ವಾಣಿಜ್ಯ ಪದವೀಧರರು ಹಾಗೂ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ನಿಲಂಜನ್ ರಾಯ್ ಅವರು ಭಾರತದ 4ನೇಯ ಅತಿದೊಡ್ಡ ಕಂಪೆನಿಯಾಗಿರುವ ಇನ್ಫೋಸಿಸ್‌ನ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಆಗಿದ್ದಾರೆ. ಎನ್‌ಆರ್ ನಾರಾಯಣಮೂರ್ತಿ ಹಾಗೂ ನಂದನ್ ನಿಲೇಕಣಿ ಮುಂತಾದವರು ಸ್ಥಾಪಿಸಿದ ಮಾಹಿತಿ ತಂತ್ರಜ್ಞಾನದ ದೈತ್ಯ ಕಂಪೆನಿಯಾದ ಇನ್ಫೋಸಿಸ್ ಅನ್ನು ರಾಯ್ ಅವರು 2019ರಲ್ಲಿ ಸೇರಿದ್ದರು. ಆ ಮೂಲಕ ಕೋವಿಡ್-19ರ ಸಂಕಷ್ಟದ ಸಮಯದಲ್ಲಿ ಕಂಪೆನಿಯನ್ನು ಯಶಸ್ವಿಯಾಗಿ ಮುನ್ನಡೆಸಿದ ಉನ್ನತಾಧಿಕಾರಿಗಳ ತಂಡದಲ್ಲಿ ಇದ್ದವರ ಪೈಕಿ ರಾಯ್ ಕೂಡ ಒಬ್ಬರಾಗಿದ್ದರು.
ಪರೇಖ್, ಅಧ್ಯಕ್ಷರಾದ ರವಿ ಕುಮಾರ್ ಎಸ್. ಮತ್ತು ಮೋಹಿತ್ ಜೋಶಿ ಅವರೊಂದಿಗೆ ಇನ್ಫೋಸಿಸ್ ನಾಯಕತ್ವದ ತಂಡವನ್ನು ರಚಿಸುವ ನಾಲ್ಕು ಮಂದಿಯ ಪೈಕಿ ನುರಿತ ಆರ್ಥಿಕ ತಜ್ಞರಾದ ರಾಯ್ ಅವರು ಕೂಡ ಒಬ್ಬರು. ಬಿಸಿನೆಸ್ ಇನ್‌ಸೈಡರ್ ವರದಿಯ ಪ್ರಕಾರ, ಐಟಿ ದೈತ್ಯ ಕಂಪೆನಿ ಇನ್ಫೋಸಿಸ್ 2023ರ ಫೆಬ್ರವರಿಯಲ್ಲಿ 660,879 ಕೋಟಿ ರೂ.ಗಳ ಮಾರುಕಟ್ಟೆ ಮೌಲ್ಯವನ್ನು ಹೊಂದಿತ್ತು. 2023ರ ಮಾರ್ಚ್ ವೇಳೆಗೆ ಇನ್ಫೋಸಿಸ್ ಮಾರುಕಟ್ಟೆ ಕ್ಯಾಪ್ 5.7 ಲಕ್ಷ ಕೋಟಿ ರೂ. ಆಗಿದೆ.

ನಿಲಂಜನ್ ರಾಯ್ ಬಗ್ಗೆ ಅಧಿಕ ಮಾಹಿತಿ ಇಲ್ಲಿದೆ
ನಿಲಂಜನ್ ರಾಯ್ ಅವರು ಸಮಗ್ರ ಹಾಗೂ ಉತ್ತಮ ಜಾಗತಿಕ ಅನುಭವವನ್ನು ಹೊಂದಿರುವುದಾಗಿ ಅವರು ತಮ್ಮ ತಂಡಕ್ಕೆ ಸೇರಿದ್ದಾಗ ಇನ್ಫೋಸಿಸ್‌ನ ಸಿಇಒ ಸಲಿಲ್ ಪರೇಖ್ ಅವರು ಹೇಳಿದ್ದರು. ರಾಯ್ ಅವರು ಇನ್ಫೋಸಿಸ್‌ಗೆ ಸೇರುವ ಮೊದಲು ಭಾರ್ತಿ ಏರ್‌ಟೆಲ್‌ನಲ್ಲಿ ಗ್ಲೋಬಲ್ ಚೀಫ್ ಫೈನಾನ್ಸ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.
ಟೆಲಿಕಾಂ ಆಪರೇಟರ್ ವಲಯದಲ್ಲಿ ಅವರು ಒಟ್ಟು 13 ವರ್ಷಗಳ ಕಾಲ ಭಾರತ ಹಾಗೂ ಆಫ್ರಿಕಾದಲ್ಲಿ ಹಣಕಾಸು ಕಾರ್ಯಚಟುವಟಿಕೆಗಳನ್ನು ನೋಡಿಕೊಳ್ಳುವ ಮೂಲಕ ಉನ್ನತ ಹುದ್ದೆಗಳನ್ನು ಹೊಂದಿದ್ದರು. ಏರ್‌ಟೆಲ್‌ಗೆ ಸೇರುವ ಮೊದಲು ಅವರು ಎಫ್‌ಎಂಸಿಜಿ ದೈತ್ಯ ಕಂಪೆನಿ ಯೂನಿಲಿವರ್‌ನಲ್ಲಿ ಭಾರತ ದೇಶ ಹೊರತಾಗಿ 15 ವರ್ಷಗಳ ಕಾಲ ಅಮೆರಿಕ ಹಾಗೂ ಯುರೋಪ್‌ನ ಕೆಲವು ಭಾಗಗಳಲ್ಲಿ ಕೆಲಸ ನಿರ್ವಹಿಸಿದ್ದರು.
ಇನ್ಫೋಸಿಸ್‌ನ ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯಂತೆ ನಿಲಂಜನ್ ರಾಯ್ ಅವರು ಬಹಳ ಆಳವಾದ ಜಾಗತಿಕ ಮಟ್ಟದ ಕೆಲಸದ ಅನುಭವವನ್ನು ಹೊಂದಿದ್ದಾರೆ. ಅಲ್ಲದೆ, ಷೇರುದಾರರ ಮೌಲ್ಯ ರಚನೆ, ಇಎಸ್‌ಜಿ ಮತ್ತು ಕಾರ್ಪೊರೇಟ್ ಆಡಳಿತ, ವ್ಯಾಪಾರ ಪಾಲುದಾರಿಕೆ, ವಿಲೀನ ಪ್ರಕ್ರಿಯೆಗಳು ಹಾಗೂ ಸ್ವಾಧೀನ, ಖಜಾನೆ ಮತ್ತು ಫಂಡಿಂಗ್, ಹೂಡಿಕೆದಾರರ ಸಂಬಂಧಗಳು, ವೆಚ್ಚ ನಿರ್ವಹಣೆ, ತೆರಿಗೆ, ಹಣಕಾಸು, ಲೆಕ್ಕಪತ್ರ ನಿರ್ವಹಣೆ ಹಾಗೂ ರಿಪೋರ್ಟಿಂಗ್‌ನಲ್ಲಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ.
2021ರ ಹಣಕಾಸು ವರ್ಷಕ್ಕೆ ಹೋಲಿಸಿದರೆ 2022ರ ಆರ್ಥಿಕ ವರ್ಷದಲ್ಲಿ ನಿಲಂಜನ್ ರಾಯ್ ಅವರ ವಾರ್ಷಿಕ ಸಂಭಾವನೆಯು ಶೇ.37ರಷ್ಟು ಹೆಚ್ಚಾಗಿದೆ. ಎಕನಾಮಿಕ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಪ್ರಕಾರ, 2022ರಲ್ಲಿ ಅವರ ಒಟ್ಟು ಪರಿಹಾರವು $1,108,194 (ಸುಮಾರು 9 ಕೋಟಿ) ಆಗಿದೆ. ಸಲಿಲ್ ಪರೇಖ್ ನಂತರ ಇನ್ಫೋಸಿಸ್‌ನಲ್ಲಿ ಅತಿಹೆಚ್ಚು ಸಂಪಾವನೆ ಪಡೆಯುತ್ತಿರುವ ಟಾಪ್ ಉದ್ಯೋಗಿಗಳ ಪೈಕಿ ನಿಲಂಜನ್ ರಾಯ್ ಕೂಡ ಒಬ್ಬರಾಗಿದ್ದಾರೆ.
ರಾಯ್ ಅವರು ಇನ್ಫೋಸಿಸ್‌ಗೆ ಸೇರ್ಪಡೆಯಾಗುವ ವಿಚಾರ ಬಹಳ ರಹಸ್ಯವಾಗಿ ಇರಿಸಲಾಗಿತ್ತು. ಹೀಗಾಗಿ, ಭಾರ್ತಿ ಏರ್‌ಟೆಲ್ ತಮ್ಮ ಕಂಪೆನಿಗೆ ರಾಯ್ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಘೋಷಿಸಿದ್ದ ಕೆಲವೇ ಗಂಟೆಗಳಲ್ಲಿ ಇತ್ತ ಇನ್ಫೋಸಿಸ್ ಕೂಡ ರಾಯ್ ತಮ್ಮಲ್ಲಿ ಸಿಎಫ್‌ಒ ಆಗಿ ನೇಮಕಗೊಳ್ಳುತ್ತಿದ್ದಾರೆ ಎಂಬ ಮಾಹಿತಿಯನ್ನು ಬಹಿರಂಗಪಡಿಸಿತ್ತು


Click it and Unblock the Notifications