ಅಪೂರ್ವ ಮೆಹ್ತಾ, ಭಾರತೀಯ ಮೂಲದ ಉದ್ಯಮಿಯಾಗಿದ್ದಾರೆ. ಜನಪ್ರಿಯ ಅಮೇರಿಕನ್ ದಿನಸಿ ವಿತರಣೆ ಮತ್ತು ಪಿಕ್-ಅಪ್ ಸೇವೆ ಇನ್‌ಸ್ಟಾಕಾರ್ಟ್ ಸಹ-ಸಂಸ್ಥಾಪಕರಾಗಿದ್ದಾರೆ. ಮೆಹ್ತಾ ಮೂಲತಃ ರಾಜಸ್ಥಾನದ ಜೋಧ್‌ಪುರದವರು. ಮೆಹ್ತಾ ಭಾರತವನ್ನು ತೊರೆದು ಆಫ್ರಿಕನ್ ದೇಶವಾದ ಲಿಬಿಯಾಕ್ಕೆ ತನ್ನ ಹೆತ್ತವರೊಂದಿಗೆ ತೆರಳಿದ್ದು ಬಳಿಕ ಅಲ್ಲಿಂದ ಭಾರತೀಯರು ಅತಿ ಹೆಚ್ಚಾಗಿ ವಲಸೆ ಹೋಗುವ ದೇಶ ಕೆನಡಾಕ್ಕೆ ತೆರಳಿದರು.
ಮೆಹ್ತಾ ಅವರು ಕೆನಡಾದ ವಾಟರ್‌ಲೂ ವಿಶ್ವವಿದ್ಯಾಲಯದಿಂದ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದು, ಅವರ ವೃತ್ತಿಜೀವನ ಬ್ಲ್ಯಾಕ್‌ಬೆರಿ ಮೂಲಕ ಆರಂಭವಾಯಿತು. ಆ ಬಳಿಕ ಕ್ವಾಲ್ಕಾಮ್ ಮತ್ತು ಅಮೆಜಾನ್‌ನಂತಹ ಟೆಕ್ ದೈತ್ಯ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು. 2010 ರಲ್ಲಿ ಅವರು ಸ್ವಂತ ಉದ್ಯಮ ಆರಂಭಿಸಬೇಕು ಎನ್ನುವ ಕನಸಿನೊಂದಿಗೆ ಅಮೆಜಾನ್ ತೊರೆದರು.

ಆದರೆ ಆರಂಭಿಸಿದ 20 ಉದ್ಯಮಗಳಲ್ಲಿ ಹೆಚ್ಚಿನವು ವೈಫಲ್ಯಗೊಂಡಿತು. ಆದರೆ ಕಾರು ಇಲ್ಲದೇ, ಬಸ್ಸಿನಲ್ಲಿ ಕೆನಡಾದ ಚಳಿಯಲ್ಲಿ ದಿನಸಿ ಖರೀದಿಸಲು ಅನಿವಾರ್ಯವಾಗಿ ಅಂಗಡಿಗಳಿಗೆ ಹೋಗಬೇಕೆಂದು ಬೇಸರಗೊಂಡಿದ್ದ ಮೆಹ್ತಾ ಅವರಿಗೆ ಒಂದು ಆಲೋಚನೆ ಹುಟ್ಟಿತು. ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬಂಟಿಯಾಗಿದ್ದ ಅವರಿಗೆ ಹಸಿವಾಗಿತ್ತು. ಪ್ರಿಡ್ಜ್‌ನಲ್ಲಿ ಹಾಟ್ ಸಾಸ್ ಅನ್ನು ಹೊರತುಪಡಿಸಿ ಏನೂ ಇಲ್ಲದ 'ಆ ದಿನ' ನಿಜಕ್ಕೂ ಅವರ ಪಾಲಿಗೆ ಅದೃಷ್ಟದ ದಿನವಾಗಿತ್ತು.
"ನನ್ನ ಖಾಲಿ ರೆಫ್ರಿಜರೇಟರ್ ಸ್ಫೂರ್ತಿಯ ಮೂಲವಾಗಿತ್ತು. 2012 ರಲ್ಲಿ ದಿನಸಿಗಳನ್ನು ಹೊರತುಪಡಿಸಿ ಎಲ್ಲವನ್ನೂ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡಬಹುದು ಎಂದು ಅನಿಸಿದ್ದು ನನಗೆ ಲೈಟ್ ಬಲ್ಬ್ ಕ್ಷಣವಾಗಿತ್ತು. ತಕ್ಷಣ ಇನ್‌ಸ್ಟಾಕಾರ್ಟ್ ಅಪ್ಲಿಕೇಶನ್‌ನ ಮೊದಲ ಆವೃತ್ತಿಯನ್ನು ಕೋಡಿಂಗ್ ಮಾಡಲು ಪ್ರಾರಂಭಿಸಿದೆ," ಎನ್ನುತ್ತಾರೆ ಮೆಹ್ತಾ.
ಮೆಹ್ತಾ ದಿನಸಿ ಸಾಮಾಗ್ರಿ ಶಾಪಿಂಗ್‌ನಲ್ಲಿ ಜನರು ಪಡುವ ಶ್ರಮ ಕಷ್ಟ ಗಮನಿಸಿದ್ದರು, ಗ್ರಾಹಕರ ಮನೆ ಬಾಗಿಲಿಗೆ ದಿನಸಿ ವಸ್ತುಗಳನ್ನು ತಲುಪಿಸುವಲ್ಲಿ ಬೃಹತ್ ಮಾರುಕಟ್ಟೆ ಸಾಮರ್ಥ್ಯವನ್ನು ಅರಿತುಕೊಂಡರು. ಇದು 2012 ರಲ್ಲಿ ಸ್ಥಾಪನೆಯಾದ ಇನ್‌ಸ್ಟಾಕಾರ್ಟ್‌ನ ಮೂಲವಾಯಿತು.
ಇನ್‌ಸ್ಟಾಕಾರ್ಟ್ ಬ್ಲಾಕ್‌ಬಸ್ಟರ್ ಆರಂಭಿಕ ಸಾರ್ವಜನಿಕ ಕೊಡುಗೆಯನ್ನು (ಐಪಿಒ) ನೋಡಿದಾಗ ಮೆಹ್ತಾ ಅವರ ಕಂಪನಿಯೂ 9,100 ಕೋಟಿ ರೂಪಾಯಿ ಆಗಿ ಆದಾಯದ ದೃಷ್ಟಿಯಿಂದ ಅಮೇರಿಕಾದಲ್ಲಿ ಅತಿ ದೊಡ್ಡ ಕಿರಾಣಿ-ವಿತರಣಾ ಸಂಸ್ಥೆಯಾಗಿ ವಿಸ್ತರಿಸಿತು. ಇನ್‌ಸ್ಟಾಕಾರ್ಟ್ 80,000 ಕ್ಕೂ ಹೆಚ್ಚು ರಿಟೇಲ್ ವ್ಯಾಪಾರಿಗಳ ಜಾಲವನ್ನು ಮತ್ತು 7.7 ಮಿಲಿಯನ್ ಗ್ರಾಹಕರನ್ನು ಹೊಂದಿದೆ.
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಅಂದರೆ ಮಾರ್ಚ್ 2021 ರಲ್ಲಿಅವರ ಸಂಸ್ಥೆಯ ಮೌಲ್ಯ 39 ಶತಕೋಟಿ ಡಾಲರ್ ತಲುಪಿತು. ಇದಾಗಿ ಅವರು ಕೇವಲ ಐದು ತಿಂಗಳ ನಂತರ, ಆಗಸ್ಟ್ 2021 ರಲ್ಲಿ ಸಂಸ್ಥೆಯ ಸಿಇಒ ಹುದ್ದೆಯಿಂದ ಕೆಳಗಿಳಿದಿದ್ದರು. ನಂತರ ಅವರು ಐಪಿಒ ಪ್ರಕ್ರಿಯೆಗಳ ಭಾಗವಾಗಿ ಕಾರ್ಯಕಾರಿ ಅಧ್ಯಕ್ಷರಾಗಿ ತಮ್ಮ ಮಂಡಳಿಯ ಸ್ಥಾನವನ್ನು ವಹಿಸಿಕೊಂಡರು.
ಬಳಿಕ ಆ ಅಧಿಕಾರವನ್ನು ಮಾಜಿ ಮೆಟಾ ಪ್ಲಾಟ್‌ಫಾರ್ಮ್‌ಗಳ ಕಾರ್ಯನಿರ್ವಾಹಕರಾಗಿರುವ ಕರೆನ್ಸಿ ಸಿಇಒ ಫಿಡ್ಜಿ ಸಿಮೊ ಅವರಿಗೆ ಹಸ್ತಾಂತರಿಸಿದರು. ಅಂದು ಆಫ್‌ಲೈನ್‌ನಲ್ಲಿ ದಿನಸಿ ವಸ್ತುಗಳನ್ನು ಖರೀದಿಸಲು ಬೇಸರಗೊಂಡಿದ್ದ ಮೆಹ್ತಾ ಅವರು ಇಂದು 8,325 ಕೋಟಿ ರೂಪಾಯಿಗಳ ನಿವ್ವಳ ಮೌಲ್ಯದೊಂದಿಗೆ ಬಿಲಿಯನೇರ್ ಆಗಿದ್ದಾರೆ.


Click it and Unblock the Notifications