ಇತ್ತೀಚಿನ ಕೆಲವು ವರ್ಷಗಳಲ್ಲಿ ಭಾರತದಲ್ಲಿ ಹಲವಾರು ಸ್ಟಾರ್ಟ್‌ಅಪ್‌ಗಳು ಹುಟ್ಟುಕೊಂಡಿವೆ. ಆ ಮೂಲಕ ಯುವ ಹಾಗೂ ನವೀನ ಕೌಶಲ್ಯಗಳನ್ನು ಹೊಂದಿರುವವರು ಬಿಸಿನೆಸ್ ಪ್ರಾರಂಭಿಸಿ ಯಶಸ್ಸನ್ನು ಕಾಣುತ್ತಿದ್ದಾರೆ. ಇದರಲ್ಲಿ ಐಐಎಂ ಅಥವಾ ಐಐಟಿ ಪದವಿ ಹೊಂದಿಲ್ಲದವರೂ ಸೇರಿದ್ದಾರೆ ಎನ್ನುವುದು ವಿಶೇಷ.
ವಿದೇಶದಲ್ಲಿ ನೆಲಸಿರುವ ಜನರು ಕೂಡ ಭಾರತದಲ್ಲಿ ಬಿಸಿನೆಸ್ ಪ್ರಾರಂಭಿಸುವುದಕ್ಕೆ ಉತ್ತಮ ಅವಕಾಶಗಳನ್ನು ಹುಡುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಮೆರಿಕಾದಿಂದ ಬಂದ ಇಬ್ಬರು ಸಹೋದರಿಯರು ಸ್ಟಾರ್ಟ್‌ಅಪ್ ಸ್ಥಾಪಿಸುವ ಮೂಲಕ ಭಾರತದಲ್ಲಿ ಯಶಸ್ವಿ ಉದ್ಯಮವನ್ನು ಕಟ್ಟಿ ಬೆಳೆಸಿರುವ ಒಂದು ಉತ್ತಮ ನಿದರ್ಶನ ಇಲ್ಲಿದೆ. ಅವರು ಪ್ರತಿ ತಿಂಗಳು ಸುಮಾರು 25 ಲಕ್ಷ ರೂಪಾಯಿ ವಹಿವಾಟು ಮಾಡುತ್ತಿದ್ದಾರೆ.

2018ರಲ್ಲಿ ದೆಹಲಿಯಲ್ಲಿ ಅಟ್ಮಾಸ್ಫಿಯರ್ ಕೊಂಬುಚಾ ಎಂಬ ಬ್ರ್ಯಾಂಡ್ ಅನ್ನು ರೆಬೆಕಾ ಸೂದ್ ಮತ್ತು ಅರಿಯೆಲ್ಲಾ ಬ್ಲಾಂಕ್ ಎಂಬ ಇಬ್ಬರು ಸಹೋದರಿಯರು ಸೇರಿಕೊಂಡು ಸ್ಥಾಪನೆ ಮಾಡಿದ್ದಾರೆ. ಅವರಿಬ್ಬರು ಶಾರ್ಕ್ ಟ್ಯಾಂಕ್ ಇಂಡಿಯಾ ಸೀಸನ್-2 ರಲ್ಲಿ ಸ್ಪರ್ಧಿಗಳಾಗಿದ್ದರು. ಆದರೆ, ಶಾರ್ಕ್‌ನಿಂದ ಅವರು ಫಂಡಿಂಗ್ ಪಡೆಯುವಲ್ಲಿ ವಿಫಲರಾಗಿದ್ದರು.
ದಿಲ್ಲಿ ಮೂಲದ ಅವರ ಬ್ರಾಂಡ್ ಕೊಂಬುಚಾ (ಸುಹಾಸಿತ ಬ್ಲ್ಯಾಕ್ ಟೀ ಡ್ರಿಂಕ್), ಕೆಫಿರ್ ಹಾಗೂ ಸಸ್ಯಾಹಾರಿ ಚೀಸ್‌ಕೇಕ್ ಆಗಿದೆ. ಇವೆಲ್ಲವೂ ಉತ್ತಮ ಪ್ಯಾಕ್‌ನೊಂದಿಗೆ ಪ್ರಿಬಯೋಟಿಕ್ ಹಾಗೂ ಪ್ರೋಬಯೋಟಿಕ್ ಆರೋಗ್ಯಕರ ಉತ್ಪನ್ನವಾಗಿವೆ. ಒಂದು ಕೊಂಬುಚಾ ಬಾಟಲ್ ಬೆಲೆ 220 ರೂಪಾಯಿ ಆಗಿದೆ.
ರೆಬಾಕಾ ಅವರು ಬಾಲಿಗೆ ಪ್ರವಾಸ ಹೋಗಿದ್ದ ಸಂದರ್ಭದಲ್ಲಿ ಕೊಂಬುಚಾ ಪರಿಕಲ್ಪನೆ ಬಂದಿತ್ತು. ಹಾಗಾದರೆ, ರೆಬಾಕಾ ಸೂದ್ ಹಾಗೂ ಅರಿಯೆಲ್ಲಾ ಬ್ಲಾಂಕ್ ಅವರು ಯಾರು ಮತ್ತು ಅವರಿಗೆ ಭಾರತದೊಂದಿಗೆ ಯಾವ ರೀತಿಯ ಸಂಪರ್ಕವಿದೆ ಎಂಬುದನ್ನು ನೋಡೋಣ.
ಭಾರತದೊಂದಿಗೆ ಯಾವ ರೀತಿಯ ಸಂಪರ್ಕವಿದೆ?
ಅರಿಯೆಲ್ಲಾ ಬ್ಲಾಂಕ್ ಅವರು ಸರ್ಟಿಫೈಡ್ ನ್ಯೂಟ್ರಿಷನಲ್ ಥೆರಪಿ ಪ್ರಾಕ್ಟೀಷನರ್ ಆಗಿದ್ದಾರೆ. ಅವರು ಹುಟ್ಟಿ ಬೆಳೆದಿದ್ದು ಉತ್ತರಾಖಂಡದ ಮನ್ಸೂರಿಯಲ್ಲಿ. ಕಳೆದ ಆರು ವರ್ಷಗಳಲ್ಲಿ ಕರುಳಿನ ಆರೋಗ್ಯದ ಕುರಿತಂತೆ ಅವರು ಭಾರತದಾದ್ಯಂತ ವೆಲ್ನೆಸ್ ಕೆಫೆಗಳು ಹಾಗೂ ಕಾರ್ಪೊರೇಟ್ ವಲಯದಲ್ಲಿ ನೂರಕ್ಕೂ ಅಧಿಕ ವಿಚಾರ ಸಂಕಿರಣಗಳನ್ನು ನಡೆಸಿದ್ದಾರೆ.
ಅರಿಯೆಲ್ಲಾ ಅವರ ಸಹೋದರಿ ರೆಬೆಕಾ ಸೂದ್ ಕೂಡ ಆರೋಗ್ಯಕರ ಆಹಾರದಲ್ಲಿ ಪರಿಣತಿ ಹೊಂದಿರುವ ಬಿಸಿನೆಸ್ ಸಲಹೆಗಾರರಾಗಿದ್ದಾರೆ. ಆಕೆ ಕೂಡ ಮನ್ಸೂರಿಯಲ್ಲೇ ಬೆಳೆದಿದ್ದಾರೆ. ಆದರೆ, ವಿಶ್ವವಿದ್ಯಾಲಯದ ಪದವಿಯನ್ನು ಅಮೆರಿಕಾದಲ್ಲಿ ಪೂರ್ಣಗೊಳಿಸಿದ್ದಾರೆ.
ಇವರ ತಂದೆಯು ಐಐಟಿ-ಕಾನ್ಪುರ ಹಾಗೂ ಐಐಟಿ ಖರಗ್ಪುರದಲ್ಲಿ ಪ್ರಾಧ್ಯಾಪಕರಾಗಿದ್ದರು. ರೆಬೆಕಾ ಕೇವಲ ಒಂದೂವರೆ ವರ್ಷದ ಮಗುವಾಗಿದ್ದಾಗ ಅವರು ಭಾರತಕ್ಕೆ ಬಂದಿದ್ದರು. ಅರಿಯೆಲ್ಲಾ ಭಾರತದಲ್ಲೇ ಜನಿಸಿದ್ದು, ನಂತರ ಕಾಲೇಜು ಶಿಕ್ಷಣವನ್ನು ಅಮೆರಿಕಾದಲ್ಲಿ ಮಾಡಿದ್ದಾರೆ. ಅಲ್ಲಿ ಇಬ್ಬರು ಕೂಡ ಕಂಪ್ಯೂಟರ್ ಸೈನ್ಸ್‌ನಲ್ಲಿ ಕೋರ್ಸ್‌ಗಳನ್ನು ಮಾಡಿದ್ದಾರೆ.
ರೆಬೆಕಾ ಅವರು ಚೀನಾದಲ್ಲಿ ಮೂರು ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ನಂತರ 2015ರಲ್ಲಿ ಅವರು ಭಾರತಕ್ಕೆ ಮರಳಿದ್ದರು. ಮುಂದೆ ಅವರು ಫ್ಯಾಬ್ ಇಂಡಿಯಾದ ಫ್ಯಾಬ್ ಕೆಫೆ ಸ್ಥಾಪಕ ತಂಡದ ಭಾಗವಾದರು. ನಂತರದಲ್ಲಿ 2018ರಲ್ಲಿ ಇಬ್ಬರು ಸಹೋದರಿಯರು ಸೇರಿಕೊಂಡು ಅಟ್ಮಾಸ್ಫಿಯರ್ ಕೊಂಬುಚಾ ಬ್ರಾಂಡ್ ಪ್ರಾರಂಭಿಸುವಲ್ಲಿ ಯಶಸ್ವಿಯಾದರು.
ಪ್ರಸ್ತುತ ಅವರು ಎಫ್ ಅಂಡ್ ಬಿ ಉದ್ಯಮದಲ್ಲಿ ಆರೋಗ್ಯಕರ ಉತ್ಪನ್ನದ ಮೂಲಕ ಯಶಸ್ವಿ ಉದ್ಯಮವನ್ನು ಮುನ್ನಡೆಸುತ್ತಿದ್ದಾರೆ. HerStory ಪ್ರಕಾರ, ತಮ್ಮ ಸ್ವಂತ ಉಳಿತಾಯದಿಂದ 25 ಲಕ್ಷ ರೂಪಾಯಿ ಬಂಡವಾಳ ಹೂಡಿಕೆ ಮಾಡಿ ಈ ಉದ್ಯಮ ಸ್ಥಾಪಿಸಿದ್ದರು. ಜತೆಗೆ ಪೋಷಕರಿಂದಲೂ ಸ್ವಲ್ಪ ಸಹಾಯವನ್ನು ಪಡೆದುಕೊಂಡಿದ್ದರು. ಈಗ ಅವರ ತಿಂಗಳ ವಹಿವಾಟು ಕೂಡ 25 ಲಕ್ಷ ರೂಪಾಯಿಗೆ ಏರಿದೆ.


Click it and Unblock the Notifications