ಭಾರತೀಯ ಔಷಧೀಯ ಉದ್ಯಮದಲ್ಲಿ ಬಸುದಿಯೋ ಸಿಂಗ್ ದೊಡ್ಡ ಹೆಸರು ಮಾಡಿರುವ ಪೈಕಿ ಮುಂಚೂಣಿಯಲ್ಲಿದ್ದಾರೆ. 83 ವರ್ಷ ವಯಸ್ಸಿನ ಸಿಂಗ್ ಅವರು ಪ್ರಸ್ತುತ ಅಲ್ಕೆಮ್ ಲ್ಯಾಬೊರೇಟರೀಸ್‌ನ ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ. ಔಷದೀಯ ಉತ್ಪನ್ನಗಳನ್ನು ತಯಾರಿಸುವ ಈ ಕಂಪನಿಯು ಪ್ರಸ್ತುತ 45000 ಕೋಟಿ ರೂಪಾಯಿಗಿಂತ ಹೆಚ್ಚಿನ ಮಾರುಕಟ್ಟೆ ಬಂಡವಾಳವನ್ನು ಹೊಂದಿದೆ.
ಆದರೆ, ಉದ್ಯಮ ಕ್ಷೇತ್ರದಲ್ಲಿ ಇಷ್ಟೊಂದು ಎತ್ತರಕ್ಕೆ ಬೆಳೆಯುತ್ತಾರೆ ಎಂಬುದನ್ನು ಯಾವತ್ತೂ ಊಹಿಸಿರಲಿಲ್ಲ. ಬಿಹಾರದಲ್ಲಿ ಹುಟ್ಟಿರುವ ಬಸುದಿಯೋ ಸಿಂಗ್ ಅವರು ತಮ್ಮ ಸೋದರ ಸಂಬಂಧಿಯಾದ ಸಂಪ್ರದಾ ಸಿಂಗ್ ಅವರೊಂದಿಗೆ ಸೇರಿಕೊಂಡು ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದರು. ಆರಂಭದಲ್ಲಿ ಅವರು ಪ್ರಾಧ್ಯಾಪಕರಾಗಿ ವೃತ್ತಿ ಬದುಕನ್ನು ಪ್ರಾರಂಭಿಸಿದ್ದರು.

ಪಾಟ್ನಾ ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನ ವಿಷಯದಲ್ಲಿ ಬಿಎ ಹಾಗೂ ಎಂಎ ಪದವಿಯನ್ನು ಪಡೆದುಕೊಂಡಿದ್ದರು. ಬಸುದಿಯೊ ಅವರು ತಮ್ಮ ಸಹೋದರ ಜತೆ 1962ರಲ್ಲಿ ಸ್ವಂತ ಊರಿನಲ್ಲಿ ಫಾರ್ಮಾ ವಿತರಣಾ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದರು. ಇದು ಆರಂಭದಲ್ಲೇ ಉತ್ತಮ ಯಶಸ್ಸನ್ನು ನೀಡಿದ ಹಿನ್ನಲೆಯಲ್ಲಿ ಅವರು ತಮ್ಮದೇ ಆದ ಫಾರ್ಮಾ ಕಂಪನಿಯನ್ನು ಪ್ರಾರಂಭಿಸುವುದಕ್ಕೆ ನಿರ್ಧರಿಸಿದ್ದರು.
ಫೋರ್ಬ್ಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿರುವ ಪ್ರಕಾರ, ಬಸುದಿಯೊ ಅವರು ಕೇವಲ 5 ಲಕ್ಷ ರೂಪಾಯಿ ಬಂಡವಾಳದೊಂದಿಗೆ ತಮ್ಮದೇ ಸ್ವಂತ ಫಾರ್ಮಾ ಕಂಪನಿ ಪ್ರಾರಂಭಿಸುವುದಕ್ಕೆ ಮುಂಬೈಗೆ ತೆರಳಿದ್ದರು. ಈ ಕಂಪನಿ ಸ್ಥಾಪನೆಗೆ ಬೇಕಾದ ಎಲ್ಲ ಪೂರ್ವ ಸಿದ್ಧತೆ ಹಾಗೂ ಕಾನೂನು ಮಾನದಂಡಗಳನ್ನು ಪಾಲಿಸಿಕೊಂಡು 1973ರಲ್ಲಿ ಸಿಂಗ್ ಅವರು ಅಲ್ಕೆಮ್ ಲ್ಯಾಬೊರೇಟರೀಸ್ ಅನ್ನು ಸ್ಥಾಪಿಸಿದ್ದರು.
ಸಿಂಗ್ ಅವರ ಅಲ್ಕೆಮ್ ಕಂಪನಿ ಸಾಕಷ್ಟು ಲಾಭದಾಯಕವಾಗಿ ಮುನ್ನಡೆಯುತ್ತಿದೆ. ಇಷ್ಟಾಗಿಯೂ ಬಸುದಿಯೊ ಸಿಂಗ್ ಅವರು ತಮ್ಮ ಔಷಧೀಯ ವಿತರಣಾ ವ್ಯವಹಾರವನ್ನು ಬಿಡದೆ ಮುಂದುವರಿಸಿರುವುದು ವಿಶೇಷ. ಈ ನಡುವೆ ಔಷಧ ತಯಾರಿಕೆಗೆ ತಮ್ಮದೇ ಆದ ಉತ್ಪಾದನಾ ಘಟಕವನ್ನು ಹೊಂದಿದ್ದ ಕಾರಣ 1984ರಲ್ಲೇ ಅಲ್ಕೆಮ್ ಕಂಪನಿಯು 10 ಕೋಟಿ ರೂಪಾಯಿ ಆದಾಯವನ್ನು ಗಳಿಸಿತ್ತು.
ಒಂದೆರಡು ದಶಕಗಳ ನಂತರ ಕಂಪನಿಯು ಟ್ಯಾಕ್ಸಿಮ್ ಎಂಬ ಔಷಧವನ್ನು ಬಿಡುಗಡೆಗೊಳಿಸಿದ್ದು, ಇದು ವಿವಿಧ ಬ್ಯಾಕ್ಟೀರಿಯಾದ ಸೋಂಕುಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಈ ಔಷಧ ತಯಾರಿಕೆಯು ಕಂಪನಿಗೆ ದೊಡ್ಡ ಮಟ್ಟದಲ್ಲಿ ಬೆಳವಣಿಗೆಗೆ ತಿರುವು ನೀಡಿದೆ. ಏಕೆಂದರೆ, ಟ್ಯಾಕ್ಸಿಮ್ ಭಾರತದಲ್ಲಿ ವಾರ್ಷಿಕ 100 ಕೋಟಿ ರೂಪಾಯಿಗಳ ಮಾರಾಟ ದಾಖಲಿಸಿದ ಮೊದಲ ಸೋಂಕು ನಿವಾರಕ ಔಷಧ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 2008ರ ವೇಳೆಗೆ ಕಂಪನಿಯು 1000 ಕೋಟಿ ರೂಪಾಯಿ ಆದಾಯ ಗಳಿಸುವ ಗುರಿಯನ್ನು ಯಶಸ್ವಿಯಾಗಿ ತಲುಪಿತ್ತು.
ಈ ರೀತಿ ಯಶಸ್ವಿನ ಹಾದಿಯಲ್ಲಿ ಮುಂದುವರಿದ ಅಲ್ಕೆಮ್ ಲ್ಯಾಬೊರೇಟೀಸ್, ಫಾರ್ಮಾಕೋರ್, ಅಸೆಂಡ್ ಲ್ಯಾಬೊರೇಟರೀಸ್, ಎಂಝಿನಿ ಬಯೋಸೈನ್ ಸೇರಿದಂತೆ ಹಲವು ಕಂಪನಿಗಳನ್ನು ಸ್ವಾಧೀನಪಡಿಸಿಕೊಂಡಿವೆ. 2015 ಹಾಗೂ 2019ರಲ್ಲಿ ಐಪಿಒ ಪ್ರವೇಶಿಸುವ ಮೂಲಕ ಒಂದು ಬಿಲಿಯನ್ ಡಾಲರ್ ಆದಾಯವನ್ನು ದಾಟುವಲ್ಲಿ ಯಶಸ್ವಿಯಾಗಿದೆ.


Click it and Unblock the Notifications