ದೆಹಲಿ ಮೂಲದ ಔಷಧ ಕಂಪನಿಯಾದ ಮ್ಯಾನ್‌ಕೈಂಡ್ ತನ್ನ ಐಪಿಒವನ್ನು ಏಪ್ರಿಲ್ 25ರಂದು ತೆರೆಯಲಿದ್ದು, ಏ.27ಕ್ಕೆ ಅದು ಮುಕ್ತಾಯಗೊಳ್ಳುತ್ತದೆ. ಆದರೆ ಅದರ ಷೇರು ಮುಖಬೆಲೆಯನ್ನು ಇನ್ನೂ ಘೋಷಣೆ ಮಾಡಿಲ್ಲ. ವರದಿಗಳ ಪ್ರಕಾರ, ಸ್ವದೇಶಿ ಕಂಪೆನಿಯ ಪ್ರವರ್ತಕರಾದ ರಮೇಶ್ ಜುನೇಜಾ, ರಾಜೀವ್ ಜುನೇಜಾ ಹಾಗೂ ಶೀತಲ್ ಅರೋರಾ ಅವರು ತಮ್ಮ ಷೇರುಗಳನ್ನು ಅಪ್‌ಲೋಡ್ ಮಾಡಬಹುದು.
ಜುನೇಜಾ ಕುಟುಂಬಸ್ಥರಿಂದ ಸ್ಥಾಪನೆಗೊಂಡು ಮುನ್ನಡೆಯುತ್ತಿರುವ ಈ ಕಂಪೆನಿಯು ದೇಶಾದ್ಯಂತ 25 ಉತ್ಪಾದನಾ ಸೌಲಭ್ಯಗಳನ್ನು ಹೊಂದಿವೆ. ಡಿಸೆಂಬರ್‌ವರೆಗಿನ ಮಾಹಿತಿಯಂತೆ ಈ ಕಂಪೆನಿಯು 600 ಮಂದಿ ನುರಿತ ವಿಜ್ಞಾನಿಗಳ ತಂಡವನ್ನು ಹೊಂದಿದೆ. ಮ್ಯಾನ್‌ಕೈಂಡ್ ಕಂಪೆನಿಯು ನಾಲ್ಕು ಘಟಕಗಳಲ್ಲಿ ಸಂಶೋಧನೆ ಹಾಗೂ ಅಭಿವೃದ್ಧಿ ಸೆಂಟರ್‌ಗಳನ್ನು ಹೊಂದಿವೆ. 2022ರ ಫೋರ್ಬ್ಸ್ ಮಾಹಿತಿ ಪ್ರಕಾರ, 34500 ಕೋಟಿ ರೂ. ನಿವ್ವಳ ಆಸ್ತಿಯನ್ನು ಹೊಂದಿರುವ ಜುನೇಜಾ ಸಹೋದರರ ಸ್ಫೂರ್ತಿದಾಯಕ ಕಥೆ ಇಲ್ಲಿದೆ-

ಮ್ಯಾನ್‌ಕೈಂಡ್ ಎನ್ನುವುದು ದೇಶದ ಅತ್ಯಂತ ಜನಪ್ರಿಯ ಕಾಂಡೋಮ್ ಬ್ರಾಂಡ್ ಆಗಿದೆ. ಜತೆಗೆ ಇದು ಬೇರೆ ಔಷಧಗಳನ್ನು ಕೂಡ ತಯಾರಿಸುತ್ತಿವೆ. ಈ ಕಂಪೆನಿಯು ನಿಯಮಿತವಾಗಿ ಒಂದು ಶತಕೋಟಿ ಡಾಲರ್‌ನಷ್ಟು ಆದಾಯವನ್ನು ಗಳಿಸುತ್ತಿದೆ. ಇದರ ಮಾರುಕಟ್ಟೆ ಮೌಲ್ಯವು ಸುಮಾರು 43,264 ಕೋಟಿ ರೂ. ಆಗಿದೆ.
ದೇಶೀಯ ಮಾರಾಟದ ವಿಷಯದಲ್ಲಿ ಇದು ಭಾರತದ ನಾಲ್ಕನೇ ಅತಿದೊಡ್ಡ ಕಂಪೆನಿಯಾಗಿದೆ. 2022ರ ಡಿಸೆಂರ್ ಅಂತ್ಯದ ವೇಳೆಗೆ ಕಂಪೆನಿಯು ಒಟ್ಟು 996.4 ಕೋಟಿ ರೂ. ನಿವ್ವಳ ಲಾಭವನ್ನು ಗಳಿಸಿದೆ. ಮೊದಲ ಒಂಬತ್ತು ತಿಂಗಳ ಆದಾಯವು 6697 ಕೋಟಿ ರೂ. ಆಗಿದೆ. ಕಳೆದ ಹಣಕಾಸು ವರ್ಷದಲ್ಲಿ ಕಂಪೆನಿಯು 1433 ಕೋಟಿ ರೂ. ಲಾಭವನ್ನು ನಿರೀಕ್ಷಿಸಿತ್ತು.
ಜುನೇಜಾ ಸಹೋದರರು ಏಕಾಂಗಿಯಾಗಿ ಮ್ಯಾನ್‌ಕೈಂಡ್ ಕಂಪೆನಿಯನ್ನು ಸ್ಥಾಪಿಸಿ ಅದನ್ನು ಬಹಳ ಎತ್ತರಕ್ಕೆ ಬೆಳೆಸಿದ್ದಾರೆ. ಮ್ಯಾನ್‌ಕೈಂಡ್ ಫಾರ್ಮಾದ ಅಧ್ಯಕ್ಷ ರಮೇಶ್ ಸಿ. ಜುನೇಜಾ ಅವರು 1974ರಲ್ಲಿ ಕೀ ಫಾರ್ಮಾ ಎಂಬ ಕಂಪೆನಿಗೆ ಮೆಡಿಕಲ್ ಪ್ರತಿನಿಧಿಯಾಗಿದ್ದರು. ಅವರು ತಮ್ಮ ಸ್ವಂತ ಉದ್ಯಮ ಸ್ಥಾಪಿಸುವ ಮೊದಲು ಸುಮಾರು ಎಂಟು ವರ್ಷಗಳ ಕಾಲ ಲುಪಿನ್‌ನೊಂದಿಗೆ ಕೆಲಸ ಮಾಡಿದ್ದರು.
1994ರಲ್ಲಿ ಅಲ್ಲಿನ ಕೆಲಸವನ್ನು ತೊರೆದು ತಮ್ಮ ಸ್ವಂತ ಕಂಪೆನಿಯನ್ನು ಸ್ಥಾಪಿಸಲು ಮುಂದಾದರು. ಅದರಂತೆ 1995ರಲ್ಲಿ ತಮ್ಮ ಸಹೋದರ ರಾಜೀವ್ ಜುನೇಜಾ ಅವರ ಜತೆ ಸೇರಿಕೊಂಡು ಮ್ಯಾನ್‌ಕೈಂಡ್ ಕಂಪೆನಿಯನ್ನು ಸ್ಥಾಪಿಸಿದರು. ಪ್ರಾರಂಭದಲ್ಲಿ ಕೇವಲ 50 ಲಕ್ಷ ರೂ. ಹೂಡಿಕೆಯೊಂದಿಗೆ ಈ ಕಂಪೆನಿಯನ್ನು ಸ್ಥಾಪಿಸಲಾಯಿತು. ಜತೆಗೆ ತಮ್ಮ ಕಂಪೆನಿಯನ್ನು ಕೇವಲ 25 ಮೆಡಿಕಲ್ ಪ್ರತಿನಿಧಿಗಳೊಂದಿಗೆ ಪ್ರಾರಂಭಿಸಿದ್ದರು.
ಪ್ರಸ್ತುತ ಮ್ಯಾನ್‌ಕೈಂಡ್ ಭಾರತದಲ್ಲಿ ಅತಿದೊಡ್ಡ ಮೆಡಿಕಲ್ ಪ್ರತಿನಿಧಿಗಳ ನೆಟ್‌ವರ್ಕ್ ಹೊಂದಿರುವ ಕಂಪೆನಿಯಾಗಿ ಬೆಳೆದಿದೆ. ಈ ದೊಡ್ಡ ಯಶಸ್ವಿನ ಕೀರ್ತಿಯು ರಾಜೀವ್ ಜುನೇಜಾ ಅವರಿಗೆ ಸಲ್ಲುತ್ತದೆ. ಅವರು ಕಂಪೆನಿಗೆ ಸಿಇಒ ಆಗಿದ್ದಾರೆ. ಜತೆಗೆ ಅವರು ಹೆಚ್ಚಿನ ಸಮಯವನ್ನು ತಮ್ಮ ತಂಡದ ಜತೆಗೆ ಕಳೆಯುತ್ತಾರೆ. ಅವರ ಸೋದರಳಿಯ ಅರ್ಜುನ್ ಅವರು ಕಂಪೆನಿಯ ಉತ್ಪಾದನೆ ಹಾಗೂ ಸಂಶೋಧನೆ & ಅಭಿವೃದ್ಧಿ ವಿಭಾಗದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಮತ್ತೊಬ್ಬ ಸೋದರಳಿಯ ಶೀತಲ್ ಅರೋರಾ ಅವರು, ಸ್ತ್ರೀರೋಗ, ಚರ್ಮರೋಗ ಔಷಧಗಳ ಮಾರ್ಕೆಟಿಂಗ್ ಯೂನಿಟ್ ಆದ ಲೈಫ್‌ಸ್ಟಾರ್ ಅನ್ನು ನೋಡಿಕೊಳ್ಳುತ್ತಿದ್ದಾರೆ. ರಮೇಶ್ ಜುನೇಜಾ ವಿಜ್ಞಾನ ಪದವೀಧರರಾಗಿದ್ದರೆ, ಅವರ ಸಹೋದರ ಕಾಲೇಜ್ ಡ್ರಾಪ್‌ಔಟ್ ಆಗಿದ್ದಾರೆ. ಮೂಲಗಳ ಪ್ರಕಾರ, ಮ್ಯಾನ್‌ಕೈಂಡ್ ಐಪಿಒ ಷೇರು ಬೆಲೆಯು 1026 ರೂ. ನಿಂದ 1080ರೂ. ಆಗಿರಬಹುದು ಎನ್ನುವ ನಿರೀಕ್ಷೆಯಿದೆ.
ದೇಶೀಯ ಮಾರುಕಟ್ಟೆಯಲ್ಲಿ ಮ್ಯಾನ್‌ಫೋರ್ಸ್ ಕಾಂಡೋಮ್ ಬ್ರಾಂಡ್ ತನ್ನ ಕ್ಷೇತ್ರದಲ್ಲಿ 461.60 ಕೋಟಿ ರೂ. ಮಾರಾಟದೊಂದಿಗೆ ಮುಂಜೂಣಿಯಲ್ಲಿದೆ ಎಂದು ಕಂಪೆನಿಯು ಹೇಳಿಕೊಂಡಿದೆ. ಅವರ ಪ್ರೆಗಾ ನ್ಯೂಸ್ ಪ್ರೆಗ್ನೆನ್ಸಿ ಕಿಟ್‌ಗಳು ಕೂಡ 184.40 ಕೋಟಿ ರೂ.ನಷ್ಟು ಸೇಲ್ಸ್‌ನ್ನು ಹೊಂದಿದೆ.


Click it and Unblock the Notifications