟ್ ಡೀಲ್‌ಗೆ ಬರೋಬ್ಬರಿ 1238 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಿದ್ದಾರೆ. ದೇಶದ ಅತೀ ದೊಡ್ಡ ಡೀಲ್ ಆದ ಇದು ಸುಮಾರು 1238 ಕೋಟಿ ರೂಪಾಯಿಯ ಡೀಲ್ ಆಗಿದೆ.


Click it and Unblock the Notifications