ಈ ಹಿಂದೆ ನೀವು ಅನೇಕ ಲೇಖನಗಳಲ್ಲಿ ಹಲವು ಐಐಟಿ, ಐಐಎಂ ಪದವೀಧರರು ಸ್ವಂತ ಕಂಪನಿಗಳನ್ನು ಪ್ರಾರಂಭಿಸಲು ತಮ್ಮ ಉತ್ತಮ ವೇತನದ ಕೆಲಸ ತೊರೆದ ಸ್ಟೋರಿಗಳನ್ನು ಓದಿರಬಹುದು. ಇವರು ಸ್ವಪ್ರಯತ್ನದಿಂದ ಸಾಕಷ್ಟು ಶ್ರಮ ಹಾಕಿ ಕಂಪನಿಯನ್ನು ಯಶಸ್ವಿನ ಕಡೆಗೆ ಕೊಂಡೊಯ್ಯುತ್ತಾರೆ.
ಇಂತಹ ಕೆಲವು ಸ್ಟಾರ್ಟ್‌ಅಪ್‌ಗಳಿಗೆ ಭಾರತದ ಪ್ರಮುಖ ಉದ್ಯಮಿಗಳಾದ ರತನ್ ಟಾಟಾ, ರಿತೇಶ್ ಅಗರ್ವಾಲ್ ಹೀಗೆ ಖ್ಯಾತ ಶ್ರಿಮಂತ ಉದ್ಯಮಿಗಳು ಫಂಡಿಂಗ್ ಮಾಡಿದ್ದಾರೆ. ಇದೇ ರೀತಿ ತಮ್ಮದೇ ಕಂಪನಿಯೊಂದರ ಸಹ-ಸ್ಥಾಪನೆಗಾಗಿ ತನ್ನ ಕಾರ್ಪೊರೇಟ್ ಕೆಲಸವನ್ನು ತೊರೆದ ಅಂತಹ ವ್ಯಕ್ತಿಗಳಲ್ಲಿ ವರುಣ್ ಖೈತಾನ್ ಕೂಡಾ ಒಬ್ಬರಾಗಿದ್ದಾರೆ.

ಅವರು, ಅಭಿರಾಜ್ ಭಾಲ್ ಮತ್ತು ರಾಘವ್ ಚಂದ್ರ ಅವರೊಂದಿಗೆ 2014 ರ ಸೆಪ್ಟೆಂಬರ್ ನಲ್ಲಿ ಅರ್ಬನ್ ಕಂಪನಿಯನ್ನು (ಹಿಂದೆ ಅರ್ಬನ್‌ಕ್ಲ್ಯಾಪ್) ಸಹ-ಸ್ಥಾಪಿಸಿದರು. ಖೈತಾನ್ ಅವರು ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಯಾಗಿದ್ದು (ಸಿಒಒ) ಅವರು ಕಾರ್ಯಾಚರಣೆಗಳು ಮತ್ತು ಸೇವಾ ಪೂರೈಕೆದಾರರ ಆನ್‌ಬೋರ್ಡಿಂಗ್‌ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ.
ವರುಣ್ ಖೈತಾನ್ ಅವರು 2009 ರಲ್ಲಿ ಐಐಟಿ ಕಾನ್ಪುರದಿಂದ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ತಮ್ಮ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ತಮ್ಮದೇ ಪಾಲುದಾರಿಕೆಯಲ್ಲಿ ಯಶಸ್ವಿಯಾಗಿ ಅರ್ಬನ್ ಕಂಪನಿ ಆರಂಭಿಸುವ ಮೊದಲು ಅವರು, ಕ್ಯಾಲಿಫೋರ್ನಿಯಾದ ಕ್ವಾಲ್ಕಾಮ್ ಆರ್‌ಎನ್‌ಡಿಯಲ್ಲಿ ಕೆಲಸ ಮಾಡಿದ್ದರು. ಬಳಿಕ ನ್ಯೂಯಾರ್ಕ್ ಮತ್ತು ಇಸ್ತಾನ್‌ಬುಲ್ ಕಚೇರಿಗಳಲ್ಲಿ ದಿ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್‌ಗೆ ಸಲಹೆಗಾರರಾಗಿದ್ದರು.
ಅರ್ಬನ್ ಕಂಪನಿ ರತನ್ ಟಾಟಾ ಅವರು ಬೆಂಬಲಿಸಿದ್ದು, 2015 ರ ಡಿಸೆಂಬರ್‌ನಲ್ಲಿ ಅವರಿಂದ ಬಹಿರಂಗಪಡಿಸದ ನಿಧಿ ಸಂಗ್ರಹಿಸಿದೆ. ಅದರ ಇತರ ಹೂಡಿಕೆದಾರರಲ್ಲಿ ಓಯೋ ಸಂಸ್ಥಾಪಕ ರಿತೇಶ್ ಅಗರ್ವಾಲ್ ಮತ್ತು ಝೊಮಾಟೊ ಸಿಇಒ ದೀಪಿಂದರ್ ಗೋಯಲ್ ಕೂಡಾ ಒಳಗೊಂಡಿದ್ದಾರೆ.
ಅರ್ಬನ್ ಕಂಪನಿಯು ಗುರ್ಗಾಂವ್ ಮೂಲದ ಟೆಕ್ನಾಲಜಿ ಬೇಸ್ ಪ್ಲ್ಯಾ ಟ್‌ಪಾರ್ಮ್ ಆಗಿದ್ದು, ಮನೆಗೆ ಸಂಬಂಧಿತ ವಿವಿಧ ಸೇವೆಗಳನ್ನು ನೀಡುತ್ತದೆ. ಅಂದರೆ ತನ್ನ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನ ಮೂಲಕ ಬ್ಯೂಟಿ ಮತ್ತು ಸ್ಪಾ ಅಟ್ ಹೋಮ್, ಕಾರ್ಪೆಂಟ್ರಿ, ಪ್ಲಂಬಿಂಗ್, ಕ್ಲೀನಿಂಗ್, ಪೇಂಟಿಂಗ್, ಅಪ್ಲೈಯನ್ಸ್ ರಿಪೇರಿ ಮುಂತಾದ ಸೇವೆಗಳನ್ನು ಒದಗಿಸುತ್ತದೆ.
ಕಂಪನಿಯ ವೆಬ್‌ಸೈಟ್‌ನಲ್ಲಿ ಪ್ರಕಟವಾದ ವಾರ್ಷಿಕ ವರದಿಯ ಪ್ರಕಾರ, ಹಣಕಾಸು ವರ್ಷ 2023 ರ ಅವಧಿಯಲ್ಲಿ ಕಂಪನಿಯ ಆದಾಯದಲ್ಲಿ ಶೇಕಡ 45.4 ರಷ್ಟು ಹೆಚ್ಚಳವಾಗಿದ್ದು, 637 ಕೋಟಿ ರೂಪಾಯಿ ಆಗಿದೆ.


Click it and Unblock the Notifications