ಕೃಷಿ ಮತ್ತು ಕೃಷಿಯಾಧಾರಿತ ಉದ್ಯಮಗಳಿಗೆ ಇತರ ಉದ್ಯಮಗಳಷ್ಟೇ ಆರ್ಥಿಕ ಸಾಮರ್ಥ್ಯವಿದೆ. ಇದನ್ನು ಅಭಿವೃದ್ಧಿ ಹೊಂದಿದ ದೇಶಗಳ ಜನ ಚೆನ್ನಾಗಿ ಅರಿತುಕೊಂಡಿದ್ದಾರೆ. ಆದರೆ ಅದ್ಯಾಕೋ ದೇಶದ ಜನರು ಮಾಸಿಕ ವೇತನವನ್ನು ಗಳಿಸುವ ಸರ್ಕಾರಿ ಉದ್ಯೋಗ ಮತ್ತು ಕಾರ್ಪೊರೇಟ್ ಉದ್ಯೋಗಗಳ ಕಡೆಯೇ ಹೆಚ್ಚು ಒತ್ತು ನೀಡಿ ಜೀವನದಲ್ಲಿ ಸೆಟ್ಲ್ ಆಗಬೇಕು ಎನ್ನುವ ಯೋಚನೆಯಲ್ಲೇ ಇರುತ್ತಾರೆ.
ಆದರೂ, ಕೃಷಿ ಮತ್ತು ಕೃಷಿಯಾಧಾರಿತ ಉದ್ಯಮದಲ್ಲಿ ಇನ್ನೂ ಯಾರು ಸ್ಪರ್ಶಿಸದ, ಕೆಲವು ಆರ್ಥಿಕ ಮಾರ್ಗಗಳನ್ನು ಅರಿತು ಪರೀಕ್ಷಿಸಿ ನೋಡೋಣಾ ಎಂದು ದಾಳ ಉರುಳಿಸಿ, ಅದೃಷ್ಟ ಕೈ ಹಿಡಿದವರೂ ಇದ್ದಾರೆ. ಇದಕ್ಕೆ ಒಂದು ಜ್ವಲಂತ ಉದಾಹರಣೆಯೆಂದರೆ, ಧನ್‌ದೇವ್ ಗ್ಲೋಬಲ್ ಗ್ರೂಪ್ ಸಂಸ್ಥಾಪಕ ಹರೀಶ್ ಧನ್‌ದೇವ್.

ಇಂಜಿನಿಯರ್ ಆಗಿದ್ದ ಅವರ ಕೈಯಲ್ಲಿ ಸರ್ಕಾರಿ ನೌಕರಿ ಇತ್ತು. ಆದರೂ ಕೃಷಿ ಕಡೆಗೆ ಸೆಳೆತ ಇದ್ದೇ ಇತ್ತು. ಇದಕ್ಕಾಗಿ ಉತ್ತಮ ಸಂಬಳದ ಸರ್ಕಾರಿ ಕೆಲಸವನ್ನು ತೊರೆದು ವಿಶೇಷ ತಳಿಯ ಅಲೋವೆರಾ ಬೆಳೆಗಳನ್ನು ಬೆಳೆಸಲು ನಿರ್ಧರಿಸಿದರು. ಅವರ ನಿರ್ಧಾರ ಅವರನ್ನು ಮಿಲಿಯನೇರ್ ಮಾಡಿತು ಎನ್ನುವುದರಲ್ಲಿ ಸಂಶಯವಿಲ್ಲ.
ಹರೀಶ್ ಧನ್‌ದೇವ್ ಯಾರು?
ರಾಜಸ್ಥಾನದ ರೈತರ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಹರೀಶ್ ಧನ್‌ದೇವ್ ಅವರು ಎಂಜಿನಿಯರಿಂಗ್ ಪದವಿ ಗಳಿಸಿದ್ದು, ನೇಮಕಾತಿ ಪರೀಕ್ಷೆ ಎದುರಿಸಿ ರಾಜಸ್ಥಾನದ ಜೈಸಲ್ಮೇರ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ಜೂನಿಯರ್ ಇಂಜಿನಿಯರ್ ಆಗಿ ಸರ್ಕಾರಿ ಉದ್ಯೋಗವನ್ನು ಪಡೆದರು.
ಅನೇಕ ಸವಲತ್ತು, ನಿವೃತ್ತಿ ಪ್ರಯೋಜನ, ಉತ್ತಮ ಸಂಬಳ ಪಡೆಯುವ ಸರ್ಕಾರಿ ಕೆಲಸವನ್ನು ಹೊಂದಿದ್ದರೂ ಹರೀಶ್ ಅವರಿಗೆ ಏನೋ ಅತೃಪ್ತಿ. ತಮ್ಮ ಜೀವನ ಮತ್ತು ವೃತ್ತಿ ಬದುಕಿನಲ್ಲಿ ಎಂದೂ ತೃಪ್ತರಾಗಿರಲಿಲ್ಲ. ಇದಕ್ಕಾಗಿ ಒಂದು ದಿನ ತನ್ನ ಜೀವನವನ್ನು ಬದಲಾಯಿಸಿ, ಏನೋ ಸಾಧನೆ ಮಾಡಬೇಕೆನ್ನುವ ಕನಸು ಕಂಡರು.
ಒಮ್ಮೆ ದೆಹಲಿಯಲ್ಲಿ ನಡೆದ ಕೃಷಿ ಮೇಳಕ್ಕೆ ಭೇಟಿ ನೀಡಿದ್ದರು. ಅದು ಅವರ ಬದುಕಿಗೆ ದೊಡ್ಡ ತಿರುವು ನೀಡಿತು. ಹರೀಶ್ ಧನ್‌ದೇವ್ ಅವರಿಗೆ ತಾವೇನು ಮಾಡಬೇಕು ಎನ್ನುವ ಐಡಿಯಾ ಬಂದು ಕೃಷಿಯನ್ನೇ ವೃತ್ತಿಯಾಗಿ ಮುಂದುವರಿಸಲು ನಿರ್ಧರಿಸಿದರು.
ತಕ್ಷಣ ಹರೀಶ್ ಅವರು ತಮ್ಮ ಸರ್ಕಾರಿ ಕೆಲಸವನ್ನು ತೊರೆದು ಜೈಸಲ್ಮೇರ್‌ನಲ್ಲಿ ತಮ್ಮ ಕುಟುಂಬದ 120 ಎಕರೆ ಜಮೀನಿನಲ್ಲಿ ಕೃಷಿ ಪ್ರಾರಂಭಿಸಿದರು.ಆದರೆ ರಾಜಸ್ಥಾನದ ಬಹುಪಾಲು ರೈತರಂತೆ ಬಜ್ರಾ (ಪರ್ಲ್ ಮಿಲ್ಲಟ್) ಮತ್ತು ಗೋಧಿಯನ್ನು ಬೆಳೆಸುವ ಬದಲು ಹರೀಶ್ ಬಾರ್ಬಿ ಡೆನಿಸ್ ಮಿಲ್ಲರ್ ಅನ್ನು ಬೆಳೆಸಲು ನಿರ್ಧರಿಸಿದರು.
ಇದು ಹಾಂಗ್ ಕಾಂಗ್, ಬ್ರೆಜಿಲ್ ಮತ್ತು ಯುನೈಟೆಡ್ ಸ್ಟೇಟ್ ನಲ್ಲಿ ಹೆಚ್ಚಿನ ಬೇಡಿಕೆಯನ್ನು ಹೊಂದಿರುವ ಅಲೋವೆರಾದ ವಿದೇಶಿ ತಳಿಯಾಗಿದೆ. ಇದು ಪ್ರೀಮಿಯಂ ಸೌಂದರ್ಯ ಉತ್ಪನ್ನಗಳು ಮತ್ತು ಸೌಂದರ್ಯವರ್ಧಕಗಳನ್ನು ಬಳಸುವ ಪ್ರಮುಖ ಕಚ್ಚಾ ಪದಾರ್ಥವಾಗಿದೆ.
'ನೇಚರ್‌ಆ್ಯಲೊ ಅಗ್ರೊ'
ರಿಸ್ಕ್ ತೆಗೆದುಕೊಂಡು ಹರೀಶ್ ಹೆಜ್ಜೆ ಇಟ್ಟಿದ್ದರೂ ಕೃಷಿ ಅವರ ಕೈ ಹಿಡಿಯಿತು. ಶೀಘ್ರದಲ್ಲೇ ಅವರ ವ್ಯವಹಾರವು ಅತ್ಯಂತ ವೇಗದಲ್ಲಿ ಅಭಿವೃದ್ಧಿ ಹೊಂದಲು ಪ್ರಾರಂಭಿಸಿತು. ಮೊದಲಿಗೆ ಇವರು ನೆಟ್ಟಿದ್ದ ಬಾರ್ಬಿ ಡೆನಿಸ್ ಮಿಲ್ಲರ್ ಅಲೋವೆರಾ ಗಿಡಗಳ ಸಂಖ್ಯೆ 80,000. ಈಗ ಅವುಗಳ ಸಂಖ್ಯೆ 7 ಲಕ್ಷ ಮೀರಿ ಹೋಗಿದೆ. ಅಲೋವೆರಾ ಕೃಷಿ ಫಲ ನೀಡಲಾರಂಭಿಸಿದಾಗ ಸುಮ್ಮನಾಗದ ಹರೀಶ್ ತನ್ನ ಕೃಷಿ ಸಾಮ್ರಾಜ್ಯವನ್ನು ವಿಸ್ತರಿಸಿದರು.ಜೈಸಲ್ಮೇರ್‌ನಿಂದ ಹೊರವಲಯದಲ್ಲಿರುವ ದೈಸರ್‌ನಲ್ಲಿ 'ನೇಚರ್‌ಆ್ಯಲೊ ಅಗ್ರೊ' ಎಂಬ ಸ್ವಂತ ಕಂಪನಿಯನ್ನೂ ಸ್ಥಾಪಿಸಿದರು.
ಹರೀಶ್ ಬೆಳೆದ ಲೋಳೆಸರದ ಗುಣಮಟ್ಟ ಉತ್ಕೃಷ್ಟವಾಗಿರುವುದರಿಂದ ಇದು ಪತಂಜಲಿ ಗ್ರೂಪ್ ನ ಗಮನವನ್ನು ಸೆಳೆಯಿತು. ಸ್ವದೇಶಿ-ಬೆಳೆದ ಪ್ರೀಮಿಯಂ ಅಲೋವೆರಾದ ಪಡೆದರೆ ಆರ್ಥಿಕ ಲಾಭ ಅರಿತುಕೊಂಡರು, ಏಕೆಂದರೆ ಇದು ಉತ್ಪಾದನೆಯ ವೆಚ್ಚ ಇಳಿಕೆ ಮಾಡುವುದಲ್ಲದೇ, ಉತ್ಪನ್ನಗಳ ಮೇಲೆ ಯಾವುದೇ ಆಮದು ಸುಂಕಗಳು ಮತ್ತು ಇತರ ಅಂತರರಾಷ್ಟ್ರೀಯ ತೆರಿಗೆಗಳಿಲ್ಲದಿರುವುದರಿಂದ ಹೆಚ್ಚಿನ ಲಾಭ ಒದಗಿಸುತ್ತದೆ.
ಇದರ ಗುಣಮಟ್ಟ ಪರೀಕ್ಷಿಸಿದ ಪತಂಜಲಿ ತಜ್ಞರು ಕೂಡಲೇ ಲೋಳೆಸರಕ್ಕೆ ಬೇಡಿಕೆ ಇಟ್ಟಿರು. ಜೆಲ್‌ಗಳು ಮತ್ತು ಸೋಪ್‌ಗಳಂತಹ ವಿವಿಧ ಅಲೋವೆರಾ-ಆಧಾರಿತ-ಉತ್ಪನ್ನಗಳಿಗಾಗಿ ಹರೀಶ್ ಧನ್‌ದೇವ್ ಅವರು ಪತಂಜಲಿಗೆ ಅಲೋವೆರಾದ ಅಧಿಕೃತ ಪೂರೈಕೆದಾರರಾದರು. ಪತಂಜಲಿಯೊಂದಿಗಿನ ಒಪ್ಪಂದವು ಹರೀಶ್ ಅವರ ಸ್ಟಾರ್ಟ್‌ಅಪ್ ಅನ್ನು ಆರ್ಥಿಕವಾಗಿ ಮೇಲಕ್ಕೇರಿಸಿತು. ಮಾತ್ರವಲ್ಲದೇ ಅವರ ಕಂಪನಿಯು ಮಿಲಿಯನ್ ಡಾಲರ್ ಕಾರ್ಪೊರೇಶನ್ ಆಯಿತು.
ಕಳೆದ ತ್ರೈಮಾಸಿಕದಲ್ಲಿ, ಹರೀಶ್ ಅವರ ಸಂಸ್ಥೆಯು 125-150 ಟನ್‌ಗಳಷ್ಟುಳಷ್ಟು ಸಂಸ್ಕರಿಸಿದ ಅಲೋವೆರಾವನ್ನು ಉತ್ತರಾಖಂಡದ ಪತಂಜಲಿ ಕಾರ್ಖಾನೆಗೆ ನೀಡಿದೆ. ಪ್ರಸ್ತುತ, ಹರೀಶ್ ಧನ್‌ದೇವ್ ಅವರು ಧನ್‌ದೇವ್ ಗ್ಲೋಬಲ್ ಗ್ರೂಪ್‌ನ ಮುಖ್ಯಸ್ಥರಾಗಿದ್ದಾರೆ. ಇವರ ಸಂಸ್ಥೆ ಪ್ರಪಂಚದ ಮೂಲೆ ಮೂಲೆಗೆ ಅಲೋವೆರಾವನ್ನು ರಫ್ತು ಮಾಡುತ್ತಿದೆ. ಧನ್‌ದೇವ್ ಈಗ 2 ರಿಂದ 3 ಕೋಟಿ ರೂಪಾಯಿ ವಾರ್ಷಿಕ ವಹಿವಾಟು ಹೊಂದಿದ್ದು ಬಿಲಿಯನೇರ್ ರೈತರಾಗಿದ್ದಾರೆ.


Click it and Unblock the Notifications