ಭಾರತೀಯ ಟಿವಿ ಕಾರ್ಯಕ್ರಮ, "ಶಾರ್ಕ್ ಟ್ಯಾಂಕ್ ಇಂಡಿಯಾ"ದಲ್ಲಿ ಹೂಡಿಕೆದಾರರಾಗಿ ಕಾಣಿಸಿಕೊಂಡಿರುವ ಅನುಪಮ್ ಮಿತ್ತಲ್ ಇಂದು ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಆದರೆ ಅವರ ಯಶಸ್ಸಿನ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ. ಇತ್ತೀಚೆಗೆ ಪ್ರಸಾರವಾದ "ಬಾರ್ಬರ್‌ಶಾಪ್ ಪಾಡ್‌ಕ್ಯಾಸ್ಟ್"ನಲ್ಲಿ ಅನುಪಮ್ ಅವರು ಮನಬಿಚ್ಚಿ ಮಾತನಾಡಿದ್ದು, ಈ ವೇಳೆ ಅವರ, ವಿನಮ್ರ ಆರಂಭದಿಂದ ಬಹುಕೋಟ್ಯಾಧಿಪತಿಯಾಗುವವರೆಗಿನ ಅವರ ಪ್ರಯಾಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.
ತಮ್ಮ ಆರಂಭಿಕ ದಿನಗಳನ್ನು ನೆನಪಿಸಿಕೊಂಡ ಅನುಪಮ್ ಅವರು ತಮ್ಮ ಕುಟುಂಬದೊಂದಿಗೆ ಮುಂಬೈನ ಸಣ್ಣ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ವಿಚಾರವನ್ನು ಹೊರಹಾಕಿದ್ದಾರೆ. ಆರ್ಥಿಕ ಮುಗ್ಗಟ್ಟಿನ ಹೊರತಾಗಿ ಒಡಹುಟ್ಟಿದವರೊಂದಿಗೆ ಆಡಿ ಬೆಳೆದ ಖುಷಿಯನ್ನು ಅವರು ಪ್ರೀತಿಯಿಂದ ಮೆಲುಕು ಹಾಕಿದ್ದಾರೆ.

"ಎಲ್ಲಾ ಮಕ್ಕಳಂತೆ ಅಂದು ಇದ್ದ ಕಷ್ಟ ನಮಗೆ ಅರ್ಥವಾಗುತ್ತಿರಲಿಲ್ಲ, ನಮ್ಮ ಮನೆಯಲ್ಲಿ ತುಂಬಾ ಮಕ್ಕಳಿದ್ದ ಕಾರಣ ಆಟವನ್ನು ಆನಂದಿಸುತ್ತಿದ್ದೇವು. ನಮ್ಮ ಮನೆಯಲ್ಲಿ 20 ಮಂದಿ ಇದ್ದುಆ ಸಮಯದಲ್ಲಿ ಕೇವಲ 1,000 ಚದರ ಅಡಿಯ ಮನೆಯಲ್ಲಿ ವಾಸಿಸುತ್ತಿದ್ದೆವು. ಮನೆ ಸದಸ್ಯರು ಜಾಗವಿಲ್ಲದೇ ಡೈನಿಂಗ್ ಟೇಬಲ್ ಮೇಲೆ, ಡೈನಿಂಗ್ ಟೇಬಲ್ ಕೆಳಗೆ ಮಲಗಿದ್ದರು, ಇದೆಲ್ಲಾ ಮಕ್ಕಳಾಗಿದ್ದಆಗ ನಮಗೆ ಅರ್ಥವಾಗುತ್ತಿರಲಿಲ್ಲ, ಆ ಬಗ್ಗೆ ಯೋಚಿಸುತ್ತಿನೂ ಇರಲಿಲ್ಲ," ಎಂದು ಹೇಳಿದ್ದಾರೆ.
ಅನುಪಮ್ ಅವರ ತಂದೆ ಜವಳಿ ಉದ್ಯಮದಲ್ಲಿ ಲಾಭದಾಯಕವಾದಗ ಅನುಪಮ್ ಅವರು ಅಧ್ಯಯನಕ್ಕಾಗಿ ಅಮೇರಿಕಾಕ್ಕೆ ತೆರಳಿದರು. ಆದರೆ ಸರಿಯಾದ ಉದ್ಯೋಗ ಯಾವುದು ದೊರಕದೇ ಸಾಕಷ್ಟು ಸವಾಲುಗಳನ್ನು ಎದುರಿಸಿದರು. ಕೊನೆಗೆ ತಮ್ಮ ಸ್ವಂತವಾಗಿರುವುದು ಏನನ್ನಾದರೂ ಆರಂಭಿಸಬೇಕು ಎಂದು ನಿರ್ಧರಿಸಿದರು.
ಆದರೆ ಇದಕ್ಕಾಗಿ ಅವರು ತಮ್ಮ ಕುಟುಂಬದಿಂದ ಯಾವುದೇ ಹಣಕಾಸಿನ ನೆರವು ಪಡೆಯುವುದಿಲ್ಲ ಎಂಬ ದೃಢ ಸಂಕಲ್ಪ ಮಾಡಿದರು. ಈ ನಿರ್ಧಾರದ ಪರಿಣಾಮ ಅವರು ಹಸಿವಿನಿಂದ ಖಾಲಿ ಹೊಟ್ಟೆಯಲ್ಲಿರಬೇಕಾದ ದಿನಗಳನ್ನು ಎದುರಿಸಬೇಕಾಯಿತು.
"ನನ್ನ ಬಳಿ ಹಣವಿಲ್ಲ, ಮತ್ತು ನಾನು ಹಣ ಸಹಾಯ ಕೇಳಿದರೆ 'ನಿನ್ನ ಸಂಬಳ ಎಲ್ಲಿದೆ?' ಪ್ರಶ್ನಿಸುತ್ತಿದ್ದರು. ಹೀಗಾಗಿ ಮೊದಲ ಬಾರಿಗೆ ನನಗೆ ಹಸಿವಿನ ಅನುಭವವಾಗಿತ್ತು. ಹಸಿವಿನ ಅನುಭವವು ನಿಮಗೆ ಬಹಳಷ್ಟು ಪಾಠಗಳನ್ನು ಕಲಿಸುತ್ತದೆ." ಎನ್ನುತ್ತಾರೆ ಅನುಪಮ್. ಕೊನೆಗೆ ಅದೃಷ್ಟದೊಂದಿಗೆ ಅವರ ಕಠಿಣ ಪರಿಶ್ರಮವು ಫಲ ನೀಡಿತು. ಇಪ್ಪತ್ತರ ದಶಕದ ಆರಂಭದಲ್ಲಿ ಅವರು ಕೋಟ್ಯಾಧೀಶರಾಗಿ ಬೆಳೆದುನಿಂತರು.
Shaadi.com ಸ್ಥಾಪಕರಾಗಿರುವ ಅನುಪಮ್ ಅವರ ಪೋರ್ಟಲ್ 2008 ರಲ್ಲಿ, 10 ಮಿಲಿಯನ್ ಬಳಕೆದಾರರನ್ನು ಹೊಂದಿತ್ತು ಮಾತ್ರವಲ್ಲದೇ 1 ಮಿಲಿಯನ್ ಜನರು ಶಾದಿ ಡಾಟ್ ಕಾಮ್ ಮೂಲಕ ವಿವಾಹವಾದರು. ಅಂದು ಇದು ದೇಶದ ಅತಿದೊಡ್ಡ ಮತ್ತು ಜನಪ್ರಿಯ ಪೋರ್ಟಲ್ ಆಗಿ ಮಾರ್ಪಟ್ಟಿತ್ತು. ಇಂದು 50 ಮಿಲಿಯನ್ ಮದುವೆ ಮಾಡಿಸಿದ ಕೀರ್ತಿ ಇವರದ್ದಾಗಿದೆ. 27 ವರ್ಷಗಳ ಪ್ರಯಾಣದಲ್ಲಿ, ಭಾರತದ 72 ನಗರಗಳಲ್ಲಿ 123 ವಿವಾಹ ಕೇಂದ್ರಗಳನ್ನು ಮಿತ್ತಲ್ ಆರಂಭಿಸಿದ್ದಾರೆ.
ಶಾರ್ಕ್ ಟ್ಯಾಂಕ್ ಇಂಡಿಯಾದಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿರುವ ಅನುಪಮ್ ಅವರು, ತಮ್ಮ ಕಂಪನಿಯಲ್ಲಿ ಹಣವನ್ನು ಹೂಡಿಕೆ ಮಾಡಬೇಕು ಮತ್ತು ಮಾರ್ಗದರ್ಶನ ನೀಡಬೇಕು ಎಂದು ಕಾರ್ಯಕ್ರಮಕ್ಕೆ ಸ್ಪರ್ಧಿಗಳಾಗಿ ಬರುವ ಅನೇಕ ನವ ಉದ್ಯಮಿಗಳು ಕನಸುಕಾಣುತ್ತಾರೆ. ಅನುಪಮ್ ಅವರ ಪ್ರಯಾಣವು ಸ್ಫೂರ್ತಿಯಾಗಿದ್ದು, ಜೀವನೋಪಾಯಕ್ಕಾಗಿ ಕಷ್ಟಪಡುವುದರಿಂದ ಹಿಡಿದು ಅಪ್ರತಿಮ ಯಶಸ್ಸನ್ನು ಸಾಧಿಸುವವರೆಗೆ, ಅವರ ಕಥೆಯು ಕಠಿಣ ಪರಿಶ್ರಮದ ಶಕ್ತಿಗೆ ಸಾಕ್ಷಿಯಾಗಿದೆ.


Click it and Unblock the Notifications