ಭಾರತದಲ್ಲಿ ಹಲವಾರು ಉದ್ಯಮಿಗಳು ತಾವು ಸೇರಿಕೊಂಡ ಕಂಪನಿಗಳಲ್ಲಿ ಸುದೀರ್ಘ ಅವಧಿಗೆ ಸೇವೆಯನ್ನು ಸಲ್ಲಿಸುವ ಮೂಲಕ ಆ ಸಂಸ್ಥೆಯ ಯಶಸ್ವಿಗೆ ಕಾರಣಕರ್ತರಾಗಿದ್ದಾರೆ. ಸಣ್ಣ ಹುದ್ದೆಗೆ ಕೆಲಸಕ್ಕೆ ಸೇರಿಕೊಂಡು ಬಳಿಕ ತಮ್ಮ ಪ್ರತಿಭೆ ಹಾಗೂ ಉದ್ಯಮ ಕೌಶಲ್ಯತೆಗಳಿಂದಾಗಿ ಉನ್ನತ ಹುದ್ದೆಗೆ ಏರಿದ ಹಲವು ಯಶೋಗಾಥೆಗಳಿವೆ.
ಅಂಥವರ ಸಾಲಿನಲ್ಲಿ ಆರ್ ಹರೀಶ್ ಭಟ್ ಕೂಡ ಸೇರಿದ್ದಾರೆ. ಅವರು ಟಾಟಾ ಸನ್ಸ್‌ನಲ್ಲಿ ಬ್ರಾಂಡ್ ಕಸ್ಟೋಡಿಯನ್ ಆಗಿರುವ ಜತೆಗೆ ಟಾಟಾ ಕಾಫಿ ಲಿಮಿಟೆಡ್‌ಗೆ ಅಧ್ಯಕ್ಷರಾಗಿದ್ದಾರೆ. ಹರೀಶ್ ಭಟ್ ಅವರು ಟಾಟಾ ಗ್ರೂಪ್‌ಗೆ 1987 ರಲ್ಲಿ ಸೇರಿದ್ದು, ಅವರು ಅಧಿಕಾರಿಯಾಗಿ ಟಾಟಾ ಅಡ್ಮಿನಿಸ್ಟ್ರೇಟೀವ್ ಸರ್ವೀಸ್(ಟಿಎಎಸ್)ನಲ್ಲಿ ಇದ್ದರು.

5,025 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯ
ಭಟ್ ಅವರು ತಮ್ಮ ಎಂಜಿನಿಯರಿಂಗ್ ಪದವಿಯನ್ನು ಬಿಐಟಿಎಸ್ ಪಿಲಾನಿಯಲ್ಲಿ 1985ರಲ್ಲಿ ಮಾಡಿದ್ದಾರೆ. ಜತೆಗೆ, ಭಟ್ ಅವರು ಅಹಮದಾಬಾದ್‌ನ ಐಐಎಂನ ಹಳೇ ವಿದ್ಯಾರ್ಥಿಯಾಗಿದ್ದು, ಅವರು 1985-87ರ ಅವಧಿಯಲ್ಲಿ ಅಲ್ಲಿ ಪಿಜಿಡಿಎಂ ಪದವಿ ಮಾಡಿದ್ದಾರೆ. ಹರೀಶ್ ಭಟ್ ಅವರು 2014 ರಿಂದ ಟಾಟಾ ಕಾಫಿಯ ಅಧ್ಯಕ್ಷರಾಗಿದ್ದಾರೆ. ಟಾಟಾ ಕಾಫಿ ಕಂಪನಿಯು 2023ರ ನವೆಂಬರ್ 8 ರ ಪ್ರಕಾರ, 5,025 ಕೋಟಿ ರೂಪಾಯಿ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.
ಭಟ್ ಅವರು ಕಳೆದ 35 ವರ್ಷಗಳ ಸುಧೀರ್ಘ ಸೇವಾವಧಿಯಲ್ಲಿ ಹಲವು ಹಿರಿಯ ಸ್ತರದ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಅವುಗಳಲ್ಲಿ ಟಾಟಾ ಗ್ಲೋಬಲ್ ಬಿವರೇಜಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಟೈಟಾನ್ ಕಂಪನಿಯ ವಾಚಸ್ ಅಂಡ್ ಜ್ಯುವೆಲ್ಲರಿ ಬಿಸಿನೆಸ್ ವಿಭಾಗದ ಸಿಇಒ ಕೂಡ ಆಗಿದ್ದರು.
ಪ್ರಸ್ತುತ ಭಟ್ ಅವರು ಟಾಟಾ ಗ್ರೂಪ್‌ನ ಹಲವು ಕಂಪನಿಗಳ ಆಡಳಿತ ಮಂಡಳಿಯಲ್ಲಿ ಇದ್ದಾರೆ. ಟ್ರೆಂಟ್ ಲಿಮಿಟೆಡ್, ಟಾಟಾ ಸ್ಟಾರ್‌ಬಕ್ಸ್ ಪ್ರೈವೆಟ್ ಲಿಮಿಟೆಡ್, ಇನ್ಫಿನಿಟಿ ರಿಟೇಲ್ ಲಿಮಿಟೆಡ್ ಹಾಗೂ ಟಾಟಾ ಎಐಎ ಲೈಫ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್‌ನಲ್ಲಿಯೂ ಇದ್ದಾರೆ.
ಅಲ್ಲದೆ ಅವರು ಕಳೆದ ಎರಡು ದಶಕದಲ್ಲಿ ಟಾಟಾ ಗ್ರೂಪ್‌ನ ಅನೇಕ ಐಕಾನಿಕ್ ಬ್ರಾಂಡ್‌ಗಳ ಬೆಳವಣಿಗೆ, ಜ್ಯುವೆಲ್ಲರಿ ವ್ಯವಹಾರದ ಯಶಸ್ಸು, ಟೆಟ್ಲಿ ಸೇರಿದಂತೆ ಹಲವು ಸ್ವಾಧೀನ ಪ್ರಕ್ರಿಯೆಗಳ ಕಾರ್ಯತಂತ್ರದಲ್ಲಿ ನಿರ್ಣಾಯಕ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಹರೀಶ್ ಭಟ್ ಅವರು ಲೇಖಕರು ಕೂಡ ಆಗಿದ್ದು, ಹಲವು ರಾಷ್ಟ್ರ ಮಟ್ಟದ ನಿಯತಕಾಲಿಕೆಗಳಲ್ಲಿ ಲೇಖನಗಳು ಪ್ರಕಟಗೊಂಡಿವೆ. ಜತೆಗೆ ಅವರು ನಾಲ್ಕು ಪುಸ್ತಕಗಳನ್ನು ಕೂಡ ಬರೆದಿದ್ದು, ಟಾಟಾ ಗ್ರೂಪ್‌ನ 40 ಸ್ಫೂರ್ತಿದಾಯಕ ಕಥೆಗಳನ್ನು ಒಳಗೊಂಡ ʼ#ಟಾಟಾ ಸ್ಟೋರೀಸ್ʼ ಎಂಬ ಪುಸ್ತಕವನ್ನು ಕೂಡ ಬರೆದಿದ್ದಾರೆ.


Click it and Unblock the Notifications