ಬದುಕಿನಲ್ಲಿ ಏನು ಇಲ್ಲದೆ ಕೇವಲ ಶ್ರಮ ಹಾಗೂ ಬದ್ಧತೆಯಿಂದಾಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಂಡಿರುವ ಹಲವು ಯಶೋಗಾಥೆಗಳು ನಮ್ಮ ಮುಂದಿವೆ. ಈ ರೀತಿಯಲ್ಲಿ ರಾಗ್ಸ್ ಟು ರಿಚೆಸ್ಟ್ ಆಗಿರುವ ಕಥೆಗಳು ಪ್ರತಿದಿನ ಲಕ್ಷಾಂತರ ಮಂದಿಗೆ ಸ್ಫೂರ್ತಿಯನ್ನು ನೀಡುತ್ತದೆ.
ಅದೇರೀತಿ ಕಠಿಣ ಪರಿಶ್ರಮದಿಂದ ದೊಡ್ಡ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿದವರ ಪೈಕಿ ಕೈಲಾಶ್ ಕಾಟ್ಕರ್ ಅವರು ಕೂಡ ಒಬ್ಬರು. ಕೈಲಾಶ್ ಕಾಟ್ಕರ್ ಭಾರತದ ಪ್ರಮುಖ ಸೈಬರ್ ಸೆಕ್ಯುರಿಟಿ ಕಂಪನಿಯಾದ ಕ್ವಿಕ್ ಹೀಲ್‌ನ ಸಂಸ್ಥಾಪಕರು.
ಪ್ರಸ್ತುತ ಸೈಬರ್ ಸೆಕ್ಯೂರಿಟಿ ವಲಯದಲ್ಲಿ ಕ್ವಿಕ್ ಹೀಲ್ ದೊಡ್ಡ ಕಂಪನಿಯಾಗಿ ಬೆಳೆದಿದ್ದು, 1,40,000 ಕೋಟಿ ರೂಪಾಯಿ ಗಳಿಸುತ್ತಿದೆ. ಆದರೆ, ಒಂದು ಕಾಲದಲ್ಲಿ ಕೈಲಾಸ್ ಅವರು ಕೂಡ ಬಹಳ ಸಂಕಷ್ಟದ ದಿನಗಳನ್ನು ಎದುರಿಸಿದ್ದರು.

ಕೈಲಾಶ್ ಕಾಟ್ಕರ್ ಯಾರು?
ಕೈಲಾಸ್ ಅವರು ಮಹಾರಾಷ್ಟ್ರದ ರಹಿಮತ್‌ಪುರದ ಸಾಧಾರಣ ಕುಟುಂಬದಲ್ಲಿ ಜನಿಸಿದ್ದು, 9ನೇ ತರಗತಿಯಲ್ಲಿ ಓದುತ್ತಿರುವಾಗ ಸಮಸ್ಯೆ ಎದುರಿಸಿದ ಪರಿಣಾಮ ಶಾಲೆಯನ್ನು ಅರ್ಧಕ್ಕೆ ನಿಲ್ಲಿಸಬೇಕಾಯಿತು. 9ನೇ ತರಗತಿಯನ್ನು ಮೊಟಕುಗೊಳಿಸಿದ ಬಳಿಕ ಯಾವುದೇ ಪದವಿ ಇಲ್ಲದ ಕಾರಣ ಉದ್ಯೋಗ ಪಡೆದುಕೊಳ್ಳುವುದಕ್ಕೆ ಸಾಕಷ್ಟು ಸವಾಲು-ತೊಂದರೆಗಳನ್ನು ಅನುಭವಿಸಿದ್ದರು.
ಆದರೆ, ಅವರು ತಮ್ಮ ಬದುಕಿನಲ್ಲಿ ಯಶಸ್ಸನ್ನು ಗಳಿಸಬೇಕು ಎನ್ನುವುದರ ಬಗ್ಗೆ ಯಾವತ್ತೂ ಛಲವನ್ನು ಕಳೆದುಕೊಂಡಿರಲಿಲ್ಲ. ಎಲ್ಲಿಯವರೆಗೆ ಅಂದರೆ ರೇಡಿಯೊ, ಕ್ಯಾಲ್ಕುಲೇಟರ್ ರಿಪೇರಿ ಅಂಗಡಿಯಲ್ಲಿ 1991 ರಲ್ಲಿ ಕೆಲಸ ಮಾಡಿದ್ದರು. ಅಲ್ಲಿ ಅವರಿಗೆ ತಿಂಗಳಿಗೆ 400 ರೂಪಾಯಿ ಸಂಬಳ ನೀಡುತ್ತಿದ್ದರು. ಬಳಿಕ ಕೈಲಾಶ್ ಅವರು ಪುಣೆಯಲ್ಲಿ 15,000 ರೂಪಾಯಿ ಹೂಡಿಕೆಯೊಂದಿಗೆ ಸ್ವಂತ ಅಂಗಡಿಯನ್ನು ಸ್ಥಾಪಿಸಿದ್ದರು.
ಈ ನಡುವೆ ಕೈಲಾಶ್ ಅವರ ಸಹೋದರ ಕೂಡ ಮನೆಯಲ್ಲಿನ ಆರ್ಥಿಕ ಸಮಸ್ಯೆಯಿಂದಾಗಿ ಓದು ಮುಂದುವರಿಸಲು ಪರದಾಡುತ್ತಿದ್ದರು. ಆದರೆ, ಕೈಲಾಶ್ ಅವರು ಉನ್ನತ ಶಿಕ್ಷಣ ಪಡೆಯಬೇಕೆಂದು ಒತ್ತಾಯಿಸುತ್ತಿದ್ದರು. ಹೀಗಾಗಿ, ಸಹೋದರನಿಗೆ ಕಂಪ್ಯೂಟರ್ ಸೈನ್ಸ್ ಕಲಿಯುವುದಕ್ಕೆ ಬೇಕಾದ 5000 ರೂಪಾಯಿ ಶುಲ್ಕವನ್ನು ಕೈಲಾಶ್ ಪಾವತಿಸಿದ್ದರು.
ಈ ನಡುವೆ, ಭವಿಷ್ಯವು ಕಂಪ್ಯೂಟರ್ ಜಗತ್ತು ಆಗಿದ್ದು, ವಿಪುಲ ಅವಕಾಶಗಳನ್ನು ತೆರೆದುಕೊಳ್ಳುತ್ತದೆ ಎಂದು ಊಹಿಸಿದ್ದರು. ತಮ್ಮ 22ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಬ್ಯಾಂಕ್‌ವೊಂದರಲ್ಲಿ ಕಂಪ್ಯೂಟರ್ ಅನ್ನು ನೋಡಿದ್ದರು. ಬಳಿಕ 50,000 ರೂಪಾಯಿ ಕೊಟ್ಟು ಕಂಪ್ಯೂಟರ್ ಅನ್ನು ಕೂಡ ಖರೀದಿಸಿದ್ದರು.
1993 ರಲ್ಲಿ ಕೈಲಾಶ್ ಅವರು ಕ್ಯಾಟ್ ಕಂಪ್ಯೂಟರ್ ಸರ್ವೀಸಸ್ ಎಂಬ ಕಂಪನಿಯನ್ನು ಸ್ಥಾಪಿಸಿದ್ದರು. ಆ ಮೂಲಕ ಕಂಪ್ಯೂಟರ್ ರಿಪೇರಿ ಹಾಗೂ ಸರ್ವೀಸ್ ಅನ್ನು ಮಾಡುತ್ತಿದ್ದರು. ರಿಪೇರಿಗೆ ಬರುತ್ತಿದ್ದ ಬಹುತೇಕ ಕಂಪ್ಯೂಟರ್‌ಗಳು ವೈರಸ್ ದಾಳಿಯಿಂದ ಎನ್ನುವುದು ಅವರಿಗೆ ಮನವರಿಕೆಯಾಗಿತ್ತು. ಬಳಿಕ ತಮ್ಮ ಸಹೋದರನಿಗೆ ಆಂಟಿ ವೈರಸ್ ಕ್ಷೇತ್ರದತ್ತ ಗಮನಹರಿಸುವಂತೆ ಸಲಹೆ ಮಾಡಿದ್ದರು.
ಮುಂದೆ ಕೈಲಾಶ್ ಹಾಗೂ ಸಹೋದರ ಸಂಜಯ್ ಅವರು ಸೇರಿಕೊಂಡು ಆಂಟಿ ವೈರಸ್ ಅನ್ನು ಅಭಿವೃದ್ಧಿಪಡಿಸಿದ್ದು, ತಮ್ಮಲ್ಲಿಗೆ ರಿಪೇರಿಗೆ ಬರುತ್ತಿದ್ದ ಕಂಪ್ಯೂಟರ್‌ಗಳಲ್ಲಿ ಹಾಕಿ ಚೆಕ್ ಮಾಡುತ್ತಿದ್ದರು. ನಿಧಾನಕ್ಕೆ ಕಾಟ್ಕರ್ ಸಹೋದರರು ತಮ್ಮ ಗಮನವನ್ನು ಹಾರ್ಡ್‌ವೇರ್ ರಿಪೇರಿ ಹಾಗೂ ಆಂಟಿ ವೈರಸ್ ಅಭಿವೃದ್ಧಿಪಡಿಸುವತ್ತ ಕೇಂದ್ರೀಕರಿಸಿದರು.
ಕ್ವಿಕ್ ಹೀಲ್ ಪ್ರಾಡೆಕ್ಟ್ ಆರಂಭ
1995ರಲ್ಲಿ ಮೊದಲ ಬಾರಿಗೆ ಕ್ವಿಕ್ ಹೀಲ್ ಪ್ರಾಡೆಕ್ಟ್ ಅನ್ನು 700 ರೂಪಾಯಿಗೆ ಕಂಪ್ಯೂಟರ್ ಕ್ಷೇತ್ರದಲ್ಲಿ ಪರಿಚಯಿಸಿದರು. ಇದು ಅವರಿಗೆ ನಿರೀಕ್ಷೆಗೂ ಮೀರಿದ ಯಶಸ್ಸು ಹಾಗೂ ಅವಕಾಶಗಳನ್ನು ತೆರೆದುಕೊಂಡಿತ್ತು. ಈ ನಡುವೆ ನಾನಾ ರೀತಿಯ ಸವಾಲುಗಳನ್ನು ಎದುರಿಸಿದ್ದರೂ ಅದನ್ನು ಅವರು ನಿಭಾಯಿಸಿಕೊಂಡು ಹೋದರು.
ಈಗ ಕೈಲಾಶ್ ಕಾಟ್ಕರ್ ಅವರು ಕಂಪನಿಯ ಎಂಡಿ ಹಾಗೂ ಸಿಇಒ ಆಗಿದ್ದು, ಸಂಜಯ್ ಕಾಟ್ಕರ್ ಅವರು ಜಂಟಿ ಎಂಡಿಯಾಗಿದ್ದಾರೆ. 2023ರ ವರದಿ ಪ್ರಕಾರ, ಈ ಕಂಪನಿ 1,40,000 ಕೋಟಿ ರೂಪಾಯಿ ಸಂಪಾದಿಸುತ್ತಿದೆ.


Click it and Unblock the Notifications