ಭಾರತದ ಅತಿ ಉದ್ದದ ಸೇತುವೆ "ಧೋಲಾ-ಸಾದಿಯಾ" ಹೆಸರು ನೀವು ಕೇಳಿರಬಹುದು. ಅಸ್ಸಾಂನ ಬ್ರಹ್ಮಪುತ್ರ ನದಿಯ ಉಪನದಿಯಾದ ಲೋಹಿತ್ ನದಿಯ ಮೇಲೆ ಇರುವ ಈ ಸೇತುವೆ ಬರೋಬ್ಬರಿ 9.15 ಕಿಮೀ ಉದ್ದದ ಸೇತುವೆಯಾಗಿದೆ.
ಆಕರ್ಷಕವಾದ ಮತ್ತು ಇಂಜಿನಿಯರಿಂಗ್ ಅದ್ಭುತಗಳನ್ನು ಒಳಗೊಂಡಿರುವ ಈ ಬ್ರಿಡ್ಜ್ ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯಲ್ಲಿದೆ. ಈ ಸೇತುವೆಯು ಧೋಲಾ ಗ್ರಾಮವನ್ನು ಹಾಗೂ ಸಾದಿಯಾ ಗ್ರಾಮಕ್ಕೆ ಸಂಪರ್ಕಿಸುತ್ತದೆ. ಹೀಗಾಗಿ ಇದನ್ನು ಧೋಲಾ-ಸಾದಿಯಾ ಸೇತುವೆ ಎಂದೇ ಕರೆಯಲಾಗುತ್ತದೆ. ಈ ಐತಿಹಾಸಿಕ ಸೇತುವೆ ರಚನೆಯ ಮಾಸ್ಟರ್ ಮೈಂಡ್ ಸಿ. ವಿಶ್ವೇಶ್ವರ ರಾವ್ ಆಗಿದ್ದಾರೆ.

ಧೋಲಾ-ಸಾದಿಯಾ ಸೇತುವೆ ಭಾರತದ ಈಶಾನ್ಯವನ್ನು ದೇಶದ ಉಳಿದ ಭಾಗಗಳೊಂದಿಗೆ ಸುಲಭವಾಗಿ ಸಂಪರ್ಕಿಸಲು ವಿನ್ಯಾಸಗೊಳಿಸಲಾದ ಇಂಜಿನಿಯರಿಂಗ್ ಮೇರುಕೃತಿಯಾಗಿದೆ. ನಾಗರಿಕ ಸಾರಿಗೆಗೆ ಮಾತ್ರ ಈ ಸೇತುವೆ ಉಪಯೋಗವಾದದೇ ಭಾರತೀಯ ಸೇನೆಗಾಗಿಯೂ ಈ ಸೇತುವೆ ವಿನ್ಯಾಸಗೊಳಿಸಲಾಗಿದೆ.
ಮುಂದಿನ ರಾಜ್ಯದಲ್ಲಿ ಚೀನಾದ ಗಡಿ ಪ್ರದೇಶವಿರುವುದರಿಂದ ಸೈನ್ಯದ ಸಂಚಾರಕ್ಕಾಗಿ, ಫಿರಂಗಿ ಮತ್ತು ಯುದ್ಧ ಟ್ಯಾಂಕ್‌ಗಳು ಸೇರಿದಂತೆ ಭಾರೀ ಉಪಕರಣಗಳನ್ನು ಸಾಗಿಸುವ ಸಾಮರ್ಥ್ಯವನ್ನು ಈ ಸೇತುವೆ ಹೊಂದಿದ್ದು, 100 ಟನ್ ವರೆಗೆ ಹಾಗೂ ಯುದ್ಧ ಟ್ಯಾಂಕ್‌ನ ಭಾರವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ.
ಸೇತುವೆಯನ್ನು ಉದ್ಘಾಟಿಸಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, "ಈ ಸೇತುವೆಯು ಈ ಪ್ರದೇಶದಲ್ಲಿ ಆರ್ಥಿಕ ಬೆಳವಣಿಗೆಗೆ ಹೊಸ ದ್ವಾರಗಳನ್ನು ತೆರೆಯುತ್ತದೆ ಜೊತೆಗೆ ಆರ್ಥಿಕ ಕ್ರಾಂತಿಯನ್ನು ತರುತ್ತದೆ. ಪೂರ್ವ ಮತ್ತು ಈಶಾನ್ಯ ಭಾರತವು ರಾಷ್ಟ್ರವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಉತ್ತಮ ಸಾಮರ್ಥ್ಯವನ್ನು ಹೊಂದಿದೆ ಎಂಬ ವಿಶ್ವಾಸ ನಮಗಿದೆ," ಎಂದು ಹೇಳಿದ್ದರು.
ಈ ಎಂಜಿನಿಯರಿಂಗ್ ಅದ್ಭುತದ ಹಿಂದಿನ ವ್ಯಕ್ತಿ ಬಗ್ಗೆ?
ಭಾರತೀಯ ವಾಣಿಜ್ಯೋದ್ಯಮಿಯಾಗಿರುವ ಸಿ .ವಿಶ್ವೇಶ್ವರ ರಾವ್ ನವಯುಗ ಇಂಜಿನಿಯರಿಂಗ್ ಕನ್ಸ್ಟ್ರಕ್ಷನ್ ಲಿಮಿಟೆಡ್‌ನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಗರ ಎಂಜಿನಿಯರಿಂಗ್ ಮತ್ತು ರಫ್ತು ವ್ಯವಹಾರಗಳಲ್ಲಿ ಶ್ರೀಮಂತ ಹಿನ್ನೆಲೆ ಹೊಂದಿರುವ ಅವರು ಬಂದರು ಅಭಿವೃದ್ಧಿ ಉದ್ಯಮದಲ್ಲಿ ಪ್ರಮುಖ ವ್ಯಕ್ತಿಯಾಗಿದ್ದಾರೆ.
ಇನ್ನು ಇವರ ನವಯುಗ ಸಂಸ್ಥೆಯೂ ಸಿವಿಲ್ ಕನ್ಸ್ಟ್ರಕ್ಷನ್ ಮತ್ತು ಇನ್ಫ್ರಾಸ್ಟ್ರಕ್ಚರ್ ಡೆವಲಪ್ಮೆಂಟ್(ಮೂಲಸೌಕರ್ಯ ಅಭಿವೃದ್ಧಿಯಲ್ಲಿ) ಪರಿಣತಿ ಪಡೆದಿದೆ. ಸಮುದ್ರ (maritime) ಎಂಜಿನಿಯರಿಂಗ್ ಮತ್ತು ಎಕ್ಸ್ ಪೋರ್ಟ್ ಗೆ ನೀಡಿದ ಕೊಡುಗೆಗಳಿಗಾಗಿ ಆರಂಭದಲ್ಲಿ ಗುರುತಿಸಲ್ಪಟ್ಟ ವಿಶ್ವೇಶ್ವರ ರಾವ್ ಬಳಿಕ ಐಟಿ ಮತ್ತು ಪ್ರಾದೇಶಿಕ ತಂತ್ರಜ್ಞಾನ ಕ್ಷೇತ್ರಗಳಿಗೆ ತಮ್ಮ ಪ್ರಭಾವವನ್ನು ವಿಸ್ತರಿಸಿಕೊಂಡರು.
ನಾಯಕತ್ವದ ಕೌಶಲ್ಯಕ್ಕಾಗಿ ಗುರುತಿಸಲ್ಪಟ್ಟ ರಾವ್ ಅವರು ಪೂರ್ವಭಾವಿ ವಿಧಾನದೊಂದಿಗೆ ಸವಾಲುಗಳನ್ನು ಎದುರಿಸುವ ಮತ್ತು ಜಯಿಸುವ ಸಾಮರ್ಥ್ಯಕ್ಕಾಗಿ ಹೆಸರುವಾಸಿಯಾಗಿದ್ದಾರೆ. ವಿವಿಧ ಕೈಗಾರಿಕೆಗಳನ್ನು ವ್ಯಾಪಿಸಿರುವ ಟ್ರ್ಯಾಕ್ ರೆಕಾರ್ಡ್‌ನೊಂದಿಗೆ, ಸಿ ವಿಶ್ವೇಶ್ವರ ರಾವ್ ಅವರು ಮುಂಚೂಣಿಯಲ್ಲಿ ನಿಲ್ಲುವಂತೆ ಮಾಡುತ್ತದೆ. ಯಶಸ್ಸಿನ ಚುಕ್ಕಾಣಿ ಹಿಡಿಯುವಲ್ಲಿ ಅವರ ಸಮರ್ಪಣೆ ಮತ್ತು ಪರಿಣತಿ ಎದ್ದು ಕಾಣುತ್ತದೆ.
ಅವರ ಕಂಪನಿಯು ಈ ಹಿಂದೆ ನಿರ್ಮಿಸಿದ್ದ ಸುಂಡಿಲ್ಲಾ ಬ್ಯಾರೇಜ್, ನರ್ಮದಾ-ಮಾಳವಾ ಗಂಭೀರ್ ಲಿಂಕ್ ಯೋಜನೆ, ದಿಬಾಂಗ್-ಲೋಹಿತ್ ನದಿ ಸೇತುವೆ, ಕೃಷ್ಣಪಟ್ಟಣಂ ಬಂದರು ಮತ್ತು ಪೋಲಾವರಂ ಅಣೆಕಟ್ಟುಗಳಂತಹ ಕೆಲವು ಐಕಾನಿಕ್ ಯೋಜನೆಗಳಿಗೆ ಹೆಸರುವಾಸಿಯಾಗಿದೆ.
ಸೇತುವೆಗೆ ಹೇಗೆ ಹೆಸರು ಬಂತು?
ಈ ಸೇತುವೆಯು ಭೂಕಂಪನ ಪೀಡಿತ ಪ್ರದೇಶದಲ್ಲಿ ನೆಲೆಗೊಂಡಿರುವುದರಿಂದ, ಇದನ್ನು ಆಮದು ಮಾಡಿದ ಹೈಡ್ರಾಲಿಕ್ ರಿಗ್‌ಗಳು ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ಬಳಸಿ ನಿರ್ಮಿಸಲಾಗಿದೆ. ಇದರೊಂದಿಗೆ ಅದರ ಎಲ್ಲಾ 182 ಪಿಯರ್‌ಗಳಲ್ಲಿ ಭೂಕಂಪನ ಬಫರ್‌ಗಳನ್ನು ಒದಗಿಸಲಾಗಿದೆ.
ಈ ಸೇತುವೆಗೆ ಮೊದಲೇ ಹೇಳಿದಂತೆ ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ಧೋಲಾ ಮತ್ತು ಸಾದಿಯಾದ ಸಂಪರ್ಕಿತ ಗ್ರಾಮಗಳ ಹೆಸರನ್ನು ಇಡಲಾಗಿದೆ. ಈ ಸೇತುವೆಯನ್ನು ಅಧಿಕೃತವಾಗಿ ಭೂಪೇನ್ ಹಜಾರಿಕಾ ಸೇತು ಎಂದೂ ಕರೆಯುತ್ತಾರೆ, ಇದು ಹೆಸರಾಂತ ಅಸ್ಸಾಮಿ ಕಲಾವಿದ ಮತ್ತು ಚಲನಚಿತ್ರ ನಿರ್ಮಾಪಕ ಭೂಪೇನ್ ಹಜಾರಿಕಾ ಅವರ ಗೌರವ ಸೂಚಕವಾಗಿ ಹೆಸರಿಡಲಾಗಿದೆ.


Click it and Unblock the Notifications