ಹರಿಣಿ ಶಿವಕುಮಾರ್ ಅವರು ಬ್ಯಾಂಕಿಂಗ್ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಅವರು 22ನೇ ವಯಸ್ಸಿನಲ್ಲಿಯೇ ಮದುವೆಯಾಗಿದ್ದರು. 2010ರಲ್ಲಿ ತನ್ನ ಮಗುವಿಗೆ ಡೌನ್ ಸಿಂಡ್ರೋಮ್ ಇದೆ ಎಂಬುದನ್ನು ಪತ್ತೆ ಮಾಡಿದ್ದರು. ಆ ಹಿನ್ನೆಲೆಯಲ್ಲಿ ಹರಿಣಿ ತಮ್ಮ ವೃತಿಜೀವನವನ್ನು ತೊರೆದು ಮನೆಯಲ್ಲಿಯೇ ಇರುವ ತಾಯಿಯಾಗಲು ನಿರ್ಧರಿಸಿದ್ದರು.
ಈ ನಡುವೆ ತಮ್ಮ ಮಗುವಿನ ಆರೋಗ್ಯದ ಸುರಕ್ಷತೆಗೆ ಉತ್ಪನ್ನಗಳನ್ನು ಹುಡುಕಲು ಹೊರಟ ಅವರನ್ನು ಅದೃಷ್ಟವು ಸ್ಟಾರ್ಟ್‌ಅಪ್ ಸ್ಥಾಪಕಿಯನ್ನಾಗಿ ಮಾಡಿತು. ತಮ್ಮ ಕಠಿಣವಾದ ಪರಿಶ್ರಮ ಹಾಗೂ ದಿಟ್ಟ ನಿರ್ಧಾರಗಳಿಂದಾಗಿ ದೊಡ್ಡ ಬ್ರಾಂಡ್‌ವೊಂದನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರ್ಥ್ ರಿದಂ ಎನ್ನುವ ಸೌಂದರ್ಯ ವರ್ಧಕ ಕಂಪನಿಯ ಸಿಇಒ ಹರಿಣಿ ಶಿವಕುಮಾರ್‌ರ ಸ್ಫೂರ್ತಿದಾಯಕ ಕಥೆ ಇಲ್ಲಿದೆ... ಮುಂದೆ ಓದಿ...

ಹರಿಣಿ ಶಿವಕುಮಾರ್‌ರ ಬಗ್ಗೆ ಇಲ್ಲಿದೆ ಮಾಹಿತಿ
2015ರಲ್ಲಿ ಹರಿಣಿ ಶಿವಕುಮಾರ್ ಬಿಸಿನೆಸ್ ಅನ್ನು ಪ್ರಾರಂಭಿಸಿದ್ದರು. ಹರಿಣಿ ತಮ್ಮ ವ್ಯಾಪಾರವನ್ನು ಬೆಳೆಸುವುದಕ್ಕೆ ಪ್ರಾರಂಭಿಕ ಹಂತದಲ್ಲೇ ಸಾಕಷ್ಟು ಪೂರ್ವ ತಯಾರಿಯನ್ನು ನಡೆಸಿಕೊಂಡಿದ್ದರು. ಅವರು ತಮ್ಮ ಸಂಸ್ಥೆಯ ಉತ್ಪನ್ನಗಳ ಬಗ್ಗೆ ಜನರಿಗೆ ತಿಳಿಸುವುದಕ್ಕೆ ಅಲ್ಲಲ್ಲಿ ಸಣ್ಣ-ಸಣ್ಣ ಮಳಿಗೆಗಳನ್ನು ಹಾಕುತ್ತಿದ್ದರು.
2019ರಲ್ಲಿ ಹರಿಣಿ ಅರ್ಥ್ ರಿದಂ ಕಂಪನಿಯನ್ನು ಪ್ರಾರಂಭಿಸಿ ಗುರುಗಾಂವ್‌ನಲ್ಲಿ ವೆಬ್‌ಸೈಟ್ ಹಾಗೂ ಉತ್ಪಾದನಾ ಘಟಕವನ್ನು ಪ್ರಾರಂಭಿಸಿದ್ದರು. ತಂತ್ರಜ್ಞಾನ ಆಧಾರಿತ ವ್ಯವಸ್ಥೆಯಿಂದಾಗಿ ಹರಿಣಿ ಅವರ ಉತ್ಪನ್ನವು ಉತ್ತಮ ಫಲಿತಾಂಶವನ್ನು ನೀಡಲಾರಂಭಿಸಿತು. ಕೇವಲ ಎರಡು ವರ್ಷದಲ್ಲಿ ಹರಿಣಿ ಅವರ ಕಂಪನಿಯು 500 ಪಟ್ಟು ಬೆಳೆಯಿತು. 2022ರಲ್ಲಿ ಅವರ ಕಸ್ಟಮ್ ಬೇಸ್ ಕೂಡ ಹತ್ತು ಪಟ್ಟು ಜಾಸ್ತಿಯಾಯಿತು. ಆದರೆ ಈ ಯಶಸ್ಸು ಗಳಿಸುವುದು ಅಷ್ಟೊಂದು ಸುಲಭವಿರಲಿಲ್ಲ.
ಮದುವೆ ಬಳಿಕ ಹರಿಣಿ ಅವರು ಸುಮಾರು ಏಳು ವರ್ಷಗಳ ಕಾಲ ಗೃಹಿಣಿಯಾಗಿದ್ದರು. ಆ ಬಳಿಕ ಅವರು ಬಿಸಿನೆಸ್ ಅನ್ನು ಪ್ರಾರಂಭಿಸಿದ್ದರು. ಹರಿಣಿ ಅವರು ಯಾವುದೇ ಫ್ಯಾನ್ಸಿ ಡಿಗ್ರಿಯನ್ನು ಹೊಂದಿಲ್ಲದ ಸಾಧಾರಣ ವಿದ್ಯಾರ್ಥಿಯಾಗಿದ್ದರು. ಹೀಗಾಗಿ, ಅನಾರೋಗ್ಯ ಪೀಡಿತ ತಮ್ಮ ಮಗನಿಗೆ ಸರಿಯಾದ ಉತ್ಪನ್ನ ಲಭ್ಯವಾದಿರುವುದು ಆಕೆಯನ್ನು ಬಿಸಿನೆಸ್ ಪ್ರಾರಂಭಿಸುವತ್ತ ಪ್ರೇರೇಪಿಸಿತ್ತು. ಬಳಿಕ ಅವರ ವಿಶೇಷಚೇತನ ಮಗುವು ಶಾಲೆಗೆ ಹೋಗಲಾರಂಭಿಸಿತು.
ಹರಿಣಿ ಅವರು ತಮ್ಮ ಕಂಪನಿಯನ್ನು ನೋಂದಣಿ ಮಾಡಿಸಿಕೊಂಡ ಬಳಿಕ ಸ್ಕಿನ್ ಕೇರ್ ಬಗ್ಗೆ ಕಲಿಯಲು ಪ್ರಾರಂಭಿಸಿದರು. ಹಲವಾರು ಕೋರ್ಸ್‌ಗಳನ್ನು ಮಾಡುವ ಮೂಲಕ ಹೊಸ ಉತ್ಪನ್ನವೊಂದನ್ನು ತಯಾರಿಸಿದರು. ಅವರು ನಾರ್ಥಾಂಪ್ಟನ್ ಯೂನಿರ್ವಸಿಟಿಯಿಂದ ಎಂಎ ಪದವಿಯನ್ನು ಪಡೆದುಕೊಂಡರು. ಬಳಿಕ ಅವರು ಅಡ್ವಾನ್ಸ್ಡ್ ಕಾಸ್ಮೆಟಿಕ್ ಸೈನ್ಸ್‌ನಲ್ಲಿ ಡಿಪ್ಲೋಮಾ ಪದವಿಯನ್ನು ಇನ್‌ಸ್ಟಿಟ್ಯೂಟ್ ಆಪ್ ಪರ್ಸನಲ್ ಕೇರ್ ಸೈನ್ಸ್‌ನಿಂದ ಪಡೆದುಕೊಂಡರು.
ಅಷ್ಟೇಅಲ್ಲ ಹರಿಣಿ ಅವರು ಚೆನ್ನೈ ಬಿಸಿನೆಸ್ ಸ್ಕೂಲ್‌ನಿಂದ ರಿಟೇಲ್ ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಕೂಡ ಪಡೆದುಕೊಂಡರು. 2019ರಲ್ಲಿ ಹರಣಿ ಅವರು ತಮ್ಮ ತಂದೆಯ ಸಹಾಯದಿಂದ ಬ್ರಾಂಡ್‌ನ್ನು ರೀ-ಲಾಂಚ್ ಮಾಡಿದರು. ಇದರ ಜತೆಗೆ ಅವರು ಎಂಟು ಮಂದಿ ಉದ್ಯೋಗಿಗಳೊಂದಿಗೆ ಸಣ್ಣ ಕಚೇರಿಯನ್ನು ಕೂಡ ಪ್ರಾರಂಭಿಸಿದರು.
ಅವರ ಮೊದಲ ಉದ್ಯೋಗಿಯು ಸುಂದರ್‌ಬನ್ಸ್‌ನ ಹಳ್ಳಿಯ ಹುಡುಗಿಯಾಗಿದ್ದರು. ಈಗ ಅವರ ಕಂಪೆನಿಯು 100ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದೆ. ಅವರು ತಮ್ಮ ವೆಬ್‌ಸೈಟ್ ಮೂಲಕ 160ಕ್ಕೂ ಹೆಚ್ಚು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ. ಬಿಸಿನೆಸ್ ಬಗ್ಗೆ ಯಾವುದೇ ಜ್ಞಾನವಿಲ್ಲದ ತಾನು 200 ಕೋಟಿ ರೂಪಾಯಿಯ ಬ್ರಾಂಡ್ ಅನ್ನು ನಿರ್ಮಿಸಲು ಸಾಧ್ಯವಾಗುವುದಾದರೆ ಯಾರು ಬೇಕಾದರೂ ಈ ಸಾಧನೆಯನ್ನು ಮಾಡಬಹುದೆಂದು ಹರಿಣಿ ಅವರು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿದ್ದರು.
ಹರಿಣಿ ತಮ್ಮ ಮಗನಿಗಾಗಿ ಸ್ಕಿನ್‌ಕೇರ್ ಪಾರ್ಮುಲೇಷನ್ ಕೋರ್ಸ್ ಅನ್ನು ಕಲಿತಿದ್ದರು. ಈಗ ಕೆಮಿಕಲ್ ಇಲ್ಲದ ಸೋಪ್ ಬೇಕಾದ ಹಲವರಿಗೆ ಹರಿಣಿ ಅವರ ಉತ್ಪನ್ನಗಳು ನೆರವಾಗುತ್ತಿದೆ. ಹರಿಣಿಯ ಅರ್ಥ್ ರಿದಂ ಕಂಪೆನಿಯ ಜನಪ್ರಿಯ ಉತ್ಪನ್ನ- ಶಾಂಪು ಬಾರ್. ಇವರ ಈ ಶಾಂಪು ಪ್ಲಾಸ್ಟಿಕ್ ಬದಲಾಗಿ ಬಾರ್ ರೂಪದಲ್ಲಿದೆ. ಅವರ ಕಂಪೆನಿಯು ನೈಸರ್ಗಿಕ ಉತ್ಪನ್ನಗಳನ್ನು ಬಳಸುತ್ತಿದ್ದು, ಸಂಪೂರ್ಣ ತ್ಯಾಜ್ಯಮುಕ್ತವಾಗಿದೆ.
ಹರಿಣಿ ತಂದೆಯೇ ಕಂಪನಿಯ ಹಣಕಾಸು ಹಾಗೂ ಮಾರಾಟ ವಿಭಾಗವನ್ನು ನೋಡಿಕೊಳ್ಳುತ್ತಿದ್ದಾರೆ. ಹರಿಣಿ ಅವರು ಉತ್ಪಾದನಾ ಘಟಕವನ್ನು ನಿರ್ವಹಿಸುತ್ತಿದ್ದಾರೆ. ಕಂಪನಿಯು 2023ರಲ್ಲಿ 150 ಕೋಟಿ ರೂಪಾಯಿ ಬಿಸಿನೆಸ್ ಅನ್ನು ಮಾಡುವ ಗುರಿಯನ್ನು ಹಾಕಿಕೊಂಡಿದೆ. ಅಷ್ಟೇ ಅಲ್ಲ ಕಂಪೆನಿಯು ಹತ್ತು ಮಿಲಿಯನ್ ಡಾಲರ್ ಫಂಡ್ ಕೂಡ ರೈಸ್ ಮಾಡಿದೆ.


Click it and Unblock the Notifications