ನಾವು ಹಣ ಸಂಪಾದನೆ ಅಥವಾ ಉಳಿತಾಯ ಎಂದಾಗ ಯಾವ ಕೆಲಸದಿಂದ ಅಧಿಕವಾಗಿ ಲಭ್ಯವಾಗುತ್ತದೆ ಎಂದು ನೋಡುತ್ತೇವೆ. ನಾವು ತಿಂಗಳು ಪೂರ್ತಿ ಕೆಲಸ ಮಾಡಿದರೂ ಕೂಡಾ ನಮಗೆ ಬರೋಬ್ಬರಿ ಎಂದರೆ 20-30 ಸಾವಿರ ರೂಪಾಯಿ ಸಂಪಾದನೆ ಮಾಡಬಹುದು. ಸಿಇಒಗಳಾದರೆ ಕೋಟಿ ಕೋಟಿ ರೂಪಾಯಿ ಸಂಪಾದನೆ ಮಾಡಬಹುದಾಗಿದೆ.
ಆದರೆ ಇಲ್ಲೊಬ್ಬ ಭಾರತೀಯ ಬೆಡ್‌ರೂಮ್‌ನಲ್ಲೇ ಕೂತು ಒಂದಲ್ಲ ಎರಡಲ್ಲ ಬರೋಬ್ಬರಿ 300 ಕೋಟಿ ರೂಪಾಯಿ ಗಳಿಸಿದ್ದಾರೆ. ಇಷ್ಟು ಹಣವನ್ನು ಗಳಿಸಿದರೂ ಕೂಡಾ ಕೊನೆಗೆ ಈಗ ಜೈಲು ಪಾಲಾಗಿದ್ದಾರೆ. ಹಾಗಾದರೆ ನಡೆದಿದ್ದೇನು, ಹಣ ಹೇಗೆ ಗಳಿಸಿದ್ದು, ಜೈಲು ಪಾಲಾಗಿದ್ದು ಹೇಗೆ ಎಂಬ ವಿವರ ಇಲ್ಲಿದೆ ಮುಂದೆ ಓದಿ....

ನಡೆದಿದ್ದೇನು, ಹೇಗೆ ಸಂಪಾದನೆ?
2010 ರಲ್ಲಿ ಮನೆ ಮಾತಾದ ಫ್ಲಾಶ್ ಕುಸಿತವು ಯುಎಸ್ ಸ್ಟಾಕ್ ಮಾರುಕಟ್ಟೆಯಲ್ಲಿ 1 ಟ್ರಿಲಿಯನ್ ಡಾಲರ್ ಅನ್ನು ಕೇವಲ 36 ನಿಮಿಷಗಳಲ್ಲಿ ನಾಶ ಮಾಡಿದೆ. ಈ ಎಲ್ಲ ಅನಾಹುತದ ಹಿಂದೆ ಪ್ರಮುಖವಾಗಿ ಭಾರತೀಯ ಮೂಲದ ವ್ಯಕ್ತಿ ಇದ್ದಾರೆ. 'ಮ್ಯಾಥ್ಸ್ ವಿಜ್' ಎಂದು ಕರೆಯಲಾಗುವ ನವಿಂದರ್ ಸಿಂಗ್ ಸಾರಾವ್ ಈ ಆರೋಪಿಯಾಗಿದ್ದಾರೆ.
ನವಿಂದರ್ ಸಿಂಗ್ ಸಾರಾವ್ ಮಾರುಕಟ್ಟೆಯಲ್ಲಿ ಮ್ಯಾನಿಪುಲೇಷನ್ ಮಾಡಿದ್ದಾರೆ ಎಂಬ ಆರೋಪವಿದೆ. ಮಾರುಕಟ್ಟೆಯು ಕುಸಿತದಿಂದ ಚೇತರಿಸಿಕೊಂಡಂತೆ ಅದರ ಲಾಭವನ್ನು ಪಡೆದುಕೊಂಡಿದ್ದಾರೆ ಎಂದು ಆರೋಪ ಮಾಡಲಾಗಿದೆ. ಈ ಕುಸಿತಕ್ಕೆ ಪ್ರಮುಖ ಕಾರಣ ನವಿಂದರ್ ಸಿಂಗ್ ಎಂದು ಯುಎಸ್‌ನಲ್ಲಿ ಅಧಿಕಾರಿಗಳು ಹೇಳಿದ್ದಾರೆ.
ಯುಎಸ್ ನಿಯಂತ್ರಕರ ಪ್ರಕಾರ, ಫ್ಲ್ಯಾಶ್ ಕ್ರ್ಯಾಶ್ ಆದ ದಿನದಂದು ನವಿಂದರ್ ಸಿಂಗ್ ಅವರು 879,018 ಡಾಲರ್ ಲಾಭವನ್ನು ಪಡೆದುಕೊಂಡಿದ್ದಾರೆ. ಸಾರಾವ್ ಲಂಡನ್‌ನ ಮನೆಯ ಬೆಡ್‌ರೂಮ್‌ನಲ್ಲೇ ಒಬ್ಬಂಟಿಯಾಗಿರುತ್ತಿದ್ದರು. ಅಲ್ಲಿಂದಲೇ ಈ ಎಲ್ಲ ಕಾರ್ಯವನ್ನು ಮಾಡುತ್ತಿದ್ದರು ಎಂದು ವರದಿಯಾಗಿದೆ.
ಎಕನಾಮಿಕ್ ಟೈಮ್ಸ್ ವರದಿ ಪ್ರಕಾರ 300 ಕೋಟಿ ರೂಪಾಯಿಯನ್ನು ಸಂಪಾದನೆ ಮಾಡಿದ್ದಾರೆ. ವೈರ್ ವಂಚನೆ, ಸರಕುಗಳ ವಂಚನೆ ಮತ್ತು ಮ್ಯಾನಿಪುಲೇಷನ್‌ನ ಆರೋಪವನ್ನು ಯುಎಸ್‌ನಲ್ಲಿ ಸಾರಾವ್ ಈಗ ಹೊಂದಿದ್ದಾರೆ. ನಾಲ್ಕು ವರ್ಷಗಳಲ್ಲಿ ಈ ಭೂಪ ಲಾಭವಾಗಿ 40 ಮಿಲಿಯನ್ ಡಾಲರ್ (26.77 ಮಿಲಿಯನ್ ಪೌಂಡ್) ಗಳಿಸಿದ್ದಾರೆ ಎಂದು ವರದಿಯಾಗಿದೆ.
"ವುಲ್ಫ್ ಆಫ್ ವಾಲ್ ಸ್ಟ್ರೀಟ್" ಎಂದು ಪ್ರಸಿದ್ಧವಾದ ಅಮೇರಿಕನ್ ಆರ್ಥಿಕ ಅಪರಾಧಿ ಜೋರ್ಡಾನ್ ಬೆಲ್ಫೋರ್ಟ್ ಜೊತೆ ಈಗ ಸಾರಾವ್‌ರನ್ನು ಹೋಲಿಕೆ ಮಾಡಲಾಗುತ್ತಿದೆ. "ಹೌಂಡ್ ಆಫ್ ಹೌನ್ಸ್ಲೋ" ಎಂದು ಕರೆಯಲಾಗುತ್ತಿದೆ. ಅತೀ ಬುದ್ದಿವಂತ ಆರೋಪಿ ಎಂದು ವರದಿಯಾಗಿದೆ.
ನವಿಂದರ್ ಸಿಂಗ್ ಸಾರಾವ್ ಆಸ್ಪರ್ಜರ್ಸ್ ಸಿಂಡ್ರೋಮ್ ಎಂಬ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್‌ನಿಂದ ಸಾರಾವ್ ಬಳಲುತ್ತಿದ್ದರು ಎಂದು ಬಿಬಿಸಿ ವರದಿ ಮಾಡಿದೆ. ತಾನು ಗಳಿಸಿದ ಹಣವನ್ನು ಐಷಾರಾಮಿ ಜೀವನವನ್ನು ಆನಂದಿಸುವ ಬದಲಾಗಿ ಈ ಹಣವನ್ನು ವಂಚಕರ ಪಾಲಾಗಿಸಿದ್ದಾರೆ.
ನವಿಂದರ್ ಸಿಂಗ್ ಸಾರಾವ್‌ರನ್ನು 2015 ರಲ್ಲಿ ಲಂಡನ್‌ನಲ್ಲಿ ಬಂಧಿಸಲಾಯಿತು. ಸರಾವ್ ವಿರುದ್ಧ 22 ವಂಚನೆ ಮತ್ತು ಮಾರುಕಟ್ಟೆ ಮ್ಯಾನಿಪುಲೇಷನ್ ಆರೋಪವನ್ನು ಹೊರಿಸಲಾಗಿತ್ತು. ಎಲ್ಲ ಆರೋಪಗಳನ್ನು ಸೇರಿಸಿದರೆ ಒಟ್ಟಾಗಿ ಗರಿಷ್ಠ 380 ವರ್ಷಗಳ ಶಿಕ್ಷೆಯನ್ನು ಸಾರಾವ್ ಹೊಂದಿದ್ದಾರೆ.
ಯುಎಸ್‌ಗೆ ಹಸ್ತಾಂತರ ಮಾಡುವ ಮೊದಲು ಸಾರಾವ್ ಯುಕೆಯಲ್ಲಿ ನಾಲ್ಕು ತಿಂಗಳ ಕಾಲ ಜೈಲಿನಲ್ಲಿದ್ದರು. ಅದಾದ ಬಳಿಕ ಒಂದು ವರ್ಷಗಳ ಕಾಲ ಗೃಹ ಬಂಧನದಲ್ಲಿದ್ದರು.


Click it and Unblock the Notifications