ಬೆಳೆಯುತ್ತಿರುವ ಭಾರತೀಯ ಬಿಲಿಯನೇರ್‌ಗಳ ಪಟ್ಟಿಯಲ್ಲಿ ಸ್ವಯಂ ನಿರ್ಮಿತ ಉದ್ಯಮಿಯಾಗಿ ಪಿ.ಪಿ. ರೆಡ್ಡಿ ಗುರುತಿಸಿಕೊಂಡಿದ್ದಾರೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಸರಳ, ವಿನಮ್ರ ವ್ಯಕ್ತಿತ್ವದ ರೆಡ್ಡಿಅವರು ಇಂದು ಡೈಮಂಡ್ ಮಾದರಿಯ ಹೌಸ್‌ನಲ್ಲಿ ವಾಸಿಸುತ್ತಿದ್ದಾರೆ. ತಮ್ಮ ಉದ್ಯಮದ ಯಶಸ್ಸನ್ನು ಜಂಟಿ ಪ್ರಯತ್ನ ಎಂದು ಅವರು ಕರೆದಿದ್ದಾರೆ.
1989 ರಲ್ಲಿ ಕೇವಲ ಇಬ್ಬರೊಂದಿಗೆ ಸಣ್ಣ ಕಂಪನಿಯನ್ನು ಪ್ರಾರಂಭಿಸಿದ ಪಿ.ಪಿ. ರೆಡ್ಡಿ ಇಂದು 26,700 ಕೋಟಿ ರೂ.ಗಳ "ಮೇಘಾ ಇಂಜಿನಿಯರಿಂಗ್ ಆಂಡ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್" (MEIL) ನ ಅಧ್ಯಕ್ಷರಾಗಿದ್ದಾರೆ. ರೈತ ಕುಟುಂಬದಲ್ಲಿ ಐದನೇ ಮಗುವಾಗಿ ಜನಿಸಿದ ರೆಡ್ಡಿಗೆ ತನ್ನನ್ನು ತಾನು ಕೋಟ್ಯಾಧಿಪತಿ ಎಂದು ಕರೆಸಿಕೊಳ್ಳುವ ಯೋಗ ಇರಲಿಲ್ಲ. ಆದರೆ ಪಿಪಿ ರೆಡ್ಡಿ ಮಹತ್ವಾಕಾಂಕ್ಷೆಯುಳ್ಳ ವ್ಯಕ್ತಿಯಾಗಿದ್ದರು. ಆ ಮೂಲಕ ಅವರು ಸ್ವಂತ ಉದ್ಯಮವನ್ನು ಆರಂಭಿಸಿದರು.

1991 ರಲ್ಲಿ ಪದವಿ ಮುಗಿಸಿದ ಅವರ ಸೋದರಳಿಯ ಪಿ.ವಿ. ಕೃಷ್ಣಾ ರೆಡ್ಡಿಯವರು ಪದವಿ ಪಡೆದ ಎರಡು ವರ್ಷಗಳ ನಂತರ ಪಿಪಿ ರೆಡ್ಡಿಯೊಂದಿಗೆ ಸೇರಿಕೊಂಡರು. ಈಗ ಅವರು ಎಂಡಿ ಆಗಿ ಉದ್ಯಮ ಸಾಮ್ರಾಜ್ಯವನ್ನು ಮುನ್ನಡೆಸುತ್ತಿದ್ದಾರೆ. ಈಗ ಅವರಿಬ್ಬರು ಜೊತೆಯಾಗಿ ಕಂಪನಿಯನ್ನು ವಿಸ್ತರಿಸುವ ಮೂಲಕ ಬಹುದೊಡ್ಡ ಕಂಪನಿಯಾಗಿ ಬೆಳೆಸಿದ್ದಾರೆ.
ಮೇಘಾ ಇಂಜಿನಿಯರಿಂಗ್ ಎಂಟರ್‌ಪ್ರೈಸಸ್ ಹೆಸರಿನ ರೆಡ್ಡೀಸ್ ಕಂಪನಿಯು 1989 ಮುನ್ಸಿಪಾಲಿಟಿಗಳ ಕಾಮಗಾರಿಗೆ ಸಣ್ಣ ಪೈಪ್‌ಗಳನ್ನು ನಿರ್ಮಿಸಿಕೊಡುವುದರ ಮೂಲಕ ಉದ್ಯಮ ಆರಂಭಿಸಿದರು. ಬಳಿಕ ಬೃಹತ್ ಮೂಲಸೌಕರ್ಯ ಯೋಜನೆ ರಸ್ತೆ, ಅಣೆಕಟ್ಟುಗಳು, ನೈಸರ್ಗಿಕ ಅನಿಲ ವಿತರಣಾ ಜಾಲಗಳು ಮತ್ತು ಏತಾ ನೀರಾವರಿ ಯೋಜನೆಗಳ ಉದ್ಯಮಕ್ಕೂ ಕಾಲಿಟ್ಟರು.
ಅವರ ಕಂಪನಿಯು ದೇಶದ ಅತಿದೊಡ್ಡ ಕಾಳೇಶ್ವರಂ ಏತ ನೀರಾವರಿ ಯೋಜನೆಯನ್ನು ನಿರ್ಮಿಸಿದ್ದು, ಇದು ಗೋದಾವರಿ ನದಿಯಿಂದ ತೆಲಂಗಾಣದ ಬರಡು ಪ್ರದೇಶಗಳಿಗೆ 5.7 ಕೋಟಿ ಕ್ಯೂಬಿಕ್ ಮೀಟರ್ ನೀರು ಪೂರೈಕೆ ಮಾಡುತ್ತಿದೆ. ಈ ಯೋಜನೆಯು 14 ಬಿಲಿಯನ್ ಡಾಲರ್ ವೆಚ್ಚದ್ದಾಗಿದೆ. ರೆಡ್ಡಿ ಅವರು ಇದನ್ನು "ಹರಿಯುವ ನದಿಯಂತೆ " ಬದಲಾಯಿಸಿದರು.
ಬರ್ಗಂಡಿ ಪ್ರೈವೇಟ್ ಹುರುನ್ ಇಂಡಿಯಾ 500 ರ ಪ್ರಕಾರ 26,700 ಕೋಟಿ ರೂ.ಗಳ ಮೌಲ್ಯದೊಂದಿಗೆ MEIL ಭಾರತದ ಟಾಪ್ 10 ಅತ್ಯಂತ ಮೌಲ್ಯಯುತ ಬೂಟ್‌ಸ್ಟ್ರಾಪ್ಡ್ ಕಂಪನಿಗಳಲ್ಲಿ ಒಂದಾಗಿದೆ. ಫೋರ್ಬ್ಸ್ ರಿಯಲ್ ಟೈಮ್ ಶ್ರೀಮಂತರ ಪಟ್ಟಿಯ ಪ್ರಕಾರ, ಸಣ್ಣ ಉದ್ಯಮವನ್ನು ಪ್ರಾರಂಭಿಸಿದ ಪಿಪಿ ರೆಡ್ಡಿ 34 ವರ್ಷಗಳ ಬಳಿಕ ಇಂದು ರೂ 17,220 ಕೋಟಿಗಳಷ್ಟು ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ.
ಕೃಷಿ ಕುಟುಂಬದಲ್ಲಿ ಹುಟ್ಟಿ ಸರಳ ಬದುಕು ಆರಂಭಿಸಿದ ರೆಡ್ಡಿ, ಇಂದು ತಮ್ಮ ಸ್ವಂತ ಗಾಲ್ಫ್ ಕೋರ್ಸ್ ಹೊಂದಿದ್ದಾರೆ. ತಮ್ಮ ಆಧುನಿಕ-ದಿನದ ಹೆಗ್ಗುರುತಾಗಿ ಪ್ಯಾಲೆಸ್ ನಂತ ಮನೆಯನ್ನು ನಿರ್ಮಿಸಿದ್ದಾರೆ. ಇದು ಗಾಜಿನಿಂದ ಮಾಡಿದ ಈ ಮನೆಯು ವಜ್ರದಂತೆ ಕಾಣುತ್ತದೆ. ಜೀವನದಲ್ಲಿ ನಂಬಿಕೆ ಎನ್ನುವುದು ಬಹಳ ಮುಖ್ಯ ಎಂಬುವುದು ಅವರ ತತ್ವವಾಗಿದೆ. ಪ್ರತಿಯೊಬ್ಬರ ನಂಬಿಕೆ ಗಳಿಸುವುದಕ್ಕೆ ಬಹಳ ಪರಿಶ್ರಮದ ಅಗತ್ಯವಿದೆ ಹಾಗೂ ಒಮ್ಮೆ ನೀವು ಅದನ್ನು ಗಳಿಸಿದ ನಂತರ ಅದನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ ಎಂದು ರೆಡ್ಡಿ ಜನರಿಗೆ ಸಲಹೆ ನೀಡುತ್ತಾರೆ.


Click it and Unblock the Notifications