ವಿಶ್ವದ ಅತ್ಯಂತ ಶ್ರೀಮಂತ ಎನ್‌ಆರ್‌ಐಗಳಲ್ಲಿ 75 ವರ್ಷದ ಪಿಎನ್‌ಸಿ ಮೆನನ್ ಕೂಡಾ ಒಬ್ಬರಾಗಿದ್ದಾರೆ. ಪಿಎನ್‌ಸಿ ಮೆನನ್ ಅವರ ಪೂರ್ಣ ಹೆಸರು ಪುತ್ತನ್ ನೆಡುವಕ್ಕಾಟ್ ಚೆಂತಮರಾಕ್ಷ ಮೆನನ್. ಇವರು ಶೋಭಾ ಲಿಮಿಟೆಡ್‌ನ ಸಂಸ್ಥಾಪಕರಾಗಿದ್ದಾರೆ. ಈ ಹಿಂದೆ ಇವರ ಸಂಸ್ಥೆಯನ್ನು ಶೋಭಾ ಡೆವಲಪರ್ಸ್ ಲಿಮಿಟೆಡ್ ಎಂದು ಕರೆಯಲಾಗುತ್ತಿತ್ತು.
ಸಾಧಾರಣ ಕುಟುಂಬದಲ್ಲಿ ಜನಿಸಿದ ಪಿಎನ್‌ಸಿ ಮೆನನ್ ಅವರು ಕೇವಲ 10 ವರ್ಷ ವಯಸ್ಸಿನವರಿರುವಾಗಲೇ ತಮ್ಮ ತಂದೆಯನ್ನು ಕಳೆದುಕೊಂಡವರು. ಕಾಲೇಜು ಅರ್ಧದಲ್ಲೇ ಮೊಟಕುಗೊಳಿಸಿದ್ದ ಮೆನನ್ ತನ್ನ ಜೇಬಿನಲ್ಲಿ ಸುಮಾರು 50 ರೂಪಾಯಿಗೆ ಅಂದರೆ ಕೇವಲ 7 ಡಾಲರ್‌ನೊಂದಿಗೆ ಭಾರತವನ್ನು ತೊರೆದರು.

ಈಗ ನಿವ್ವಳ ಆದಾಯವೆಷ್ಟು?
ಆದರೆ ಇಂದು ಅವರ ನಿವ್ವಳ ಮಾಲ್ಯ ಸುಮಾರು 15,000 ಕೋಟಿ ರೂಪಾಯಿ (1.8 ಬಿಲಿಯನ್ ಡಾಲರ್) ಆಗಿದೆ. ಇಷ್ಟೇ ಅಲ್ಲದೇ ಇಂದು ಭಾರತ, ಮಧ್ಯಪ್ರಾಚ್ಯ ಮತ್ತು ಯುಕೆ್ಯಾದ್ಯಂತ ವ್ಯಾಪಿಸಿರುವ ವ್ಯಾಪಾರ ಸಾಮ್ರಾಜ್ಯದ ಒಡೆಯರಾಗಿದ್ದಾರೆ. ಕೇರಳದವರಾಗಿರುವ ಮೆನನ್ ಉದ್ಯಮಿಯಾಗುವ ಕನಸನ್ನು ನನಸು ಮಾಡಲು ತ್ರಿಶೂರ್‌ನ ಕೇರಳ ವರ್ಮಾ ಕಾಲೇಜಿನಲ್ಲಿಓದುತ್ತಿದ್ದ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಇಂಟೀರಿಯರ್ ಡೆಕೋರೇಷನ್ ಬಿಸಿನೆಸ್ ಆರಂಭಿಸಿದರು.
1976 ರಲ್ಲಿ, ಅವರು ಒಮಾನ್‌ನ ಮಸ್ಕತ್‌ಗೆ ತೆರಳಿ ಅಲ್ಲಿ 1977 ರಲ್ಲಿ ಸುಮಾರು 75,000 ರೂಪಾಯಿ ಸಾಲದೊಂದಿಗೆ ತಮ್ಮ ಮೊದಲ ಕಂಪನಿಯಾದ ಎಸ್ & ಟಿ ಇಂಟೀರಿಯರ್ಸ್ ಆಂಡ್ ಕಾಂಟ್ರಾಕ್ಟಿಂಗ್ ಅನ್ನು ಸಹ-ಸ್ಥಾಪಿಸಿದರು. ಈ ವ್ಯವಹಾರವು 1984 ರ ಹೊತ್ತಿಗೆ ದೇಶದಲ್ಲಿ ಸುವ್ಯವಸ್ಥಿತ ಕಂಪನಿಯಾಗಿ ಬೆಳೆದು ನಿಂತಿತು.
1990 ರ ದಶಕದಲ್ಲಿ ಮೆನನ್ ಅವರಿಗೆ ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರದ ಸಾಮರ್ಥ್ಯದ ಅರಿವು ಬಂದಿತ್ತು. ಅವರ ನಿರ್ಧಾರ ಮುಂದೆ ದೊಡ್ಡ ತಿರುವು ನೀಡಿತು. ಭಾರತದಲ್ಲಿ ತಮ್ಮ ಮುಂದಿನ ವ್ಯವಹಾರವನ್ನು ಪ್ರಾರಂಭಿಸಲು ನಿರ್ಧರಿಸಿ, ಅವರು 1995 ರಲ್ಲಿ ಶೋಭಾ ಡೆವಲಪರ್ಸ್ ಅನ್ನು ಸ್ಥಾಪಿಸಿದರು.
ಭಾರತದಲ್ಲಿ ಮಾತ್ರವಲ್ಲದೇ ಅವರು ಮಧ್ಯಪ್ರಾಚ್ಯದಲ್ಲಿ ತಮ್ಮ ವ್ಯಾಪಾರ ನಿರ್ವಹಿಸುವ ಶೋಭಾ ರಿಯಾಲ್ಟಿ ಸಂಸ್ಥೆಯೂ ಅವರದ್ದಾಗಿದೆ. ಅಲ್ ಬುಸ್ತಾನ್ ಪ್ಯಾಲೆಸ್ ಮತ್ತು ಒಮಾನ್‌ನ ಸುಲ್ತಾನ್ ಕಬೂಸ್ ಗ್ರ್ಯಾಂಡ್ ಮಸೀದಿಯಂತಹ ಖ್ಯಾತ ಕಟ್ಟಡಗಳ ಇಂಟಿರಿಯರ್ ಮೆನನ್ ಅವರ ಸಂಸ್ಥೆಯದ್ದೇ ಆಗಿದೆ.
ಮೆನನ್ ಅವರು 2009 ರಲ್ಲಿ ಭಾರತದ ರಾಷ್ಟ್ರಪತಿಗಳಿಂದ "ಪ್ರವಾಸಿ ಭಾರತೀಯ್ ಸಮ್ಮಾನ್ ಪುರಸ್ಕಾರ" ವನ್ನು ಪಡೆದುಕೊಂಡಿದ್ದಾರೆ. ಅವರ ಶೋಭಾ ರಿಯಾಲ್ಟಿ ಗಲ್ಫ್‌ನಲ್ಲಿ ಪಟ್ಟಿ ಮಾಡದ ಉನ್ನತ ರಿಯಲ್ ಎಸ್ಟೇಟ್ ಸಂಸ್ಥೆಗಳಲ್ಲಿ ಒಂದಾಗಿದೆ. ಇವರ ಸಂಸ್ಥೆಯೂ ಭಾರತೀಯ ಷೇರು ವಿನಿಮಯ ಕೇಂದ್ರಗಳಲ್ಲಿ ಪಟ್ಟಿ ಮಾಡಲಾಗಿದ್ದು ಶೋಭಾ ಡೆವಲಪರ್ಸ್ ಸುಮಾರು 9700 ಕೋಟಿ ರೂಪಾಯಿ ಮೌಲ್ಯದ್ದಾಗಿದೆ.


Click it and Unblock the Notifications