ಫೋರ್ಬ್ಸ್‌ನ 2023ರ ಶ್ರೀಮಂತರ ಭಾರತೀಯರ ಪಟ್ಟಿಯಲ್ಲಿ ಡಿಮಾರ್ಟ್ ಮಾಲೀಕರು ಹಾಗೂ ಹೆಸರಾಂತ ಹೂಡಿಕೆದಾರ ರಾಧಾಕಿಶನ್ ದಮಾನಿ ಅವರು ಎಂಟನೇ ಸ್ಥಾನದಲ್ಲಿದ್ದಾರೆ. ಅವರ ನಿವ್ವಳ ಆಸ್ತಿ ಮೌಲ್ಯವು ದಮಾನಿ ಅವರ ಬುದ್ಧಿವಂತ ಹೂಡಿಕೆಗಳು ಹಾಗೂ ಚಿಲ್ಲರೆ ಸ್ಟೋರ್ ಚೈನ್‌ಗೆ ಸಾಕ್ಷಿಯಾಗಿವೆ. ಭಾರತೀಯ ರಿಟೇಲ್ ಸ್ಟೋರ್ ಕಾರ್ಪೊರೇಷನ್ ಡಿಮಾರ್ಟ್‌ನ ಸಂಸ್ಥಾಪಕರು ಹಾಗೂ ಮಾಲೀಕರಾದ ರಾಧಾಕಿಶನ್ ದಮಾನಿ ಅವರು ಕಳೆದ ಆರ್ಥಿಕ ವರ್ಷದಲ್ಲಿ ಸುಮಾರು 589 ಕೋಟಿ ರೂ. ಲಾಭ ಗಳಿಸುತ್ತಿದ್ದಾರೆ. ಅಂದರೆ 2022ರಲ್ಲಿ ದಿನಕ್ಕೆ 1.6 ಕೋಟಿ ರೂ.ನಷ್ಟು ಲಾಭ ಗಳಿಸಿದ್ದಾರೆ.
ಡಿಮಾರ್ಟ್ ಗ್ರೂಪ್ ಗಳಿಸಿದ ನಿರೀಕ್ಷೆಗೂ ಮೀರಿದ ಲಾಭವು ರಾಧಾಕಿಶನ್ ಅವರನ್ನು ಫೋರ್ಬ್ಸ್‌ನ ಭಾರತೀಯರ ಶ್ರೀಮಂತರ ಪಟ್ಟಿಯಲ್ಲಿ 15.3 ಬಿಲಿಯನ್ ಡಾಲರ್‌ನೊಂದಿಗೆ 8ನೇ ಸ್ಥಾನಕ್ಕೇರಿಸಿದೆ. ಅದು ಭಾರತೀಯ ಕರೆನ್ಸಿ ಪ್ರಕಾರ 1.25 ಲಕ್ಷ ಕೋಟಿ ರೂಪಾಯಿ ಆಗಿದೆ. ಕಳೆದ ಹಣಕಾಸು ವರ್ಷದಲ್ಲಿ ಡಿಮಾರ್ಟ್ ಗಳಿಸಿದ ಭಾರೀ ಲಾಭ ಹಾಗೂ ಆದಾಯದ ಹಿನ್ನೆಲೆಯಲ್ಲಿ ಡಿಮಾರ್ಟ್ ಎಲ್ಲರ ಗಮನಸೆಳೆದಿದೆ. ಅಷ್ಟೇಅಲ್ಲ, ಡಿಮಾರ್ಟ್ ಮಾಲೀಕರಾದ ರಾಧಾಕಿಶನ್ ದಮಾನಿ ಅವರು ಕೂಡ ಮುಂಬೈನ ಮಲಬಾರ್ ಹಿಲ್ಸ್‌ನಲ್ಲಿರುವ ನಾರಾಯಣ ದಾಭೋಲ್ಕರ್ ರಸ್ತೆಯಲ್ಲಿ 1000 ಕೋಟಿ ರೂಪಾಯಿ ಐಶಾರಾಮಿ ದೊಡ್ಡ ಮನೆಯನ್ನು ಖರೀದಿಸಿದ್ದಾರೆ.

ರಾಧಾಕಿಶನ್ ದಮಾನಿ ಅವರು ತಮ್ಮ ಇಡೀ ಕುಟುಂಬದ ಜತೆಗೆ ಒಂದು ಕಾಲದಲ್ಲಿ ಮುಂಬೈ ನಗರದಲ್ಲಿ ಸಣ್ಣ ಒಂದು ರೂಮ್‌ನ ಅಪಾರ್ಟ್‌ಮೆಂಟ್‌ನಲ್ಲಿ ಬಹಳ ಸರಳ ಜೀವನವನ್ನು ನಡೆಸುತ್ತಿದ್ದರು. ದಮಾನಿ ಅವರು ವಾಣಿಜ್ಯ ವಿಷಯದ ಬಗ್ಗೆ ಅಧ್ಯಯನ ಮಾಡಿದ್ದು, ಕಾಲೇಜು ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿ ಸ್ಟಾಕ್ ಮಾರ್ಕೆಟ್‌ನಲ್ಲಿ ಬ್ರೋಕರ್ ಹಾಗೂ ಇನ್‌ವೆಸ್ಟರ್ ಆಗಿ ತಮ್ಮ ವೃತ್ತಿ ಬದುಕನ್ನು ಪ್ರಾರಂಭಿಸಿದ್ದರು.
1992ರಲ್ಲಿ ಹರ್ಷದ್ ಮೆಹ್ತಾ ಹಗರಣದ ಬಳಿಕ ದಮಾನಿ ಅವರು ಮುನ್ನೆಲೆಗೆ ಬಂದರು. ಆ ಕಾಲಘಟ್ಟದಲ್ಲಿ ಶಾರ್ಟ್ ಸೆಲ್ಲಿಂಗ್ ಫ್ರಾಫಿಟ್‌ನಿಂದ ಅವರ ಆದಾಯದಲ್ಲಿ ಏಕಾಏಕಿ ಏರಿಕೆ ಕಾಣಲು ಪ್ರಾರಂಭವಾಗಿತ್ತು.
1999ರಲ್ಲಿ ಅಪ್ನಾ ಬಜಾರ್ ಎನ್ನುವ ಕಾಪೋರೇಟಿವ್ ಡಿಪಾರ್ಟ್‌ಮೆಂಟ್ ಸ್ಟೋರ್‌ನ್ನು ನೆರೂಲ್‌ನಲ್ಲಿ ಮುನ್ನಡೆಸುತ್ತಿದ್ದರು. ಆದರೆ ರಾಧಾಕಿಶನ್ ದಮಾನಿ ಅವರಿಗೆ ಆ ಬಿಸಿನೆಲ್ ಮಾಡಲ್ ಅಷ್ಟೊಂದು ತೃಪ್ತಿದಾಯಕವಾಗಿರಲಿಲ್ಲ. ಈ ಕಾರಣದಿಂದಲೇ 2000 ದ ವೇಳೆಗೆ ತಮ್ಮದೇ ಸ್ವಂತ ಹೈಪರ್ ಮಾರ್ಕೆಟ್ ಚೈನ್ ಅನ್ನು ಪ್ರಾರಂಭಿಸುವುದಕ್ಕೆ ಡಿಮಾರ್ಟ್ ಪರಿಕಲ್ಪನೆಯನ್ನು ಹುಟ್ಟು ಹಾಕಿದರು.
ಮುಂದೆ ಅವರು ನಿಧಾನಕ್ಕೆ ತಮ್ಮ ಹೂಡಿಕೆಯನ್ನು ಜಾಸ್ತಿ ಮಾಡುತ್ತ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಅತಿದೊಡ್ಡ ಹೂಡಿಕೆದಾರರಾಗಿ ಗುರುತಿಸಿಕೊಂಡರು. ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ರಾಧಾಕಿಶನ್ ದಮಾನಿ ಅವರು ಅತಿಹೆಚ್ಚು ಷೇರು ಪಾಲನ್ನು ಹೊಂದಿದ್ದಾರೆ. ಪ್ರಸ್ತುತ ಎಚ್‌ಡಿಎಫ್‌ಸಿ ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್ ಕೂಡ ಆಗಿದೆ. ದಮಾನಿ ಅವರು 2000ದಲ್ಲಿ ತಮ್ಮ ಸ್ವಂತ ಉದ್ಯಮವನ್ನು ಪ್ರಾರಂಭಿಸಿದ್ದು, 2002ರಲ್ಲಿ ಡಿಮಾರ್ಟ್ ಸ್ಟೋರ್ ಅನ್ನು ಸ್ಥಾಪಿಸಿದ್ದರು. ಅದು ಮುಂದೆ ನಿಧಾನಕ್ಕೆ ಬೆಳೆಯತೊಡಗಿತ್ತು.
ಈಗ ಅದು ಬಹುಕೋಟಿ ಆಸ್ತಿಯ ಬಹುದೊಡ್ಡ ಉದ್ಯಮವಾಗಿ ಬೆಳೆಯುವಲ್ಲಿ ಯಶಸ್ವಿಯಾಗಿದೆ.
ಕಳೆದ ಹಣಕಾಸು ವರ್ಷದಲ್ಲಿ ದಮಾನಿ ಅವರ ಡಿಮಾರ್ಟ್ 10,300 ಕೋಟಿ ರೂ. ಆದಾಯವನ್ನು ದಾಖಲಿಸಿದೆ. ಆ ಆದಾಯ ಗಳಿಕೆಯು ದಿನಕ್ಕೆ ಸುಮಾರು 1.6 ಕೋಟಿ ರೂ. ಆಗಿದೆ ಎನ್ನುವುದು ಗಮನಾರ್ಹವಾದದ್ದು.


Click it and Unblock the Notifications