ಸುಮಾರು 157 ವರ್ಷ ಹಳೆಯ ಸಂಸ್ಥೆಯಾಗಿರುವ ಶಪೂರ್ಜಿ ಪಲ್ಲೋಂಜಿ (ಎಸ್‌ಪಿ) ಗ್ರೂಪ್ ಇಂದು ಲೆಂಜಡರಿ ಉದ್ಯಮಿ ಶಪೂರ್ಜಿ ಮಿಸ್ತ್ರಿಯವರ ಮೊಮ್ಮಗನಾಗಿರುವ ಶಪೂರ್ ಮಿಸ್ತ್ರಿ ಅವರ ನೇತೃತ್ವದಲ್ಲಿ ಮುನ್ನಡೆಯುತ್ತಿದೆ. ಮಿಸ್ತ್ರಿ ಕುಟುಂಬವು ಟಾಟಾ ಕುಟುಂಬಕ್ಕೆ ನಿಕಟವಾಗಿದ್ದು ಇಬ್ಬರೂ ಕೆಲವು ವರ್ಷಗಳಿಂದ ಹಲವಾರು ಯೋಜನೆಗಳಲ್ಲಿ ಪಾಲುದಾರರಾಗಿದ್ದಾರೆ.
ಶಪೂರ್ ಅವರು ಸುಪ್ರಸಿದ್ಧ ಮಿಸ್ತ್ರಿ ಕುಟುಂಬದಿಂದ ಬಂದವರು. ಈ ಕುಟುಂಬವೂ ಶಪೂರ್ ತಂದೆ ಪಲ್ಲೋಂಜಿ ಮಿಸ್ತ್ರಿ ಮತ್ತು ಸಹೋದರ ಸೈರಸ್ ಮಿಸ್ತ್ರಿ ಅವರಂತಹ ಹಲವಾರು ಉದ್ಯಮಿಗಳನ್ನು ಹುಟ್ಟುಹಾಕಿದೆ. ಸೈರಸ್ ಮಿಸ್ತ್ರಿ ಅವರು ಟಾಟಾ ಸನ್ಸ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದರು. ಖೇದಕರ ಸಂಗತಿ ಎಂದರೆ ಸೈರಸ್ ಅವರು 2022 ರ ಸೆಪ್ಟೆಂಬರ್‌ನಲ್ಲಿ ನಡೆದ ದುರಂತ ಕಾರು ಅಪಘಾತದಲ್ಲಿ ನಿಧನರಾದರು.
ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್, ಶಪೂರ್ ಮಿಸ್ತ್ರಿ ಅವರನ್ನು ಭಾರತದ ಮೂರನೇ ಶ್ರೀಮಂತ ವ್ಯಕ್ತಿ ಎಂದು ಪಟ್ಟಿ ಮಾಡಿದೆ. ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿರುವ ಮುಕೇಶ್ ಅಂಬಾನಿ ಮತ್ತು ಭಾರತದ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಇವರ ಬಳಿಕ ಶಪೂರ್ ಮಿಸ್ತ್ರಿ ಸಿರಿವಂತ ವ್ಯಕ್ತಿಯಾಗಿದ್ದಾರೆ.
ಶಾಪೂರ್ ಮಿಸ್ತ್ರಿಯವರು ಮುಂಬೈನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದ್ದು ಈ ಗ್ರೂಪ್ ಎಂಜಿನಿಯರಿಂಗ್ ಮತ್ತು ನಿರ್ಮಾಣ, ರಿಯಲ್ ಎಸ್ಟೇಟ್, ಶಿಪ್ಪಿಂಗ್, ಜವಳಿ, ಗೃಹೋಪಯೋಗಿ ವಸ್ತುಗಳು, ಬಯೋಟೆಕ್ನಾಲಜಿ ಇತ್ಯಾದಿ ವೈವಿಧ್ಯಮಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ.
ಗಮನಾರ್ಹವಾದ ಅಂಶವೆಂದರೆ ಟಾಟಾ ಸನ್ಸ್‌ನ ಏಕೈಕ ಅತಿದೊಡ್ಡ ಷೇರುದಾರ ಎಸ್‌ಪಿ ಗ್ರೂಪ್ ಆಗಿದೆ. ಮಿಸ್ತ್ರಿ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ತೀರಾ ಕಡಿಮೆಯಾಗಿದ್ದು, ಅವರ ತಂದೆ ಮತ್ತು ಸಹೋದರ ಸೈರಸ್ ಅವರಿಗೆ ಹೋಲಿಸಿದರೆ ಪ್ರಚಾರ ಮತ್ತು ಪತ್ರಿಕೆಗಳಿಂದ ದೂರವೇ ಉಳಿದಿದ್ದರು ಎನ್ನಬಹುದು.
2012 ರಲ್ಲಿ ಅಂದರೆ ತಮ್ಮ 47 ನೇ ವಯಸ್ಸಿನಲ್ಲಿ, ಶಪೂರ್ ಅವರು ಅಧ್ಯಕ್ಷರಾಗಿ ತಮ್ಮ ತಂದೆಯಿಂದ ಎಸ್‌ಪಿ ಗ್ರೂಪ್‌ನ ಆಡಳಿತವನ್ನು ವಹಿಸಿಕೊಂಡರು. ಅವರು ಪ್ರಸ್ತುತ ಎಂಡಿ ಹುದ್ದೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಎಸ್ ಪಿ ಗ್ರೂಪ್ ಒಳಗೆ ಶಪೂರ್ ಅವರನ್ನು ""ಬಿಗ್ ಪಿಕ್ಚರ್ ಸ್ಟ್ರಾಟಜಿಸ್ಟ್"" ಎಂದು ಕರೆಯುತ್ತಾರೆ.
ಬ್ಲೂಮ್‌ಬರ್ಗ್ ಪ್ರಕಾರ, 58 ಹರೆಯ ಶಪೂರ್ ಮಿಸ್ತ್ರಿ ಪ್ರಸ್ತುತ ಭಾರತದ ಮೂರನೇ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ 47 ನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವರ ನಿವ್ವಳ ಆಸ್ತಿ ಮೌಲ್ಯವು 31.1 ಬಿಲಿಯನ್ ಡಾಲರ್ (258000 ಕೋಟಿ ರೂಪಾಯಿಗಿಂತ ಹೆಚ್ಚು) ಆಗಿದೆ. ಶಪೂರ್ ಮಿಸ್ತ್ರಿ ಈ ವರ್ಷ ತಮ್ಮ ಸಂಪತ್ತಿಗೆ 3.34 ಬಿಲಿಯನ್ ಡಾಲರ್ ಸೇರಿಸಿದ್ದಾರೆ ಎಂದು ಬ್ಲೂಮ್‌ಬರ್ಗ್ ಉಲ್ಲೇಖಿಸಿದೆ.


Click it and Unblock the Notifications
