ನೀರಜ್ ಶಾ ಇವರೊಬ್ಬ ಭಾರತೀಯ-ಅಮೇರಿಕನ್ ಉದ್ಯಮಿಯಾಗಿದ್ದು ಆನ್‌ಲೈನ್ ರೀಟೇಲರ್ ವೇಫೇರ್‌ನ ಸಹ-ಸ್ಥಾಪಕ, ಸಹ-ಅಧ್ಯಕ್ಷ ಮತ್ತು ಸಿಇಓ ಆಗಿದ್ದಾರೆ. ನೀರಜ್ ಶಾ ಅವರು ಭಾರತದಿಂದ ವಲಸೆ ಬಂದವರ ಮಗನಾಗಿ ಅಮೇರಿಕಾದ ಮ್ಯಾಸಚೂಸೆಟ್ಸ್‌ನ ಪಿಟ್ಸ್‌ಫೀಲ್ಡ್‌ನಲ್ಲಿ ಬೆಳೆದರು.
ಉಕ್ಕಿನ ಮಡಕೆ ಮತ್ತು ಹರಿವಾಣಗಳನ್ನು ತಯಾರಿಸುವ ಕುಟುಂಬ ಪರಂಪರೆಯಿಂದ ಬಂದ ನೀರಜ್ ಪ್ರೌಢಾವಸ್ಥೆಗೆ ಬರುವ ಮುಂಚೆಯೇ ವ್ಯಾಪಾರದ ಕೌಶಲ್ಯವನ್ನು ಹೊಂದಿದ್ದಾರೆ. ಹೀಗಾಗಿ ಬಾಲ್ಯದಲ್ಲಿಯೇ ತಮ್ಮ ಉದ್ಯಮ ಲೋಕದ ಪ್ರಯಾಣವನ್ನು ಪ್ರಾರಂಭಿಸಿದರು. ಆದರೆ ಕಾಲೇಜಿನಲ್ಲಿ ಒಂದು ನಿರ್ದಿಷ್ಟ ತರಗತಿಯೂ ಅವರ ಜೀವನದ ಪಥವನ್ನೇ ಬದಲಾಯಿಸಿತು ಮತ್ತು ಬಹು-ಶತಕೋಟಿ ಡಾಲರ್ ಇಕಾಮರ್ಸ್ ಸಾಮ್ರಾಜ್ಯವನ್ನು ನಿರ್ಮಿಸಲು ಅವರನ್ನು ಪ್ರೇರೇಪಿಸಿತು ಎಂದರೆ ತಪ್ಪಾಗಲಾರದು.

"ನೈಜ ಯುನಿಕಾರ್ನ್ ಉದ್ಯಮಿ" ಎಂದು ಖ್ಯಾತರಾದ ಶಾ, ತಮ್ಮ ಬಾಲ್ಯದಲ್ಲಿಯೇ ಲಾನ್ ಮೊವಿಂಗ್ ಕಂಪನಿ ಮತ್ತು ಪೇಪರ್ ಡೆಲಿವರಿ ಸೇವೆಯಂತಹ ಉದ್ಯಮದಲ್ಲಿ ಒಲವು ಹೊಂದಿ ಇದರಲ್ಲಿಯೇ ತಮ್ಮ ಸುದೀರ್ಘವಾದ ವೃತ್ತಿಜೀವನವನ್ನು ನಿರ್ಮಿಸಲು ಮುಂದಾದರು. ಆದರೆ ಅವರಿಗೆ ಜಾಕ್‌ಪಾಟ್ ದೊರಕಿದ್ದು ಆನ್‌ಲೈನ್ ರೀಟೇಲರ್ "ವೇಫೇರ್" ನಲ್ಲಿ.
2002 ರಲ್ಲಿ ವೇಫೇರ್ ಅನ್ನು ತನ್ನ ಸಹಪಾಠಿ ಸ್ಟೀವ್ ಕೊನಿನ್ ಜೊತೆಗೆ ಹುಟ್ಟುಹಾಕಿದರು. ವೇಫೇರ್ ಇಂದು ಅಮೇರಿಕನ್ ಇ-ಕಾಮರ್ಸ್ ಕಂಪನಿಯಾಗಿ ಬೆಳೆದಿದ್ದು ಇದು ಆನ್‌ಲೈನ್‌ನಲ್ಲಿ ಪೀಠೋಪಕರಣಗಳು ಮತ್ತು ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುತ್ತದೆ. ಮಾತ್ರವಲ್ಲದೇ ಕಂಪನಿಯು ವಿಶ್ವದ ಅತಿದೊಡ್ಡ ಹೋಮ್ ರಿಟೇಲ್ ವೆಬ್‌ಸೈಟ್ ಆಗಿದೆ.
ವೇಫೇರ್ ಅನ್ನು ಶಾ ಪ್ರಾರಂಭದಿಂದಲೂ ಸಿಇಒ ಆಗಿ ಮುನ್ನಡೆಸುತ್ತಿದ್ದಾರೆ. ವ್ಯವಹಾರಗಳನ್ನು ಮಾಡುವ, ಮುನ್ನಡೆಸುವ ಮತ್ತು ರಿಸ್ಕ್‌ಗಳನ್ನುತೆಗೆದುಕೊಳ್ಳುವ ಸ್ವಭಾವ ತಮ್ಮ ಕುಟುಂಬದಿಂದ ಬಂದಿದೆ ಎನ್ನುತ್ತಾರೆ ಶಾ.
ನೀರಜ್ ಶಾ ಅವರ ಪೋಷಕರು ಭಾರತದಿಂದ ಅಮೇರಿಕಾಕ್ಕೆ ವಲಸೆ ಹೋಗಿದ್ದು ನೀರಜ್ ತನ್ನ ಭವಿಷ್ಯದ ವ್ಯಾಪಾರ ಪಾಲುದಾರರನ್ನು ಮೊದಲು ತಮ್ಮ ಪ್ರೌಢಶಾಲೆಯಲ್ಲಿ ಭೇಟಿಯಾಗಿದ್ದು ಶೀಘ್ರದಲ್ಲೇ ಅವರು ಸ್ನೇಹಿತರಾದರು. ಅದೇ ಕಾಲೇಜಿನಲ್ಲಿಇಬ್ಬರು ಇಂಜಿನಿಯರಿಂಗ್ ಓದಿದರು. ಇವರಿಬ್ಬರು ಕೇವಲ ಸ್ನೇಹಿತರು ಅಥವಾ ಕೇವಲ ರೂಮ್‌ಮೇಟ್‌ಗಳಾಗಿರದೆ ಅನೇಕ ಕಂಪನಿಗಳಿಗೆ ಸಹ-ಸಂಸ್ಥಾಪಕರಾದರು.
ನೀರಜ್ ಶಾ ಅವರು ಕಾಲೇಜಿನಲ್ಲಿದ್ದಾಗ ಜೊತೆಯಾಗಿ ಎಟೆಂಡ್ ಮಾಡುತ್ತಿದ್ದ ಉದ್ಯಮಶೀಲತಾ ತರಗತಿ ಅವರ ಜೀವನವನ್ನು ಬದಲಾಯಿಸಿತು. ಇಲ್ಲಿ ವ್ಯಾಪಾರ ಯೋಜನೆಯನ್ನು ಹೇಗೆ ರೂಪಿಸುವುದು ಎಂದು ಅರಿತುಕೊಂಡು ಇಬ್ಬರು ತಮ್ಮ ಮೊದಲ ಕಂಪನಿ ವೆಬ್ ಡಿಸೈನಿಂಗ್ ಸಂಸ್ಥೆ " ಸ್ಪಿನ್ನರ್ಸ್ " ಹುಟ್ಟುಹಾಕಿದರು.
ಆದರೆ ಈ ವೇಳೆ 'ಡಾಟ್‌ಕಾಮ್' ಕ್ರಾಂತಿಯು ಪ್ರಾರಂಭವಾಗುವುದಕ್ಕೆ ಇನ್ನೂ ಸ್ವಲ್ಪ ಸಮಯವಿತ್ತು. ನೀರಜ್ ಶಾ ಅವರ ಸಾಹಸದಾಯಕ ಉದ್ಯಮವು ಯಶಸ್ವಿಯಾಗದಿದ್ದರೂ, ಜೊತೆಯಾಗಿ ಉದ್ಯಮ ಹುಟ್ಟುಹಾಕುವ ಇಚ್ಛೆ ಅವರಿಬ್ಬನ್ನು ಮತ್ತಷ್ಟು ಜೊತೆಗೂಡಿಸಿತು. 2002 ರಲ್ಲಿ, ನೀರಜ್ ಶಾ racksandstands.com ಮೂಲಕ ಟಿವಿ ಸೆಟ್‌ಗಳಿಗೆ ಬೇಕಾಗುವ ಪೀಠೋಪಕರಣ ಮಾರಾಟ ಮಾಡುವ ತಮ್ಮ ಮೊದಲ ಯಶಸ್ವಿ ಉದ್ಯಮ ಪ್ರಾರಂಭಿಸಿದರು.
ಕಂಪನಿಯು ವಿಕಸನಗೊಂಡು ಅಂತಿಮವಾಗಿ ವೇಫೇರ್ ಆಗಿ ಬೆಳೆದು ನಿಂತಿತು. ವೇಫೇರ್ ಇಂದು $4.85 ಬಿಲಿಯನ್ (ಸುಮಾರು 40,000 ಕೋಟಿ ರೂಪಾಯಿ) ಮೌಲ್ಯವನ್ನು ಹೊಂದಿದೆ. 2023 ರಲ್ಲಿ, ನೀರಜ್ ಶಾ ಅವರ ನಿವ್ವಳ ಮೌಲ್ಯವು $ 1.6 ಬಿಲಿಯನ್‌ನಿಂದ $ 600 ಮಿಲಿಯನ್‌ಗೆ (ಸುಮಾರು 5,000 ಕೋಟಿ ರೂಪಾಯಿ) ಕುಸಿದಿದೆ.
ನೀರಜ್ ಶಾ ಅವರು ಜಿಲ್ ಶಾ ಅವರನ್ನು ವಿವಾಹವಾಗಿದ್ದಾರೆ, ಇವರು ಕೂಡಾ ಮಹಿಳಾ ಉದ್ಯಮಿಯಾಗಿದ್ದಾರೆ. ದಂಪತಿಗಳು ಬೋಸ್ಟನ್‌ನಲ್ಲಿ ವಾಸಿಸುತ್ತಿದ್ದು, ಶಾ ಫ್ಯಾಮಿಲಿ ಫೌಂಡೇಶನ್ ಎಂಬ ಲಾಭರಹಿತ ಸಂಸ್ಥೆಯನ್ನು ನಡೆಸುತ್ತಿದ್ದಾರೆ.


Click it and Unblock the Notifications