ಮಹಿಳೆಯರು ತಮ್ಮ ಜಾಣ್ಮೆ ಮತ್ತು ನಾವೀನ್ಯತೆಯ ಮೂಲಕ ವ್ಯಾಪಾರ ಮತ್ತು ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಮಹತ್ವದ ಕೊಡುಗೆ ನೀಡಿದ್ದಾರೆ. ಅದರಲ್ಲೂ ಉದ್ಯಮ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ಅಮೂಲ್ಯವಾಗಿದೆ. ಇಂದು ಮಹಿಳಾ-ಉದ್ಯಮಿಗಳು ಎಲ್ಲಾ ರೀತಿಯ ವ್ಯವಹಾರಗಳಲ್ಲಿ ಆರ್ಥಿಕತೆಯ ಮೇಲೆ ಗಣನೀಯ ಪ್ರಭಾವವನ್ನು ಬೀರುತ್ತಿದ್ದಾರೆ.
ಎಲ್ಲಾ ಉದ್ಯಮಗಳಿಗಿಂತಲೂ ದೇಶಕ್ಕೆ ಹೆಚ್ಚು ಲಾಭ ತರುವ ಕ್ಷೇತ್ರವೆಂದರೆ ಕೃಷಿ. ಕೃಷಿ ಉತ್ಪಾದನೆಯಲ್ಲಿ ಭಾರತವು ವಿಶ್ವಾದ್ಯಂತ ಎರಡನೇ ಸ್ಥಾನದಲ್ಲಿದೆ. ಆದರೆ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡ ರೈತರು ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. 2004 ಮತ್ತು 2006 ರ ನಡುವೆ ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣಗಳು ಸಂಭವಿಸಿತ್ತು.

2006 ರಲ್ಲಿ 17,060 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು NCRB ದತ್ತಾಂಶ ಹೇಳಿದೆ. ಈ ಪೈಕಿ 1,427 ಮಹಾರಾಷ್ಟ್ರದವರಾಗಿದ್ದರು. ಇಂತಹ ಅನಾರೋಗ್ಯಕರ ಬೆಳೆವಣಿಗೆಗಳಿಂದ ವಿಚಲಿತಗೊಂಡಿದ್ದ ಕೆನಡಾದಲ್ಲಿ ವಾಸಿಸುತ್ತಿದ್ದ ಶರ್ಮಿಳಾ ಜೈನ್ ಓಸ್ವಾಲ್ ತಮ್ಮ ತವರೂರಿಗೆ ಬಂದು ರೈತರಿಗೆ ಸಹಾಯ ಮಾಡಬೇಕೆಂದು ನಿರ್ಧರಿಸಿದರು.
ಶರ್ಮಿಳಾ ಹಳ್ಳಿಯಲ್ಲಿ ಬೆಳೆದ ಕಾರಣ ರೈತರ ಕಷ್ಟಗಳನ್ನು ಹತ್ತಿರದಿಂದ ಬಲ್ಲವರಾಗಿದ್ದರು. ಸರ್ಕಾರದ ಹಲವು ಯೋಜನೆಗಳಿದ್ದರೂ ರೈತರನ್ನು ಆರ್ಥಿಕ ಸಂಕಷ್ಟದಿಂದ ಮೇಲೆತ್ತಲು ಇದ್ಯಾವು ಸಹಕಾರಿಯಾಗಿಲ್ಲ ಎಂದು ಮನಗಂಡಿದ್ದರು.
ಶರ್ಮಿಳಾ ಉದ್ಯಮ ಪ್ರಾರಂಭವಾಗಿದ್ದು ಹೇಗೆ?
ಕೆನಡಾದಲ್ಲಿ ವಕೀಲರಾಗಿ ಉತ್ತಮ ಸಂಪಾದನೆ ಮಾಡುತ್ತಿದ್ದ ಶರ್ಮಿಳಾ ಅವರು 2008 ರಲ್ಲಿ ದೃಢ ನಿರ್ಧಾರ ಕೈಗೊಂಡು ಕೆಲಸ ತೊರೆದು ಪುಣೆಗೆ ಹಿಂದಿರುಗುವ ನಿರ್ಧಾರ ಮಾಡಿದರು. ಭಾರತಕ್ಕೆ ಹಿಂತಿರುಗಿದ ಬಳಿಕ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಳವಾಗಿ ಅಧ್ಯಯನ ಮಾಡಲು ರಾಜಸ್ಥಾನ, ಗುಜರಾತ್ ಮತ್ತು ಮಹಾರಾಷ್ಟ್ರದಾದ್ಯಂತ ಎರಡು ವರ್ಷಗಳ ಕಾಲ ಸಮೀಕ್ಷೆ ಕೈಗೊಂಡರು. ನಂತರ ಅವರು ರೈತರಿಗೆ ಪರಿಹಾರಗಳನ್ನು ಒದಗಿಸಲು ಗ್ರೀನ್ ಎನರ್ಜಿ ಫೌಂಡೇಶನ್ ಹೆಸರಿನ ಎನ್‌ಜಿಒ ಒಂದನ್ನು ಸ್ಥಾಪಿಸಿದರು.
ಗ್ರೀನ್ ಎನರ್ಜಿ ಫೌಂಡೇಶನ್ ಪ್ರಮುಖವಾಗಿ ಕೃಷಿಯಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವ ಗುರಿ, ನೀರಿನ ಸಂಪನ್ಮೂಲಗಳನ್ನು ಮರುಸ್ಥಾಪಿಸುವ ಹಾಗೂ ಕೃಷಿಯಲ್ಲಿ ಹೈಟೆಕ್ ಕೃಷಿ ತಂತ್ರಗಳ ಅನುಷ್ಠಾನ ಮಾಡುವ ಗುರಿಯನ್ನು ಹೊಂದಿದೆ.
ಶರ್ಮಿಳಾ ತನ್ನ ತಂದೆಯಿಂದ ಪ್ರೇರಿತರಾಗಿದ್ದರು. ಅವರ ತಂದೆ ಮಹಾರಾಷ್ಟ್ರದ ಅಲಿಬಾಗ್ ಬಳಿಯ ಸಣ್ಣ ಕೃಷಿ ಗ್ರಾಮವಾದಲ್ಲಿ ಹಿಟ್ಟಿನ ಗಿರಣಿಯನ್ನು ನಡೆಸುತ್ತಿದ್ದರು. ಕೌಟುಂಬಿಕ ಹಿಂಸೆ, ಕಿರುಕುಳದ ಬಗ್ಗೆ ಸಹಪಾಠಿ ಮತ್ತು ಸಂಬಂಧಿಕರು ಹೇಳುತ್ತಿರುವುದನ್ನು ಕಂಡು ಅವರು ವಕೀಲರಾಗಬೇಕೆಂದು ನಿರ್ಧರಿಸಿದರು.
ಪ್ರಾಥಮಿಕ ಶಿಕ್ಷಣವನ್ನು ಮರಾಠಿ ಮಾಧ್ಯಮ ಶಾಲೆಯಲ್ಲಿ ಪಡೆದ ಅವರು ಮದುವೆಯಾದ ನಂತರ ಇಂಗ್ಲೆಂಡ್‌ನಲ್ಲಿ ಪರಿಸರ ಮತ್ತು ಕೃಷಿ ಕಾನೂನಿನಲ್ಲಿ ಸ್ನಾತಕೋತ್ತರ ಪದವಿ ಇಂಗ್ಲೆಂಡ್‌ಗೆ ತೆರಳಿದರು. ಅವರು 1997 ರಿಂದ 1999 ರವರೆಗೆ ಯುಕೆ ನಲ್ಲಿ ಕೆಲಸ ಮಾಡಿದರು ಮತ್ತು ನಂತರ ಕೆನಡಾಕ್ಕೆ ತೆರಳಿದರು. ಅಲ್ಲಿ ಅವರು 2007 ರವರೆಗೆ ಅಭ್ಯಾಸ ಮಾಡಿದರು. ನಂತರ, ಭಾರತೀಯ ರೈತರಿಗೆ ಸಹಾಯ ಮಾಡುವ ಉದ್ದೇಶದಿಂದ ಅವರು ತಮ್ಮ ತಾಯ್ನಾಡಿಗೆ ಹಿಂತಿರುಗಿರುದರು.
ಪುಣೆಗೆ ಮರಳಿದ ನಂತರ 2008 ರಲ್ಲಿ ಎನ್‌ಜಿಒ ಸ್ಥಾಪಿಸಿದ ನಂತರ, ಶರ್ಮಿಳಾ - ನಬಾರ್ಡ್‌ನಿಂದ 10 ಲಕ್ಷ ರೂಪಾಯಿ ಅನುದಾನದೊಂದಿಗೆ ಕೆಲಸ ಆರಂಭಿಸಿದರು. 2010 ರಲ್ಲಿ ಮಹಾರಾಷ್ಟ್ರದ ಬುಚ್ಕೆವಾಡಿಯಲ್ಲಿ ತಮ್ಮ ಮೊದಲ ಸುಸ್ಥಿರ ನೀರು ನಿರ್ವಹಣೆ ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಇದರೊಂದಿಗೆ ಗುಜರಾತ್, ರಾಜಸ್ಥಾನ ಮತ್ತು ಮಹಾರಾಷ್ಟ್ರದಲ್ಲಿ ಶರ್ಮಿಳಾ ತಮ್ಮ ಕೆಲಸವನ್ನು ಮುಂದುವರೆಸಿದರು. ಕೇವಲ ಒಂದು ಬೆಳೆಯನ್ನು ನಂಬಿಕೊಂಡಿದ್ದ ರಾಜಸ್ಥಾನದ ಡುಂಗರ್‌ಪುರದ ರೈತರಿಗೆ ಹಲವಾರು ಬೆಳೆಗಳನ್ನು ಬೆಳೆಯಲು ಸಹಾಯ ಮಾಡಿದರು.
ಶರ್ಮಿಳಾ ಪ್ರಕಾರ, ಅವರು ಕಳೆದ 20 ವರ್ಷಗಳಲ್ಲಿ ಜಲ ನಿರ್ವಹಣೆ , ಸಿರಿಧಾನ್ಯ ಮತ್ತು ತರಕಾರಿ ಕೃಷಿ ಹಾಗೂ ಸಾಮರ್ಥ್ಯ ವರ್ಧನೆಯ ಕಾರ್ಯಕ್ರಮಗಳ ಮೂಲಕ ಐದು ರಾಜ್ಯಗಳಲ್ಲಿ 1.5 ಲಕ್ಷ ರೈತರಿಗೆ ಸಹಾಯ ಮಾಡಿದ್ದಾರೆ. ಇಂತಹ ಕಾರ್ಯಕ್ರಮಗಳಿಂದ ರೈತರಿಗೆ ಸ್ಥಿರವಾದ ಆದಾಯವನ್ನು ತಂದುಕೊಟ್ಟಿದೆ.
ಸಿರಿಧಾನ್ಯ ಮತ್ತು ಆರೋಗ್ಯಕರ ಆಹಾರದ ಆಯ್ಕೆಗಳ ಕೊರತೆ ಕಂಡುಕೊಂಡ ಅವರು "ಗುಡ್ ಮಾಮ್" ಎನ್ನುವ ಸ್ಟಾರ್ಟ್ಅಪ್ ಪ್ರಾರಂಭಿಸಿದರು. ಗುಡ್ ಮಾಡ್‌ನಿಂದ ಸಿರಿಧಾನ್ಯದ ನೂಡಲ್ಸ್, ಪಾಸ್ಟಾ, ಕುಕೀಸ್, ಕ್ರ್ಯಾಕರ್ಸ್, ಹರ್ಬ್ ಸ್ಟಿಕ್‌ಗಳು ಮುಂತಾದವುಗಳನ್ನು ತಮ್ಮ ವೆಬ್‌ಸೈಟ್ ಮೂಲಕ, ಅಮೇಜಾನ್‌ನಲ್ಲಿ ಮತ್ತು ಇತರ ಚಿಲ್ಲರೆ ವ್ಯಾಪಾರಿಗಳ ಮೂಲಕ ಮಾರಾಟ ಮಾಡಲಾಗುತ್ತದೆ. ಸ್ಟಾರ್ಟ್‌ಅಪ್ ಈಗ ದೇಶಾದ್ಯಂತ 5,000 ಕ್ಕೂ ಹೆಚ್ಚು ರಾಗಿ ರೈತರಿಗೆ ಉದ್ಯೋಗ ನೀಡುತ್ತಿದ್ದು ವಾರ್ಷಿಕ 16 ಕೋಟಿ ರೂಪಾಯಿ ಆದಾಯವನ್ನು ಹೊಂದಿದೆ.


Click it and Unblock the Notifications