ವಾಟ್ಸಾಪ್ ಎನ್ನುವ ಸಾಮಾಜಿಕ ಜಾಲತಾಣದ ಬಗ್ಗೆ ಗೊತ್ತಿಲ್ಲದವರು ಬಹಳ ಅಪರೂಪ. ಪ್ರತಿಯೊಬ್ಬರ ಮೊಬೈಲ್‌ನಲ್ಲಿ ಸಂದೇಶ, ಫೋಟೊಗಳ ರವಾನೆ ಮೂಲಕ ಪರಸ್ಪರ ಸಂಪರ್ಕಿಸುವುದಕ್ಕೆ ಹೆಚ್ಚು ಜನಪ್ರಿಯತೆ ಪಡೆದುಕೊಂಡಿರುವ ವಾಟ್ಸಾಪ್‌ನ ಸೃಷ್ಟಿಕರ್ತರು ಜಾನ್ ಕೋಮ್. ಅವರು 2.7 ಶತಕೋಟಿ ಜನರು ಬಳಸುವ ವಾಟ್ಸಾಪ್ ಅನ್ನು ಜಗತ್ತಿಗೆ ಪರಿಚಯಿಸಿದ್ದಾರೆ.
ಜಾಗತಿಕವಾಗಿ ಇಡೀ ಜಗತ್ತಿನ ಯಾವುದೇ ಭಾಗವನ್ನು ಸಂಪರ್ಕಿಸುವ ಸಾಧನವಾಗಿರುವ ವಾಟ್ಸಾಪ್‌ನ ಹಿಂದಿರುವ ತಾಂತ್ರಿಕ ಶಕ್ತಿ ಜಾನ್ ಕೋಮ್. ಆರಂಭದಲ್ಲಿ ಎಸ್‌ಎಂಎಸ್‌ಗೆ ಪರ್ಯಾಯವಾಗಿ ಆರಂಭಗೊಂಡ ವಾಟ್ಸಾಪ್ ಈಗ ಧ್ವನಿ, ವಿಡಿಯೋ, ಫೋಟೊ ಸೇರಿದಂತೆ ಎಲ್ಲ ರೂಪದಲ್ಲಿಯೂ ಜನರ ನಡುವಿನ ಅಚ್ಚುಮೆಚ್ಚಿನ ಸಂವಹನ ಪ್ಲಾಟ್‌ಫಾರ್ಮ್ ಆಗಿ ರೂಪುಗೊಂಡಿದೆ.

ಜಾನ್ ಕೋಮ್ ಅವರ ವಾಟ್ಸಾಪ್ ಮಾಡಿರುವ ಸಾಧನೆ ಹಾಗೂ ಯಶಸ್ಸು ಯಾರು ಕೂಡ ಊಹಿಸುವುದಕ್ಕೂ ಸಾಧ್ಯವಿಲ್ಲ. ಅವರು ಬ್ರಿಯಾನ್ ಆಕ್ಟನ್ ಜತೆ ಸೇರಿ 2009ರಲ್ಲಿ ವಾಟ್ಸಾಪ್ ಅನ್ನು ಆರಂಭಿಸಿದ್ದರು. ಕೇವಲ ಐದು ವರ್ಷದಲ್ಲಿ ವಾಟ್ಸಾಪ್ ಇಡೀ ವಿಶ್ವದ ಗಮನಸೆಳೆಯುವಲ್ಲಿ ಯಶಸ್ವಿಯಾಗಿತ್ತು.
ಭಾರೀ ಯಶಸ್ಸು ಗಳಿಸಿದ ಹಿನ್ನೆಲೆಯಲ್ಲಿ ವಾಟ್ಸಾಪ್ ಅನ್ನು 2014 ರಲ್ಲಿ ಫೇಸ್‌ಬುಕ್ 22 ಬಿಲಿಯನ್ ಡಾಲರ್‌ಗೆ ಸ್ವಾಧೀನಪಡಿಸಿಕೊಂಡಿತ್ತು. ಈ ಮೊತ್ತವು ಸುಮಾರು 1,80,000 ಕೋಟಿ ರೂಪಾಯಿ ಆಗಿದೆ. ಜಾನ್ ಕೋಮ್ ಅವರು 1976ರಲ್ಲಿ ಉಕ್ರೇನ್‌ನ ಕೀವ್‌ನಲ್ಲಿ 1976ರಲ್ಲಿ ಯಹೂದಿ ಕುಟುಂಬದಲ್ಲಿ ಜನಿಸಿದರು.
ಬಾಲ್ಯದಲ್ಲಿ ಆರ್ಥಿಕವಾಗಿ ಸಾಕಷ್ಟು ಸವಾಲು-ಸಮಸ್ಯೆ ಎದುರಿಸಿದ್ದರು. ತಂದೆಯು ನಿರ್ಮಾಣ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ತಾಯಿಯು ಗೃಹಿಣಿಯಾಗಿದ್ದರು. ಜನರ ಖಾಸಗಿತನಕ್ಕೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಪರಸ್ಪರ ಸಂಭಾಷಣೆ ಹಾಗೂ ಚಾಟ್‌ಗಳು ಗೌಪ್ಯತೆ ಕಾಪಾಡುವತ್ತ ಜಾನ್ ಮೊದಲ ಗಮನವನ್ನು ಹರಿಸಿದ್ದು, ಅದು ಯಶಸ್ವಿಗೆ ಮುಖ್ಯ ಕಾರಣವಾಯಿತು.
ಜಾನ್ ಅವರು ಕುಟುಂಬವು ಉಕ್ರೇನ್‌ನಿಂದ ಅಮೆರಿಕಾದ ಕ್ಯಾಲಿಫೋರ್ನಿಯಾಕ್ಕೆ ಸ್ಥಳಾಂತರಗೊಂಡಿದ್ದು, ಆ ಬಳಿಕ ಅವರ ಆರ್ಥಿಕ ಸ್ಥಿತಿಯು ಸುಧಾರಿಸತೊಡಗಿತ್ತು. ಅಮೆರಿಕಾಕ್ಕೆ ಬಂದ ಬಳಿಕ ಅವರ ತಾಯಿಗೆ ಕ್ಯಾನ್ಸರ್ ಇರುವುದು ದೃಢಪಟ್ಟಿತ್ತು. ತಾಯಿಯ ಅನಾರೋಗ್ಯದ ಹಿನ್ನಲೆ ಸರ್ಕಾರದಿಂದ ಆಹಾರ, ವಸತಿ ಮತ್ತಿತರ ನೆರವನ್ನು ಪಡೆದುಕೊಂಡರು.
ಆದರೆ ಆರ್ಥಿಕ ಸಂಕಷ್ಟದಿಂದಾಗಿ ಕುಟುಂಬವನ್ನು ನೋಡಿಕೊಳ್ಳುವುದಕ್ಕಾಗಿ ಜಾನ್ ಅವರು ಗಿರಣಿ ಅಂಗಡಿಯಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದರು. ಆದರೆ ಬಳಿಕ ಕಂಪ್ಯೂಟರ್‌ನಲ್ಲಿ ಹೆಚ್ಚಿನ ಜ್ಞಾನ ಸಂಪಾದಿಸಿದ್ದ ಅವರು ಹ್ಯಾಕಿಂಗ್ ಕಂಪನಿಯನ್ನು ಸೇರಿಕೊಂಡರು. ಅಲ್ಲಿ ಅವರು ಸೈಬರ್ ಭದ್ರತೆಯಲ್ಲಿ ತಮ್ಮ ಕೌಶಲ್ಯವನ್ನು ಅಭಿವೃದ್ಧಿಪಡಿಸಿಕೊಂಡರು.
ಈಗ ಯಶಸ್ವಿನ ಉತ್ತುಂಗದಲ್ಲಿರುವ ಜಾನ್ ಕೋಮ್ ಅವರು ಶ್ರೀಮಂತಿಕೆಯಲ್ಲಿ ಮಾರ್ಕ್ ಜುಕರ್‌ಬರ್ಗ್, ಜ್ಯಾಕ್ ಡಾರ್ಸೆ ಹಾಗೂ ಲ್ಯಾರಿ ಎಲಿಸನ್ ಅವರ ಸಾಲಿನಲ್ಲಿ ನಿಂತಿದ್ದರೂ, ಅವರಿಗೆ ತಮ್ಮ ಕಾಲೇಜು ಶಿಕ್ಷಣವನ್ನು ಪೂರ್ಣಗೊಳಿಸಿರಲಿಲ್ಲ.
ಫೋರ್ಬ್ಸ್ ವರದಿ ಪ್ರಕಾರ, ಜಾನ್ ಅವರ ನಿವ್ವಳ ಆಸ್ತಿಯು 6.8 ಬಿಲಿಯನ್ ಡಾಲರ್ ಆಗಿತ್ತು. ಈ ಮೊತ್ತವು 2022ರಲ್ಲಿ 3.2 ಶತಕೋಟಿ ಡಾಲರ್‌ಗೆ ಏರಿತ್ತು. ಕಳೆದ ವರ್ಷ ಜಾನ್ ಕೋಮ್ ಅವರ ನಿವ್ವಳ ಆಸ್ತಿ ಮೌಲ್ಯ 13.7 ಶತಕೋಟಿ ಡಾಲರ್‌ಗೆ ಏರಿಕೆಯಾಗಿದ್ದು, ಫೋರ್ಬ್ಸ್ ಶ್ರೀಮಂತರ ಪಟ್ಟಿಯಲ್ಲಿ 44ನೇ ಸ್ಥಾನ ಹಾಗೂ ಬಿಲಿಯನೇರ್‌ಗಳ ಪಟ್ಟಿಯಲ್ಲಿ 130ನೇ ಸ್ಥಾನ ಪಡೆದುಕೊಂಡಿದ್ದಾರೆ.


Click it and Unblock the Notifications