ಎಲೆಕ್ಟ್ರಿಕ್ ವೆಹಿಕಲ್ (ಇವಿ) ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿ ಇರುವವರು ಟೆಸ್ಲಾದ ಮಾಲೀಕ, ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲಾನ್ ಮಸ್ಕ್. ಆದರೆ, ಮಸ್ಕ್‌ಗೆ ಪ್ರತಿಸ್ಪರ್ಧಿಯಾಗಿ ಏಷ್ಯಾದ ಬಿಲಿಯನೇರ್ ಒಬ್ಬರು ಪೈಪೋಟಿ ನೀಡಲು ಅಣಿಯಾಗುತ್ತಿದ್ದಾರೆ.
ಇವರು ಭಾರತದ ಮುಕೇಶ್ ಅಂಬಾನಿ ಅಲ್ಲ. ಬದಲಾಗಿ, ವಿಯೆಟ್ನಾಂನ ಫಾಮ್ ನಾತ್ ವುಂಗ್. ಇವರು 2026ರ ವೇಳೆಗೆ ಭಾರತ, ಅಮೆರಿಕ ಹಾಗೂ ಇಂಡೋನೇಷ್ಯಾದಲ್ಲಿ ಇವಿ ಘಟಕಗಳ ಸ್ಥಾಪನೆಗೆ ಹೆಚ್ಚುವರಿಯಾಗಿ 1.8 ಬಿಲಿಯನ್ ಡಾಲರ್ ಹೂಡಿಕೆ ಮಾಡುತ್ತಿರುವುದಾಗಿ ಫೋರ್ಬ್ಸ್ ವರದಿ ಮಾಡಿದೆ.

ನವೆಂಬರ್ 8ರಂದು ವುಂಗ್ ಬಿಲಿಯನೇರ್ ಉದ್ಯಮಿ ಗೌತಮ್ ಅದಾನಿಯನ್ನು ಭೇಟಿಯಾಗಿದ್ದು, ಇಬ್ಬರು ಕೂಡ ಹೊಸ ಅವಕಾಶಗಳ ಬಗ್ಗೆ ಚರ್ಚಿಸಿದ್ದಾರೆ. ಇನ್ನೊಂದೆಡೆ, ಅದಾನಿ ಗ್ರೂಪ್ ಕೂಡ ವಿಯೆಟ್ನಾಂನಲ್ಲಿ ತಮ್ಮ ವ್ಯಾಪಾರ ವಹಿವಾಟನ್ನು ವಿಸ್ತರಿಸಲು ಚಿಂತನೆ ನಡೆಸುತ್ತಿರುವುದಾಗಿ ವರದಿಯಾಗಿದೆ.
ವುಂಗ್ ವಿಯೆಟ್ನಾಂನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದು, 39000 ಕೋಟಿ ರೂಪಾಯಿ (4.7 ಶತಕೋಟಿ ಡಾಲರ್) ನಿವ್ವಳ ಆಸ್ತಿ ಮೌಲ್ಯ ಹೊಂದಿರುವ ವಿನ್‌ಫಾಸ್ಟ್ ಆಟೊದ ಮಾಲೀಕರಾಗಿದ್ದು, ಈ ಕಾರು ಬ್ರಾಂಡ್ ಅನ್ನು ಜಾಗತಿಕವಾಗಿ ಗುರುತಿಸುವತ್ತ ಗಮನಹರಿಸಿದ್ದಾರೆ.
ಇದರ ವಿವಿ ವಿಭಾಗವನ್ನುಜಾಗತಿಕವಾಗಿ ಬೆಳೆಸುವ ಉದ್ದೇಶದಿಂದ ಸುಮಾರು 83300 ಕೋಟಿ ರೂಪಾಯಿ ಹೂಡಿಕೆ ಮಾಡುವುದಕ್ಕೆ ಮುಂದಾಗಿದ್ದಾರೆ. 55 ವರ್ಷದ ವುಂಗ್ 2017ರಲ್ಲಿ ಸ್ಥಾಪನೆಯಾದ ಈ ಕಂಪನಿಯನ್ನು 2025ರ ವೇಳೆಗೆ ಲಾಭದಾಯಕವಾಗಿಸಲು ಪಣತೊಟ್ಟಿದ್ದಾರೆ. ಆದರೆ, ಟೆಸ್ಲಾ ಈ ಹಂತಕ್ಕೆ ಬೆಳೆಯುವುದಕ್ಕೆ ತೆಗೆದುಕೊಂಡಿರುವ ಅವಧಿಗೆ ಹೋಲಿಸಿದರೆ ಅದು 9 ವರ್ಷ ಕಡಿಮೆಯಿದೆ.
ವುಂಗ್ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿದ್ದರೂ ವಿನ್‌ಫಾಸ್ಟ್ ಇವಿ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಸ್ಥಾಪಿಸುವುದಕ್ಕೆ ಬಹಳ ದೂರ ಸಾಗಬೇಕಿದೆ. ಮುಂದಿನ ಆರು ವರ್ಷಗಳಲ್ಲಿ ಒಂದು ಮಿಲಿಯನ್ ಯೂನಿಟ್‌ಗಳನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದೆ. ಅದೇ ಎಲಾನ್ ಮಸ್ಕ್‌ನ ಟೆಸ್ಲಾಗೆ ಹೋಲಿಸಿದರೆ 11 ವರ್ಷ ಮುಂದಿದೆ.
ವುಂಗ್‌ನ ಈ ಇವಿ ಹೂಡಿಕೆಯಲ್ಲಿ ಸಂಪೂರ್ಣ ಸ್ವಯಂ ಚಾಲಿತ ನಿರ್ಮಾಣ ಘಟಕ, ಚಾರ್ಜಿಂಗ್ ಇನ್ಫ್ರಾ ಡೆವಲಪ್‌ಮೆಂಟ್ ಹಾಗೂ ಸ್ಥಳೀಯ ಮಾರುಕಟ್ಟೆಯಲ್ಲಿ ಇವಿ ಸೆಗ್ಮೆಂಟ್‌ನ ವಿವಿಧ ಮಾಡೆಲ್‌ಗಳನ್ನು ಪರಿಚಯಿಸುವುದು ಕೂಡ ಸೇರಿದೆ. ವುಂಗ್ ಅವರು ಮಾಸ್ಕೊದ ಜಿಯಾಲಜಿಕಲ್ ಪ್ರಾಸ್ಪೆಕ್ಟಿಂಗ್ ಇನ್‌ಸ್ಟಿಟ್ಯೂಟ್‌ನಲ್ಲಿ ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿದ್ದಾರೆ.
ಅವರು ತಮ್ಮ ವೃತ್ತಿ ಬದುಕನ್ನು ಉಕ್ರೇನ್‌ನಲ್ಲಿ ರೆಸ್ಟೊರೆಂಟ್ ಸ್ಥಾಪಿಸುವ ಮೂಲಕ ಪ್ರಾರಂಭಿಸಿದ್ದರು. ಅದು ಅಷ್ಟೊಂದು ಲಾಭದಾಯಕ ಆಗಿರಲಿಲ್ಲ. ಆದರೆ, ಬಳಿಕ ಅವರು ಇನ್‌ಸ್ಟೆಂಟ್ ನೂಡಲ್ಸ್ ಅನ್ನು ಪ್ರಾರಂಭಿಸಿದ್ದು, ಅದು ಬಹಳ ಜನಪ್ರಿಯತೆಯನ್ನು ಪಡೆದುಕೊಂಡಿತ್ತು.
ನಂತರದಲ್ಲಿ ಅವರು ತಮ್ಮ ಬ್ರಾಂಡ್ ಅನ್ನು 150 ಮಿಲಿಯನ್ ಡಾಲರ್‌ಗೆ ನೆಸ್ಲೆ ಕಂಪನಿಗೆ ಮಾರಾಟ ಮಾಡಿದ್ದರು. ಮುಂದೆ ಅವರು ವಿಯೆಟ್ನಾಂನ ನಾಹ ಟ್ರಂಗ್ ದ್ವೀಪದಲ್ಲಿ ಐಶಾರಾಮಿ ರೆಸಾರ್ಟ್‌ವೊಂದನ್ನು ಖರೀದಿಸಿದ್ದರು. 2018ರಲ್ಲಿ ಅವರು ವಿನ್‌ಸ್ಮಾರ್ಟ್ ಎಂಬ ಸ್ಮಾರ್ಟ್ ಫೋನ್ ಅನ್ನು ಪ್ರಾರಂಭಿಸಿದ್ದರು. ಜತೆಗೆ ಹೊನೊಯಿಯಲ್ಲಿ ಕೇಬಲ್ ಕಾರ್ ಹಾಗೂ ಸ್ಕೈಸ್ಕ್ರಾಪರ್ ಅನ್ನು ಪ್ರಾರಂಭಿಸುವ ಮೂಲಕ ಪ್ರವಾಸೋದ್ಯಮ ಕ್ಷೇತ್ರದಲ್ಲಿಯೂ ಹೆಚ್ಚಿನ ಹೂಡಿಕೆ ಮಾಡಿದ್ದಾರೆ.


Click it and Unblock the Notifications