ಮನೆ ಎಂದಾಗ ಒಂದು ಕಾರು ಇರಬೇಕು ಎಂಬುವುದು ಹಲವಾರು ಮಂದಿಯ ಆಸೆಯಾಗಿದೆ. ಮಧ್ಯಮ ವರ್ಗದವರಿಗಂತು ಕಾರು ಹೊಂದಿರುವುದು ಒಂದು ಕನಸಾಗಿದೆ. ಆದರೆ ಈ ದುಬಾರಿ ಕಾಲದಲ್ಲಿ ಬಡ ವರ್ಗಕ್ಕೆ ಬಿಡಿ, ಮಧ್ಯಮ ವರ್ಗಕ್ಕೂ ಕಾರನ್ನು ಖರೀದಿ ಮಾಡುವುದು ಜೇಬಿಗೆ ಕತ್ತರಿಯೇ ಸರಿ!
ಈಗ ಸಾಲ ನೀಡುವ ಹಲವಾರು ಬ್ಯಾಂಕ್, ಆಪ್‌ಗಳು ಇದ್ದರೂ ಕೂಡಾ ಅದನ್ನು ಪಡೆದ ಬಳಿಕ ತೀರಿಸುವುದು ಕಷ್ಟವಲ್ಲವೇ?. ಸೆಕೆಂಡ್ ಹ್ಯಾಂಡ್ ಕಾರು ಬೆಸ್ಟ್ ಅನ್ನುವವರು ಕೂಡಾ ಇದ್ದಾರೆ. ಈ ನಡುವೆ ಇಲ್ಲೋರ್ವ ವ್ಯಕ್ತಿ ಒಂದಲ್ಲ ಎರಡಲ್ಲ ಬರೋಬ್ಬರಿ 604 ಕಾರುಗಳನ್ನು ಹೊಂದಿದ್ದಾರೆ.

604 ಕಾರುಗಳನ್ನು ಹೊಂದಿರುವ ವ್ಯಕ್ತಿಯಿವರು!
ಬ್ರೂನಿಯ ಸುಲ್ತಾನ ಹಸ್ಸಾನಲ್ ಬೊಲ್ಕಿಯಾ ಸುಮಾರು 4,000 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಕಾರುಗಳನ್ನು ಹೊಂದಿದ್ದಾರೆ. ಈ ಮೂಲಕವೇ ಗಿನ್ನೀಸ್ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ರಾಜನ ಕಾರು ಸಂಗ್ರಹವು ಖಾಸಗಿಯಾಗಿದೆ.
ವರದಿಗಳ ಪ್ರಕಾರ, 1990 ರ ದಶಕದ ಮಧ್ಯಭಾಗದಲ್ಲಿ ಖರೀದಿಸಿದ ರೋಲ್ಸ್ ರಾಯ್ಸ್ ಮತ್ತು ಬೆಂಟ್ಲಿಯಲ್ಲಿ ಅರ್ಧದಷ್ಟು ಸುಲ್ತಾನ ಮತ್ತು ಅವರ ಕುಟುಂಬಕ್ಕೆ ಸೇರಿದೆ. ಸುಲ್ತಾನನನ್ನು ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬನೆಂದು ಹೆಸರಿಸಲಾಗಿದೆ.
ಯುನೈಟೆಡ್ ಕಿಂಗ್‌ಡಮ್‌ನಿಂದ ದೇಶದ ಸ್ವಾತಂತ್ರ್ಯದ ನಂತರ 1984 ರಿಂದ ಹಸ್ಸಾನಲ್ ಬೊಲ್ಕಿಯಾ ಅವರು ಬ್ರೂನೈಯ ಸುಲ್ತಾನ್ ಮತ್ತು ಪ್ರಧಾನ ಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರಾಣಿ ಎಲಿಜಬೆತ್ 2 ರ ನಂತರ ಅವರು ಇತಿಹಾಸದಲ್ಲಿ ದೀರ್ಘಕಾಲ ಆಳ್ವಿಕೆ ನಡೆಸಿದ ದೊರೆಯಾಗಿದ್ದಾರೆ.
ರಾಜ ಐಷಾರಾಮಿ ಜೀವನಶೈಲಿಯನ್ನು ನಡೆಸುತ್ತಿದ್ದಾರೆ. 1984 ರಲ್ಲಿ ನಿರ್ಮಿಸಲಾದ ಸುಲ್ತಾನನ ಮನೆ, ಇಸ್ತಾನಾ ನೂರುಲ್ ಇಮಾನ್ ಅರಮನೆಯು 2 ಮಿಲಿಯನ್ ಚದರ ಅಡಿ ವಿಸ್ತೀರ್ಣವನ್ನು ಹೊಂದಿರುವ ವಿಶ್ವದ ಅತಿದೊಡ್ಡ ಅರಮನೆಯಾಗಿದೆ.
ಅರಮನೆಯ ಗುಮ್ಮಟವನ್ನು 22-ಕ್ಯಾರೆಟ್ ಚಿನ್ನದಿಂದ ಅಲಂಕರಿಸಲಾಗಿದ್ದು, 2550 ಕೋಟಿ ರೂಪಾಯಿ ಮೌಲ್ಯದ್ದಾಗಿದೆ. 92 ಕೋಟಿ ರೂಪಾಯಿ ಮೌಲ್ಯದ ವಜ್ರವನ್ನೂ ಹೊಂದಿದ್ದಾರೆ. ಸುಲ್ತಾನನ ಅರಮನೆಯು ಐದು ಈಜುಕೊಳಗಳು, 1700 ಕೊಠಡಿಗಳು ಮತ್ತು 200 ಹವಾನಿಯಂತ್ರಿತ ಕುದುರೆ ಕೊಟ್ಟಿಗೆಗಳನ್ನು ಹೊಂದಿದೆ.
ಕಾರು ಸಂಗ್ರಹಣೆ ವಿಚಾರಕ್ಕೆ ನಾವು ಬಂದಾಗ, ಸುಮಾರು 300 ಫೆರಾರಿಗಳು ಮತ್ತು 500 ರೋಲ್ಸ್ ರಾಯ್ಸ್‌ಗಳನ್ನು ಹೊಂದಿದ್ದಾರೆ. ಸುಲ್ತಾನ್‌ನ ಐಷಾರಾಮಿ 100 ಗ್ಯಾರೇಜ್‌ಗಳಲ್ಲಿ ಇತರ ಹಲವು ಉನ್ನತ ದರ್ಜೆಯ ವಾಹನಗಳನ್ನು ನಿಲ್ಲಿಸಲಾಗಿದೆ.


Click it and Unblock the Notifications