ಆಸ್ಟ್ರೇಲಿಯಾ ವಿರುದ್ಧ ಭಾನುವಾರ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಭಾರತ ಸೋಲುವ ಮೂಲಕ ಅಸಂಖ್ಯ ಭಾರತೀಯ ಕ್ರೀಡಾಭಿಮಾನಿಗಳಿಗೆ ನಿರಾಶೆಯುಂಟು ಮಾಡಿದೆ. ಈ ಪಂದ್ಯ ಒಂದು ದಿನದ ಬಳಿಕ ಭಾರತ ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹಾಗೂ ಅವರ ಮ್ಯಾನೇಜರ್ ಬಂಟಿ ಸಜ್ದೇಹ್ ಅವರ ನಡುವಿನ ದೀರ್ಘಾವಧಿಯ ಪಾಲುದಾರಿಕೆ ಕೊನೆಗೊಂಡಿದೆ ಎಂದು ವರದಿಯಾಗಿದೆ.
ಆದರೆ, ಇಬ್ಬರ ನಡುವಿನ ಈ ಪಾಲುದಾರಿಕೆ ಬ್ರೇಕಪ್ ಆಗುವುದಕ್ಕೆ ಕಾರಣವೇನು ಎನ್ನುವುದು ಇನ್ನು ಕೂಡ ಬಹಿರಂಗವಾಗಿಲ್ಲ. ವರದಿಗಳ ಪ್ರಕಾರ, ಕೊಹ್ಲಿ ತಮ್ಮದೇ ಆದ ಕಂಪನಿಯನ್ನು ಸ್ಥಾಪಿಸುವುದಕ್ಕೆ ಮುಂದಾಗಿದ್ದಾರೆ. ಬಂಟಿ ಸಜ್ದೇಹ್ ಅವರು ಟ್ಯಾಲೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಾದ ಕಾರ್ನರ್‌ಸ್ಟೋನ್‌ನ ಸಿಇಒ ಹಾಗೂ ಸಂಸ್ಥಾಪಕರಾಗಿದ್ದಾರೆ.

ಕೊಹ್ಲಿ ಅವರು ಒಂದು ದಶಕದ ಹಿಂದೆ ಕಾರ್ನರ್‌ಸ್ಟೋನ್‌ಗೆ ಸೇರಿದ್ದರು. ಅಂದಿನಿಂದ ಭಾರತದ ಈ ಮಾಜಿ ನಾಯಕ ಕಂಪನಿಯಲ್ಲಿ ತೊಡಗಿಸಿಕೊಂಡಿದ್ದರು. ಹಾಗಾದರೆ ಬಂಟಿ ಸಜ್‌ದೇಹ್ ಯಾರು?
ಬಂಟಿ ಸಜ್ದೇಹ್ ಅವರು ಕ್ರೀಡಾ ಬಳಗದಲ್ಲಿ ಮಾತ್ರವಲ್ಲ ಬಾಲಿವುಡ್‌ನ ಸೆಲೆಬ್ರಿಟಿಗಳ ನಡುವೆಯೂ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ಮ್ಯಾನೇಜರ್ ಅನ್ನುವುದಕ್ಕಿಂತ ಹೆಚ್ಚಾಗಿ ಬಂಟಿ ಅವರು ಕೊಹ್ಲಿಯ ಆತ್ಮೀಯ ಸ್ನೇಹಿತರು ಎಂಬುದು ಗೊತ್ತಾಗಿದೆ. ಯಾವುದೇ ಕ್ರಿಕೆಟ್‌ನ ಪ್ರಮುಖ ಕಾರ್ಯಕ್ರಮಗಳಲ್ಲಿ ಬಂಟಿ ಅವರು ಕೊಹ್ಲಿ ಅವರ ಪಕ್ಕದಲ್ಲಿ ಕಾಣಿಸುತಾತರೆ.
ಬಂಟಿ ಅವರು ತಮ್ಮ ಶಾಲಾ ಶಿಕ್ಷಣವನ್ನು ಮುಂಬೈನಲ್ಲಿ ಮುಗಿಸಿದ್ದಾರೆ. ಬಳಿಕ ತಮ್ಮ ಉನ್ನತ ಅಧ್ಯಯನವನ್ನು ಆಸ್ಟ್ರೇಲಿಯಾದ ಬಾಂಡ್ ವಿಶ್ವವಿದ್ಯಾಲಯದಲ್ಲಿ ಮತ್ತು ಮುಂಬೈನ ಎಚ್‌ಆರ್ ಕಾಲೇಜ್ ಆಫ್ ಕಾಮರ್ಸ್ ಮತ್ತು ಎಕನಾಮಿಕ್ಸ್‌ನಲ್ಲಿ ಪಡೆದುಕೊಂಡರು. ಅವರು ಪರ್ಸೆಪ್ಟ್ ಎಂಟರ್‌ಟೈನ್‌ಮೆಂಟ್‌ನಲ್ಲಿ ಟಾಲೆಂಟ್ ಅಕ್ವಿಶಿಷನ್ ಸಲಹೆಗಾರರಾಗಿ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಿದ್ದರು.
ಈ ಜೋಡಿಯು ಪೂಮಾ ಜತೆಗಿನ 100 ಕೋಟಿ ರೂ. ಸೇರಿದಂತೆ ಹಲವು ಟಾಪ್ ಕಂಪನಿಗಳ ಜತೆಗೆ ಜಾಹೀರಾತು ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. 2020ರಲ್ಲಿ ಕರಣ್ ಜೋಹರ್ ಅವರ ಧರ್ಮ ಪ್ರೊಡೆಕ್ಷನ್ಸ್ ಕಾರ್ನರ್‌ಸ್ಟೋನ್‌ನೊಂದಿಗೆ ಪಾಲುದಾರಿಕೆ ಹೊಂದಿ ಧರ್ಮ ಕಾರ್ನರ್ ಸ್ಟೋನ್ ಏಜೆನ್ಸಿ ಅನ್ನು ಸ್ಥಾಪಿಸಿದ್ದಾರೆ.
ಈ ನಡುವೆ ಕಾರ್ನರ್‌ಸ್ಟೋನ್‌ನೊಂದಿಗಿನ ಕ್ರಿಕೆಟಿಗನ ಸಂಬಂಧವು ಜಂಟಿ ಉದ್ಯಮದಿಂದ ಬೇರೆಯಾಗಿಯೇ ಉಳಿದುಕೊಂಡಿದೆ. ಬಂಟಿಗೆ ಟೀಂ ಇಂಡಿಯಾದವರ ಜತೆಗೂ ಸಂಬಂಧವಿದೆ. ಅವರ ಸಹೋದರಿಯು ಭಾರತದ ಸ್ಟಾರ್ ಕ್ರಿಕೆಟರ್ ಪತ್ನಿ ಕೂಡ ಆಗಿದ್ದಾರೆ. ಅವರು ಕೂಡ ಕಾರ್ನರ್‌ಸ್ಟೋನ್ ಸೇರಿಕೊಂಡಿದ್ದು, ಸ್ಪೋರ್ಟ್ಸ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದಾರೆ.


Click it and Unblock the Notifications