ಬದ್ಧತೆ ಹಾಗೂ ಕಠಿಣ ಪರಿಶ್ರಮವು ತಮ್ಮ ಖಾಸಗಿ ಬದುಕಿನ ಸಮಸ್ಯೆಯೊಂದು ಯಶಸ್ವಿ ಉದ್ಯಮ ಸ್ಥಾಪಿಸುವತ್ತ ದಾರಿ ತೋರಿಸಿದ ಕಥೆಯಿದು. ಐಐಟಿ ಕಾನ್ಪುರದ ಮೆಕ್ಯಾನಿಲ್ ಎಂಜಿನಿಯರ್ ಆಗಿರುವ ಮಹೇಶ್ ಗುಪ್ತಾ ಈ ಸಾಧನೆಯ ಶಿಖರವನ್ನು ಏರಿದ ಉದ್ಯಮಿ. ತಮ್ಮ ಮಕ್ಕಳು ಕಲುಷಿತ ನೀರಿನ ಸಮಸ್ಯೆಯಿಂದ ಬಳಲುತ್ತಿದ್ದರು. ಇದು ಮಹೇಶ್ ಅವರನ್ನು ವಾಟರ್ ಪೂರಿಫೈಯರ್ ಅಭಿವೃದ್ಧಿಪಡಿಸುವತ್ತ ಪ್ರೇರೆಪಿಸಿದೆ.
ಸರ್ಕಾರಿ ಉದ್ಯೋಗದಲ್ಲಿದ್ದ ಮಹೇಶ್ ಅವರು ಕೈಯಲ್ಲಿ ಕೇವಲ 20 ಸಾವಿರ ರೂಪಾಯಿ ಹಿಡಿದುಕೊಂಡು ತಮ್ಮ ಕನಸನ್ನು ನನಸು ಮಾಡಲು ಹೊರಟಿದ್ದರು. ಆರಂಭದಲ್ಲಿ ಇದಕ್ಕೆ ಸಾಕಷ್ಟು ಸವಾಲುಗಳು ಎದುರಾಗಿದ್ದವು. ಆದರೆ, ಛಲ ಬಿಡದ ಮಹೇಶ್ ಆರು ತಿಂಗಳ ತಮ್ಮ ಸತತ ಪ್ರಯತ್ನದ ಫಲವಾಗಿ ಈ ದಿಕ್ಕಿನಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ.

ಆ ಮೂಲಕ ಅವರು ಆರ್‌ಓ ತಂತ್ರಜ್ಞಾನವನ್ನು ಬಳಸಿಕೊಂಡು ಕಲುಷಿತ ನೀರಿನಲ್ಲಿನ ಕಶ್ಮಲವನ್ನು ಹೋಗಲಾಡಿಸುವ ವ್ಯವಸ್ಥೆ ರೂಪಿಸುವಲ್ಲಿ ಯಶಸ್ಸು ಕಂಡರು. ಇದರ ಪರಿಣಾಮ, ಕೆಂಟ್ ಆರ್‌ಓವನ್ನು ಹುಟ್ಟುಹಾಕಿದರು. ಆದರೆ, ಈ ತಂತ್ರಜ್ಞಾನವನ್ನು ಕಂಡುಹಿಡಿಯುವುದರೊಂದಿಗೆ ಅವರ ಈ ಹೋರಾಟ ಕೊನೆಗೊಂಡಿರಲಿಲ್ಲ.
ಬದಲಾಗಿ, ಅದನ್ನು ಗ್ರಾಹಕರಿಗೆ ತಲುಪಿಸುವುದು ಕೂಡ ದೊಡ್ಡ ಸವಾಲಾಗಿತ್ತು. 1999 ರಲ್ಲಿ ಕೆಂಟ್ ಆರ್‌ಓ ಮಾರುಕಟ್ಟೆಯಲ್ಲಿ ಗ್ರಾಹಕರ ಕೈಗೆಟಕುವ ದರದಲ್ಲಿ ತನ್ನ ಛಾಪು ಮೂಡಿಸಲಾರಂಭಿಸಿತ್ತು. ಮಹೇಶ್ ಅವರು ತಮ್ಮ ಈ ಬ್ರಾಂಡ್‌ನ ವಿಶ್ವಾಸಾರ್ಹತೆ ಹಾಗೂ ಗುಣಮಟ್ಟವನ್ನು ಮನವರಿಕೆ ಮಾಡುವುದಕ್ಕೆ ನಟಿ ಹೇಮಾಮಾಲಿನಿ ಅವರನ್ನು ಕೆಂಟ್ ರಾಯಭಾರಿಯನ್ನಾಗಿ ಪರಿಚಯಿಸಿದರು.
ಮಾರುಕಟ್ಟೆಯಲ್ಲಿನ ಪ್ರಬಲ ಪೈಪೋಟಿ ನಡುವೆಯೂ ಬೆಲೆ ಹಾಗೂ ಗುಣಮಟ್ಟದಿಂದಾಗಿ ಕೆಂಟ್ ಆರ್‌ಓ ಗ್ರಾಹಕರ ನಂಬಿಕೆಗೆ ಪಾತ್ರವಾಯಿತು. ಆರಂಭದಲ್ಲಿ ಸಣ್ಣ ಪ್ರಮಾಣದಲ್ಲಿದ್ದ ಈ ಉದ್ಯಮವು ನಿಧಾನಕ್ಕೆ ಹಲವು ಉತ್ಪನ್ನಗಳನ್ನು ತಯಾರಿಸುವ ಕಂಪನಿಯಾಗಿ ಬೆಳೆಯಿತು. ಪ್ರಸ್ತುತ ಕೆಂಟ್ ಆರ್‌ಓ ಸುಮಾರು 1100 ಕೋಟಿ ರೂಪಾಯಿ ಮೌಲ್ಯದ ವಹಿವಾಟು ನಡೆಸುತ್ತಿದೆ.
ಮಹೇಶ್ ಗುಪ್ತಾ ಅವರ ಈ ಯಶೋಗಾಥೆಯು ವ್ಯಾಪಾರ-ಉದ್ಯಮ ಕ್ಷೇತ್ರದಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿರುವವರಿಗೆ ಸ್ಫೂರ್ತಿ ನೀಡುವಂತದ್ದು. ಮಹೇಶ್ ಅವರ ಈ ಹೋರಾಟ ಹಾಗೂ ಅನ್ವೇಷಣೆಯು ಶುದ್ಧ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಪೂರಿಫೈಯರ್ ಉದ್ಯಮವನ್ನು ಮಾತ್ರ ಬೆಳೆಯುವಂತೆ ಮಾಡಿಲ್ಲ. ಜತೆಗೆ ನಾವೋದ್ಯಮವನ್ನು ಪ್ರೇರೇಪಿಸುವುದಕ್ಕೂ ಕಾರಣವಾಯಿತು.


Click it and Unblock the Notifications