ಎಡೆಲ್ ಗಿವ್ ಹುರುನ್ ಇಂಡಿಯಾ ಲೋಕೋಪಕಾರಿ ಪಟ್ಟಿಯನ್ನು ವರ್ಷಕ್ಕೆ ಒಮ್ಮೆ ಬಿಡುಗಡೆ ಮಾಡಲಾಗುತ್ತದೆ. ಈಗ ಈ ಪಟ್ಟಿಯನ್ನು ನವೆಂಬರ್ 2 ರಂದು ಬಿಡುಗಡೆ ಮಾಡಲಾಗಿದೆ. ಈ ಪಟ್ಟಿಯಲ್ಲಿ ಎಚ್‌ಸಿಎಲ್ ಸಹ-ಸಂಸ್ಥಾಪಕ ಶಿವ ನಾಡರ್ ಮೊದಲ ಸ್ಥಾನದಲ್ಲಿದ್ದಾರೆ. ಅಂದರೆ ಭಾರತದ ಅತ್ಯಂತ ಉದಾರ ವ್ಯಕ್ತಿಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ
ಶಿವ ನಾಡರ್ 29.2 ಬಿಲಿಯನ್ ಡಾಲರ್ ನಿವ್ವಳ ಆದಾಯದೊಂದಿಗೆ ಸ್ವಯಂ-ನಿರ್ಮಿತ ಬಿಲಿಯನೇರ್ ಆಗಿದ್ದಾರೆ. ಹಣಕಾಸು ವರ್ಷ 2023 ರಲ್ಲಿ 2,042 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದಾರೆ. ಇದು ಪ್ರತಿ ದಿನ ಸರಿಸುಮಾರು 5.6 ಕೋಟಿ ರೂಪಾಯಿಗಳಷ್ಟು ದೇಣಿಗೆ ನೀಡಿದಂತೆ ಆಗುತ್ತದೆ.

ಅಧಿಕ ದಾನ ಮಾಡಿದ ಬಿಲಿಯನೇರ್‌ಗಳು
ನಂತರದ ಅಥವಾ ಎರಡನೇ ಸ್ಥಾನದಲ್ಲಿ ವಿಪ್ರೋ ಸಂಸ್ಥಾಪಕ ಅಧ್ಯಕ್ಷ ಅಜೀಂ ಪ್ರೇಮ್‌ಜಿಯಿದ್ದು, 1,774 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ವಾರ್ಷಿಕ 376 ಕೋಟಿ ರೂಪಾಯಿ ದೇಣಿಗೆಯನ್ನು ನೀಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಭಾರತದ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ. ಗೌತಮ್ ಅದಾನಿ 5ನೇ ಸ್ಥಾನದಲ್ಲಿದ್ದಾರೆ.
ಗೌತಮ್ ಅದಾನಿ ಈ ವರ್ಷ 285 ಕೋಟಿ ರೂಪಾಯಿ ದಾನ ಮಾಡಿದ್ದು, ಇದು ಕಳೆದ ವರ್ಷದಲ್ಲಿ ಮಾಡಿದ ದಾನಕ್ಕಿಂತ ಶೇಕಡ 50 ರಷ್ಟು ಅಧಿಕವಾಗಿದೆ. ಆದರೆ ಟಾಪ್ 10 ಉದಾರಿಗಳ ಪಟ್ಟಿಯಲ್ಲಿ ರತನ್ ಟಾಟಾ ಈ ವರ್ಷ ಕಾಣಿಸಿಕೊಂಡಿಲ್ಲ.
ಶಿವ ನಾಡರ್ ಬಗ್ಗೆ ತಿಳಿಯಿರಿ
1945 ರಲ್ಲಿ, ಶಿವ ನಾಡರ್ ತಮಿಳುನಾಡಿನ ಮೂಲೈಪೋಜಿಯಲ್ಲಿ ಜನಿಸಿದ್ದು ಮಧ್ಯಮ ವರ್ಗದ ಕುಟುಂಬ ಅವರದ್ದಾಗಿತ್ತು. ಶಾಲೆಯಲ್ಲಿ ಚೆನ್ನಾಗಿ ಓದುತ್ತಿದ್ದ ಅವರು ಕೊಯಮತ್ತೂರಿನ ಪಿಎಸ್‌ಜಿ ಕಾಲೇಜ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು.
ಆದರೆ 21 ವರ್ಷ ವಯಸ್ಸಿನವರೆಗೂ ಇಂಗ್ಲೀಷ್‌ನಲ್ಲಿ ಮಾತನಾಡಲು ತಿಳಿದಿರಲಿಲ್ಲ. ನಾಡರ್ 1967 ರಲ್ಲಿ ಪುಣೆಯಲ್ಲಿ ಕೂಪರ್ ಇಂಜಿನಿಯರಿಂಗ್ ಲಿಮಿಟೆಡ್‌ನಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. 1970 ರಲ್ಲಿ ಅವರು ಎಚ್‌ಸಿಎಲ್ ಟೆಕ್ನಾಲಜೀಸ್ ಅನ್ನು ಸ್ಥಾಪಿಸಿದರು. ಇದು ಸಿಂಗಾಪುರದ ಕಂಪನಿಗೆ ಸೇವೆ ಸಲ್ಲಿಸುವ ಹಾರ್ಡ್‌ವೇರ್ ಕಂಪನಿಯಾಗಿ ಪ್ರಾರಂಭವಾಯಿತು.
ಇದು ಆರಂಭದಲ್ಲಿ ದೆಹಲಿಯ ಗ್ಯಾರೇಜ್ ಒಂದರಲ್ಲಿದ್ದು, 1980 ರ ದಶಕದ ಆರಂಭದಲ್ಲಿ ಕಂಪನಿಯ ಆದಾಯವು 1 ಮಿಲಿಯನ್ ರೂಪಾಯಿ ತಲುಪಿತು. ಇದುವೇ ಶಿವ ನಾಡರ್‌ರ ಮೊದಲ ಯಶಸ್ಸು ಆಗಿದೆ. 1991 ರಲ್ಲಿ ನಾಡಾರ್ ನಿರ್ದೇಶನದ ಅಡಿಯಲ್ಲಿ ಮೂರು ಪ್ರಮುಖ ಆರ್ಥಿಕ ಬದಲಾವಣೆಗಳನ್ನು ಅನುಸರಿಸಿದ ಭಾರತೀಯ ಐಟಿ ಬೆಳವಣಿಗಾಗಿ ಕಂಪನಿ ಹೂಡಿಕೆ ಮಾಡಿತು.
ಶಿವ ನಾಡರ್ ಪತ್ನಿಯ ಹೆಸರು ಕಿರಣ್ ನಾಡಾರ್. ಅವರು ಭಾರತೀಯ ಕಲಾ ಸಂಗ್ರಾಹಕರು ಮತ್ತು ಜನೋಪಕಾರಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಕಿರಣ್ ನಾಡಾರ್ ಅವರು, ಶಿವ ನಾಡರ್ ಫೌಂಡೇಶನ್‌ನ ಟ್ರಸ್ಟಿ ಮತ್ತು ಕಿರಣ್ ನಾಡರ್ ಮ್ಯೂಸಿಯಂ ಆಫ್ ಆರ್ಟ್‌ನ ಸಂಸ್ಥಾಪಕರಾಗಿದ್ದಾರೆ. ಶಿವ ನಾಡಾರ್ ಕುಟುಂಬವು ಶಿವ ನಾಡಾರ್ ಹೆಸರಿನಲ್ಲಿ ಚಾರಿಟಬಲ್ ಫೌಂಡೇಶನ್ ಅನ್ನು ನಡೆಸುತ್ತಿದೆ. ಇದು ಪ್ರಾಥಮಿಕವಾಗಿ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತದೆ.


Click it and Unblock the Notifications