ಮಹತ್ವದ ರಾಜತಾಂತ್ರಿಕ ಮಧ್ಯಸ್ಥಿಕೆಯಲ್ಲಿ ಕತಾರ್‌ನಲ್ಲಿ ಅಘೋಷಿತ ಆರೋಪದಡಿಯಲ್ಲಿ 2022ರ ಆಗಸ್ಟ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಎಂಟು ಮಂದಿ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಸೋಮವಾರ ಮುಂಜಾನೆ ಪ್ರಕಟಿಸಿದ್ದು, ಇದಕ್ಕೆ ಸಹಕರಿಸಿದ ಕತಾರ್‌ನ ಅಮೀರ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರಿಗೆ ಭಾರತ ಸರ್ಕಾರ ಧನ್ಯವಾದ ತಿಳಿಸಿದೆ.
ಕತಾರ್ ನಲ್ಲಿ ದಹ್ರಾ ಗ್ಲೋಬಲ್ ಪರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಈ ಎಂಟು ಮಂದಿ ಪೈಕಿ ಏಳು ಮಂದಿ ಈಗಾಗಲೇ ಭಾರತಕ್ಕೆ ಮರಳಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇವರು ಭಾರತಕ್ಕೆ ಮರಳಲು ಅನುವಾಗುವಂತೆ ಕತಾರ್‌ನ ಅಮೀರ್ ಕೈಗೊಂಡ ನಿರ್ಧಾರವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಶ್ಲಾಘಿಸಿದೆ.

ಹಾಗಿದ್ರೆ ಕತಾರ್‌ನ ಅಮೀರ್ ತಮೀಮ್ ಬಿನ್ ಹಮದ್ ಅಲ್ ಥಾನಿ ಯಾರು?
'ಅಮೀರ್' ಅವರು ಕತಾರ್‌ನ ಸರ್ವೋಚ್ಚ ಆಡಳಿತಗಾರರಾಗಿದ್ದಾರೆ. ದೇಶದ ಸ್ಥಾಪನೆಯಾದ ನಂತರ 11 ಎಮಿರ್‌ಗಳು ಇದ್ದಾರೆ. ಎಲ್ಲರೂ ಅಲ್-ಥಾನಿ ಕುಟುಂಬದಿಂದ ಬಂದವರು. ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರಿಗೆ 2013 ರಲ್ಲಿ ಈ "ಗೌರವ"ವನ್ನು ನೀಡಲಾಯಿತು. ಅವರ ಹಿರಿಯ ಸಹೋದರ ಶೇಖ್ ಜಾಸಿಮ್ ಅವರು ಸಿಂಹಾಸನದ ಹಕ್ಕುದಾರರಾಗಿದ್ದರೂ, ಅವರು ಈ ಜವಬ್ದಾರಿಯಿಂದ ಹಿಂದೆ ಸರಿದ ಕಾರಣ ಶೇಖ್ ತಮೀಮ್ ಅವರಿಗೆ ಈ ಸ್ಥಾನ ದೊರಕಿತು.
ಅಮೀರ್ ತಮೀಮ್ ಅವರು 1980ರ 3 ಜೂನ್ ರಂದು ಜನಿಸಿದ್ದು, ಮಾಜಿ ಅಮೀರ್ ಹಮದ್ ಬಿನ್ ಖಲೀಫಾ ಅಲ್ ಥಾನಿ ಅವರ ನಾಲ್ಕನೇ ಪುತ್ರರಾಗಿದ್ದಾರೆ. ಇವರು ತಮ್ಮ ಆರಂಭಿಕ ಶಿಕ್ಷಣವನ್ನು ಲಂಡನ್‌ನ ಪ್ರತಿಷ್ಠಿತ ಹ್ಯಾರೋ ಶಾಲೆಯಲ್ಲಿ ಪಡೆದಿದ್ದು, ಇದಾದ ಬಳಿಕ ಇಂಗ್ಲೆಂಡ್‌ನ ರಾಯಲ್ ಮಿಲಿಟರಿ ಅಕಾಡೆಮಿಯಲ್ಲಿ 1998 ರಲ್ಲಿ ಪದವಿ ಪಡೆದರು. ಇಂಗ್ಲೆಂಡ್‌ನಿಂದ ಹಿಂದಿರುಗಿದ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರನ್ನು ಕತಾರ್ ಸೇನೆಗೆ ಎರಡನೇ ಲೆಫ್ಟಿನೆಂಟ್ ಮಾಡಲಾಯಿತು.
ಕತಾರ್‌ನ ಅಮೀರ್ ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ವಿಶ್ವದ ಶ್ರೀಮಂತ ರಾಜರ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದಾರೆ. ಅಲ್ ಥಾನಿ ಕುಟುಂಬದ ಒಟ್ಟು ಆಸ್ತಿ ಸುಮಾರು 335 ಬಿಲಿಯನ್ ಯುಎಸ್ ಡಾಲರ್ ಎಂದು ಅಂದಾಜಿಸಲಾಗಿದೆ. ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರು 2005, 2009 ಮತ್ತು 2014ರಲ್ಲಿ ಮೂರು ವಿವಾಹವಾಗಿದ್ದು, ಅವರು 13 ಮಕ್ಕಳನ್ನು ಹೊಂದಿದ್ದಾರೆ.
ಶೇಖ್ ತಮೀಮ್ ಅವರು ಸುಮಾರು 1 ಬಿಲಿಯನ್ ಡಾಲರ್ ಮೌಲ್ಯದ ದೋಹಾ ರಾಯಲ್ ಪ್ಯಾಲೇಸ್‌ನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಈ ಐಷಾರಾಮಿ ಅರಮನೆ 100 ಕ್ಕೂ ಹೆಚ್ಚು ಕೊಠಡಿಗಳು, ಬಾಲ್ ರೂಂಗಳು ಇತ್ಯಾದಿಗಳನ್ನು ಒಳಗೊಂಡಿದೆ. ಜೊತೆಗೆ ಒಂದೇ ಬಾರಿಗೆ ಸುಮಾರು 500 ಕಾರುಗಳನ್ನು ನಿಲ್ಲಿಸಬಹುದಾದ ಪಾರ್ಕಿಂಗ್ ಸೌಲಭ್ಯಗಳಿವೆ. ದೋಹಾ ಅರಮನೆಯ ಕೆಲವು ಭಾಗಗಳಲ್ಲಿ ಚಿನ್ನದ ಕೆತ್ತನೆಗಳನ್ನು ಕಾಣಬಹುದಾಗಿದೆ.
ಶೇಖ್ ತಮೀಮ್ ಅವರು ವಿಶ್ವದ ಅತ್ಯಂತ ದುಬಾರಿ ಮತ್ತು ಐಷಾರಾಮಿ ವಿಹಾರ ನೌಕೆಯ ಒಡೆಯರಾಗಿದ್ದು, ಇದರ ಬೆಲೆಯೂ 3.3 ಶತಕೋಟಿ ಡಾಲರ್ ರೂಪಾಯಿಗಳಾಗಿದೆ. ಈ ವಿಲಾಸಿ ವಿಹಾರ ನೌಕೆಯು 124 ಮೀಟರ್ ಉದ್ದ ಹೊಂದಿದ್ದು, ಇದು ಹೆಲಿಪ್ಯಾಡ್ ಕೂಡಾ ಒಳಗೊಂಡಿದೆ. ಇದರಲ್ಲಿ ಸುಮಾರು 35 ಅತಿಥಿಗಳು ಮತ್ತು 90 ಸಿಬ್ಬಂದಿ ಏಕಕಾಲದಲ್ಲಿ ಉಳಿದುಕೊಳ್ಳಬಹುದಾಗಿದೆ.
ಶೇಖ್ ತಮೀಮ್ ಬಿನ್ ಹಮದ್ ಅಲ್ ಥಾನಿ ಅವರ ಸ್ವಂತ ವಿಮಾನಯಾನ ಸಂಸ್ಥೆಯೂ ಇದ್ದು, ಇದು ರಾಜಮನೆತನಕ್ಕೆ ಮಾತ್ರ ಸೇವೆ ಸಲ್ಲಿಸುತ್ತದೆ.'ಕತಾರ್ ಅಮಿರಿ ಏರ್‌ಲೈನ್ಸ್' ಸಂಸ್ಥೆ 1977 ರಲ್ಲಿ ಪ್ರಾರಂಭವಾಗಿದ್ದು ಇದರ ಒಡೆತನ ತಮೀಮ್ ಅವರ ಬಳಿ ಇದೆ. ಈ ಏರ್‌ಲೈನ್ ಮೂರು ಬೋಯಿಂಗ್ 747 ಸೇರಿದಂತೆ ಕನಿಷ್ಠ 14 ವಿಮಾನಗಳನ್ನು ಹೊಂದಿದೆ. ಶೇಖ್ ತಮೀಮ್ ಬಳಿ ಹಲವು ಐಷಾರಾಮಿ ಕಾರುಗಳಿವೆ, ಬುಗಾಟಿಯಿಂದ ಫೆರಾರಿ, ಲಂಬೋರ್ಗಿನಿ, ರೋಲ್ಸ್ ರಾಯ್ಸ್, ಇತ್ಯಾದಿ ನೂರಾರು ಐಷಾರಾಮಿ ಕಾರುಗಳಿವೆ.


Click it and Unblock the Notifications