ಬಹಳಷ್ಟು ಸಂದರ್ಭದಲ್ಲಿ ಉನ್ನತ ಹುದ್ದೆ ಹಾಗೂ ಹೆಚ್ಚಿನ ಸಂಬಳ ಪಡೆಯುತ್ತಿರುವ ವ್ಯಕ್ತಿಗಳು ಕೆಲಸಕ್ಕೆ ವಿದಾಯ ಹೇಳಿ ತಮ್ಮ ಸ್ವಂತ ಕಂಪನಿಗಳನ್ನು ಹುಟ್ಟು ಹಾಕುತ್ತಾರೆ. ಇನ್ನು ಕೆಲವರು ಉದ್ಯೋಗದ ನಡುವೆಯೇ ಉನ್ನತ ವ್ಯಾಸಾಂಗಕ್ಕೆಂದು ವಿದೇಶಕ್ಕೆ ಹೋಗುತ್ತಾರೆ.
ಹೆಚ್ಚಿನ ಅಧ್ಯಯನವನ್ನು ಪೂರ್ಣಗೊಳಿಸಿದ ಬಳಿಕ ವಾಪಾಸ್ ಬಂದು ಸ್ವಂತ ಕಂಪನಿಯನ್ನು ಸ್ಥಾಪಿಸುತ್ತಾರೆ. ಅಂಥವರ ಸಾಲಿನಲ್ಲಿ ರಾಜೀವ್ ಸಮಂತ್ ಕೂಡ ಸೇರಿದ್ದು, ಭಾರತದ ವೈನ್ ಕಿಂಗ್ ಎಂದೇ ಗುರುತಿಸಿಕೊಂಡಿದ್ದಾರೆ. ಅವರು ಸುಲಾ ವೈನ್‌ಯಾರ್ಡ್ಸ್ ಅನ್ನು ಸ್ಥಾಪಿಸಿದ್ದಾರೆ. ಇದು ಭಾರತದ ಪ್ರಮುಖ ವೈನ್ ಕಂಪನಿಯಾಗಿದೆ.

ರಾಜೀವ್ ಸಮಂತ್ ಯಾರು?
ರಾಜೀವ್ ಸಮಂತ್ ಅವರು ಕಂಪನಿಯ ಪ್ರವರ್ತಕರಾಗಿದ್ದು, ಎಂಡಿ ಹಾಗೂ ಸಿಇಒ ಹುದ್ದೆಯಲ್ಲಿಇದ್ದಾರೆ. ಸುಲಾ ಭಾರತದ ಅತಿದೊಡ್ಡ ಹಾಗೂ ಹೆಚ್ಚು ಪ್ರಶಸ್ತಿ ಪಡೆದ ವೈನ್ ಬ್ರ್ಯಾಂಡ್ ಆಗಿ ಬೆಳೆದಿದೆ. ಸುಮಂತ್ 1999ರಲ್ಲಿ ಸುಲಾ ವೈನ್‌ಯಾರ್ಡ್ಸ್ ಅನ್ನು ಸ್ಥಾಪಿಸಿದ್ದರು.
ಇದು ನಾಸಿಕ್‌ನ ಮೊದಲ ವೈನರಿಯಾಗಿದೆ. ಸುಲಾ ಎಂಬ ಹೆಸರು ಅವರ ತಾಯಿಯ ಸುಲಭಾ ಎಂಬ ಹೆಸರಿನಿಂದ ಬಂದಿದೆ. ಈ ಕಂಪನಿಯು ಈಗಿನ ಲೆಕ್ಕಾಚಾರದಂತೆ 3949 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ಬುಧವಾರ ಕಂಪನಿಯ ಷೇರು ಬೆಲೆ ಕೂಡ 469.45 ರೂಪಾಯಿ ಆಗಿತ್ತು.
ಸುಮಂತ್ ಮುಂಬೈನಲ್ಲಿ ಜನಿಸಿದ್ದು, ತಮ್ಮ ಶಾಲಾ ಶಿಕ್ಷಣವನ್ನು ನಗರ ಪ್ರದೇಶದಲ್ಲಿ ಪೂರ್ಣಗೊಳಿಸಿದ್ದರು. ನಂತರ ಅವರು ಅರ್ಥಶಾಸ್ತ್ರದಲ್ಲಿ ಪದವಿ ಪೂರ್ವ ಹಾಗೂ ಎಂಜಿನಿಯರಿಂಗ್ ನಿರ್ವಹಣೆಯಲ್ಲಿ ಸ್ನಾತಕೋತ್ತರ ಪದವಿಗಾಗಿ ಕ್ಯಾಲಿಫೋರ್ನಿಯಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಕ್ಕೆ ತೆರಳಿದ್ದರು.
ಅವರ ಅಧ್ಯಯನದ ನಂತರ ಅವರು 1993ರಲ್ಲಿ ಭಾರತಕ್ಕೆ ವಾಪಾಸ್ ಬರುವ ಮೊದಲು ಅಮೆರಿಕಾದ ಸಿಲಿಕಾನ್ ವ್ಯಾಲಿಯಲ್ಲಿ ಒರಾಕಲ್ ಕಾರ್ಪೊರೇಷನ್‌ಗಾಗಿ ಕೆಲಸ ಮಾಡಿದ್ದರು. ಆರು ವರ್ಷಗಳ ನಂತರ ಅವರು, 1999ರಲ್ಲಿ ಸುಲಾ ವೈನ್‌ಯಾರ್ಡ್ಸ್ ಅನ್ನು ಸ್ಥಾಪಿಸಿದ್ದರು.
ಪರಿಸರವಾದಿಯೂ ಆದ ರಾಜೀವ್
ಅವರ ಈ ನಿರ್ಧಾರವು ನಾಸಿಕ್ ಅನ್ನು ಭಾರತದ ವೈನ್ ಕ್ಯಾಪಿಟಲ್ ಆಗಿ ಪರಿವರ್ತಿಸಿದೆ. ಇಂದು ಕಂಪನಿಯು ಜಾಗತಿಕವಾಗಿ ಭಾರತದ ಪ್ರಮುಖ ವೈನ್ ಉತ್ಪಾದಿಸುವ ಕಂಪನಿಯಾಗಿ ಗುರುತಿಸಿಕೊಂಡಿದೆ.
ಒಬ್ಬ ಉದ್ಯಮಿಯ ಹೊರತಾಗಿ ಸಮಂತ್ ಒಬ್ಬ ಅಪ್ಪಟ ಪರಿಸರವಾದಿಯೂ ಹೌದು.
ತಮ್ಮ ಸುಲಾ ಕಂಪನಿಯಲ್ಲಿ ಉತ್ಪನ್ನಗಳನ್ನು ಪರಿಸರ ಸ್ನೇಹಿಯಾಗಿ ತಯಾರಿಸಲಾಗುತ್ತಿದೆ. ಸಮಂತ್ ಅವರು ಭಾರತದಲ್ಲಿ ಹಲವು ಪ್ರಥಮಗಳಿಗೆ ಕಾರಣಕರ್ತರಾಗಿದ್ದು, 2005ರಲ್ಲಿ ಮೊದಲ ವೈನ್ ಟೇಸ್ಟಿಂಗ್ ರೂಂ, 2007ರಲ್ಲಿ ಮೊದಲ ದ್ರಾಕ್ಷಿತೋಟದ ರೆಸಾರ್ಟ್ ಹಾಗೂ ದೇಶದ ಮೊದಲ ವೈನ್‌ಯಾರ್ಡ್ಸ್ ಸಂಗೀತ ಉತ್ಸವವಾದ ಸುಲಾಫೆಸ್ಟ್ ಅನ್ನು ಆಯೋಜಿಸುವ ಮೂಲಕ ಗಮನಸೆಳೆದಿದ್ದಾರೆ.


Click it and Unblock the Notifications