ಬಹಳಷ್ಟು ಮಂದಿ ಇಂಜಿನಿಯರಿಂಗ್ ಪದವೀಧರರು ವೃತ್ತಿಜೀವನ ಮುನ್ನಡೆಸಲು ಪ್ರತಿಷ್ಟಿತ ಸಂಸ್ಥೆಗಳಲ್ಲಿ ಕೆಲಸ ಮಾಡಲು ಇಚ್ಚಿಸುತ್ತಾರೆ. ಆದರೆ ಸಿವಿಲ್ ಇಂಜಿನಿಯರ್ ಜಯಗುರು ಆಚಾರ್ ಹಿಂದಾರು ಇದಕ್ಕಿಂತಲೂ ಭಿನ್ನವಾಗಿ ಮಾರ್ಗವನ್ನು ಆಯ್ಕೆ ಮಾಡಿಕೊಂಡು ಅದರಲ್ಲಿ ಯಶಸ್ಸು ಸಾಧಿಸಿದ ಯಶೋಗಾಥೆ ಇಲ್ಲಿದೆ.
ಜಯಗುರು ಆಚಾರ್ ಹಿಂದಾರು ಯಾರು?: ಜಯಗುರು ಆಚಾರ್ ಹಿಂದಾರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಹಿಂದಾರು ನಿವಾಸಿಯಾಗಿದ್ದಾರೆ. ಜಯಗುರು ಆಚಾರ್ ಅವರು ಪುತ್ತೂರು ವಿವೇಕಾನಂದ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿಯಲ್ಲಿ ತಮ್ಮ ಸಿವಿಲ್ ಎಂಜಿನಿಯರಿಂಗ್ ಪದವಿಯನ್ನು ಪೂರ್ಣಗೊಳಿಸಿ ಬಳಿಕ ಒಂದು ವರ್ಷ ಖಾಸಗಿ ಕಂಪನಿಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡಿದರು.

22,000 ರೂ. ಸಂಬಳ ಪಡೆಯುತ್ತಿದ್ದ ಅವರು 2019 ರಲ್ಲಿ ಖಾಸಗಿ ಕಂಪನಿ ತೊರೆದು ಕೃಷಿ, ಹೈನುಗಾರಿಕೆಯನ್ನೇ ನಂಬಿಕೊಂಡಿದ್ದ ತಮ್ಮ ಕುಟುಂಬದೊಂದಿಗೆ ಕೈ ಜೋಡಿಸಲು ನಿರ್ಧರಿಸಿದರು. ಕೃಷಿಯಲ್ಲಿ ಉತ್ಪಾದಕತೆಯನ್ನು ಹೆಚ್ಚಿಸಬೇಕೆಂದು ಪಣ ತೊಟ್ಟ ಅವರು ಈ ಬಗ್ಗೆ ತಮ್ಮ ಜ್ಞಾನ ಮತ್ತು ಕೌಶಲ್ಯಗಳನ್ನು ವೃದ್ಧಿಸಿಕೊಂಡು ಇದನ್ನು ಕೃಷಿಗೆ ಧಾರೆ ಎರೆದರು.
ಕಳೆದ ಎರಡು ವರ್ಷಗಳಿಂದ ಪೂರ್ಣ ಪ್ರಮಾಣದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ಜಯಗುರು ಮನೆಯಲ್ಲಿ 130 ಗೋವುಗಳಿವೆ. ದಿನಕ್ಕೆ 750 ಲೀ. ಹಾಲು ಡೇರಿಗೆ ನೀಡುತ್ತಿದ್ದಾರೆ. ಇನ್ನು ಕೃಷಿಗೆ ಸೆಗಣಿ ಬಳಕೆ ಸಾಂಪ್ರದಾಯಿಕ ವಿಧಾನ. ಆದರೆ ಸೆಗಣಿಯನ್ನು ಸಂಸ್ಕರಿಸಿ ಮಾರಾಟ ಮಾಡಿದರೆ ಇನ್ನಷ್ಟು ಲಾಭ ಪಡೆಯಬಹುದು ರೈತರು ಅದನ್ನು ಹೆಚ್ಚು ಸುಲಭವಾಗಿ ಬಳಸಬಹುದು ಎಂದು ಯೋಚನೆ ಬಂದು ಈ ಬಗ್ಗೆ ಸಂಶೋಧನೆ ಮಾಡಲಾರಂಬಿಸಿದರು.
ಅಂತಿಮವಾಗಿ ಸಗಣಿ ಒಣಗಿಸುವ ಯಂತ್ರ ಪಂಜಾಬ್ ನಿಂದ ಖರೀದಿಸಿದರು. ಈಗ ತಮ್ಮ ತೋಟಕ್ಕೆ ಬಳಸಿ ಉಳಿದ ಸೆಗಣಿ ಹುಡಿ ಗೊಬ್ಬರವನ್ನು ತಲಾ 40 ಕೆ.ಜಿ.ಯ ಪ್ಯಾಕೆಟ್ ಮಾಡಿ ಮಾರಾಟ ಮಾಡುತ್ತಿದ್ದಾರೆ. ತಮ್ಮ ಶ್ರಮ ಫಲವಾಗಿ ಜಯಗುರು ಒಬ್ಬರೇ ಸುಮಾರು 1000 ಚೀಲಗಳ ಈ ಹಸುವಿನ ಸಗಣಿ ಹುಡಿ ಮಾರಾಟ ಮಾಡುತ್ತಾರೆ.
ಇದಲ್ಲದೇ ಗೋವಿನ ಸಗಣಿ, ಗೋಮೂತ್ರ ಮತ್ತು ದನಗಳಿಗೆ ಸ್ನಾನ ಮಾಡಿಸಿ ನಂತರ ಸಂಗ್ರಹಿಸುವ ನೀರು ಮಿಶ್ರಣ ಹಸುವಿನ ಸಗಣಿ ಸ್ಲರಿ ಯನ್ನು ತಮ್ಮ ತೋಟಕ್ಕೆ ಉಪಯೋಗಿಸುವುದಲ್ಲದೇ ಪ್ರತಿದಿನ, ಅವರು ಸುಮಾರು 7,000 ಲೀಟರ್‌ಗಳನ್ನು ಸಂರಕ್ಷಿಸಿ ಸಗಣಿ ಸ್ಲರಿ ಮಾರಾಟ ಮಾಡುತ್ತಾರೆ. ಜತೆಗೆ ನಿತ್ಯ 750 ಲೀಟರ್ ಹಾಲು ಹಾಗೂ 30ರಿಂದ 40 ಕೆಜಿ ತುಪ್ಪ ಮಾರಾಟ ಮಾಡುತ್ತಾರೆ.
ಸಾವಯವ ಗೊಬ್ಬರದ ಮಹತ್ವ ಸಾರುತ್ತಿರುವ ಶ್ರೀಮಂತ ಕೃಷಿಕ ಹಾಗೂ ಹೈನುಗಾರರಾಗಿದ್ದಾರೆ . ತಮ್ಮ ಕೃಷಿ ಭೂಮಿ ಅಭಿವೃದ್ದಿಪಡಿಸುವುದಲ್ಲದೇ ಇತರ ರೈತರಿಗೆ ಇದರ ಪ್ರಯೋಜನವನ್ನು ನೀಡಿ ಅವರ ಜೀವನವನ್ನು ಸರಳಗೊಳಿಸುತ್ತಿದ್ದಾರೆ. ಜತೆಗೆ ನಿತ್ಯ 750 ಲೀಟರ್ ಹಾಲು ಹಾಗೂ 30ರಿಂದ 40 ಕೆಜಿ ತುಪ್ಪ ಮಾರಾಟ ಮಾಡುತ್ತಾರೆ. ಜಯಗುರು ಆಚಾರ್ ಹಿಂದಾರು 2021 ರಲ್ಲಿ ತಿಂಗಳಿಗೆ ಸುಮಾರು 10 ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದರು ಎಂದು ವರದಿಯಾಗಿದೆ.


Click it and Unblock the Notifications