ಚೀನಾ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿ ಉದ್ಯಮಿ ಝಾಂಗ್ ಶಾನ್ಶನ್ ಆಗಿದ್ದು,ಇವರ ನಿವ್ವಳ ಮೌಲ್ಯವು 60 ಬಿಲಿಯನ್ USD ಆಗಿದೆ. ಝಾಂಗ್ ಶಾನ್ಶನ್ ಅವರು ಪ್ರಸಿದ್ದವಾದ ನೊಂಗ್‌ಫು ಸ್ಪ್ರಿಂಗ್ (Nongfu Spring) ಎಂಬ ಬಾಟಲ್ ವಾಟರ್ ಕಂಪನಿಯ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ.
ಝಾಂಗ್ ಅವರು ಚೀನಾದ ಹ್ಯಾಂಗ್‌ಝೌ ಪ್ರದೇಶದಲ್ಲಿ ಜನಿಸಿದ್ದು, ಸಾಂಸ್ಕೃತಿಕ ಕ್ರಾಂತಿಯ ಸಮಯದಲ್ಲಿ ಚೀನಾವನ್ನು ಆವರಿಸಿದ ಅವ್ಯವಸ್ಥೆಯ ಕಾರಣದಿಂದ ಅವರು ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಲು ಆಗಿರಲಿಲ್ಲ. ಇಂದು ಯಶಸ್ವಿ ಉದ್ಯಮಿಯಾಗಿರುವ ಝಾಂಗ್ ಸ್ವಂತ ವ್ಯವಹಾರವನ್ನು ಆರಂಭಿಸುವ ಮೊದಲು ಹಲವು ವೃತ್ತಿಯನ್ನು ಮಾಡಿದ್ದರು.

ಫೋರ್ಬ್ಸ್ ವರದಿ ಪ್ರಕಾರ, ಝಾಂಗ್ ಅವರು ಕಟ್ಟಡ ನಿರ್ಮಾಣದ ಕೆಲಸಗಾರನಾಗಿ, ವರದಿಗಾರರಾಗಿ ಮತ್ತು ಸೇಲ್ಸ್ ಏಜೆಂಟ್ ಆಗಿಯೂ ಕೆಲಸ ಮಾಡಿದ್ದರು. ಝಾಂಗ್ ಅವರು ಬಾಟಲ್ ವಾಟರ್ ಉದ್ಯಮವಲ್ಲದೇ ಬೀಜಿಂಗ್ ನಲ್ಲಿರುವ ಫಾರ್ಮಾ ಕಂಪನಿ ವಾಂಟೈ ಬಯೋಲಾಜಿಕಲ್ ಫಾರ್ಮಸಿಯನ್ನು ನಿರ್ವಹಿಸುತ್ತಾರೆ. ಅವರ ಪುತ್ರ ಝಾಂಗ್ ಶು ಝಿ ಅವರು ನೊಂಗ್‌ಫು ಸ್ಪ್ರಿಂಗ್ ಸಂಸ್ಥೆಯ ಕಾರ್ಯನಿರ್ವಾಹಕೇತರ ನಿರ್ದೇಶಕರಾಗಿದ್ದಾರೆ.
1954 ರಲ್ಲಿ ಜನಿಸಿದ ಝಾಂಗ್ ಶಾನ್ಶನ್ ಅವರ ಸಂಪತ್ತಿನ ಪ್ರಮುಖ ಮೂಲವೆಂದರೆ ಬಾಟಲ್ ವಾಟರ್ ಕಂಪನಿ ಮತ್ತು ಫಾರ್ಮಾ ಕಂಪನಿಯಾಗಿದೆ. ಝಾಂಗ್ ಅವರು 1996 ರಲ್ಲಿ ಹ್ಯಾಂಗ್‌ಝೌನಲ್ಲಿ ತನ್ನದೇ ಆದ ಬಾಟಲಿಯನ್ನು ನೀರನ್ನು ವಿತರಿಸುವ ಕಂಪನಿಯನ್ನು ಪ್ರಾರಂಭಿಸಿದರು. ಕೆಲ ವರ್ಷಗಳ ಬಳಿಕ ತಮ್ಮ ಕಂಪನಿಗೆ ನೊಂಗ್‌ಫು ಸ್ಪ್ರಿಂಗ್ ಎಂದು ಮರುನಾಮಕರಣ ಮಾಡಿದರು.
1999 ರಲ್ಲಿ ನೊಂಗ್ಫು ಸ್ಪ್ರಿಂಗ್ ನೀರಿನಿಂದ ನೈಸರ್ಗಿಕ ಖನಿಜಗಳನ್ನು ತೆಗೆದುಹಾಕುವುದನ್ನು ಸ್ಥಗಿತಗೊಳಿಸುವ ಪ್ರಮುಖ ನಿರ್ಧಾರವನ್ನು ಜಾಂಗ್ ತೆಗೆದುಕೊಂಡರು. ಅವರ ಈ ನಿರ್ಧಾರ ನೊಂಗ್ಫು ಸ್ಪ್ರಿಂಗ್ ಕಂಪನಿಯನ್ನು ಸೂಪರ್ ಹಿಟ್ ಮಾಡುವಲ್ಲಿ ಯಶಸ್ವಿಯಾಯಿತು ಮಾತ್ರವಲ್ಲದೇ, ಇದಕ್ಕೆ ಸಾಕಷ್ಟು ಪ್ರಚಾರವು ದೊರಕಿತು.
ನೋಂಗ್‌ಫು ಸ್ಪ್ರಿಂಗ್ ಚೀನಾದಲ್ಲಿ ಅತಿದೊಡ್ಡ ಬಾಟಲ್ ವಾಟರ್ ತಯಾರಕ ಮತ್ತು ವಿಶ್ವದ ಅತಿದೊಡ್ಡ ಬೇವರೇಜ್ ಕಂಪನಿಗಳಲ್ಲಿ ಒಂದಾಗಿದೆ. ಮಾತ್ರವಲ್ಲದೇ ಝಾಂಗ್ ಅವರ ಕಂಪನಿಯು ಕೋಕಾ-ಕೋಲಾ, ವ್ಯಾಟ್ಸನ್ಸ್ ಮತ್ತು ಪೆಪ್ಸಿಯಂತಹ ಬೃಹತ್ ಬ್ರ್ಯಾಂಡ್ ಗಳನ್ನು ಸೋಲಿಸಿ ಹೆಚ್ಚು ಮಾರಾಟವಾಗುವ ಪ್ಯಾಕೇಜ್ ಬೇವರೇಜ್ ಬ್ರಾಂಡ್ ಆಗಿ ಮಾರ್ಪಾಡಾಯಿತು.
2020 ರ ಸೆಪ್ಟೆಂಬರ್ ನಲ್ಲಿನೊಂಗ್‌ಫು ಸ್ಪ್ರಿಂಗ್ ನ ಆರಂಭಿಕವಾಗಿ ಸಾರ್ವಜನಿಕವಾಗಿ ಷೇರುಗಳ ಮಾರಾಟ ಮಾಡಿದರು. ಇದು ಬಿಲಿಯನೇರ್ ಸಂಪತ್ತನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. 2020 ರ ಕೊನೆಯ ವೇಳೆಗೆ, ಝಾಂಗ್ ಅವರು ಏಷ್ಯಾದ ಶ್ರೀಮಂತ ಉದ್ಯಮಿ ಎಂದು ಪಟ್ಟಿ ಮಾಡಲ್ಪಟ್ಟರು.
ಆದರೆ ಈಗ ಏಷ್ಯಾದ ಶ್ರೀಮಂತ ವ್ಯಕ್ತಿ ಎಂಬ ಶೀರ್ಷಿಕೆಯು ಯುಎಸ್ ಡಿ 95.7 ಬಿಲಿಯನ್ ನಿವ್ವಳ ಮೌಲ್ಯವನ್ನು ಹೊಂದಿರುವ ಮುಖೇಶ್ ಅಂಬಾನಿಯವರ ಬಳಿ ಇದೆ. ಭಾರತದ ಎರಡನೇ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವು ಯುಎಸ್‌ಡಿ 55 ಬಿಲಿಯನ್ ಆಗಿದೆ.


Click it and Unblock the Notifications