ಕರ್ಮೇಶ್ ಗುಪ್ತಾ ಎಂಬ ಹೆಸರಿನ ಈ ಯುವ ಉದ್ಯಮಿ ರಾಜಸ್ಥಾನದ ಅಲ್ವಾರ್ ಎನ್ನುವ ಸಣ್ಣ ಪಟ್ಟಣದಲ್ಲಿ ಹುಟ್ಟಿ ಬೆಳೆದವರು. ಅವರು ಭಾರತದಲ್ಲಿ ಅಸಂಖ್ಯ ಜನರ ಮೆಚ್ಚುಗೆ ಪಾತ್ರವಾಗಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಂಡವಾದ ರಾಜಸ್ಥಾನ್ ರಾಯಲ್ಸ್‌ನಲ್ಲಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿ ಪಯಣವನ್ನು ಆರಂಭಿಸಿದ್ದರು.
ಸರ್ಟಿಫೈಡ್ ಎಥಿಕಲ್ ಹ್ಯಾಕರ್ ಆಗಿರುವ ಅವರು ಆ ಸಂದರ್ಭದಲ್ಲಿ ಕಾಲೇಜು ಓದುತ್ತಿದ್ದರು. ಆ ಬಳಿಕ ಕೆಲವೊಂದು ಸಣ್ಣ ಕಂಪನಿಗಳಲ್ಲಿ ಕೆಲಸ ಮಾಡಿದ್ದು, ಬಳಿಕ ಜಗತ್ತಿನ ಮೊದಲ ಆವಿಷ್ಕಾರ ಎನ್ನುವಂತೆ ಸ್ವಂತ ಕಂಪನಿಯನ್ನು ಪ್ರಾರಂಭಿಸಿದರು. ಉದ್ಯಮ ಆರಂಭಿಸಿ ಎರಡು ಬಾರಿ ಕೈಸುಟ್ಟುಕೊಂಡಿದ್ದು, ಮೂರನೇ ಬಾರಿಗೆ ಜಾಕ್‌ಪಾಟ್ ಹೊಡೆಯುವ ಮೂಲಕ ಯಶಸ್ವಿನ ಉತ್ತುಂಗಕ್ಕೆ ಏರಿದ್ದಾರೆ.

ಆ ಮೂಲಕ ತಾವು ಪ್ರಾರಂಭಿಸಿದ ಬಿಸಿನೆಸ್ ಸುಮಾರು 25 ದೇಶಗಳಲ್ಲಿ ಕೇವಲ 15 ತಿಂಗಳಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಐಐಟಿ- ಐಐಎಂನಲ್ಲಿ ಓದಿದ ಟೆಕ್ ಉದ್ಯಮಿಗಳಂತೆಯೇ ಕರ್ಮೇಶ್ ಗುಪ್ತಾ ಅವರು ಕೂಡ ಎನ್‌ಎನ್‌ಎಂ ಇನ್‌ಸ್ಟಿಟ್ಯೂಟ್ ಆಫ್ ಇನ್ಫಾರ್ಮೆಷನ್ ಟೆಕ್ನಾಲಜಿಯಲ್ಲಿ ಓದಿದ್ದಾರೆ.
ಅದಾದ ಬಳಿಕ 2014ರಲ್ಲಿ ಅವರು ತಮ್ಮ ಮೊದಲ ವೆಂಚರ್ ಆದ ಎಚ್‌ಟಿಟಿಕಾರ್ಟ್ ಟೆಕ್ನಾಲಜೀಸ್ ಅನ್ನು ತಮ್ಮ ಸೋದರ ಸಂಬಂಧಿ ಪ್ರವೀಣ್ ಗುಪ್ತಾ ಅವರ ಜತೆ ಸೇರಿ ಪ್ರಾರಂಭಿಸಿದ್ದರು. ಮುಂದೆ ಅವರು ಜೈಪುರದಲ್ಲಿ ದೇಶದ ಮೊದಲ ಉಚಿತ ವೈಫೈ ಸೇವೆಯನ್ನು ಪ್ರಾರಂಭಿಸಿದ್ದರು.
ಈ ಮಾದರಿ ಬಿಸಿನೆಸ್ ಮೂಲಕ ಹೈಪರ್ ಲೋಕಲ್ ವಿಡಿಯೋ ಹಾಗೂ ಇಮೇಜ್ ಜಾಹೀರಾತು ಮೂಲಕ ಆದಾಯ ಮೂಲವನ್ನು ಕಂಡುಕೊಂಡರು. ಆರಂಭದಲ್ಲಿ 10 ಗ್ರಾಹಕರ ಮೂಲಕ ದೇಶದಲ್ಲೇ ಮೊದಲ ಪ್ರಯೋಗ ಎನ್ನುವ ರೀತಿ ಪ್ರಾರಂಭಿಸಿದ್ದರು. ಆದರೆ, ತಮ್ಮ ನಿರೀಕ್ಷೆಗೆ ತಕ್ಕಂತೆ ಲಾಭ ಬರದ ಹಿನ್ನಲೆಯಲ್ಲಿ ಅದನ್ನು ಮುಚ್ಚುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆದರೆ, ಅವರಿಬ್ಬರು ಆ ಕಂಪನಿಯನ್ನು ಮುಚ್ಚುವ ಬದಲು ತಮ್ಮ ಉದ್ಯಮವನ್ನು ಐಟಿ ಸರ್ವೀಸ್ ಉದ್ಯಮದತ್ತ ಕೇಂದ್ರೀಕರಿಸಿದರು. ಆದರೆ, ಈ ಪ್ರಯತ್ನ ಕೂಡ ವಿಫಲಗೊಂಡಿತ್ತು. ಆದರೆ, ಛಲ ಬಿಡದ ಗುಪ್ತಾ ಅವರು ಉದ್ಯಮ ಕ್ಷೇತ್ರದಲ್ಲಿ ಹೊಸ ಪ್ರಯೋಗದೊಂದಿಗೆ ಪ್ರಯತ್ನವನ್ನು ಮುಂದುವರಿಸಿದರು.
ಆ ಮೂಲಕ 2017 ರಲ್ಲಿ ಹೊಸ ಉತ್ಪನ್ನವೊಂದನ್ನು ವೈಜಂಗಲ್ ಹೆಸರಿನಲ್ಲಿ ಪಾರಂಭಿಸಿದ್ದು, ಅದು ಎಲ್ಲ ರೀತಿಯ ಸೈಬರ್ ಸೆಕ್ಯೂರಿಟಿಗೆ ಪರಿಹಾರ ಒದಗಿಸುವ ಟೂಲ್ ಆಗಿತ್ತು. ಅವರು ಸರ್ಕಾರಿ ಇಲಾಖೆ, ಸಚಿವರು, ಹೋಟೆಲ್‌ಗಳು ಸೇರಿದಂತೆ ಹಲವು ವಲಯಗಳ ಗ್ರಾಹಕರನ್ನು ಪಡೆಯುವ ಮೂಲಕ ಗಮನಸೆಳೆದರು.
ಕೇವಲ ಮೂರೇ ತಿಂಗಳಲ್ಲಿ ಕಂಪನಿಯು ಯಶಸ್ವಿನ ಹಾದಿಯಲ್ಲಿ ಸಾಗಿದ್ದು, ನಿರೀಕ್ಷೆಗೂ ಮೀರಿದ ಲಾಭವನ್ನು ಗಳಿಸುವುದಕ್ಕೆ ಪ್ರಾರಂಭಿಸಿದೆ. ಆರಂಭದಲ್ಲಿ ಈ ಕಂಪನಿ ಸ್ಥಾಪನೆಗೆ ಕೇವಲ 11 ಲಕ್ಷ ರೂಪಾಯಿ ಹೂಡಿಕೆ ಮಾಡಲಾಗಿದೆ.
2022ರಲ್ಲಿ ಕಂಪನಿಯು ಎಸ್‌ಒಎಸ್‌ವಿ ಎನ್ನುವ ವೆಂಚರ್ ಕ್ಯಾಪಿಟಲ್ ಕಂಪನಿ ಮೂಲಕ ಫಂಡ್ ರೈಸ್ ಮಾಡಲಾಯಿತು. ಕರ್ಮೇಶ್ ಅವರು ಕಂಪನಿಯ ಸಿಇಒ ಆಗಿದ್ದು, ಪ್ರವೀಣ್ ಅವರು ಸಿಟಿಒ ಆಗಿದ್ದಾರೆ. ಈಗ ಈ ಕಂಪನಿಯು 183 ಕೋಟಿ ರೂಪಾಯಿ ಆಸ್ತಿ ಮೌಲ್ಯವನ್ನು ಹೊಂದಿದೆ.


Click it and Unblock the Notifications