ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುವುದಕ್ಕೆ ಭಾರತದ ಅತ್ಯಂತ ಹಿರಿಯ ಬಿಲಿಯನೇರ್ ಆಗಿ 92 ವರ್ಷ ವಯಸ್ಸಿನ ಲಚ್ಮನ್ ದಾಸ್ ಮಿತ್ತಲ್ ಅವರ ಜೀವನವೇ ಉದಾಹರಣೆಯಾಗಿದೆ. ಲಚ್ಮನ್ ದಾಸ್ ಮಿತ್ತಲ್ ಇಂದು 2.5 ಬಿಲಿಯನ್ ಯುಎಸ್‌ಡಿ ನಿವ್ವಳ ಮೌಲ್ಯ ಹೊಂದಿರುವ ಶ್ರೀಮಂತ ವ್ಯಕ್ತಿಯಾಗಿದ್ದಾರೆ.
ಭಾರತದಲ್ಲಿ ಮೂರನೇ ಅತಿದೊಡ್ಡ ಟ್ರಾಕ್ಟರ್ ತಯಾರಕ ಸೋನಾಲಿಕಾ ಗ್ರೂಪ್, ಲಚ್ಮನ್ ದಾಸ್ ಮಿತ್ತಲ್ ಮಾಲೀಕತ್ವದಲ್ಲಿ ಮುನ್ನಡೆಯುತ್ತಿದೆ. ಹಾಗೆಂದು ಇವರು ಹುಟ್ಟುತ್ತಲೇ ಚಿನ್ನದ ಚಮಚವನ್ನು ಬಾಯಲ್ಲಿಟ್ಟುಕೊಂಡು ಹುಟ್ಟಿದವರಲ್ಲ. ಲಚ್ಮನ್ ದಾಸ್ ಮಿತ್ತಲ್ ಶ್ರಮದ ಫಲವಾಗಿ ಇಂದು ಬಿಲಿಯನೇರ್ ಆಗಿದ್ದಾರೆ.

ಫೋರ್ಬ್ಸ್ 2023 ರ ಪಟ್ಟಿಯ ಪ್ರಕಾರ, 99 ವರ್ಷ ವಯಸ್ಸಿನ ಅತ್ಯಂತ ಹಿರಿಯ ಬಿಲಿಯನೇರ್ ಮಹೀಂದ್ರಾ ಸಂಸ್ಥೆಯ ಮಾಜಿ ಅಧ್ಯಕ್ಷ ಕೇಶುಬ್ ಮಹೀಂದ್ರಾ ಆಗಿದ್ದರು. ಆದರೆ ದುರದೃಷ್ಟವಶಾತ್, ಕೇಶುಬ್ ಮಹೀಂದ್ರಾ ಅವರು ಕಳೆದ ಏಪ್ರಿಲ್ 12 ರಂದು ಸ್ವರ್ಗಸ್ಥರಾದರು. ಲಚ್ಮನ್ ದಾಸ್ ಮಿತ್ತಲ್ ಅವರ ಜೀವನವೊಂದು ಆಕರ್ಷಕ ಕಥೆಯಂತಿದೆ.
ಜೀವನದಲ್ಲಿ ಯಶಸ್ವಿ ಕಾಣಬೇಕು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದ್ದ ಅವರು ಸೋತರು ಎದೆಗುಂದದ ವ್ಯಕ್ತಿತ್ವದವರು. ತಮ್ಮ 60 ನೇ ವಯಸ್ಸಿನಲ್ಲಿ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಇಂದು ಬಿಲಿಯನೇರ್ ಆಗಿರುವ ಲಚ್ಮನ್ ದಾಸ್ ಮಿತ್ತಲ್ ಹಿಂದೊಮ್ಮೆ ಎಲ್ಐಸಿ ಏಜೆಂಟ್ ಆಗಿದ್ದರು. ಸರ್ಕಾರಿ ಸ್ವಾಮ್ಯದ ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್‌ಐಸಿ) ಎಜೆಂಟ್ ಆಗಿದ್ದು, ಅಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ನಂತರ 1990ರಲ್ಲಿ ಅಂದರೆ ತಮ್ಮ 60ನೇ ವಯಸ್ಸಿನಲ್ಲಿ ತಮ್ಮ ಉದ್ಯಮ ಕ್ಶೇತ್ರಕ್ಕೆ ಕಾಲಿರಿಸಿದರು.
1996 ರಲ್ಲಿ ಟ್ರಾಕ್ಟರ್‌ಗಳನ್ನು ತಯಾರಿಸಲು ಪ್ರಾರಂಭಿಸಿ ನಂತರ ಸೋನಾಲಿಕಾ ಟ್ರಾಕ್ಟರ್ ಸಂಸ್ಥೆ ಸ್ಥಾಪಿಸಿದರು. ಪಂಜಾಬ್‌ನ ಹೋಶಿಯಾರ್‌ಪುರದಲ್ಲಿ ಸೋನಾಲಿಕಾ ಟ್ರಾಕ್ಟರ್‌ಗಳು ಗಣನೀಯ ಪ್ರಮಾಣದ ಉತ್ಪಾದನಾ ಫ್ಯಾಕ್ಟರಿ ಇದೆ. ಸೋನಾಲಿಕಾ ಗ್ರೂಪ್ ಐದು ರಾಷ್ಟ್ರಗಳಲ್ಲಿ ಈ ಸೌಲಭ್ಯ ಹೊಂದಿದ್ದು ಇದು ಸುಮಾರು 120 ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವ್ಯವಹಾರ ನಡೆಸುತ್ತಿದೆ.
ಲಚ್ಮನ್ ದಾಸ್ ಮಿತ್ತಲ್ ಅವರು ಸರ್ಕಾರಿ ಕಾಲೇಜಿನಲ್ಲಿ ಪದವಿಯನ್ನು ಪೂರ್ಣಗೊಳಿಸಿ ನಂತರ ಉರ್ದು ಮತ್ತು ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿಗಾಗಿ ಪಡೆದುಕೊಂಡಿದ್ದಾರೆ. ಮಾತ್ರವಲ್ಲದೇ ಎಂಎ ಇಂಗ್ಲಿಷ್‌ನಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ. 1955ರಲ್ಲಿ, ಲಚ್ಮನ್ ದಾಸ್ ಮಿತ್ತಲ್ ಎಲ್ಐಸಿ ಏಜೆಂಟ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದಾಗ ಪ್ರತಿಯೊಬ್ಬ ಮಧ್ಯಮ ವರ್ಗದ ವ್ಯಕ್ತಿಗಳಂತೆ ತಮ್ಮ ಸಂಬಳದಲ್ಲಿ ಸ್ವಲ್ಪ ಹಣವನ್ನು ಉಳಿತಾಯಕ್ಕಾಗಿ ಮೀಸಲಿಡಲು ಪ್ರಾರಂಭಿಸಿದರು.
ಹೀಗೆ ತಮ್ಮ ಉಳಿತಾಯವನ್ನು ಕೃಷಿ ಯಂತ್ರಗಳ ಸೈಡ್ ಬಿಸಿನೆಸ್ ಆರಂಭಿಸಿದರು. ಆದರೆ ವ್ಯಾಪಾರದಲ್ಲಿ ಸಂಪೂರ್ಣ ಕುಸಿತ ಕಂಡು ದಿವಾಳಿಯಾದರು. ಆದರೆ ಛಲ ಬಿಡದೆ ಪರಿಶ್ರಮದ ಮೂಲಕವೇ ಕೆಲವು ವರ್ಷಗಳ ನಂತರ ಅಂತಿಮವಾಗಿ ಯಶಸ್ಸು ಅವರಿಗೆ ಒಲಿದುಬಂತು.
ಪ್ರಸ್ತುತ ಸೋನಾಲಿಕಾ ಗ್ರೂಪ್‌ನ ನಾಯಕತ್ವವನ್ನು ಲಚ್ಮನ್ ದಾಸ್ ಮಿತ್ತಲ್ ತಮ್ಮ ಮಕ್ಕಳಾದ ಅಮೃತ್ ಸಾಗರ್ ಮಿತ್ತಲ್ ಮತ್ತು ದೀಪಕ್ ಮಿತ್ತಲ್ ಅವರು ವಹಿಸಿಕೊಂಡಿದ್ದಾರೆ. ಆದರೆ ಇನ್ನೂ ವೃತ್ತಿಪರವಾಗಿ ಹೆಚ್ಚು ಸಕ್ರಿಯರಾಗಿರುವ ದಾಸ್ ಮಿತ್ತಲ್ ಈಗಲೂ ಪ್ರತಿದಿನ ಕಚೇರಿಗೆ ತೆರಳಿ ಮೇಲ್ವಿಚಾರಣೆ ನೋಡಿಕೊಳ್ಳುತ್ತಾರೆ ಎಂದು ವರದಿಯಾಗಿದೆ.


Click it and Unblock the Notifications