ಶೂನ್ಯದಿಂದ ಮಿಲಿಯನೇರ್ ಆಗಲು ಹೋಗಿರುವ ಹಲವಾರು ಜನರು ನಮ್ಮ ಮುಂದೆ ಇದ್ದಾರೆ. ಆ ಪೈಕಿ ಒಂದು ಸ್ಫೂರ್ತಿದಾಯಕ ವ್ಯಕ್ತಿ ಅಂದರೆ ಚಂದುಭಾಯಿ ವಿರಾನಿ. ಕೇವಲ 10ನೇ ತರಗತಿ ಓದಿರುವ ಚಂದುಭಾಯಿ ಅವರು ಆಲೂಗಡ್ಡೆ ವೇಫರ್ ಬ್ರಾಂಡ್ ಆದ ಬಾಲಾಜಿ ವೇಫರ್ಸ್ ಅನ್ನು ಸ್ಥಾಪಿಸಿದ್ದಾರೆ. ಇದು ಪ್ರಸ್ತುತ ಭಾರತದಲ್ಲಿ ಅತ್ಯಂತ ಜನಪ್ರಿಯ ಬ್ರಾಂಡ್‌ಗಳಲ್ಲಿ ಒಂದಾಗಿದೆ. ಈ ಕಂಪನಿಯ ಮೌಲ್ಯ 4,000 ಕೋಟಿ ರೂಪಾಯಿ ಆಗಿದೆ.
ಕೇವಲ 15 ವರ್ಷ ವಯಸ್ಸಿರುವಾಗ ಚಂದುಭಾಯಿ ವಿರಾನಿ ಅವರು ತಮ್ಮ ಕುಟುಂಬದೊಂದಿಗೆ ರಾಜ್‌ಲೋಟ್‌ನಿಂದ 79 ಕಿಮೀ. ದೂರದಲ್ಲಿರುವ ಧುಂಡೋರಾಜಿಗೆ (ಜಾಮ್‌ನಗರ ಸ್ಥಳಾಂತರಗೊಂಡಿದ್ದರು. ಮುಂದೆ 1972 ರಲ್ಲಿ ವಿರಾನಿ ಹಾಗೂ ಅವರ ಸಹೋದರರಾದ ಮೇಘಜಿಭಾಯ್ ಮತ್ತು ಭಿಖುಭಾಯಿ ಜತೆ ಸೇರಿಕೊಂಡು ಹೊಸ ಪ್ರಯತ್ನವೊಂದನ್ನು ಮಾಡುವುದಕ್ಕೆ ಮುಂದಾಗಿದ್ದು, ತಮ್ಮ ತಂದೆ ದಿವಂಗತ ಪೋಪಟ್ ವಿರಾನಿ ಅವರು 20,000 ರೂಪಾಯಿ ನೀಡಿದ್ದರು. ಅದಕ್ಕಾಗಿ ತಮ್ಮ ತಂದೆಯು ಬರಡು ಭೂಮಿಯನ್ನು ಮಾರಾಟ ಮಾಡಿದ್ದರು.
ಕ್ಯಾಂಟೀನ್ ಕೆಲಸದಿಂದ 4,000 ಕೋಟಿ ರೂ. ಆಲೂಗಡ್ಡೆ ವೇಫರ್ಸ್ ಬ್ರಾಂಡ್‌ವರೆಗೆ
ತಮ್ಮ ಬಳಿಯಿದ್ದ ಫಂಡ್ ಅನ್ನು ಬಳಸಿಕೊಂಡು ಸಹೋದರರು ರಾಜ್‌ಕೋಟ್‌ನಲ್ಲಿ ಹೊಸ ಕೃಷಿ ಉತ್ಪನ್ನಗಳು ಹಾಗೂ ಕೃಷಿ ಉಪಕರಣಗಳ ಸಂಸ್ಥೆಯನ್ನು ಸ್ಥಾಪಿಸಿದರು. ಆದರೆ ಎರಡು ವರ್ಷಗಳಲ್ಲಿ ತಮ್ಮ ಪ್ರಯತ್ನವು ವೈಫಲ್ಯವನ್ನು ಕಂಡಿತ್ತು. ಅದರ ಬೆನ್ನಲ್ಲೇ ಹತ್ತನೇ ತರಗತಿ ಪಾಸಾಗಿದ್ದ ಚಂದುಭಾಯಿ ಹಾಗೂ ಸಹೋದರರು ಆಸ್ಟ್ರೋನ್ ಚಿತ್ರಮಂದಿರದ ಕ್ಯಾಂಟೀನ್‌ನಲ್ಲಿ ಕೆಲಸಕ್ಕೆ ಸೇರಿಕೊಳ್ಳುವ ಅನಿವಾರ್ಯತೆ ಎದುರಾಗಿತ್ತು.
ಕ್ಯಾಂಟೀನ್‌ನಲ್ಲಿ ತಿಂಗಳಿಗೆ 90ರೂ.ಗೆ ಕೆಲಸ ಮಾಡುವುದರ ಜತೆಗೆ ಚಂದುಭಾಯಿ ವಿರಾನಿ ಅವರು ಹೊರಗಡೆ ಬಾಗಿಲು ಕಾಯುವುದು, ಪೋಸ್ಟರ್ ಅಂಟಿಸುವುದು ಮುಂತಾದ ಕೆಲಸವನ್ನು ಕೂಡ ಮಾಡುತ್ತಿದ್ದರು. ಆದರೆ ನಾನಾ ರೀತಿಯ ಆರ್ಥಿಕ ಸಂಕಷ್ಟದಿಂದಾಗಿ ಒಂದು ರಾತ್ರಿ ವಿರಾನಿ ಕುಟುಂಬವು 50ರೂ. ಬಾಡಿಗೆ ಪಾವತಿಸಲು ಸಾಧ್ಯವಾಗದೆ ಬಾಡಿಗೆ ಮನೆಯನ್ನೇ ಖಾಲಿ ಮಾಡಬೇಕಾಗಿ ಬಂದಿತ್ತು. ನಂತರದಲ್ಲಿ ಅವರು ಬಾಕಿಯಾದ ಬಾಡಿಗೆಯನ್ನು ಪಾವತಿಸಿದ್ದರು.
ಈ ನಡುವೆ ಕ್ಯಾಂಟೀನ್‌ನಲ್ಲಿ ಚಂದುಭಾಯಿ ಹಾಗೂ ಸಹೋದರರ ಬಹಳ ಉತ್ತಮ ರೀತಿಯ ಕೆಲಸದಿಂದಾಗಿ ತಿಂಗಳಿಗೆ 1,000 ರೂಪಾಯಿ ಪಡೆಯುತ್ತಿದ್ದರು. 1982ರಲ್ಲಿ ಅವರ ಇಡೀ ಕುಟುಂಬವು ರಾಜ್‌ಕೋಟ್‌ಗೆ ಸ್ಥಳಾಂತರಗೊಂಡಿತ್ತು. ಅಲ್ಲಿ ಅವರ ಸಹೋದರ ರಾಂಜಿಭಾಯಿ ಅವರು ಒಂದು ಮನೆಯನ್ನು ಖರೀದಿಸಿದ್ದರು.ಹೀಗೆ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುತ್ತಿರಬೇಕಾದರೆ ವೇಫರ್‌ಗೆ ಥಿಯೇಟರ್‌ಗಳಲ್ಲಿ ಒಳ್ಳೆಯ ಬೇಡಿಕೆ ಇದೆ ಎಂಬುದನ್ನು ವಿರಾನಿ ಮನಗಂಡರು.

ಮನೆಯಲ್ಲಿಯೇ ಚಿಪ್ಸ್ ತಯಾರಿಕೆ ಪ್ರಾರಂಭ
ಇಲ್ಲಿನ ಐಡಿಯಾವನ್ನು ಇಟ್ಟುಕೊಂಡು ವಿರಾನಿ ಅವರು ಮನೆಯ ಒಂದು ಕೋಣೆಯಲ್ಲಿ 10,000 ರೂಪಾಯಿ ಬಂಡವಾಳ ಹೂಡಿಕೆಯೊಂದಿಗೆ ಚಿಪ್ಸ್ ತಯಾರಿಕೆಯನ್ನು ಪ್ರಾರಂಭಿಸಿದರು. ಅವರ ಈ ಪ್ರಯೋಗವು ಯಶಸ್ಸನ್ನು ನೀಡಲು ಪ್ರಾರಂಭಿಸಿತ್ತು. ಥಿಯೇಟರ್‌ನಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಚಿಪ್ಸ್‌ಗೆ ಹೆಚ್ಚಿನ ಬೇಡಿಕೆ ಇತ್ತು. ಸಣ್ಣ ಕೋಣೆಯಲ್ಲಿ ಪ್ರಾರಂಭವಾದ ಅವರ ವೇಫರ್ ಉದ್ಯಮ ಶೀಘ್ರ ಗತಿಯಲ್ಲಿ ದೊಡ್ಡ ಸಾಮ್ರಾಜ್ಯವಾಗಿ ಬೆಳೆಯ ತೊಡಗಿತು. ಮತ್ತೆ ಅವರು ಯಾವತ್ತೂ ಹಿಂದೆ ತಿರುಗಿ ನೋಡಲೇ ಇಲ್ಲ.
1989ರಲ್ಲಿ ಕಂಪನಿಯ ಮಾರಾಟವು ಹೆಚ್ಚಾದಂತೆ ಚಂದುಭಾಯಿ ಗುಜರಾತ್‌ನಲ್ಲಿ ಆಗಿನ ಅತಿದೊಡ್ಡ ಆಲೂಗಡ್ಡೆ ವೇಫರ್ ಸೌಲಭ್ಯವನ್ನು ರಾಜ್‌ಕೋಟ್ ಸಮೀಪದ ಅಜಿ ಜಿಐಡಿಸಿಯಲ್ಲಿ ನಿರ್ಮಿಸಿದರು. ಇದನ್ನು ಸುಮಾರು 50 ಲಕ್ಷ ರೂಪಾಯಿ ಸಾಲದೊಂದಿಗೆ ಪ್ರಾರಂಭಿಸಲಾಗಿತ್ತು. ನಂತರ ವಿರಾನಿ ಸಹೋದರರು 1992ರಲ್ಲಿ ಬಾಲಾಜಿ ವೇಫರ್ ಪ್ರೈವೆಟ್ ಲಿಮಿಟೆಡ್ ಅನ್ನು ಸ್ಥಾಪಿಸಿದರು.
ಜತೆಗೆ ಕಂಪನಿಗೆ ಬಾಲಾಜಿ ಹೆಸರು ಇಟ್ಟಿರುವ ಹಿನ್ನೆಲೆಯಲ್ಲಿ ಸ್ಫೂರ್ತಿಯಾಗಿ ತಮ್ಮ ಕೋಣೆಯಲ್ಲಿ ಗ್ಲಾಸ್‌ನ ಸಣ್ಣ ಹನುಮಂತನ ಪ್ರತಿಮೆಯೊಂದನ್ನು ಕೂಡ ಸ್ಥಾಪಿಸಿಕೊಂಡರು. ಈಗ ಕಂಪನಿಯು 6.5 ಮಿಲಿಯನ್ ಕೆಜಿ ಆಲೂಗಡ್ಡೆ ಹಾಗೂ 10 ಮಿಲಿಯನ್ ಕೆಜಿಯಷ್ಟು ಖಾರದ ಉತ್ಪನ್ನಗಳನ್ನು ತಯಾರಿಸುತ್ತಿದೆ. ಜತೆಗೆ ದೇಶದ ನಾಲ್ಕು ಕಡೆ ಉತ್ಪಾದನಾ ಘಟಕಗಳನ್ನು ಕೂಡ ಹೊಂದಿವೆ.
21ರ ಹಣಕಾಸು ವರ್ಷದಲ್ಲಿ ಕಂಪನಿಯು 4,000 ಕೋಟಿ ರೂ. ಆದಾಯವನ್ನು ದಾಖಲಿಸಿದೆ. ಈಗ ಕಂಪನಿಯಲ್ಲಿ ಒಟ್ಟು 5,000 ಮಂದಿ ಉದ್ಯೋಗಿಗಳು ಕೆಲಸ ಮಾಡುತ್ತಿದ್ದಾರೆ. ಆ ಪೈಕಿ ಶೇ.50ರಷ್ಟು ಮಂದಿ ಮಹಿಳೆಯರಾಗಿದ್ದಾರೆ. ಈಗ ಕಂಪನಿಯು 13 ರೀತಿಯ ಫ್ಲೇವರಿನ ವೇಫರ್‌ನ್ನು ಗ್ರಾಹಕರಿಗೆ ಪರಿಚಯಿಸಿದೆ. ಜತೆಗೆ 22 ಫ್ಲೇವರ್‌ನ ಖಾರದ ಉತ್ಪನ್ನ ಹಾಗೂ 15 ಫ್ಲೇವರ್‌ನ ಪಾಶ್ಚಾತ್ಯ ಸ್ನ್ಯಾಕ್ಸ್ ಅನ್ನು ತಯಾರಿಸುತ್ತಿದೆ.


Click it and Unblock the Notifications