ಮುಂಬೈ ಮೂಲದ ಅನೀಶ್ ಕಪೂರ್ ಅವರು ಭಾರತ ಟಾಪ್ ಕಲಾವಿದರ ಪಟ್ಟಿಯಲ್ಲಿದ್ದಾರೆ. 2019ರ ಹುರುನ್ ಪಟ್ಟಿಯಲ್ಲಿ ಅನೀಶ್ ಅವರು ಅತಿಹೆಚ್ಚು ಹಣ ಸಂಪಾದನೆಯಲ್ಲಿ ಮುಂಚೂಣಿಯಲ್ಲಿದ್ದಾರೆ. ಕಪೂರ್ ಅವರ ಕಲಾಕೃತಿಗಳ ಹರಾಜಿನಿಂದ 257 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ಮಾಡುತ್ತಿದ್ದಾರೆ.
ಇತ್ತೀಚಿನ ಅಂದರೆ 2022ರ ಹುರುನ್ ಆರ್ಟ್ ಲಿಸ್ಟ್ ಪ್ರಕಾರ, ಕಪೂರ್ ಅವರ ವರ್ಷದ ವಹಿವಾಟು 24.67 ಕೋಟಿ ರೂಪಾಯಿಗಳಾಗಿದ್ದು, ಅತ್ಯಂತ ದುಬಾರಿ ಕಲಾಕೃತಿ ಬೆಲೆ 5.79 ಕೋಟಿ ರೂಪಾಯಿ ಆಗಿದೆ. 2021ರಲ್ಲಿ ಅದು 20.6 ಕೋಟಿ ರೂಪಾಯಿ ಆಗಿದ್ದು, ಒಂದು ಕಲಾಕೃತಿ ಮೌಲ್ಯ 4.5 ಕೋಟಿ ರೂಪಾಯಿ ಆಗಿತ್ತು.

ಕಪೂರ್ ಅವರು 2019ರಲ್ಲಿ ಕಲಾಕೃತಿಗಳ ಮಾರಾಟದಿಂದ 44.39 ಕೋಟಿ ರೂಪಾಯಿ ಸಂಪಾದಿಸಿದ್ದಾರೆ. ಜತೆಗೆ ಒಂದು ಕಲಾಕೃತಿ 6.14 ಕೋಟಿ ರೂಪಾಯಿಗೆ ಮಾರಾಟವಾಗಿದೆ. 2018 ಕಪೂರ್ ಪಾಲಿಗೆ ಅತ್ಯಂತ ಸಮೃದ್ಧ ವರ್ಷವಾಗಿದ್ದು, ಅವರ ವಹಿವಾಟು ಆ ವರ್ಷ 168.25 ಕೋಟಿ ರೂಪಾಯಿಗಳಾಗಿದ್ದು, ಅತ್ಯಂತ ದುಬಾರಿ ಕಲಾಕೃತಿಯು 9.31 ಕೋಟಿ ರೂಪಾಯಿಗೆ ಸೇಲ್ ಆಗಿತ್ತು.
ಕಪೂರ್ ಅವರು ಯಾರು?
ಅನೀಶ್ ಕಪೂರ್ ಅವರ ತಂದೆ ಭಾರತೀಯರಾಗಿದ್ದು, ತಾಯಿ ಇರಾಕ್‌ನವರು. ಅನೀಶ್ ಅವರ ತಂದೆಯು ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ಕಪೂರ್ ಅವರು ಡೆಹ್ರಾಡೂನ್‌ನ ಪ್ರತಿಷ್ಠಿತ ಡೂನ್ ಸ್ಕೂಲ್‌ನಿಂದ ತಮ್ಮ ಶಾಲಾ ಶಿಕ್ಷಣವನ್ನು ಪಡೆದುಕೊಂಡಿದ್ದರು. ಕಪೂರ್ ಅವರು ಕಲಾವಿದರಾಗಿ ಗುರುತಿಸಿಕೊಳ್ಳುವುದಕ್ಕೂ ಮೊದಲು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಧ್ಯಯನ ಮಾಡಲು ಇಸ್ರೇಲ್‌ಗೆ ತೆರಳಿದ್ದರು.
ಬಳಿಕ ಅವರು ಯುಕೆಗೆ ತೆರಳಿದ್ದರು. ಅಲ್ಲಿ ಅವರು ತಮ್ಮ ಕರಕುಶಲತೆಯನ್ನು ಕಲಿತುಕೊಂಡು ಅಂತಿಮವಾಗಿ ಬಿಲಿಯನೇರ್ ಲಕ್ಷ್ಮಿ ಮಿತ್ತಲ್ ಫಂಡ್‌ನಡಿ ಸ್ಥಾಪನೆಯಾದ ಆರ್ಸೆಲರ್ ಮಿತ್ತಲ್ ಆರ್ಬಿಟ್ನಲ್ಲಿ ಕೆಲವೊಂದು ಪರಿಕಲ್ಪನೆ ಹಾಗೂ ಕಲಾಕೃತಿಗಳನ್ನು ಅಳವಡಿಸುವ ಮೂಲಕ ಜನಪ್ರಿಯ ಕಲಾವಿದರಾಗಿ ಗುರುತಿಸಿಕೊಂಡರು.
ಕಪೂರ್ ಅವರು 1991ರಲ್ಲಿ ಟರ್ನರ್ ಪ್ರಶಸ್ತಿ ಹಾಗೂ 2012ರಲ್ಲಿ ಭಾರತೀಯ ನಾಗರಿಕ ಗೌರವವಾದ ಪದ್ಮಭೂಷಣವನ್ನು ಪಡೆದುಕೊಂಡರು. 2014 ರಲ್ಲಿ ನೈಟ್‌ಹುಡ್‌ನಂಥ ಪ್ರತಿಷ್ಟಿತ ಪ್ರಶಸ್ತಿ ಪಡೆದ ಕಲಾವಿದರಾಗಿದ್ದಾರೆ. ಅವರು ಜರ್ಮನ್ ಮೂಲದ ಇತಿಹಾಸಕಾರ ಸುಸಾನೆ ಸ್ಪಿಕೇಲ್ ಅವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳು ಇದ್ದಾರೆ. ಕಪೂರ್ ಲಂಡನ್‌ನಲ್ಲಿ ಸುಮಾರು $26 ಮಿಲಿಯನ್ ಮೌಲ್ಯದ 14,5000 ಚದರ ಅಡಿಯ ದೊಡ್ಡ ಬಂಗ್ಲೆಯಲ್ಲಿ ವಾಸಿಸುತ್ತಿದ್ದಾರೆ.


Click it and Unblock the Notifications