ರಾಜ್ಯಸಭಾ ಸದಸ್ಯ ಬಿ. ಪಾರ್ಥಸಾರಥಿ ರೆಡ್ಡಿ, ಕಳೆದ ವರ್ಷ ದೇಶದ ಅತ್ಯಂತ ಶ್ರೀಮಂತ ಸಂಸತ್ ಸದಸ್ಯ (MP) ಆಗಿದ್ದರು.ಅತ್ಯಧಿಕ ಆಸ್ತಿ ಮೌಲ್ಯ ಹೊಂದಿರುವ ರೆಡ್ಡಿ ಅವರು ತೆಲಂಗಾಣದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಪಕ್ಷದ ಸದಸ್ಯರಾಗಿದ್ದಾರೆ. ಹೆಟೆರೊ ಗ್ರೂಪ್ ಆಫ್ ಕಂಪನೀಸ್‌ನ ಅಧ್ಯಕ್ಷ ಬಿ ಪಾರ್ಥಸಾರಥಿ ರೆಡ್ಡಿ ಅವರ ಹೆಚ್ಚಿನ ಸಂಪತ್ತನ್ನು ಅವರು ಫಾರ್ಮಾ ಸಂಸ್ಥೆಯಲ್ಲಿ ಹೊಂದಿರುವ ಷೇರುಗಳಿಂದ ಪಡೆಯಲಾಗಿದೆ.
1993 ರಲ್ಲಿ ಈ ಕಂಪನಿ ಸ್ಥಾಪಿಸಲಾಗಿದ್ದು, ಇದು ಕಳೆದ ಮೂರು ದಶಕಗಳಲ್ಲಿ ಫಾರ್ಮಾ ವಿಭಾಗದಲ್ಲಿ ಮುಂಚೂಣಿಯಲ್ಲಿದೆ. ರೆಡ್ಡಿ ಅವರ ಶಿಕ್ಷಣ ಅರ್ಹತೆಗಳನ್ನು ಗಮಸುವುದಾದರೆ ಹೈದರಾಬಾದ್‌ನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಸಿಂಥೆಟಿಕ್ ಆರ್ಗ್ಯಾನಿಕ್ ಕೆಮಿಸ್ಟ್ರಿಯಲ್ಲಿ ಪಿಎಚ್‌ಡಿ ಪಡೆದಿದ್ದು, ಆರ್ಗ್ಯಾನಿಕ್ ಕೆಮಿಸ್ಟ್ರಿಯಲ್ಲಿ ಎಂಎಸ್ಸಿ ಪದವಿ ಮಾಡಿದ್ದಾರೆ.

ಸಿಂಥೆಟಿಕ್ ಕೆಮಿಸ್ಟ್ರಿ ಬಗ್ಗೆ ಅವರು ಪಡೆದ ಅನುಭವ ಹೆಟೆರೊವನ್ನು ಅಭಿವೃದ್ಧಿಪಡಿಸಲು ಮತ್ತು ಸಂಶೋಧನೆ, ಸಾಮರ್ಥ್ಯಗಳನ್ನು ಹೆಚ್ಚಿಸಲು ಸಹಾಯ ಮಾಡಿತು ಜೊತೆಗೆ ಜಾಗತಿಕವಾಗಿ ಟಾಪ್ ಜೆನೆರಿಕ್ API ಸಂಸ್ಥೆಯನ್ನಾಗಿ ಮಾಡಿತು. ಈ ಕಂಪನಿಯು ಆಂಟಿ-ರೆಟ್ರೊವೈರಲ್ ಔಷಧಿಗಳಲ್ಲಿಯೂ ಜಾಗತಿಕವಾಗಿ ಮುಂಚೂಣಿಯಲ್ಲಿದೆ.
ರೆಡ್ಡಿ ಅವರು ರಾಜ್ಯಸಭೆಗೆ ನಾಮನಿರ್ದೇಶನವನ್ನು ಸಲ್ಲಿಸುವಾಗ 3900 ಕೋಟಿ ರೂಪಾಯಿಗೂ ಹೆಚ್ಚು ವೈಯಕ್ತಿಕ ಆಸ್ತಿಯನ್ನು ಘೋಷಿಸಿದರು. ಅವರ ಕುಟುಂಬದೊಂದಿಗೆ ಸೇರಿ 5,300 ಕೋಟಿ ರೂಪಾಯಿ ಆಸ್ತಿ ಘೋಷಿಸಿದ್ದಾರೆ.ಅವರು ಆಸ್ತಿ ಘೋಷಿಸಿಕೊಂಡಂತೆ 3,858 ಕೋಟಿ ರೂಪಾಯಿ ಮೌಲ್ಯದ ಚರ ಆಸ್ತಿಯಲ್ಲಿ, ಸುಮಾರು 3,407 ಕೋಟಿ ರೂಪಾಯಿ ಷೇರುಗಳದ್ದಾಗಿದೆ. 1,249 ಕೋಟಿ ರೂಪಾಯಿ ಸ್ಥಿರ ಆಸ್ತಿಯಲ್ಲಿ, 1,140 ಕೋಟಿ ರೂಪಾಯಿ ಪತ್ನಿಯದ್ದಾಗಿದ್ದರೆ, 105 ಕೋಟಿ ರೂಪಾಯಿ ಹಿಂದೂ ಅವಿಭಜಿತ ಕುಟುಂಬದಡಿ ಇದೆ.
ಹುರುನ್ ಇಂಡಿಯಾ ರಿಚ್ ಲಿಸ್ಟ್ 2022 ರ ಪ್ರಕಾರ, ಹೈದರಾಬಾದ್ ಮೂಲದ ಬಿ ಪಾರ್ಥ ಸಾರಧಿ ರೆಡ್ಡಿ ಮತ್ತು ಕುಟುಂಬವು ಫಾರ್ಮಾ ಉದ್ಯಮಿಗಳ ಪಟ್ಟಿಯಲ್ಲಿ 4 ನೇ ಶ್ರೀಮಂತರಾಗಿದ್ದಾರೆ. ಅವರ ಒಟ್ಟು ಸಂಪತ್ತು,ಕಳೆದ ವರ್ಷದಲ್ಲಿ 50 ಪ್ರತಿಶತದಷ್ಟು ಹೆಚ್ಚಳದೊಂದಿಗೆ 39,200 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ, ಅವರ ಬಹುತೇಕ ಆಸ್ತಿಗಳು ಷೇರುಗಳು ಮತ್ತು ಹೆಟೆರೋ ಸಮೂಹದ ಹೂಡಿಕೆಯಲ್ಲಿದೆ.


Click it and Unblock the Notifications