ಐಐಟಿ , ಐಐಎಂ ಹೀಗೆ ಹಲವು ಪ್ರತಿಷ್ಠಿತ ಸಂಸ್ಥೆಗಳಿಂದ ಪದವಿ ಪಡೆದ ಅನೇಕ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಆರಂಭದಲ್ಲಿಯೇ ಉತ್ತಮ ವೇತನದ ಉದ್ಯೋಗಳಿಗೆ ಆಯ್ಕೆಯಾಗುತ್ತಾರೆ.
ಒಳ್ಳೆ ಕೆಲಸ ಸಿಕ್ಕರೂ, ಕೆಲವರಲ್ಲಿ ಉದ್ಯಮಶೀಲ ಮನಸ್ಸಿದ್ದವರು ಯಶಸ್ಸಿಗಾಗಿ ಉದ್ಯೋಗವನ್ನು ನಂಬದೆ ವಿಭಿನ್ನ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದಕ್ಕೆ ತಕ್ಕ ಉದಾಹರಣೆ ಐಐಎಂ ಪದವೀಧರ ಶಶಾಂಕ್ ಸಿಂಗ್.
ಪ್ರತಿಷ್ಠಿತ ಕಾಲೇಜಿನಲ್ಲಿ ಪದವಿ ಪಡೆದ ನಂತರ Michelin, ಊಬರ್ ಮತ್ತು ವಿಪ್ರೋನಂತಹ ಕಂಪನಿಗಳಲ್ಲಿ ತಿಂಗಳಿಗೆ ಲಕ್ಷಗಟ್ಟಲೆ ರೂಪಾಯಿ ಸಿಗುವ ಉದ್ಯೋಗ ನಿರ್ವಹಿಸಿದ್ದರು. ಅದರೂ ತಮಗಿದ್ದ ಹುದ್ದೆ, ಅಥವಾ ಸಂಸ್ಥೆಯಲ್ಲಿದ್ದ ಪಾತ್ರದಿಂದ ಅವರು ತೃಪ್ತರಾಗಿರಲಿಲ್ಲ.

ಇದಕ್ಕಾಗಿ ಅಧಿಕ ವೇತನದ ಕೆಲಸವನ್ನು ತೊರೆದು, ಕೊವೀಡ್ ಕಾಲಘಟದಲ್ಲಿ ಹಿಟ್ಟು ಮತ್ತು ಅಕ್ಕಿಯನ್ನು ಮಾರಾಟ ಮಾಡುವ ವ್ಯಾಪಾರವನ್ನು ಪ್ರಾರಂಭಿಸಿದರು. ಪೋಷ್ನ್( Poshn) ಸಂಸ್ಥೆಯ ಸಹ-ಸಂಸ್ಥಾಪಕರಾದ ಶಶಾಂಕ್ ಸಿಂಗ್ ಅವರು ತಮ್ಮ ಕಂಪನಿಯನ್ನು ಹೇಗೆ ಪ್ರಾರಂಭಿಸಿದರು ಎಂಬ ವಿವರ ಇಲ್ಲಿದೆ.
ಶಶಾಂಕ್ ಸಿಂಗ್ ಯಾರು?
ಕಾನ್ಪುರ ಮೂಲದವರಾಗಿರುವ ಶಶಾಂಕ್, ತಮ್ಮ 12 ನೇ ತರಗತಿಯ ಬಳಿಕ 2010 ರಲ್ಲಿ ಪಿಲಾನಿಯ BITS ನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ಇದರ ಬೆನ್ನಲ್ಲೇ ಅವರು ಟೈರ್‌ಗಳನ್ನು ತಯಾರಿಸುವ ಬಹುರಾಷ್ಟ್ರೀಯ ಕಂಪನಿ ಮೈಕೆಲಿನ್‌ಗೆ ನೇಮಕಗೊಂಡರು.
ಅಲ್ಲಿ ಮೂರು ವರ್ಷ ಕಾಲ ಕೆಲಸ ಮಾಡುತ್ತಿರುವಾಗಲೇ, ಎಂಬಿಎ ಓದುವವತ್ತ ಆಸಕ್ತಿ ಹುಟ್ಟಿಕೊಂಡಿತು. ಹೀಗಾಗಿ ಸಿಎಟಿ ಪರೀಕ್ಷೆ ಎದುರಿಸಿ ಕೋಲ್ಕತ್ತಾದ ಐಐಎಂನಲ್ಲಿ ಪ್ರವೇಶ ಪಡೆದುಕೊಂಡರು. ಐಐಎಂ ಕೋಲ್ಕತ್ತಾದಿಂದ ಎಂಬಿಎ ಪದವಿ ಪಡೆದು ಮತ್ತೆ ಉದ್ಯೋಗಕ್ಕಾಗಿ ಖಾಸಗಿ ವಲಯಕ್ಕೆ ಮರಳಿದರು.
ತಮ್ಮ ವೃತ್ತಿ ಜೀವನದ ಹಲವು ಉದ್ಯೋಗಗಳನ್ನು ಬದಲಾಯಿಸುವ ಸಂದರ್ಭದಲ್ಲಿ ಸ್ಟಾರ್ಟ್ಅಪ್ ಗಳ ಕಡೆ ಒಲವು ಹೆಚ್ಚಾಯಿತು. ಶಶಾಂಕ್ ಅವರೇ ಹೇಳುವಂತೆ, ದೇಶದಾದ್ಯಂತ ಕೊವೀಡ್ ಲಾಕ್‌ಡೌನ್ ನಿಂದಾಗಿ ಮನೆಯಲ್ಲಿ ಇದ್ದಾಗ ಏನಾದ್ರೂ ಸ್ಟಾರ್ಟ್‌ಅಪ್ ಮಾಡಬೇಕು ಎನ್ನುವ ಸಂಕಲ್ಪವನ್ನು ಅವರ ಮನಸ್ಸಿನಲ್ಲಿ ಮತ್ತಷ್ಟು ಧೃಢವಾಗತೊಡಗಿತು.
ತಮ್ಮ ಸಹೋದ್ಯೋಗಿಯಾಗಿದ್ದ ಭುವನೇಶ್ ಗುಪ್ತಾ ಅವರೊಂದಿಗೆ ಸೇರಿಕೊಂಡು "ಪೋಷ್ನ್" ಹುಟ್ಟುಹಾಕಿದರು. ಪೋಷ್ನ್ ಆರಂಭದಲ್ಲಿ ಹಿಟ್ಟು, ಅಕ್ಕಿ, ಖಾದ್ಯ ತೈಲ ಮತ್ತು ಸಕ್ಕರೆ ಸೇರಿ ಕೇವಲ ನಾಲ್ಕು ಉತ್ಪನ್ನಗಳನ್ನು ಮಾತ್ರ ಮಾರಾಟ ಮಾಡಲಾರಂಭಿಸಿತು.
ಜೂನ್ 2021ರಲ್ಲಿ, ಕಂಪನಿಯ ಪ್ರಾರಂಭವಾದರೂ ಹಲವು ತಿಂಗಳ ನಂತರ ವ್ಯಾಪಾರ ಪ್ರಾರಂಭಿಸಿತು. ಹಿಟ್ಟು, ಅಕ್ಕಿ, ಎಣ್ಣೆ ಮತ್ತು ಸಕ್ಕರೆಯನ್ನು ಉತ್ಪಾದಿಸುವ ದೊಡ್ಡ ವ್ಯಾಪಾರಿಗಳು, ಗಿರಣಿಗಾರರಿಂದ ಉತ್ಪನ್ನಗಳನ್ನು ಖರೀದಿಸಿ ಅವುಗಳನ್ನು ಸಗಟು ವ್ಯಾಪಾರಿಗಳಿಗೆ ಮಾರಾಟ ಮಾಡುವುದು ಸಂಸ್ಥೆಯ ಕೆಲಸವಾಗಿತ್ತು.
ಕೆಲಸ ಆರಂಭವಾದ ಮೊದಲ ತಿಂಗಳಲ್ಲಿ ಅವರ ಒಟ್ಟು ಆದಾಯ ಕೇವಲ 80 ಲಕ್ಷವಾಗಿತ್ತು. ಈಗ 600 ಕ್ಕೂ ಹೆಚ್ಚು ಸಗಟು ವ್ಯಾಪಾರಿಗಳು ಮತ್ತು ಸುಮಾರು 70 ಉದ್ಯೋಗಿಗಳು ಸ್ಟಾರ್ಟ್‌ಅಪ್‌ಗಾಗಿ ಕೆಲಸ ಮಾಡುತ್ತಿದ್ದು, ಕಳೆದ ಆರ್ಥಿಕ ವರ್ಷದಲ್ಲಿ, ಒಟ್ಟು 510 ಕೋಟಿ ಆದಾಯ ತಂದಿದೆ ಎಂದು ಬಿಸಿನೆಸ್ ಟುಡೇ ವರದಿ ಮಾಡಿದೆ.
ದೆಹಲಿ ಮತ್ತು ಎನ್‌ಸಿಆರ್ ಮಾತ್ರ ಕಂಪನಿಯ ಕೇಂದ್ರ ಬಿಂದುವಾಗಿದ್ದು, Poshn ಸಣ್ಣ ಸಣ್ನ ಸಗಟು ವ್ಯಾಪಾರಿಗಳು ಅಥವಾ ವ್ಯಾಪಾರಿಗಳೊಂದಿಗೆ ವ್ಯವಹರಿಸುತ್ತಿಲ್ಲ ಮಾತ್ರವಲ್ಲದೇ ಇದು ಈಗ ಕೇವಲ ತಮ್ಮ ನಾಲ್ಕು ಉತ್ಪನ್ನಗಳೊಂದಿಗೆ ಮಾತ್ರ ವ್ಯವಹರಿಸುತ್ತದೆ.
ಶಶಾಂಕ್ ಸಿಂಗ್ ಪ್ರಕಾರ, ಅವರು ಕನಿಷ್ಠ ಅರ್ಧ ಟ್ರಕ್‌ಗೆ ಆರ್ಡರ್ ಮಾಡುವ ವ್ಯಾಪಾರಿಗಳಿಗೆ ಮಾತ್ರ ತಮ್ಮ ಸರಕುಗಳನ್ನು ಮಾರಾಟ ಮಾಡುತ್ತಾರೆ. ಹಿಟ್ಟು, ಅಕ್ಕಿ, ಖಾದ್ಯ ತೈಲ ಮತ್ತು ಸಕ್ಕರೆಯಂತಹ ಕೆಲವು ಸರಕುಗಳು ನಿತ್ಯ ಬಳಕೆಯ ವಸ್ತುವಾಗಿರುವುದರಿಂದ ಇವುಗಳು ಎಂದಿಗೂ ಬಳಕೆ ಕುಸಿತವಾಗುವುದಿಲ್ಲ ಹೀಗಾಗಿ ಅವರ ಕಂಪನಿಯು ಪ್ರತಿ ತಿಂಗಳು ಶೇಕಡ 30ರಷ್ಟು ವಿಸ್ತರಿಸುತ್ತಿದೆ ಎನ್ನುತ್ತಾರೆ.


Click it and Unblock the Notifications