ಭಾರತದ ಖ್ಯಾತ ಮಹಿಳಾ ಉದ್ಯಮಿಗಳಲ್ಲಿ Vu ಗ್ರೂಪ್‌ನ ಚೇರ್ ಪರ್ಸನ್ ಮತ್ತು ಸಿಇಒ ಆಗಿರುವ ದೇವಿತಾ ಸರಾಫ್ ಕೂಡಾ ಓರ್ವರು. ಇವರು ಕೇವಲ 24 ವರ್ಷದವರಾಗಿದ್ದಾಗ ವೃತ್ತಿ ಜೀವನ ಆರಂಭಿಸಿ Vu ಗ್ರೂಪ್ ಹುಟ್ಟುಹಾಕಿದರು. ಇಂದು Vu ಟೆಲಿವಿಷನ್‌ನ ಆದಾಯವು 1000 ಕೋಟಿ ರೂ.ಗಳಾಗಿದ್ದು, ಕಂಪನಿಯು ಇದುವರೆಗೆ 3 ಮಿಲಿಯನ್ ಟೆಲಿವಿಷನ್‌ಗಳನ್ನು ಮಾರಾಟ ಮಾಡಿದೆ. Vu ಟೆಲಿವಿಷನ್ ಪ್ರಸ್ತುತ ಜಗತ್ತಿನಲ್ಲಿಯೇ ಅತಿ ಹೆಚ್ಚು ಮಾರಾಟವಾಗುವ ಭಾರತೀಯ ಒಡೆತನದ ಟಿವಿ ಬ್ರ್ಯಾಂಡ್ ಆಗಿದೆ. ಅವರು ಕಳೆದ ಹಲವು ವರ್ಷಗಳಿಂದ Vu ತಂತ್ರಜ್ಞಾನಕ್ಕಾಗಿ ದಣಿವರಿಯಿಲ್ಲದೆ ಶ್ರಮಿಸಿದ ಫಲವಾಗಿ Vu ಇಂದಿನ ಖ್ಯಾತ ಬ್ರ್ಯಾಂಡ್ ಆಗಿದೆ.
2020 ರ ಹ್ಯೂರುನ್ ವರದಿಯ ಪ್ರಕಾರ, ದೇವಿತಾ ಸರಾಫ್ ಭಾರತದಲ್ಲಿ ಅತ್ಯಂತ ಶ್ರೀಮಂತ ಸ್ವಯಂ ನಿರ್ಮಿತ ಮಹಿಳೆಯಾಗಿದ್ದಾರೆ. ಅವರು ಫಾರ್ಚೂನ್‌ನ ಭಾರತದಲ್ಲಿನ ಟಾಪ್ 50 ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ. ದೇವಿತಾ ಸರಾಫ್ ಅವರನ್ನು ಫೋರ್ಬ್ಸ್ 'ಭಾರತದ ಮಾದರಿ ಸಿಇಒ' ಎಂದು ಹೆಸರಿಸಿದೆ. ದೇವಿತಾ ಸರಾಫ್ 2021ರಲ್ಲಿ ಮಹಿಳೆಯರಿಗೆಂದೇ "ಡೈನಾಮೈಟ್ ಬೈ ದೇವಿತಾ ಸರಾಫ್" ಎಂಬ ಸುಗಂಧ ದ್ರವ್ಯ ವ್ಯವಹಾರವನ್ನು ಪ್ರಾರಂಭಿಸಿ ಜಾಗತಿಕವಾಗಿ ವಿಸ್ತರಿಸಿದರು. ಸುಗಂಧ ದ್ರವ್ಯ ಮಾರಾಟದಲ್ಲಿ ಬಂದ ಲಾಭವನ್ನು ಕೊವೀಡ್ -19 ಸಾಂಕ್ರಮಿಕದ ವೇಳೆ ದೇಣಿಗೆ ನೀಡದ್ದಾರೆ.

ದೇವಿತಾ ಸರಾಫ್ 1981ರಲ್ಲಿ ಮುಂಬೈಯಲ್ಲಿ ವಾಣಿಜ್ಯ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ರಾಜಕುಮಾರ ಸರಫ್ ಝೆನಿತ್. ಮುಂಬೈನಲ್ಲಿ ಪ್ರಾಥಮಿಕ ಹಾಗೂ ಪಿಯು ಶಿಕ್ಷಣದ ಬಳಿಕ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಮತ್ತು ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದರು. ದೇವಿತಾ ಸರಾಫ್ Vu ಗ್ರೂಪ್ ನ ಸಿಇಒ ಆಗಿ ಮಾತ್ರವಲ್ಲ ಇವರು ಫ್ಯಾಶನ್ ಲೋಕದಲ್ಲಿಯೂ ಗುರುತಿಸಿಕೊಂಡಿದ್ದಾರೆ ಜೊತೆಗೆ ಐಷಾರಾಮಿ ಜಗತ್ತಿನಲ್ಲಿ ಚಿರಪರಿಚಿತ ಮುಖ ಇವರದ್ದು. ಅನೇಕ ಪ್ರಸಿದ್ಧ ಭಾರತೀಯ ವಿನ್ಯಾಸಕರಿಗೆ ,ಐಷಾರಾಮಿ ಬ್ರ್ಯಾಂಡ್ ಗಳಿಗೆ ಮಾಡೆಲ್ (ರೂಪದರ್ಶಿ) ಆಗಿದ್ದಾರೆ. ವರದಿಗಳ ಪ್ರಕಾರ, ದೇವಿತಾ ಸರಾಫ್ ಅವರ ನಿವ್ವಳ ಮೌಲ್ಯ ಸುಮಾರು 1800 ಕೋಟಿ ರೂ. ಆಗಿದೆ.
"ನಾನು 24 ವರ್ಷ ವಯಸ್ಸಿನವನಾಗಿದ್ದಾಗ Vu ಟೆಲಿವಿಷನ್‌ಗಳನ್ನು ಪ್ರಾರಂಭಿಸಿದೆ, ಯಾಕೆಂದರೆ ಟೆಕ್ನಾಲಜಿಯಲ್ಲೇ ಇದ್ದ ಕುಟುಂಬದ ಹಿನ್ನೆಲೆಯಿಂದ ಬಂದಿರುವ ಹೈ -ಎಂಡ್ ಐಷಾರಾಮಿ ಬ್ರ್ಯಾಂಡ್ ಅನ್ನು ನಿರ್ಮಿಸುವ ಯೋಚನೆ ನನ್ನಲ್ಲಿತ್ತು. 2022ರ ವೇಳೆಗೆ ನಾವು ಸೋನಿ, ಸ್ಯಾಮ್‌ಸಂಗ್ ಮತ್ತು ಎಲ್.ಜಿ ಯಂತಹ ಬೃಹತ್ ಬ್ರ್ಯಾಂಡ್ ನೊಂದಿಗೆ ಸ್ಪರ್ಧಿಸುವ ಅತಿದೊಡ್ಡ ಐಷಾರಾಮಿ ಟೆಲಿವಿಷನ್ ಬ್ರ್ಯಾಂಡ್ ಆಗಿದ್ದೇವೆ" ಎಂದು ಸಂದರ್ಶನವೊಂದರಲ್ಲಿ ಸರಾಫ್ ಹೇಳಿದ್ದಾರೆ. Vu ಟೆಕ್ನಾಲಜೀಸ್ ನ ಸಿಇಒ ಆಗಿರುವ ದೇವಿತಾ ಸರಫ್ ಒಡಿಸಿ ನೃತ್ಯಗಾರ್ತಿಯಾಗಿದ್ದಾರೆ. ದಿ ವಾಲ್ ಸ್ಟ್ರೀಟ್ ಜರ್ನಲ್ ನ ಅಂಕಣಕಾರರಾಗಿದ್ದಾರೆ. ಇಂಟರ್ ನ್ಯಾಷನಲ್ ಹೈ-ಐಕ್ಯೂ ಮೆನ್ಸಾ ಸೊಸೈಟಿಯ ಸದಸ್ಯರೂ ಆಗಿದ್ದಾರೆ.
ವ್ಯಾಪಾರ ಕ್ಷೇತ್ರದಲ್ಲಿ ಹೆಸರು ಮಾಡಿದ ಮಹಿಳಾ ಉದ್ಯಮಿಗಳು
ದೇವಿತಾ ಸರಾಫ್ ಮಾತ್ರವಲ್ಲದೆ ಹಲವಾರು ಮಹಿಳೆಯರು ವ್ಯಾಪಾರ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ 2023ರ ಎಂ3ಎಂ ಹುರುನ್ ಜಾಗತಿಕ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಭಾರತೀಯ ಮಹಿಳೆಯರ ಹೆಸರು ಕಾಣಿಸಿಕೊಂಡಿದೆ. ಹುರುನ್ ಜಾಗತಿಕ ಶ್ರೀಮಂತರ ಪಟ್ಟಿಯ ಪ್ರಕಾರ ಸಾಫ್ಟ್‌ವೇರ್ ಮತ್ತು ಸೇವಾ ವಲಯದಲ್ಲಿ ರಾಧಾ ವೆಂಬು ಎರಡನೇ ಅತೀ ಶ್ರೀಮಂತ ವ್ಯಕ್ತಿಯಾಗಿದ್ದಾರೆ.


Click it and Unblock the Notifications