ಭಾರತೀಯ ಬಿಲಿಯನೇರ್ ಉದ್ಯಮಿಯಾಗಿರುವ ರಾಜೇಶ್ ಮೆಹ್ತಾ ಬೆಂಗಳೂರು ಮೂಲದವರಾಗಿದ್ದು, ರಾಜೇಶ್ ಎಕ್ಸ್‌ಪೋರ್ಟ್ಸ್ ಎಂಬ ಕಂಪನಿಯ ಮಾಲಕರು ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರಾಗಿದ್ದಾರೆ. ಇವರ ಪೂರ್ಣ ಹೆಸರು ರಾಜೇಶ್ ಜಸ್ವಂತ್ ರಾಯ್ ಮೆಹ್ತಾ. ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಜಸ್ವಂತ್ ರಾಯ್ ಮೆಹ್ತಾ ಹಾಗೂ ಚಂದ್ರಿಕಾ ಬೆನ್ ಮೆಹ್ತಾ ದಂಪತಿಗಳ ಪುತ್ರನಾಗಿ, ಕೆಳ ಮಧ್ಯಮ ಕುಟುಂಬದಲ್ಲಿ1964ರಲ್ಲಿ ಜೂನ್ 20ರಂದು ಬೆಂಗಳೂರಿನಲ್ಲಿ ಜನಿಸಿದರು.
ಮೂಲತಃ ಗುಜರಾತಿನ ಮೊರ್ಬಿಯವರಾದ ಜಸ್ವಂತ್ ರಾಯ್ ಮೆಹ್ತಾ 1946 ಬೆಂಗಳೂರಿಗೆ ವಲಸೆ ಬಂದರು. ತಾವು ಮಾಡುತ್ತಿದ್ದ ಖಾಸಗಿ ಕಂಪನಿ ಕೆಲಸ ತೊರೆದು ಗುಜರಾತಿನಲ್ಲಿ "ರಾಜೇಶ್ ಡೈಮಂಡ್ ಕಂಪನಿ" ಎಂಬ ಹೆಸರಿನಲ್ಲಿ ಸೆಮಿ-ಪ್ರೆಶಿಯಸ್ ಸ್ಟೋನ್ಸ್ ವ್ಯವಹಾರ ಪ್ರಾರಂಭಿಸಿದರು. ರಾಜೇಶ್ ಮೆಹ್ತಾ ಬೆಂಗಳೂರಿನ ಸೇಂಟ್ ಜೋಸೆಫ್ ಶಾಲಾ ಶಿಕ್ಷಣ ಪಡೆದು, ಬಳಿಕ ನ್ಯಾಷನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು.

ವೈದ್ಯನಾಗಬೇಕೆಂದು ಬಯಸಿದ್ದ ರಾಜೇಶ್ ಮೆಹ್ತಾ ಮುಂದೆ ಅರಿಸಿಕೊಂಡಿದ್ದು ಮಾತ್ರ ತಂದೆ ನಡೆಸುತ್ತಿದ್ದ ಜುವೆಲ್ಯರಿ ಬ್ಯುಸಿನೆಸ್. ಸಹೋದರ ಪ್ರಶಾಂತ್ ಕುಡಾ ಕುಟುಂಬದ ಜುವೆಲ್ಯರಿ ವ್ಯವಹಾರವನ್ನು ವಹಿಸಿಕೊಂಡು ಮುನ್ನಡೆಸುತ್ತಿದ್ದರು. ಹೀಗಾಗಿ ಅವರು ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಹಿರಿಯ ಸಹೋದರ ಬಿಪಿನ್ ಜೊತೆ ಚರ್ಚಿಸಿ ಅವರಿಂದ1,200 ರೂಪಾಯಿ ಸಾಲ ಪಡೆದರು.
ತಂದೆಯ ವ್ಯಾಪಾರ ಮತ್ತಷ್ಟು ವಿಸ್ತರಿಸುವ ಯೋಚನೆಯೊಂದಿಗೆ ಬೆಳ್ಳಿ ವ್ಯಾಪಾರವನ್ನು ಪ್ರಾರಂಭಿಸಿದರು. ಇವರು ಮೊದಲು ಚೆನ್ನೈನಿಂದ ಆಭರಣ ಖರೀದಿಸಿ ರಾಜ್ ಕೋಟ್ ನಲ್ಲಿ ಮಾರಾಟ ಮಾಡುತ್ತಿದ್ದರು. ನಂತರ ರಾಜೇಶ್ ಮೆಹ್ತಾ ಅವರು ಗುಜರಾತ್‌ನ ವ್ಯಾಪಾರಿಗಳಿಗೆ ಆಭರಣಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರು.
ನಂತರ ರಾಜೇಶ್ ಜಸ್ವಂತ್ ರಾಯ್ ಮೆಹ್ತಾ ಅವರು ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್‌ನಲ್ಲಿ ತಮ್ಮ ವ್ಯವಹಾರವನ್ನು ವಿಸ್ತರಿಸಿದರು. ರಾಜೇಶ್ ಮೆಹ್ತಾ ಅವರ ಬೆಳ್ಳಿ ವ್ಯಾಪಾರ ಯಶಸ್ವಿ ಕಂಡ ಬಳಿಕ 1989 ರಲ್ಲಿ ಚಿನ್ನದ ಆಭರಣ ವ್ಯಾಪಾರಕ್ಕೆ ಕಾಲಿಟ್ಟರು. ಬೆಂಗಳೂರಿನ ಚಿನ್ನಾಭರಣ ತಯಾರಿಕಾ ಘಟಕ ಆರಂಭಿಸಿ ಅಮೇರಿಕಾ, ದುಬೈ, ಓಮನ್, ಕುವೈತ್, ಯುಎಸ್ ಮತ್ತು ಯುರೋಪ್ ಗಳಿಗೆ ಚಿನ್ನವನ್ನು ರಪ್ತು ಮಾಡಲಾರಂಭಿಸಿದರು.
1992 ರ ವೇಳೆಗೆ ವರ್ಷಕ್ಕೆ 2 ಕೋಟಿ ರೂಪಾಯಿ ವ್ಯವಹಾರ ಬೆಳೆದು, 1998 ರ ವೇಳೆಗೆ ಮತ್ತಷ್ಟು ಏಳಿಗೆ ಕಂಡು ವಾರ್ಷಿಕ ವಹಿವಾಟು 1200 ಕೋಟಿಗೆ ತಲುಪಿತು. ಇದಾದ ಬಳಿಕ ಶುಭ್ ಜ್ಯುವೆಲರ್ಸ್ ಹೆಸರಿನ ಜುವೆಲ್ಯರಿ ಶಾಪ್ ತೆರೆದರು. ಸಂಸ್ಥೆಯೂ ಈಗ ಕರ್ನಾಟಕದಾದ್ಯಂತ ಹಲವು ಮಳಿಗೆಗಳನ್ನು ಹೊಂದಿದೆ. ಕಂಪನಿಯು 2015 ರ ಜುಲೈನಲ್ಲಿ ಸ್ವಿಟ್ಜರ್ಲೆಂಡ್ ಮೂಲದ ವಿಶ್ವದ ಅತಿದೊಡ್ಡ ಚಿನ್ನದ ಸಂಸ್ಕರಣಾ ವಾಲ್ಕಂಬಿಯನ್ನು ಸ್ವಾಧೀನಪಡಿಸಿಕೊಂಡಿತು. 2021ರಲ್ಲಿ ಇದರ ಆದಾಯ 2.58 ಲಕ್ಷ ಕೋಟಿ ರೂ.ಇತ್ತು.
ರಾಜೇಶ್ ಜಸ್ವಂತ್ ರಾಯ್ ಮೆಹ್ತಾ ಕಂಪನಿಯ ಸ್ಥಾಪಕ ಅಧ್ಯಕ್ಷರಾಗಿದ್ದು, ಕಂಪನಿಯ ಒಟ್ಟಾರೆ ಕಾರ್ಯನಿರ್ವಹಣೆಯ ಜವಾಬ್ದಾರಿ ಅವರ ಮೇಲಿದೆ. ಇದರೊಂದಿಗೆ ಹಣಕಾಸು ಮತ್ತು ಮಾರ್ಕೆಟಿಂಗ್ ವರ್ಟಿಕಲ್ಸ್ ನ ಉಸ್ತುವಾರಿ ವಹಿಸಿದ್ದಾರೆ. 2019 ರಲ್ಲಿ, ಫೋರ್ಬ್ಸ್ ಅವರ ನಿವ್ವಳ ಮೌಲ್ಯವು 1.57 ಬಿಲಿಯನ್ ಡಾಲರ್ ಎಂದು ಅಂದಾಜಿಸಿದೆ, ಇದು ಇಂದಿನ ವಿನಿಮಯ ದರದಲ್ಲಿ 12950 ಕೋಟಿ ರೂಪಾಯಿ ಆಗಿದೆ.
ಕಂಪನಿಯು ಭಾರತ, ಸ್ವಿಟ್ಜರ್ಲೆಂಡ್ ಮತ್ತು ದುಬೈ ದೇಶದಿಂದ ಚಿನ್ನದ ಆಭರಣಗಳು ಮತ್ತು ಚಿನ್ನದ ಉತ್ಪನ್ನಗಳನ್ನು 60 ದೇಶಗಳಿಗೆ ರಫ್ತು ಮಾಡುತ್ತದೆ. ವಾಲ್ಕಂಬಿ ಚಿನ್ನದ ಬಾರ್‌ಗಳನ್ನು ಉತ್ಪಾದಿಸುತ್ತದೆ. ಈ ಬಾರ್‌ಗಳನ್ನು ಆಭರಣ ವ್ಯಾಪಾರಿಗಳಿಗೆ ನೀಡಲಾಗುತ್ತದೆ.


Click it and Unblock the Notifications