ಝೆಪ್ಟೊ ಸಂಸ್ಥೆಯ ಸಹ ಸಂಸ್ಥಾಪಕರಾದ ಕೈವಲ್ಯ ವೋಹ್ರಾ ಅವರು 2022ರ ಐಐಎಫ್‌ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ ಪ್ರಕಾರ, 19ನೇ ವಯಸ್ಸಿನಲ್ಲಿಯೇ ಭಾರತದ ಅತ್ಯಂತ ಯುವ ಶ್ರೀಮಂತ ಉದ್ಯಮಿಯಾಗಿದ್ದಾರೆ. ಕೈವಲ್ಯ ವೋಹ್ರಾ ಅವರು ಝೆಪ್ಟೊನ ಮುಖ್ಯ ತಂತ್ರಜ್ಞಾನ ಅಧಿಕಾರಿಯಾಗಿದ್ದು, ಅವರ ಸ್ನೇಹಿತ ಆದಿತ್ ಪಲಿಚಾ ಅವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ. ಝೆಪ್ಟೊ ಈಗ ಭಾರತದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಇ-ಗ್ರೋಸರಿ ಕಂಪನಿಯಾಗಿದೆ.
ಯುವ ಉದ್ಯಮಿಯಾಗಿರುವ ಕೈವಲ್ಯ ವೋಹ್ರಾ ಅವರು ಐಐಎಫ್‌ಎಲ್ ವೆಲ್ತ್ ಹುರುನ್ ಇಂಡಿಯಾ ರಿಚ್ ಲಿಸ್ಟ್ 2022ರ ಪ್ರಕಾರ, 1,036ನೇ ಸ್ಥಾನದಲ್ಲಿದ್ದು, ಅವರ ಆಸ್ತಿ ಮೌಲ್ಯ 1,000 ಕೋಟಿ ರೂಪಾಯಿ ಆಗಿದೆ. ಇನ್ನೊಂದೆಡೆ, ಆದಿತ್ ಪಲಿಚಾ ಅವರು 1,200 ಕೋಟಿ ರೂಪಾಯಿ ಆಸ್ತಿ ಮೌಲ್ಯದೊಂದಿಗೆ ಕೈವಲ್ಯ ಅವರಿಂದ ಸ್ವಲ್ಪ ಮುಂದೆ ಇದ್ದಾರೆ. ಕೈವಲ್ಯ ವೋಹ್ರಾ ಹಾಗೂ ಆದಿತ್ ಪಲಿಚಾ ಇಬ್ಬರು ಸೇರಿಕೊಂಡು ಮುಂಬೈನಲ್ಲಿ 2021ರಲ್ಲಿ ಝೆಪ್ಟೊ ಕಂಪೆನಿಯನ್ನು ಪ್ರಾರಂಭಿಸಿದ್ದರು.

2022ರ ಮೇ ತಿಂಗಳಲ್ಲಿ ವೈಸಿ ಕಂಟಿನ್ಯೂಟಿ ಫಂಡ್‌ನಿಂದ 200 ಮಿಲಿಯನ್ ಯುಎಸ್ ಡಾಲರ್ ಹೂಡಿಕೆಯನ್ನು ಪಡೆದ ಬಳಿಕ ಝೆಪ್ಟೋ ಮೌಲ್ಯವು 900 ಮಿಲಿಯನ್ ಯುಎಸ್ ಡಾಲರ್ ಆಗುವ ಮೂಲಕ ದ್ವಿಗುಣಗೊಂಡಿದೆ. 2021ರ ಡಿಸೆಂಬರ್‌ನಲ್ಲಿ ಝೆಪ್ಟೊದ ಮೌಲ್ಯವು 570 ಮಿಲಿಯನ್ ಡಾಲರ್ ಆಗಿತ್ತು.
ಕೈವಲ್ಯ ವೋಹ್ರಾ ಯಾರು?
ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿರುವ ಕೈವಲ್ಯ ವೋಹ್ರಾ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಬೆಂಗಳೂರು ನಗರದಲ್ಲೇ ಮುಗಿಸಿದ್ದಾರೆ. ಕೈವಲ್ಯ ವೋಹ್ರಾ 2003ರ ಮಾರ್ಚ್ 15ರಂದು ಕರ್ನಾಟಕದಲ್ಲಿ ಜನಿಸಿದ್ದಾರೆ. ಕೈವಲ್ಯ ವೋಹ್ರಾ ಅವರು ಹಿಂದಿ, ಇಂಗ್ಲೀಷ್ ಹಾಗೂ ಫ್ರೆಂಚ್ ಭಾಷೆಯನ್ನು ಸುಲಲಿತವಾಗಿ ಮಾತನಾಡಬಲ್ಲರು.
ಝೆಪ್ಟೊವನ್ನು ಪ್ರಾರಂಭಿಸುವ ಮೊದಲು ಕೈವಲ್ಯ ವೋಹ್ರಾ ಅವರು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪ್ರೋಗ್ರಾಮ್ ಪದವಿಯನ್ನು ಪಡೆಯಲು ಅಡ್ಮಿಷನ್ ಪಡೆದುಕೊಂಡಿದ್ದರು. ಆದರೆ, ಕೈವಲ್ಯ ಅವರು ತಮ್ಮದೇ ಸ್ವಂತ ಕಂಪೆನಿಯೊಂದನ್ನು ಸ್ಥಾಪಿಸಬೇಕೆಂಬ ಕನಸನ್ನು ಕಟ್ಟಿಕೊಂಡಿದ್ದರು. ಹೀಗಾಗಿ, ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದ ಕಲಿಕೆಯನ್ನು ಅರ್ಧಕ್ಕೆ ನಿಲ್ಲಿಸಿ ಗೆಳೆಯ ಆದಿತ್ ಪಲಿಚಾ ಅವರೊಂದಿಗೆ ಸೇರಿಕೊಂಡು ಝೆಪ್ಟೊ ಕಂಪೆನಿಯನ್ನು ಸ್ಥಾಪಿಸಿದರು.
ಕೈವಲ್ಯ ವೋಹ್ರಾ ಹಾಗೂ ಆದಿತ್ ಪಲಿಚಾ ಸ್ಟ್ಯಾನ್‌ಫೋರ್ಡ್ ವಿವಿಗೆ ನೋಂದಣಿ ಮಾಡಿಸಿಕೊಂಡಾಗ ಅವರಿಬ್ಬರು ಕೂಡ ದುಬೈನಲ್ಲಿ ಇದ್ದರು. ಆನ್‌ಲೈನ್ ಓರಿಯೆಂಟೇಷನ್‌ನಲ್ಲಿ ಪಾಲ್ಗೊಂಡ ಬಳಿಕ ಇಬ್ಬರು ಕೂಡ ಮುಂಬೈಗೆ ವಾಪಾಸ್ಸಾಗಲು ತೀರ್ಮಾನಿಸಿದ್ದರು. ಕೈವಲ್ಯ ವೋಹ್ರಾ ಹಾಗೂ ಆದಿತ್ ಪಲಿಚಾ ಅವರು ಕಿರಣಕಾರ್ಟ್ ಎನ್ನುವ ಆನ್‌ಲೈನ್ ಕಿರಾಣಿ ವಿತರಣಾ ಸ್ಟಾರ್ಟ್-ಅಪ್‌ನ ಸಹ ಸ್ಥಾಪಕರಾದರು.
ಇದು ಮುಂಬೈನಂಥ ಮಹಾನಗರದಲ್ಲಿ ದಿನಸಿ ವಸ್ತುಗಳನ್ನು ಮನೆಗಳಿಗೆ ಕೇವಲ 45 ನಿಮಿಷದಲ್ಲಿ ತಲುಪಿಸುವ ಭರವಸೆಯನ್ನು ನೀಡಿತು. ಅದರ ಯಶಸ್ವಿನ ಬಳಿಕ ಅವರು ಕಿರಾನಕಾರ್ಟ್ ಟೆಕ್ನಾಲಜೀಸ್ ಪ್ರೈವೆಟ್ ಲಿಮಿಟೆಡ್‌ನ ಭಾಗವಾಗಿರುವ ಝೆಪ್ಟೊ ಅನ್ನು ಸ್ಥಾಪಿಸಿದರು. ಝೆಪ್ಟೊ ಈಗ ದೆಹಲಿ, ಚೆನ್ನೈ, ಗುರ್ಗಾಂವ್, ಬೆಂಗಳೂರು ಹಾಗೂ ಮುಂಬೈ ನಗರಗಳಲ್ಲಿ ದಿನಸಿ ವಸ್ತುಗಳ ವಿತರಣಾ ಸೇವೆ ಒದಗಿಸುತ್ತಿದೆ.
ಕೈವಲ್ಯ ವೋಹ್ರಾ ಹಾಗೂ ಆದಿತ್ ಪಲಿಚಾ ಅವರು ಇ-ಕಾಮರ್ಸ್ ವಿಭಾಗದಲ್ಲಿ ಫೋರ್ಬ್ಸ್ ನಿಯತಕಾಲಿಕಾದ ಪ್ರಭಾವಿ '30 ಅಂಡರ್ 30(ಏಷ್ಯಾ ಪಟ್ಟಿ)' ನಲ್ಲಿಯೂ ಕಾಣಿಸಿಕೊಂಡಿದ್ದಾರೆ.


Click it and Unblock the Notifications